18, ಸೆಪ್ಟೆಂಬರ್ 2016ರಂದು ಕಳೆದೆರಡು ದಶಕಗಳಲ್ಲೇ ನಡೆದಿರದ ಭಯೋತ್ಪಾದಕ ದಾಳಿಯೊಂದು ಭಾರತದ ಸೇನಾಪಡೆಗಳ ಮೇಲೆ ನಡೆಯಿತು. ಭಾರತೀಯ ಸೇನಾಪಡೆಯ 17 ಸೈನಿಕರು ಆ ದಾಳಿಯಲ್ಲಿ ಹುತಾತ್ಮರಾದರು.
ಇದಾಗಿ ಮೂರು ವರ್ಷಗಳಾಗುತ್ತಾ ಬಂದಿವೆ. ಉರಿ ದಾಳಿಗೆ ದಾಳಿಗೆ ಪ್ರತೀಕಾರವಾಗಿ ಭಾರತ ಸೈನ್ಯ ಗಡಿರೇಖೆ ದಾಟಿ ಸರ್ಜಿಕಲ್ ದಾಳಿ ನಡೆಸಿತು. ಅದನ್ನು ನಡೆಸಿದ್ದು ಪ್ರಾಣದ ಹಂಗು ತೊರೆದು ಹೋಗಿದ್ದ ಸೈನಿಕರಾದರೂ ಅದು ಆಡಳಿತ ಪಕ್ಷದ ಅತಿಯಾದ ರಾಜಕೀಯ ಪ್ರಚಾರಕ್ಕೆ ಬಳಕೆಯಾಯಿತು. ಅದನ್ನು ಮುನ್ನಡೆಸಿದ ಸೇನಾಧಿಕಾರಿ ಡಿ ಎಸ್ ಹೂಡಾ ಅವರೂ ಈ ಬಗ್ಗೆ ತಕರಾರು ಹೇಳಿದ್ದು ವಿವಾದವಾಯಿತು. ಕಳೆದ ಜನವರಿಯಲ್ಲು ‘ಉರಿ-ದ ಸರ್ಜಿಕಲ್ ಸ್ಟ್ರೈಕ್’ ಎಂಬ ಸಿನಿಮಾ ಕೂಡಾ ಬಿಡುಗಡೆಯಾಗಿ ಅದನ್ನೂ ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳಲಾಯಿತು.
ಇದೆಲ್ಲದರ ನಡುವೆ ಅತ್ಯಂತ ಗಂಭೀರ ಸಂಗತಿಯೊಂದು ಯಾರ ಗಮನಕ್ಕೂ ಬರಲೇ ಇಲ್ಲ. ಜಮ್ಮು ಕಾಶ್ಮೀರದ ಉರಿಯಲ್ಲಿ ನಡೆದ ಉಗ್ರ ದಾಳಿಯಲ್ಲಿ ಹತರಾದ ಸೈನಿಕರ ಕುಟುಂಬಗಳ ದಾರುಣ ಕತೆ, ವ್ಯಥೆ ಅದು.
ಉರಿ ಘಟನೆ ನಡೆದು ಮೂರು ವರ್ಷಗಳಾದ ನಂತರವೂ ಅಂದು ಕೇಂದ್ರ ಸರ್ಕಾರ ನೀಡಿದ್ದ ಭರವಸೆ ಹಾಗೂ ಪರಿಹಾರ ಧನಕ್ಕಾಗಿ ಕಾದು ಕುಳಿತಿವೆ ಈ ಕುಟುಂಬಗಳು. ಮಾತ್ರವಲ್ಲ ಅದಕ್ಕಾಗಿ ಸಾಕಷ್ಟು ಹೋರಾಟಗಳನ್ನೂ ನಡೆಸುತ್ತಿವೆ. ಆದರೆ ಸರ್ಕಾರ ಮಾತ್ರ ನೀಡಿದ್ದ ಒಂದೇ ಒಂದು ಭರವಸೆಯನ್ನೂ ಈಡೇರಿಸದೆ ತನ್ನ ಸರ್ಕಾರದ ಅವಧಿಯನ್ನು ಮುಗಿಸಿಕೊಂಡು ಮತ್ತೊಂದು ಚುನಾವಣೆಗೆ ಸಿದ್ಧವಾಗಿದೆ.
ಉರಿ ದಾಳಿಯ ಹುತಾತ್ಮ ಸೈನಿಕ ಕುಟುಂಬಗಳ ಜತೆ ದಿ ಕ್ವಿಂಟ್ ಸುದ್ದಿ ಸಂಸ್ಥೆ ಒಂದು ಸಂದರ್ಶನ ನಡೆಸಿದೆ. ಈ ಸಂದರ್ಶನ ಹುತಾತ್ಮ ಯೋಧರ ಕುಟುಂಬಗಳ ದೈನೇಸಿ ಸ್ಥಿತಿ, ಹಾಗೂ ಸರ್ಕಾರಗಳ ಹೊಣೆಗೇಡಿತನದ ಅನಾವರಣಗೊಳಿಸಿದೆ.
ಕೇಂದ್ರ ಸರ್ಕಾರ ತಮಗೆ ನೀಡಿದ್ದ ಭರವಸೆಗಳನ್ನೂ ಈಡೇರಿಸಿಲ್ಲ ಹಾಗೂ ಪರಿಹಾರ ಧನವನ್ನೂ ನೀಡಿಲ್ಲ ಎಂದು ಎಲ್ಲಾ ಹುತಾತ್ಮ ಸೈನಿಕರ ಕುಟುಂಬಗಳು ಒಕ್ಕೊರಲಿನಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸುತ್ತಿವೆ.
ಹುತಾತ್ಮ ಯೋಧ ರಾಜೇಶ್ ಯಾದವ್ ಪತ್ನಿ ಪಾರ್ವತಿ, “ಕೇಂದ್ರ ಸರ್ಕಾರ ಸಾಕಷ್ಟು ಭರವಸೆಗಳನ್ನು ನೀಡಿತ್ತು, ಆದರೆ ಒಂದನ್ನೂ ಈಡೇರಿಸಿಲ್ಲ. ನಮ್ಮ ಕುಟುಂಬ ಸದಸ್ಯರಿಗೆ ಕೆಲಸ ಕೊಡುವುದಾಗಿ ಹೇಳಿದ್ದರು, ಹಾಳಾಗಿರುವ ರಸ್ತೆಗಳನ್ನು ಸರಿಪಡಿಸುತ್ತೇವೆ ಎಂದಿದ್ದರು, ಪ್ರತಿಮೆ ನಿರ್ಮಿಸುವುದಾಗಿ ಹೀಗೆ ಹಲವು ಭರವಸೆಗಳನ್ನು ನೀಡಿದ್ದರು. ನನ್ನ ಪತಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು, ಆದರೆ ಅವರ ಸ್ಮರಣಾರ್ಥ ಸರ್ಕಾರ ಒಂದು ಸ್ಮಾರಕ ಪ್ರತಿಮೆಯನ್ನೂ ನಿರ್ಮಿಸಿಲ್ಲ, ಕುಟುಂಬಕ್ಕೆ ನೀಡುತ್ತೇವೆ ಎಂದಿದ್ದ ಕೆಲಸವನ್ನೂ ನೀಡಿಲ್ಲ” ಎಂದು ಕಣ್ಣೀರಿಟ್ಟಿದ್ದಾರೆ.
ಮತ್ತೊಬ್ಬ ಹುತಾತ್ಮ ಸೈನಿಕ ಪನ್ನಲಾಲ್ ಯಾದವ್ ತಂದೆ ಉದಯ್ ಯಾದವ್, “ಕೇಂದ್ರ ಸರ್ಕಾರದಿಂದ ಯಾವುದೇ ಪರಿಹಾರ ಪಡೆಯಬೇಕಾದರೆ ಸಾಕಷ್ಟು ಶ್ರಮ ಪಡಬೇಕು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಬಹಳಷ್ಟು ಹೋರಾಡಿ ನಾವು 10 ಲಕ್ಷ ಪರಿಹಾರ ಪಡೆಯುವಲ್ಲಿ ಯಶಸ್ವಿಯಾದೆವು. ಅದು ಅಖಿಲೇಶ್ ಯಾದವ್ ಅವರ ಸರ್ಕಾರದ ಅವಧಿಯಲ್ಲಿ. ನಾವು ಹೋರಾಡದೇ ಇದ್ದರೆ ಈ ಹಣ ನಮಗೆ ದೊರಕುತ್ತಿರಲಿಲ್ಲ. ರಾಜ್ಯ ಸರ್ಕಾರ ನೀಡಿದ 10 ಲಕ್ಷ ಬಿಟ್ಟು ಕೇಂದ್ರ ಸರ್ಕಾರದಿಂದ ನಮಗೆ ಬೇರೇನು ಸಿಕ್ಕಿಲ್ಲ,’’ ಎಂದು ಉದಯ್ ಯಾದವ್ ವಿಷಾದದಿಂದ ನುಡಿಯುತ್ತಾರೆ.
“ಸರ್ಕಾರ ನಮಗೆ ಸಾಕಷ್ಟು ಭರವಸೆಗಳನ್ನು ನೀಡಿತ್ತು. ಆದರೆ ನಮಗೆ ಅಖಿಲೇಶ್ ಅವರ ಅವಧಿಯಲ್ಲಿ 10 ಲಕ್ಷ ರುಪಾಯಿ ದೊರಕಿದ್ದು ಬಿಟ್ಟರೆ ಬೇರೆನಿಲ್ಲ. ಮೃತ ಯೋಧರ ಕುಟುಂಬಕ್ಕೆ ಕೆಲಸ ಸೇರಿದಂತೆ, ಮೂರು ಮನೆಗಳು, ಹುತಾತ್ಮರ ಪ್ರತಿಮೆ, ಪಾರ್ಕ್, ರಸ್ತೆ, ವಿದ್ಯುತ್ ಸಂಪರ್ಕ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ ಮೂರು ವರ್ಷ ಕಳೆದರೂ ಯಾವುದೇ ಸೌಕರ್ಯಗಳನ್ನು ನೀಡಿಲ್ಲ. ಎಲ್ಲಾ ಭರವಸೆಗಳು ಸುಳ್ಳಾದವು” ಎಂದು ತಮ್ಮ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ.
ಕೆಲವು ಹುತಾತ್ಮ ಯೋಧರ ಕುಟುಂಬಗಳು ಈಗಲೂ ಪರಿಹಾರದ ಹಣಕ್ಕಾಗಿ ಹೋರಾಟ ನಡೆಸುತ್ತಲೇ ಇವೆ..
“ಸರ್ಕಾರ ಹಾಗೂ ಆಡಳಿತ ಮಡಳಿಗೆ ನಾನು ಲೆಕ್ಕವಿಲ್ಲದಷ್ಟು ಪತ್ರಗಳನ್ನು ಬರೆದಿದ್ದೇನೆ, ಆದರೆ ಯಾವುದೇ ಪ್ರತಿಕ್ರಿಯೆ , ಪರಿಹಾರ ಇಲ್ಲ. ನಮಗೆ ಹಣ ಕೊಡಲು ಇಷ್ಟವಿಲ್ಲಅಥವಾ ಆಗುವುದಿಲ್ಲ ಎಂದಾದರೆ ಕನಿಷ್ಠ ಅದನ್ನು ಲಿಖಿತ ಪತ್ರದ ಮೂಲಕವಾದರೂ ನೀಡಬಹುದು. ಇದರಿಂದಾಗಿ ನಾನು ಬಹಳಷ್ಟು ಬಳಲಿದ್ದೇನೆ, ನೊಂದಿದ್ದೇನೆ. ಕಚೇರಿಗಳಿಗೆ ಓಡಾಡುವುದಕ್ಕಾಗಿಯೇ ನನ್ನ ಹಣವನ್ನೆಲ್ಲಾ ಖರ್ಚು ಮಾಡಿದ್ದೇನೆ. ಇದಾವುದಕ್ಕೂ ಪ್ರತಿಫಲ ಸಿಗದಿದ್ದರೆ ಕೋರ್ಟ್ ಮೆಟ್ಟಿಲೇರಿ, ನನ್ನ ಬಳಿ ಇರುವ ಎಲ್ಲಾ ಪುರಾವೆಗಳನ್ನು ಕೋರ್ಟ್ ಮುಂದೆ ಹಾಜರುಪಡಿಸುತ್ತೇನೆ” ಎಂದು ಹುತಾತ್ಮ ಯೋಧ ರಾಜೇಶ್ ಸಿಂಗ್ ನ ನೊಂದ ತಂದೆ ರಾಜೇಂದ್ರ ಸಿಂಗ್ ತೀವ್ರವಾಗಿ ನೊಂದು ನುಡಿದಿದ್ದಾರೆ.
ಹೀಗೆ ಕೇಂದ್ರ ಸರ್ಕಾರ ನಮ್ಮ ದೇಶದ ಗಡಿ ರಕ್ಷಣೆಯ ಕರ್ತವ್ಯದಲ್ಲಿ ಹುತಾತ್ಮರಾದ ಸೈನಿಕರ ತ್ಯಾಗಗಳನ್ನು ಅವಮಾನಿಸುವ ಕೆಲಸ ಮಾಡಿದೆ. ದೇಶಕ್ಕಾಗಿ ತ್ಯಾಗ ಮಾಡಿದವರ ಕುಟುಂಬಗಳಿಗೆ ಸುಳ್ಳು ಭರವಸೆ ನೀಡುವುದು ಅಥವಾ ನೀಡಿದ ಭರವಸೆಗಳನ್ನು ಈಡೇರಿಸದೇ ವಂಚಿಸುವುದು ಯಾವುದೇ ಸರ್ಕಾರ ಮಾಡುವ ಹೇಯ ಕೆಲಸವಾಗುತ್ತದೆ. ಸಧ್ಯ ತಾನೊಂದೇ ದೇಶಭಕ್ತ ಪಕ್ಷ ಎಂದು ಹೇಳುವ ಬಿಜೆಪಿ ನೇತೃತ್ವದ ಸರ್ಕಾರವೇ ಇಂತಹ ನಾಚಿಕೆಗೇಡಿನ ಕೆಲಸ ಮಾಡುತ್ತಿದೆ ಎಂದರೆ ಇದರ ದೇಶಭಕ್ತಿಯ ಡೋಂಗಿತನಕ್ಕೆ ಹಿಡಿದ ಕನ್ನಡಿಯಾಗಿದೆ.
ತಮ್ಮನ್ನು ತಾವು ಚೌಕಿದಾರ್ ಎಂದುಕೊಳ್ಳುವವರು ಕನಿಷ್ಠ ನಮ್ಮ ಹುತಾತ್ಮರ ಕುಟುಂಬಗಳನ್ನಾದರೂ ರಕ್ಷಿಸಲಿ.
CLICK- ಮೂಲ ವಿಡಿಯೋ ಸಂದರ್ಶನ, ವರದಿ- ದ ಕ್ವಿಂಟ್