ಕಡುಬಡವರಿಗೆ ಮಾಸಿಕ 6,000 ರುಪಾಯಿಯಂತೆ ವಾರ್ಷಿಕ 72,000 ರುಪಾಯಿ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ವಲಯದಲ್ಲಿ ತಲ್ಲಣ ಮೂಡಿದೆ. ರಾಹುಲ್ ಗಾಂಧಿ ಮಿನಿಮಮ್ ಇನ್ಕಮ್ ಗ್ಯಾರಂಟಿ (ಎಂಐಜಿ- ಮಿಗ್) ಅಥವಾ “ನ್ಯಾಯ್” (ನ್ಯೂನ್ತಮ್ ಆಯ್ ಯೋಜನಾ) ಯೋಜನೆ ಘೋಷಣೆ ಮಾಡುತ್ತಿದ್ದಂತೆ ಹಣಕಾಸು ಸಚಿವ ಅರುಣ್ ಜೇಟ್ಲಿ ದಡಬಡಿಸಿ ಪತ್ರಿಕಾಗೋಷ್ಠಿ ಕರೆದು ಈ ಆದಾಯ ಖಾತ್ರಿ ಯೋಜನೆಯನ್ನು ಹಿಗ್ಗಾ ಮುಗ್ಗಾ ಟೀಕಿಸಿದ್ದಾರೆ. ಅವರು ತ್ವರಿತವಾಗಿ ಕರೆದ ಪತ್ರಿಕಾಗೋಷ್ಠಿಯೇ ರಾಹುಲ್ ಗಾಂಧಿ ಘೋಷಿಸಿದ ‘ಮಿಗ್-72ಕೆ‘ ಯೋಜನೆಯು ಬಿಜೆಪಿ ಬಳಗದಲ್ಲಿ ಎಷ್ಟೆಲ್ಲ ಕ್ಷೋಭೆಗೆ ಕಾರಣವಾಗಿದೆ ಎಂಬುದರ ಪ್ರತಿಬಿಂಬವಾಗಿದೆ.
ರಾಹುಲ್ ಗಾಂಧಿ ಘೋಷಿಸಿದ ಯೋಜನೆಯನ್ನು ಟೀಕಿಸುವ ಜತೆಗೆ ಜತೆಗೆ ಮೋದಿ ಸರ್ಕಾರ ಇದುವರೆಗೆ ರೈತರಿಗೆ, ಬಡವರಿಗೆ ಮಾಡಿರುವ ಯೋಜನೆಗಳ ಲೆಕ್ಕ ಕೊಡುವುದು ಜೇಟ್ಲಿ ಅವರು ಉದ್ದೇಶವಾಗಿತ್ತು. ಸಂಸತ್ತಿಗೆ ರಫೈಲ್ ಖರೀದಿ ಲೆಕ್ಕ ಕೊಡಲಾರದ ನರೇಂದ್ರ ಮೋದಿ ಸರ್ಕಾರವು ಕ್ಷಿಪ್ರಗತಿಯಲ್ಲಿ ರೈತರಿಗೆ ಮಾಡಿದ ಖರ್ಚಿನ ಲೆಕ್ಕ ಕೊಟ್ಟಿದೆ.
ರಾಹುಲ್ ಗಾಂಧಿ ಘೋಷಿಸಿದ ಮಿಗ್-72ಕೆ ಯೋಜನೆಯಿಂದ ಪ್ರಧಾನಿ ನರೇಂದ್ರ ಮೋದಿ ಮತ್ತವರ ಬಳಗ ವಿಚಲಿತರಾಗಿರುವುದೇಕೆ?
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಿನಾಯ ಸೋಲು ಅನುಭವಿಸಿ, ಅಧಿಕಾರ ಉಳಿಸಿಕೊಂಡ ಬಿಜೆಪಿಗೆ ತಾನು ರೈತ ವಿರೋಧಿ ಅಲ್ಲ ಎಂಬುದನ್ನು ಸಾಬೀತು ಮಾಡಬೇಕಿತ್ತು. ಆ ಕಾರಣಕ್ಕಾಗಿ 2019-20 ನೇ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ರೈತರಿಗೆ ಕನಿಷ್ಠ ಆದಾಯ ಯೋಜನೆಯನ್ನು ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಘೋಷಣೆ ಮಾಡಿದರು.
ಅದು ವಾರ್ಷಿಕ 6000 ರುಪಾಯಿ ನೀಡುವ ಯೋಜನೆ. ಪ್ರತಿ ನಾಲ್ಕು ತಿಂಗಳಿಗೆ 2000 ರುಪಾಯಿಗಳಂತೆ ಮೂರು ಕಂತಿನಲ್ಲಿ ರೈತರಿಗೆ ಒಟ್ಟು 6000 ರುಪಾಯಿ ಒದಗಿಸುವುದು ಬಿಜೆಪಿಯ ಯೋಜನೆ. ಲೋಕಸಭಾ ಚುನಾವಣೆಯಲ್ಲಿ ರೈತರ ಮನಗೆದ್ದು ‘ಮತಲಾಭ’ ಮಾಡಿಕೊಳ್ಳುವುದು ಬಿಜೆಪಿಯ ಇರಾದೆ.
ಆದರೆ, ಈಗ ರುಪಾಯಿಗೆ ಇರುವ ಮೌಲ್ಯವನ್ನು ಪರಿಗಣಿಸಿದರೆ ರೈತರಿಗೆ ನಾಲ್ಕು ತಿಂಗಳಿಗೆ ಒಮ್ಮೆ 2000 ರುಪಾಯಿ ನೀಡಿದರೆ ಅದರಿಂದ ಅವರ ಕಷ್ಟಗಳೇನೂ ನಿವಾರಣೆಯಾಗದು. ಸಕಾಲದಲ್ಲಿ, ಬೆಳೆಸಾಲ, ಬಿತ್ತನೆ ಬೀಜ, ರಸಗೊಬ್ಬರ ಒದಗಿಸಲು ವಿಫಲವಾಗಿರುವ ಎನ್ಡಿಎ ಸರ್ಕಾರ, ಅಪನಗದೀಕರಣದ ಮೂಲಕ ಕೃಷಿ ವಲಯದ ಮೇಲೆ ಮಾಡಿರುವ ಆರ್ಥಿಕ ದಾಳಿಯಿಂದ ರೈತರು ಇನ್ನೂ ಚೇತರಿಸಿಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರ ಮನವೊಲಿಸಲು ನಾಲ್ಕು ತಿಂಗಳಿಗೆ 2000 ರುಪಾಯಿ ಯೋಜನೆಯನ್ನು ಬಿಜೆಪಿ ಜಾರಿಗೆ ತಂದಿರುವ ಬಗ್ಗೆ ಅಸಮಾಧಾನ ಇತ್ತು. ಅಷ್ಟುಕಡಿಮೆ ಮೊತ್ತದಲ್ಲಿ ಕೊಡುವುದಾದರೂ ಏಕೆ ಎಂಬ ಪ್ರಶ್ನೆಗಳು ಎದ್ದಿದ್ದವು. ಆದರೆ, ಚುನಾವಣೆಗೆ ಮುನ್ನ ಎರಡು ಕಂತು ಪಾವತಿಸಲೂ ಎಲ್ಲಾ ವ್ಯವಸ್ಥೆಯನ್ನೂ ಮಾಡಿಕೊಂಡ ಬಿಜೆಪಿ ತರಾತುರಿಯಲ್ಲಿ ಅದನ್ನು ದೊಡ್ಡದಾಗಿ ಪ್ರಚಾರ ಮಾಡಿದೆ.
ರಾಹುಲ್ ಗಾಂಧಿ ಹಾರಿಸಿದ “ಮಿಗ್-72ಕೆ” ಯೋಜನೆ ಬಗ್ಗೆ ಬಿಜೆಪಿಗೆ ಏಕೆ ಆತಂಕ?
ಅರುಣ್ ಜೇಟ್ಲಿ ವಿತ್ತ ಸಚಿವರಾಗಿರಬಹುದು. ನರೇಂದ್ರ ಮೋದಿ ಪ್ರಧಾನ ಮಂತ್ರಿಯೇ ಆಗಿರಬಹುದು. ಆದರೆ, ಅವರಿಬ್ಬರಿಗೂ ರೈತರ ನಾಡಿಮಿಡಿತ ಗೊತ್ತಿಲ್ಲ. ರೈತರ ಸಂಕಷ್ಟಗಳು ತಿಳಿದಿಲ್ಲ. ಅದಕ್ಕಾಗಿ ರೈತರಿಗೆ ಭಿಕ್ಷೆ ಹಾಕುವಂತೆ ವಾರ್ಷಿಕ 6000 ರುಪಾಯಿ ನೀಡುವ ಯೋಜನೆ ಘೋಷಣೆ ಮಾಡಿದ್ದಾರೆ.
ಆದರೆ, ರಾಹುಲ್ ಗಾಂಧಿಯು ಮೋದಿ ಘೋಷಿಸಿದ ಯೋಜನೆಯ ಹೆಚ್ಚುಕಮ್ಮಿ ಹನ್ನೆರಡು ಪಟ್ಟು ಹೆಚ್ಚು ಮೊತ್ತ ಅಂದರೆ 72,000 ರುಪಾಯಿ ನೀಡುವ ಕನಿಷ್ಟ ಆದಾಯ ಖಾತ್ರಿ ಯೋಜನೆ ಘೋಷಿಸಿದ್ದಾರೆ. ಮೋದಿ ಸರ್ಕಾರ ವರ್ಷಕ್ಕೆ ನೀಡುವ 6000 ರುಪಾಯಿಗಳನ್ನು ರಾಹುಲ್ ಗಾಂಧಿ ಘೋಷಿಸಿರುವ ಯೋಜನೆಡಿ ಒಂದೇ ತಿಂಗಳಲ್ಲಿ ನೀಡಲಾಗುತ್ತದೆ.
ಎಲ್ಲಕ್ಕಿಂತ ಮಿಗಿಲಾಗಿ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಿನ್ನಡೆ ಅನುಭವಿಸಿ ಹಿನ್ನೆಲೆಯಲ್ಲಿ ಮೋದಿ ರೈತರಿಗೆ ಸೀಮೀತವಾಗಿ ಯೋಜನೆ ಘೋಷಿಸಿದ್ದಾರೆ.
ರಾಹುಲ್ ಗಾಂಧಿ ಘೋಷಿಸಿರುವ ಯೋಜನೆಯು ರೈತರಿಗೆ ಮಾತ್ರವೇ ಅಲ್ಲ. ರೈತರನ್ನೂ ಒಳಗೊಂಡಂತೆ ಕಡುಬಡವರಿಗೆ ಈ ಯೋಜನೆ ರೂಪಿಸಲಾಗಿದೆ. ಬಡವರಲ್ಲಿ ಶೇ.20ರಷ್ಟು ಕಡುಬಡವರಿಗೆ ಈ ಯೋಜನೆ ಅನ್ವಯವಾಗುತ್ತದೆ. ಮತ್ತೆ ಈ ಯೋಜನೆಯು ಶಾಶ್ವತವಲ್ಲ. ಬಡಕಟುಂಬದ ವಾರ್ಷಿಕ ಆದಾಯ ಹೆಚ್ಚಳವಾದಂತೆ ಅವರನ್ನು ಯೋಜನೆಯಿಂದ ಕೈಬಿಡಲಾಗುತ್ತದೆ. ಅಂದರೆ, ಧೀರ್ಘಕಾಲದಲ್ಲಿ ಕಡುಬಡವರ ಆರ್ಥಿಕ ಸ್ಥಿತಿ ಸುಧಾರಣೆಯಾದಂತೆ, ಕೆಳಮಟ್ಟದಲ್ಲಿ ಬಡತನ ನಿವಾರಣೆಯಾದಂತಾಗುತ್ತದೆ. ಇದು ಆರ್ಥಿಕ ಪ್ರಗತಿಗೂ ಪೂರಕವಾಗುತ್ತದೆ.
2016-17ರ ಆರ್ಥಿಕ ಸಮೀಕ್ಷೆಯಲ್ಲಿ ಅಂದಿನ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಮಣ್ಯಮ್ ಅವರು ಯೂನಿವರ್ಸಲ್ ಬೇಸಿಕ್ ಇನ್ಕಮ್ (ಯುಬಿಐ) ಬಗ್ಗೆ ಪ್ರಸ್ತಾಪ ಮಾಡಿದ್ದರು. ಯುಬಿಐ ದೇಶದ ಎಲ್ಲಾ ನಾಗರಿಕರಿಗೂ ಕನಿಷ್ಠ ಆದಾಯ ಒದಗಿಸುವ ಯೋಜನೆ. ಅದು 135 ಕೋಟಿ ಜನರಿರುವ ಭಾರತಕ್ಕೆ ಪೂರಕವಲ್ಲ ಎಂದು ಬಿಜೆಪಿಯೇ ತಿರಸ್ಕರಿಸಿತು. ರಾಹುಲ್ ಗಾಂಧಿ ಘೋಷಿಸಿರುವ ‘ಮಿಗ್-72ಕೆ‘ ಯೋಜನೆಯು ಯುಬಿಐ ನ ಯಥಾವತ್ತು ನಕಲು ಅಲ್ಲದಿದ್ದರೂ ಯುಬಿಐನ ಮೂಲ ತತ್ವವನ್ನು ಆಧರಿಸಿದೆ. ಆದರೆ, ‘ಮಿಗ್-72ಕೆ‘ ಆಶಯ ಮಾತ್ರ ಬೇರೆಯಾಗಿದೆ. ಕಡುಬಡವರಿಗೆ ಕನಿಷ್ಠ ಆದಾಯದ ಗ್ಯಾರಂಟಿ ನೀಡುವುದು ರಾಹುಲ್ ಘೋಷಿಸಿರುವ ಯೋಜನೆಯ ಉದ್ದೇಶ.
ದೇಶದಲ್ಲಿರುವ ಬಡವರ ಪೈಕಿ ಶೇ.20ರಷ್ಟು ಕಡುಬಡವರಿಗೆ ಮಾಸಿಕ 6000 ರುಪಾಯಿಗಳಂತೆ ವಾರ್ಷಿಕ 72,000 ರುಪಾಯಿ ಒದಗಿಸುವುದೆಂದರೆ ಸುಲಭದ ಮಾತೇ? ಆರ್ಥಿಕವಾಗಿ ಭಾರಿ ಹೊರೆಯಾಗುವುದಿಲ್ಲವೇ? ಇವು ತಕ್ಷಣಕ್ಕೆ ಎದ್ದಿರುವ ಪ್ರಶ್ನೆಗಳು.
ಪ್ರಾಥಮಿಕ ಅಂದಾಜಿನ ಪ್ರಕಾರ ರಾಹುಲ್ ಘೋಷಿಸಿರುವ ಯೋಜನೆ ಜಾರಿ ಮಾಡಲು 3,60,000 ಕೋಟಿ ರುಪಾಯಿಗಳ ಅಗತ್ಯವಿದೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ 6,24,000 ಕೋಟಿ ವಿತ್ತೀಯ ಕೊರತೆ ಇದೆ. ಒಂದು ವೇಳೆ ಯುಪಿಎ ಅಧಿಕಾರಕ್ಕೆ ಬಂದರೆ, ವೆಚ್ಚ ಮಾಡಲುದ್ದೇಶಿಸಿರುವ 3,60,000 ಕೋಟಿ ರುಪಾಯಿಗಳನ್ನು ಹೆಚ್ಚುವರಿಯಾಗಿ ಸಂಗ್ರಹಿಸಲು ಪೂರಕ ಆದಾಯ ಮಾರ್ಗಗಳ ಬಗ್ಗೆ ರಾಹುಲ್ ಹೇಳಿಲ್ಲ.
ರಾಹುಲ್ ಗಾಂಧಿ ಘೋಷಿತ ಮಿಗ್-72ಕೆ ಜಾರಿಗೊಳಿಸಲು ಬೇಕಿರುವ 3,60,000 ಕೋಟಿ ರುಪಾಯಿಗಳು ಎಷ್ಟಾಗಬಹುದು?
2019 ಆರ್ಥಿಕ ವರ್ಷದ ಕೇಂದ್ರದ ಜಿಎಸ್ಟಿ ಆದಾಯ 7.43 ಲಕ್ಷ ಕೋಟಿಗಳಷ್ಟಿದೆ. ಸರ್ಕಾರದ ಒಟ್ಟು ಸ್ವೀಕೃತಿಯು 18.18 ಲಕ್ಷ ಕೋಟಿಗಳಷ್ಟಿದೆ. ಕೇಂದ್ರವು ರಕ್ಷಣಾ ಇಲಾಖೆಗೆ ಒದಗಿಸುವ ಮೊತ್ತ 2.82 ಲಕ್ಷ ಕೋಟಿಯಷ್ಟಿದೆ. ಪಿಂಚಣಿ ವೆಚ್ಚವು 1.68 ಲಕ್ಷ ಕೋಟಿಯಷ್ಟಿದೆ. ‘ಮಿಗ್-72ಕೆ’ ಯೋಜನೆಗೆ ಬೇಕಾದ 3,60,000 ಕೋಟಿ ರುಪಾಯಿಗಳು 2019ರ ವಿತ್ತೀಯ ಕೊರತೆಯ ಶೇ.58ರಷ್ಟಾಗುತ್ತದೆ. 2019ರ ಕಾರ್ಪೋರೆಟ್ ತೆರಿಗೆ ಸಂಗ್ರಹದ ಶೇ.58ರಷ್ಟು, 2019ರ ಸೆಂಟ್ರಲ್ ಜಿಎಸ್ಟಿ ಸಂಗ್ರಹದ ಶೇ.48ಷ್ಟಾಗುತ್ತದೆ. ರಕ್ಷಣಾ ಇಲಾಖೆಗೆ ನೀಡುವ ಒಟ್ಟು ಮೊತ್ತದ ಶೇ.128ರಷ್ಟು ಮೊತ್ತ ಬೇಕಾಗುತ್ತದೆ.
ಕಾಂಗ್ರೆಸ್ ವಕ್ತಾರರು ಹೇಳುವ ಪ್ರಕಾರ, ಅಂತ್ಯೋದಯ ಅನ್ನ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಈಗಾಗಲೇ ನೀಡುತ್ತಿರುವ ಸೌಲಭ್ಯಗಳನ್ನು ಈ ಯೋಜನೆಯೊಂದಿಗೆ ಮಿಳಿತಗೊಳಿಸಿದರೆ, ಅಂತಿಮ ಹೊರೆಯು ತಗ್ಗುತ್ತದೆ. ಅಷ್ಟಕ್ಕೂ ಬಡತನ ನಿವಾರಣೆ ಮಾಡಬೇಕಾದರೆ, ಅದಕ್ಕಾಗಿ ವೆಚ್ಚ ಮಾಡಬೇಕಾಗುತ್ತದೆ, ಅದಕ್ಕೆ ಮಾರ್ಗೋಪಾಯಗಳು ಇದ್ದೇ ಇವೆ ಎನ್ನುತ್ತಾರೆ.
ಅದೇನೆ ಇರಲಿ, ರೈತರಿಗೆ ವರ್ಷಕ್ಕೆ ಕೇವಲ 6000 ರುಪಾಯಿ ನೀಡಿ ‘ಮತಲಾಭ’ ಪಡೆಯುವ ಹುನ್ನಾರದಲ್ಲಿದ್ದ ನರೇಂದ್ರ ಮೋದಿ ಬಳಗಕ್ಕೆ ರಾಹುಲ್ ಗಾಂಧಿ ಘೋಷಿಸಿರುವ ‘ಮಿಗ್- 72ಕೆ’ ಯೋಜನೆ ಆತಂಕವನ್ನುಂಟು ಮಾಡಿರುವುದಂತು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಯಾವ ಕ್ಷಿಪಣಿ ಹಾರಿಸುತ್ತದೋ?
72000 ರೂಪಾಯಿ ಈ ಪಕ್ಷ ಬಡವರಿಗೆ ಯಾವ ಪುರುಷಾರ್ಥಕ್ಕೆ ಕೊಡು ತ್ತಿದೆ ಗೊತ್ತಿಲ್ಲಾ.ಈಗಲೇ ಕೆಲಸದವರ ತೊಂದರೆ ಎದ್ದು ಕಾಣುತ್ತಿದೆ.ಇನ್ನು 72000 ಕೊಟ್ಟು ದಿನಾ ಕುಡಿಸಿ ಮಲಗಿಸು ವುದೊಂದು ಬಾಕಿ.ಇದು ಮಧ್ಯಮ ವರ್ಗ ಕಟ್ಟಿದ tax ದುಡ್ಡು.ಯಾಕೆ ಇವರ ಪಕ್ಷಕ್ಕೆ ಬರುವ ದೇಣಿಗೆ ದುಡ್ಡು ಕೊಡ ಬಾರದು.tax ದುಡ್ಡು ದೇಶದ ಬೇರೆ ಉದ್ದಾರಕ್ಕೆ ಉಪಯೋಗಿಸ ಬಾರದು.ಇನ್ನು ಮೇಲೆ ಯಾವುದೇ ಪಕ್ಷ ವಾಗಲಿ ಉಚಿತ ವಾಗಿ ಏನೇ ಕೊಡುವುದಾಗಲಿ ಎಂದು ಘೋಷಣೆ ಮಾಡಿದರೆ ಅದು ಪಕ್ಷದ ದೇಣಿಗೆ ದುದ್ದಲ್ಲಿ ಕೊಡಲಿ ಎಂದು ಒಂದು ಸುಗ್ರೀವಾಜ್ಞೆ ಹೊರಡಿಸಲಿ ಇದಕ್ಕೆ ಜನ ಬೆಂಬಲ ಕೊಡಲಿ ಆಗ ನೋಡಿ ಸಾಲ ಮನ್ನಾ,ತಿಂಗಳಿಗೆ ಆರು ಸಾವಿರ ಕೊಡುವುದು,ಅನ್ನಭಾಗ್ಯ,ಶಾದಿಭಾಗ್ಯ,ಎಲ್ಲಾ ನಿಂತು ಹೋಗುತ್ತದೆ.ಇದು ಪಕ್ಷಾತೀತವಾಗಿ ಹೊಮ್ಮಲಿ.ದೇಶ ಉದ್ದಾರ ಮಾಡೋಕ್ಕೆ ಹೊಸ ಹೊಸ ಯೋಜನೆ ಮಾಡುವುದು ಬಿಟ್ಟು ಎಲ್ಲಾ ಪಕ್ಷದವರು ಬರೆ ಉಚಿತ ಯೋಜನೆ ಬಿಟ್ಟರೆ ಒಳ್ಳೆಯದಲ್ಲವೇ ಬಂಧುಗಳೇ………