ತುಮಕೂರು: ಮೈತ್ರಿ ಪಕ್ಷಗಳ ಸೂಚನೆಯನ್ನು ಗಾಳಿಗೆ ತೂರಿ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ ಅವರು ಇಂದು ನಾಮಪತ್ರ ಸಲ್ಲಿಸಿದರು.
ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಮುದ್ದಹನುಮೇಗೌಡರು ನಂತರ ಮಾಧ್ಯಮದ ಜತೆ ಮಾತನಾಡಿದರು.
ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡುವ ಬಗ್ಗೆ ಮೈತ್ರಿ ಸರ್ಕಾರ ನನ್ನ ಬಳಿ ಚರ್ಚಿಸಬೇಕಿತ್ತು. ಈ ಬಗ್ಗೆ ಏನು ಹೇಳದೆ, ಕೇಳದೆ ಸ್ವತಃ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ನನ್ನ ಅಸಹನೆ ಇದೆ ಎಂದು ಮಾಧ್ಯಮದ ಮುಂದೆ ತಿಳಿಸಿದರು. ಈ ಕಾರಣದಿಂದ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದರು.
ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ನಿಮ್ಮನ್ನು ಅಭ್ಯರ್ಥಿಯಾಗಿ ಮಾಡಬೇಕೆಂದು ಅಭಿಪ್ರಾಯ ಇದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, “ನಾನು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಅಲ್ಲ, ನಾನು ತುಮಕೂರು ಸಂಸದ, ಇಲ್ಲಿ ಐದು ವರ್ಷ ಕೆಲಸ ಮಾಡಿದ್ದೇನೆ. ಬೆಂಗಳೂರು ಉತ್ತರಕ್ಕೆ ಹೋಗಿ ನಾನೇನು ಮಾಡಲಿ. ಎಲ್ಲಿ ಬೇಕಾದರೂ ಚುನಾವಣೆ ಎದುರಿಸುವಷ್ಟು ದೊಡ್ಡ ಮಟ್ಟದ ನಾಯಕ ನಾನಲ್ಲ” ಎಂದು ತಿಳಿಸಿದರು.
ನನಗೆ ಯಾವ ನಾಯಕರೂ ಬೇಡ, ನನ್ನ ಜೊತೆ ಜನತೆ ಇದ್ದಾರೆ. ನಾನು ಚುನಾವಣೆಗೆ ನಿಲ್ಲುತ್ತಿರುವುದು ಗೆಲ್ಲಲು, ಜನರು ನನ್ನನ್ನು ಗೆಲ್ಲಿಸಿ ಮತ್ತೊಂದು ಅವಕಾಶ ನೀಡುತ್ತಾರೆ ಎಂದು ನನಗೆ ಭರವಸೆ ಇದೆ ಎಂಬುದಾಗಿ ತಮ್ಮ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿದರು