ಬಿಹಾರದ ಬೇಗುಸರಾಯ್ ಕ್ಷೇತ್ರದಿಂದ ಯುವ ನಾಯಕ ಕನ್ಹಯ್ಯ ಕುಮಾರ್ ನನ್ನು ತಮ್ಮ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಿದ್ದೇವೆ ಎಂದು ಭಾರತ ಕಮ್ಯುನಿಷ್ಟ್ ಪಕ್ಷದ ಮುಖಂಡರು ಭಾನುವಾರ ಅಧಿಕೃತವಾಗಿ ಘೋಷಿಸಿದರು. ಪಾಟ್ನಾದಲ್ಲಿ ಸಿಪಿಐ ಪಕ್ಷದ ಕಚೇರಿ ಜನಶಕ್ತಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು. ನಂತರ ಕನ್ಹಯ್ಯ ಕುಮಾರ್ ಸಹ ಮಾತನಾಡಿದರು. ಮಾಧ್ಯಮದವರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದರೂ ಎಲ್ಲವಕ್ಕೂ ತಾಳ್ಮೆಯಿಂದಲೇ ಕನ್ಹಯ್ಯ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಕನ್ಹಯ್ಯ ಆಡಿದ ಮಾತುಗಳ ಸಾರಸಂಗ್ರಹವನ್ನು ಟ್ರೂಥ್ ಇಂಡಿಯಾ ನಮ್ಮ ಓದುಗರಿಗಾಗಿ ನೀಡುತ್ತಿದೆ.
ಸಂವಿಧಾನ ಉಳಿಸಲು ಹೋರಾಟ
ಭಾರತದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ದೇಶದ ಒಳಿತಿಗಾಗಿ, ಬಿಜೆಪಿಯ ವಿರುದ್ಧ ನಾವು ಸಂಘಟಿಸಿರುವ ಜನರನ್ನು ಈಗ ಚುನಾವಣೆಗಳಲ್ಲಿ ನೋಡಬೇಕಿದೆ. ಸಿಪಿಐ ರಾಷ್ಟ್ರೀಯ ಪಕ್ಷವಾಗಿದ್ದು, ಚುನಾವಣೆಗಳನ್ನು ಎದುರಿಸುತ್ತಾ ಬಂದಿದ್ದೇವೆ. ಬಿಜೆಪಿ-ವಿರೋಧಿ ಮತಗಳನ್ನು ವಿಭಜಿಸುವುದು ನಮ್ಮ ಉದ್ದೇಶವಲ್ಲ. ಇದರಲ್ಲಿ ನಾವು ಬಹಳ ಸ್ಪಷ್ಟವಾಗಿದ್ದೇವೆ. ನಮ್ಮ ಸಂಘಟನೆಯ ಪ್ರತಿಷ್ಠೆಗಾಗಿ, ನಮ್ಮ ಧ್ವಜವನ್ನು ಎತ್ತಿಹಿಡಿಯಲು, ನಮ್ಮ ಅಹಂನ ಸುಳಿಯೊಳಗೆ ಸಿಕ್ಕಿ ದೇಶ ಉಳಿಸುವ ಹೋರಾಟವನ್ನು ಬಲಹೀನಗೊಳಿಸುವ ಪ್ರಶ್ನೆಯೇ ಇಲ್ಲ. ನಾವೀಗ ನಮ್ಮ ಪಕ್ಷದ ಬಗ್ಗೆ ಯೋಚಿಸುತ್ತಿಲ್ಲ. ನಮ್ಮ ದೇಶವನ್ನು, ಪ್ರಜಾತಂತ್ರವನ್ನು, ಸಂವಿಧಾನವನ್ನು ಸಂರಕ್ಷಿಸುವುದು ಇಂದಿನ ತುರ್ತು. ಇದಕ್ಕಾಗಿ ನಮ್ಮ ಬದ್ಧತೆ ತೋರುತ್ತೇವೆ ಮತ್ತು ಹೋರಾಟಗಳಲ್ಲಿ ನಾವು ಸಾಧಿಸಿರುವ ಐಕ್ಯತೆಯನ್ನು ಈಗ ಚುನಾವಣೆಯಲ್ಲಿಯೂ ತೋರಬೇಕಿದೆ.
ಬಿಹಾರ ಬುದ್ಧನ ನಾಡು, ಶಾಂತಿ-ಅಹಿಂಸೆಗಳ ಬೀಡು. ಇಲ್ಲೀಗ ಹಿಂಸೆ, ದ್ವೇಷ, ಜಾತಿಧರ್ಮಗಳ ಉನ್ಮಾದಗಳು ಆಶ್ರಯ ಪಡೆಯಲು ಬರುತ್ತಿವೆ. ಇವುಗಳ ಮತ್ತು ಇವುಗಳನ್ನು ಹುಟ್ಟುಹಾಕುವ ಬಿಜೆಪಿಯ ವಿರುದ್ಧ ನಮ್ಮ ಹೋರಾಟ. ಬಿಹಾರದ ಜನತೆಗೋಸ್ಕರ ನಮ್ಮ ಹೋರಾಟ; ಮೊದಲಿಗೆ ಬಿಜೆಪಿಯನ್ನು ಸೋಲಿಸಬೇಕಿದೆ. 2019ರಲ್ಲಿ ತಾವು 400 ಸ್ಥಾನಗಳನ್ನು ಗೆದ್ದರೆ ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿಯ ಹಲವು ನಾಯಕರು ಹೇಳಿದ್ದಾರೆ. ಬಿಜೆಪಿ ಮತ್ತೆ ಗೆದ್ದರೆ ಮುಂದೆ ಚುನಾವಣೆಗಳೇ ನಡೆಯುವುದಿಲ್ಲ ಎಂದು ಅವರೇ ಘೋಷಿಸಿಕೊಂಡಿದ್ದಾರೆ.
ನಮ್ಮ ಹೊಣೆಗಾರಿಕೆ
ಪಾರ್ಲಿಮೆಂಟಿನ 100 ಮೀ. ಒಳಗೆ ಸಂವಿಧಾನವನ್ನು ಸುಟ್ಟರು. ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಹೆಚ್ಚಿವೆ. ಪ್ರಶ್ನಿಸುವ ಪತ್ರಕರ್ತರನ್ನು ಕೆಲಸದಿಂದ ತೆಗೆಯಲಾಗುತ್ತಿದೆ, ಗೌರಿ ಲಂಕೇಶ್ ಅಂತಹ ಪತ್ರಕರ್ತರನ್ನು ಹತ್ಯೆಗೈಯಲಾಗುತ್ತದೆ. ಪ್ರತಿರೋಧ ಒಡ್ಡಿದರೆ ಜೈಲಿಗಟ್ಟುತ್ತಾರೆ. ರೋಹಿತ್ ವೆಮುಲಾ ಆತ್ಮಹತ್ಯೆಗೆ ಶರಣಾಗುವಂತೆ ಸಂಚು ರೂಪಿಸಲಾಗುತ್ತದೆ. ನಜೀಬ್ ನ ತಾಯಿ ನನ್ನ ಮಗ ಎಲ್ಲಿ ಎಂದು ರಸ್ತೆಯಲ್ಲಿ ಸರ್ಕಾರವನ್ನು ಪ್ರಶ್ನಿಸಬೇಕಾದಾಗ, ಸರ್ಕಾರ ಉತ್ತರಿಸುವ ಬದಲು ಕತೆಗಳನ್ನು ಹೆಣೆಯುತ್ತದೆ. ಗೋರಖ್ಪುರದಲ್ಲಿ ಕಂದಮ್ಮಗಳು ಆಮ್ಲಜನಕ ಪೂರೈಕೆಯಿಲ್ಲದೆ ಕಣ್ಣುಮುಚ್ಚುತ್ತವೆ, ಪುಟ್ಟ ಮಕ್ಕಳನ್ನು ಉಳಿಸಲು ಯತ್ನಿಸಿದ ವೈದ್ಯನನ್ನು ಜೈಲಿಗೆ ತಳ್ಳುತ್ತಾರೆ. ಹಾಡಹಗಲೇ ಪೊಲೀಸ್ ಇನ್ಸ್ಪೆಕ್ಟರ್ ಸುಬೋಧ್ ಸಿಂಗ್ ಹತ್ಯೆಯಾಗುತ್ತಾನೆ. ಹೀಗೆ ದೇಶದ ಪರಿಸ್ಥಿತಿ ಗಂಭೀರವಾಗಿದೆ. ಇದನ್ನು ಬದಲಿಸುವ ಹೊಣೆ ನಮ್ಮೆಲ್ಲರ ಮೇಲಿದೆ.
ನಮ್ಮ ಸ್ಪಷ್ಟ ಸಂದೇಶವಿದು, ಮಹಾಘಟಬಂಧನ್ ವಿರುದ್ಧ ನಾವು ಹೋರಾಡುತ್ತಿಲ್ಲ. ಇಂದಿನ ಸಂದರ್ಭದಲ್ಲಿ ಒಂದು ಕಡೆ ಸುಳ್ಳು ಮತ್ತು ಲೂಟಿಗಳಿದ್ದರೆ ಇನ್ನೊಂದು ಬದಿಯಲ್ಲಿ ಸತ್ಯ ಮತ್ತು ಹಕ್ಕುಗಳಿವೆ. ನಾವು ಮೊದಲನೆಯದರ ವಿರುದ್ಧ ಮತ್ತು ಎರಡನೆಯದರ ಪರವಾಗಿ ಹೋರಾಟ ನಡೆಸಿದ್ದೇವೆ. ನನಗೆ ಇದರಲ್ಲಿ ಗೆಲ್ಲುತ್ತೇವೆಂಬ ಅಚಲ ವಿಶ್ವಾಸವಿದೆ.
ಬೇಗುಸರಾಯ್ ರುಣ ತೀರಿಸುವೆ
ನಾನು ಜೆಎನ್ಯುನಲ್ಲಿ ಪಿಎಚ್ಡಿ ಪ್ರಬಂಧ ಸಲ್ಲಿಸಿ ಬೇಗುಸರಾಯ್ ಗೆ ವಾಪಸ್ಸಾಗಿ ಹಳ್ಳಿಹಳ್ಳಿ ತಿರುಗಿದ್ದೇನೆ. ಬೇಗುಸರಾಯ್ ನಲ್ಲಿ ಯಾವುದೇ ಗಲಭೆಗಳು ಸಂಭವಿಸಬಾರದೆಂದು ನಾವು ಕೆಲಸ ಮಾಡಿದ್ದೇವೆ. ಬೇಗುಸರಾಯ್ ನ ಬಿಜೆಪಿ ಅಭ್ಯರ್ಥಿ ಗಿರಿರಾಜ್ ಸಿಂಗ್ ಎಂದು ತಿಳಿದಾಕ್ಷಣವೇ ಧಾರ್ಮಿಕ ಉನ್ಮಾದ ಹರಡದಿರಲೆಂದು ನಾವು ತಡೆಯೊಡ್ಡಿದ್ದೇವೆ. ಬೇಗುಸರಾಯ್ನ ಜನತೆ ನನ್ನ ಮೇಲೆ ಅದೆಂಥಾ ಪ್ರೀತಿ ತೋರಿಸಿದ್ದಾರೆಂದರೆ ಚುನಾವಣಾ ಕಣದಲ್ಲಿ ನಿಂತಾಗ ಅವರ ಭಾವನೆಗಳನ್ನು ನೆನೆಸಿಕೊಳ್ಳಬೇಕಿದೆ. ಭಾರತೀಯನಾಗಿ ಇಡೀ ದೇಶ ನನ್ನದಾದರೂ ಬೇಗುಸರಾಯ್ ನಲ್ಲಿ ಹುಟ್ಟಿ ಬೆಳೆದ ನನ್ನನ್ನು ಬಹುಪಾಲು ದೇಶ, ‘ದೇಶದ್ರೋಹಿ’ ಎನ್ನುತ್ತಿದ್ದಾಗ ಬೇಗುಸರಾಯ್ ನ ಜನ ನನ್ನ ತಾಯಿಯ ಕಣ್ಣೀರು ಒರೆಸಿದರು, ಅವಳ ಜೊತೆಯಾಗಿ ನನ್ನ ಬೆನ್ನಿಗೆ ನಿಂತರು. ಈ ಮಣ್ಣಿನ ಋಣ ನನಗಿದೆ. ನನ್ನ ಕೈಲಾದಷ್ಟು ಅದನ್ನು ತೀರಿಸಲು ಯತ್ನಿಸುವೆ. ಚುನಾವಣೆಯ ಫಲಿತಾಂಶವೇನೇ ಆದರೂ ನಾನು ಅಲ್ಲೇ ಇದ್ದು ಜನಸೇವೆಯಲ್ಲಿ ತೊಡಗಿಸಿಕೊಳ್ಳುವೆ.
ನಾನು ಜಾತಿವಾದಿ ಅಲ್ಲ – ಆದರ್ಶವಾದಿ
ಜಾತಿ ರಾಜಕೀಯ ಎಂಬ ನಿಮ್ಮ ಪೀಳಿಗೆಯ ಕಾಯಿಲೆಯನ್ನು ನಾನೂ ಸ್ವೀಕರಿಸಲಾರೆ, ನನ್ನ ಮುಂದಿನ ಪೀಳಿಗೆಗೂ ಕೊಡಬಯಸುವುದಿಲ್ಲ. ಬೇಕಿದ್ದರೆ ಇಡೀ ದೇಶ ಆಂಗ್ಲರ ಗುಲಾಮಗಿರಿಯನ್ನು ಮುಂದುವರಿದುಕೊಂಡು ಹೋಗಲಿ. ನಾವು ಮಾತ್ರ ಜಾತಿಯಾಧಾರದಲ್ಲಿ ರಾಜಕೀಯ ಮಾಡುವುದಿಲ್ಲ. ಭಗತ್ ಸಿಂಗ್ ಗೆ ಫಾಸಿ ಶಿಕ್ಷೆಯಿಂದ ಪಾರಾಗಲು ಕ್ಷಮಾಪಣೆ ಕೋರುವಂತೆ ಹೇಳಲಾಯಿತು. ಅವನು ತಿರಸ್ಕರಿಸಿದ. ಅದೇ ಬದ್ಧತೆ ನಮ್ಮದೂ. ಇದನ್ನು ಬರೆದಿಟ್ಟುಕೊಳ್ಳಿ. ನನ್ನ ಆಲೋಚನೆಗಳು ನಿಮಗೆ ಆದರ್ಶವಾದಿಯಾಗಿ ಕಾಣಿಸಬಹುದು, ಇದು ಬಹಳ ಆದರ್ಶದ ಮಾತು ಎನಿಸಬಹುದು. ಆದರೆ ಈ ವಯಸ್ಸಿನಲ್ಲಿ ಆದರ್ಶಪ್ರಾಯವಾಗಿ ಮಾತನಾಡದೆ ಹೋದರೆ ಮತ್ತೇನು ಮಾಡುವುದು? ಮೇಲುಕೀಳಿನ ಜಾತಿ ವ್ಯವಸ್ಥೆ ಸಾಮಾಜಿಕ ವಾಸ್ತವ ಎಂದು ಒಪ್ಪಿಕೊಳ್ಳೋಣ. ಆದರೆ ಅದನ್ನೇ ಮುಂದುವರಿಸಬೇಕೇನು? ಇಂತಹ ವ್ಯವಸ್ಥೆಯ ವಿರುದ್ಧ ಹೋರಾಡುವುದು ತಪ್ಪೇನು?
ನನ್ನ ಸ್ಪರ್ಧೆ ಆರ್ ಜೆ ಡಿ ಅಭ್ಯರ್ಥಿ ತನ್ವೀರ್ ಹಸನ್ ವಿರುದ್ಧ ಅಲ್ಲ
ಸದಾ ಪಾಕಿಸ್ತಾನದ ಬಗ್ಗೆಯೇ ಮಾತನಾಡುವ ಗಿರಿರಾಜ್ ಸಿಂಗ್ ಈಗ ಇಲ್ಲಿ ಬಿಜೆಪಿ ಅಭ್ಯರ್ಥಿ. ಆತ ಬೇಗುಸರಾಯ್ ಧಿಕ್ಕರಿಸಿ ದೆಹಲಿಯತ್ತ ಒಲವು ತೋರಿದ್ದಾನೆ. ಇದನ್ನೆಲ್ಲಾ ನೋಡುತ್ತಿರುವ ಜನ ಆತನನ್ನು ಒಪ್ಪಿಕೊಳ್ಳುವರೇ? ಇಂದು ಬೇಗುಸರಾಯ್ ನ ಪರಿಸ್ಥಿತಿ ನೋಡಿದರೆ ನಿಮಗೆ ಅರ್ಥವಾಗುತ್ತದೆ. ನಾವು ತನ್ವೀರ್ ಹಸನ್ (ಆರ್ ಜೆ ಡಿ ಅಭ್ಯರ್ಥಿ) ಅವರ ಎದುರು ಸೆಣೆಸುತ್ತಿರುವುದಲ್ಲ. ಅವರ ವಿರುದ್ಧವೂ ನಾವು ಮತ ಕೇಳುವುದಿಲ್ಲ. ಆದರೆ ಸಂವಿಧಾನದ ಹಿತ ಕಾಪಾಡಲು ಮತ ಯಾಚಿಸುತ್ತೇವಷ್ಟೇ. ಚುನಾವಣೆಗಳಲ್ಲಿ ನಮ್ಮ ಚಿಂತನೆಗಳನ್ನು ಪ್ರಚಾರ ಮಾಡಲು ಸಾಧ್ಯವಾಗುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನೀವು ಪತ್ರಕರ್ತರು ನಮ್ಮನ್ನು ಸದಾ ಕೇಳುತ್ತಿದ್ದಿರಿ. ಅದನ್ನು ಜನ ತೀರ್ಮಾನಿಸುತ್ತಾರೆಂದು ನಾನು ಹೇಳುತ್ತಿದ್ದೆ. ಇಂದು ಅದು ತೀರ್ಮಾನವಾಗಿದೆ.
ರಾಜಕೀಯ ವಲಯದ ಸತ್ಯವೊಂದನ್ನು ಅರಿಯಬೇಕು. ಬಿಹಾರವು ಧ್ರುವೀಕರಣಗೊಂಡಿದೆ. ಸಂವಿಧಾನದ ಪರ ಇರುವವರು ಮತ್ತು ಕಾರ್ಪೊರೇಟ್ ಪ್ರತಿನಿಧಿಗಳೆಂದು. ರಾಜ್ಯದ ಜನತೆ ಈಗಾಗಲೇ ಯೋಚಿಸಿದ್ದಾರೆ, ಬಿಜೆಪಿ ಸೋಲಿಸುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು. ಬೇಗುಸರಾಯ್ ನ ಜನತೆ ಗೆಲ್ಲುತ್ತಾರೆಂಬ ವಿಶ್ವಾಸವಿದೆ. ದ್ವೇಷ ಮತ್ತು ಉನ್ಮಾದಗಳನ್ನು ಸೋಲಿಸುತ್ತಾರೆಂಬ ಭರವಸೆಯಿದೆ. ನಮ್ಮ ನೇರಾನೇರ ಹೋರಾಟ ಇರುವುದು ಗಿರಿರಾಜ್ ಸಿಂಗ್ ಮತ್ತು ಆತನ ಕಟ್ಟರ್ ವಾದಿ ಚಿಂತನೆಯ ವಿರುದ್ಧ. ಅವುಗಳನ್ನು ನಾವು ಗೆದ್ದೇ ಗೆಲ್ಲುತ್ತೇವೆ.

ಜನರ ಜೊತೆ ಮಹಾಮೈತ್ರಿ ಈಗಾಗಲೇ ಆಗಿದೆ
ಮೇವು ಹಗರಣದ ಹುಲ್ಲಿನ ಬಗ್ಗೆ ನೀವು ಕೇಳುವ ಪ್ರಶ್ನೆಗೆ ಉತ್ತರಿಸಬೇಕೆಂದರೆ, ಹುಲ್ಲಿನ ಬಗ್ಗೆ ಹೇಳಲು ನಾನು ಕತ್ತೆಯಲ್ಲ, ಮನುಷ್ಯ. ರೊಟ್ಟಿ ತಿನ್ನುವುದರಿಂದ ರೊಟ್ಟಿಗಾಗಿಯೇ ನಾನು ಹೋರಾಟ ನಡೆಸುವುದು. ಹುಲ್ಲು ಎಲ್ಲಿಂದ ಸಿಕ್ಕಿದೆ, ಸಿಕ್ಕಿಲ್ಲ ಎಂಬುದು ನನಗೆ ಸಂಬಂಧಿಸಿದ ಪ್ರಶ್ನೆಯಲ್ಲ. ಅವರನ್ನೇ ಕೇಳಿದರೆ ಸೂಕ್ತ!
ಘಟಬಂಧನ್ ಅಥವಾ ಮಹಾಮೈತ್ರಿ ಎಡಪಕ್ಷಗಳನ್ನು ಒಳಗೊಳ್ಳದಿರುವುದರ ಬಗ್ಗೆ ಕೂಡ ಅವರನ್ನೇ ವಿಚಾರಿಸುವುದು ಒಳಿತು. ಆದರೂ ಸಾಮಾನ್ಯವಾಗಿ ಇಂತಹ ರಾಜಕೀಯ ಮೈತ್ರಿಕೂಟಗಳು ಮತಗಳ ಲಾಭದ ಲೆಕ್ಕಾಚಾರ ಹಾಕಿಕೊಂಡೇ ರೂಪುಗೊಂಡಿರುತ್ತವೆ. ಕಳೆದ ಚುನಾವಣೆಗಳನ್ನು ಗಮನಿಸಿದರೆ, ಮತಗಳು ಧ್ರುವೀಕರಣಗೊಂಡು ವರ್ಗಾವಣೆಯಾಗಿರುವುದನ್ನು ನೋಡಬಹುದು. ಇಂದಿನ ಪರಿಸ್ಥಿತಿಯಲ್ಲಿ ಬಹುಶಃ ಮಹಾಮೈತ್ರಿ ಪಕ್ಷಗಳಿಗೆ ಎಡಪಕ್ಷಗಳ ಮತಗಳು ಮಹತ್ವದ್ದಲ್ಲ ಎನಿಸಿರಬಹುದೇನೊ. ಆದರೆ ಬಿಜೆಪಿ ವಿರುದ್ಧದ ಮತಗಳು ಒಂದಾದರೆ ದೇಶವನ್ನು ಉಳಿಸಬಹುದು. ಪ್ರಜಾತಂತ್ರ ಇರುವವರೆಗೂ ಚುನಾವಣೆಗಳು ನಡೆಯುತ್ತವೆ. ಇದಕ್ಕೆ ಸಂವಿಧಾನಾತ್ಮಕ ಶಾಸನ ಅಗತ್ಯ. ಇಂದು ಪ್ರಜಾತಂತ್ರ ಅಪಾಯದಲ್ಲಿ ಸಿಲುಕಿದೆ. ಮುಜಾಫರ್ಪುರ ರಕ್ಷಣಾ ಗೃಹದಲ್ಲಿ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ಹಿಂಸೆಯ ವಿರುದ್ಧ ಮತ್ತಿತರ ಹೋರಾಟಗಳಲ್ಲಿ ಎಲ್ಲರೂ ಒಂದಾಗಿದ್ದೇವೆ. ಚುನಾವಣೆಯ ಸಂದರ್ಭದಲ್ಲಿ ಏಳುಬೀಳುಗಳಿದ್ದೇ ಇರುತ್ತವೆ. ನಮ್ಮ ಮಹಾಘಟಬಂದನ್ ಮೊದಲೇ ಇಲ್ಲಿನ ಜನರ ಜೊತೆ ನಡೆದಿದೆ. ಪ್ರಜಾತಂತ್ರದಲ್ಲಿ ಚುನಾವಣೆಗಳು ನಡೆಯಲೇಬೇಕು, ನಡೆಯುತ್ತಲೇ ಇರಬೇಕು. ಅವು ಸರಿಯಾದ ವಿಷಯಗಳನ್ನಾಧರಿಸಿ ನಡೆಯಬೇಕು. ನಮ್ಮ ಹೋರಾಟ ಮುಂದುವರಿಯುತ್ತದೆ.