ಪಾಟ್ನಾ: ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದ ‘ಎಡ ಪಕ್ಷಗಳ ಅಭ್ಯರ್ಥಿ’ಯಾಗಿ ಕನ್ನಯ್ಯ ಕುಮಾರ್ ಸ್ಪರ್ಧಿಸಲಿದ್ದಾರೆ. ಮಹಾಘಟಬಂಧನ್ ಮಿತ್ರಪಕ್ಷಗಳು ಕನ್ನಯ್ಯ ಕುಮಾರ್ ಗೆ ಬೇಗುಸರಾಯ್ ನಿಂದ ಸ್ಪರ್ಧಿಸಲು ಟಿಕೆಟ್ ನೀಡದೇ, ಕಡೆಗಣಿಸಿದ್ದ ಹಿನ್ನೆಲೆಯಲ್ಲಿ ಶನಿವಾರ ಎಡಪಕ್ಷಗಳು ಕನ್ನಯ್ಯ ಅವರನ್ನು ತಮ್ಮ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ.
ದೆಹಲಿಯ ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಫೈರ್ ಬ್ರಾಂಡ್ ವಿದ್ಯಾರ್ಥಿನಾಯಕರಾಗಿ ದೇಶದ ಗಮನ ಸೆಳೆದ ಅದ್ಭುತ ಯುವ ರಾಜಕೀಯ ವಾಕ್ಪಟು. 2019ರ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಅಭ್ಯರ್ಥಿಯಾಗಿ ಬೇಗುಸರಾಯ್ ನಿಂದ ಕನ್ನಯ್ಯ ಸ್ಪರ್ಧಿಸಲಿದ್ದಾರೆ ಎಂಬ ಮಾತು ಹಿಂದಿನಿಂದಲೂ ಕೇಳಿಬಂದಿತ್ತು. ಆದರೆ ಮಹಾಘಟಬಂಧನ್ ಸೀಟು ಹಂಚಿಕೆಯಲ್ಲಿ ಬೇಗುಸರಾಯ್ ಕ್ಷೇತ್ರವು ತೇಜಸ್ವಿ ಯಾದವ್ ಅವರ ಆರ್ ಜೆಡಿ ಪಾಲಾಗಿತ್ತಲ್ಲದೇ ಆರ್ ಜೆ ಡಿ ಕನ್ನಯ್ಯ ಕುಮಾರ್ ಗೆ ಟಿಕೆಟ್ ನೀಡಲು ನಿರಾಕರಿಸಿತ್ತು. ಇದರಿಂದ ಎಡಪಕ್ಷಗಳು ಅಸಮಾಧಾನಗೊಂಡಿದ್ದವು.
ಬೇಗುಸರಾಯ್ ಲೋಕಸಭಾ ಕ್ಷೇತ್ರವನ್ನು ಬಿಹಾರದ ಲೆನಿನ್ ಗ್ರಾಡ್ ಎಂದೇ ಕರೆಯಲಾಗುತ್ತದೆ. ಇದು ಲಾಗಾಯ್ತಿನಿಂದಲೂ ಎಡಪಕ್ಷಗಳ ಭದ್ರಕೋಟೆಯಾಗಿದೆ. ಮುಸ್ಲಿಂ ಅಭ್ಯರ್ಥಿಗಳಾದವರು ಸುರಕ್ಷಿತವಾಗಿಯೂ ಗೆದ್ದುಬರುವ ಈ ಕ್ಷೇತ್ರದಲ್ಲಿ 2014ಲ್ಲಿ ಕೇವಲ 60,000 ಮತಗಳಿಂದ ಸೋಲನುಭವಿಸಿದ್ದ ತನ್ವೀರ್ ಹಸನ್ ಅವರನ್ನು ಆರ್ ಜೆ ಡಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.
ಬೇಗುಸರಾಯ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ಎದುರಿಗೆ ಭೂಮಿಹಾರ್ ಜಾತಿಯ ಕನ್ಹಯ್ಯ ಕುಮಾರ್ ಗೆಲುವು ಸಾಧಿಸುವುದು ಕಷ್ಟಸಾಧ್ಯ ಹಾಗೂ ಭೂಮಿಹಾರ್ ಸಮುದಾಯ ಹೆಚ್ಚು ಒಲವು ಗಿರಿರಾಜ್ ಸಿಂಗ್ ಮೇಲೆಯೇ ತೋರಬಹುದು ಎಂಬ ಲೆಕ್ಕಾಚಾರದಲ್ಲಿ ಆರ್ ಜೆಡಿ ಈ ಕ್ಷೇತ್ರವನ್ನು ಕನ್ನಯ್ಯ ಕುಮಾರ್ ಗೆ ಬಿಟ್ಟುಕೊಡಲು ಒಪ್ಪಲಿಲ್ಲ ಎಂಬ ಮಾತುಗಳು ಕೇಳಿಬರುತ್ತವೆ. ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ಗಿರಿರಾಜ್ ಸಿಂಗ್ ಹಾಲಿ ನಾವಡಾ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಬಿಜೆಪಿ ನಾಯಕತ್ವ ಅವರಿಗೆ ಬೇಗುಸರಾಯ್ ಕ್ಷೇತ್ರಕ್ಕೆ ಟಿಕೆಟ್ ನೀಡಿದ್ದರ ಬಗ್ಗೆ ಅಸಮಧಾನಗೊಂಡಿದ್ದರೆನ್ನಲಾಗಿದೆ.
ಇದೀಗ ಎಡಪಕ್ಷಗಳು ತಮ್ಮ ಅಭ್ಯರ್ಥಿಯಾಗಿ ಕನ್ನಯ್ಯ ಕುಮಾರ್ ಅವರನ್ನು ಬೇಗುಸರಾಯ್ ಕ್ಷೇತ್ರದಿಂದಲೇ ಕಣಕ್ಕಿಳಿಸಲು ತೀರ್ಮಾನಿಸಿರುವುದು ಕೂತೂಹಲ ಹೆಚ್ಚಿಸಿದೆ. ಮೋದಿ ಮತ್ತು ಬಿಜೆಪಿ ಸರ್ಕಾರದ ಜನವಿರೋಧಿತನವನ್ನು ಅತ್ಯಂತ ಪರಿಣಾಮಕಾರಿಯಾಗಿ, ಸರಳವಾಗಿ, ಮನಮುಟ್ಟುವಂತೆ ಮಾತಾಡುವಲ್ಲಿ ರಾಷ್ಟ್ರಮಟ್ಟದಲ್ಲಿ ಎಡಪಂಥೀಯ ಮತ್ತು ಜಾತ್ಯತೀತರ ಕಣ್ಮಣಿಯಾಗಿರುವ, ಯುವ ಐಕನ್ ಆಗಿರುವ ಕನ್ನಯ್ಯ ಈಗ ಬೇಗುಸರಾಯ್ ಕ್ಷೇತ್ರದಲ್ಲಿ ‘ಎಡ’ ಅಭ್ಯರ್ಥಿಯಾಗಿ ಬಿಜೆಪಿ ಮತ್ತು ಆರ್ ಜೆಡಿ ಎರಡರ ವಿರುದ್ಧವೂ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಸ್ಪರ್ಧೆ ನೀಡಲಿದ್ದಾರೆ ಎಂಬುದು ಮೇ 23ರ ಹೊತ್ತಿಗೆ ನಿರ್ಣಯವಾಗಲಿದೆ.