ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೇವಲ ಎರಡು ದಿನ ಬಾಕಿ ಉಳಿದಿರುವಂತೆ ಇಂದು ರಾಜ್ಯದಾದ್ಯಂತ ಹಲವಾರು ಅಭ್ಯರ್ಥಿಗಳು ತಮ್ಮ ಚುನಾವಣಾ ನಾಮಪತ್ರಗಳನ್ನು ಸಲ್ಲಿಸಿದರು.
- ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಅವರಿಂದು ತುಮಕೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಂತರ ದೇವೇಗೌಡರು ತೆರೆದ ವಾಹನದಲ್ಲಿ ರ್ಯಾಲಿ ನಡೆಸಿದರು.
- ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದರು.
-
- ಕಾಂಗ್ರೆಸ್ ಅಭ್ಯರ್ಥಿ ಕೆ. ಎಚ್. ವಿಜಯಶಂಕರ್ ಅವರಿಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದು ನಂತರ ನಾಮಪತ್ರ ಸಲ್ಲಿಸಿದರು.
ವಿಜಯ್ ಶಂಕರ್ ಅವರ ನಾಮಪತ್ರ ಸಲ್ಲಿಕೆಗೆ ಮುನ್ನ ಆಯೋಜಿಸಿದ್ದ ಮೆರವಣಿಗೆಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿಂದತೆ ನೂರಾರು ಬೆಂಬಲಿಗರು ಭಾಗವಹಿಸಿದ್ದರು.
ಎರಡನೇ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಸದಾನಂದ ಗೌಡ ಅವರಿಗೆ ನಟ ಜಗ್ಗೇಶ್, ನಟಿ ಶೃತಿ ಸೇರಿದಂತೆ ಹಿರಿಯ ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಬೆಂಬಲಿಸಿದರು.
- ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇಂದು ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ರ್ಯಾಲಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಡಿ. ಕೆ ಶಿವಕುಮಾರ್, ತಾಯಿ ಅನಿತಾ ಕುಮಾರಸ್ವಾಮಿ ಹಾಗೂ ಸಾವಿರಾರು ಬೆಂಬಲಿಗರು ಹಾಜರಿದ್ದರು.
- ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಅವರು ಭೋಗಾ ನಂದೀಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸಿದರು.
- ಚಿಕ್ಕಬಳ್ಳಾಪುರ ಕ್ಷೇತ್ರದ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಡಾ. ಸಿ ಎಸ್ ದ್ವಾರಕಾನಾಥ್ ಅವರಿಂದು ನಾಮಪತ್ರ ಸಲ್ಲಿಸಿದರು. ಬಿಎಸ್ ಪಿ ಮುಖಂಡರಾದ ಎನ್. ಮಹೇಶ್ ಹಾಗೂ ಹರಿರಾಮ್ ಜೊತೆಗಿದ್ದರು.
- ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸಿಪಿಐಎಂ ಪಕ್ಷದ ಅಭ್ಯರ್ಥಿಯಾಗಿ ಕಾಮ್ರೇಡ್ ವರಲಕ್ಷ್ಮಿ ನಾಮಪತ್ರ ಸಲ್ಲಿಸಿದರು. ಸಿಪಿಎಂ ಪೋಲಿಟ್ ಬ್ಯೂರೋ ಸದಸ್ಯರಾದ ಎಂ.ಎ.ಬೇಬಿ, ರಾಜ್ಯ ಕಾರ್ಯದರ್ಶಿ ಯು.ಬಸವರಾಜು, ಮಾಜಿ ಶಾಸಕರಾದ ಜಿ.ವಿ.ಶ್ರೀರಾಮರೆಡ್ಡಿ ಉಪಸ್ಥಿತರಿದ್ದರು
- ಹಾಸನದ ಬಿಜೆಪಿ ಅಭ್ಯರ್ಥಿ ಎ ಮಂಜು ಸಹ ಸಾವಿರಾರು ಬೆಂಬಲಿಗರ ರ್ಯಾಲಿ ನಡೆಸಿ ನಾಮಪತ್ರ ಸಲ್ಲಿಸಿದರು. ಇದಕ್ಕೆ ಮೊದಲು ಪೌರಕಾರ್ಮಿಕ ದಂಪತಿಗಳ ಪಾದ ತೊಳೆಯುವ ಪ್ರದರ್ಶನವನ್ನೂ ಎ.ಮಂಜು ಅವರು ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಗಿಮಿಕ್ ನ್ನೇ ಬಿಜೆಪಿ ಅಭ್ಯರ್ಥಿ ಸಹ ಮಾಡಿದ್ದು ವಿಶೇಷವಾಗಿತ್ತು
- ಮಂಗಳೂರಿನಿಂದ ಎಸ್ ಡಿಪಿಐ ಅಭ್ಯರ್ಥಿ ಇಲ್ಯಾಸ್ ತುಂಬೆ ಅವರು ಸಾವಿರಾರು ಬೆಂಬಲಿಗರ ಮೆರವಣಿಗೆ ನಡೆಸಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
- ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಇಂದು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ನಂತರ ಮೈಸೂರಿನ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರಿ ಸೋಮನಾಥ ಸ್ವಾಮೀಜಿಗಳ ಆಶೀರ್ವಾದ ಪಡೆದರು.