ಬಹುಶಃ ರಾಜ್ಯದಲ್ಲೇ ಮೊಟ್ಟ ಮೊದಲು ಬಿಜೆಪಿಯಿಂದ ಚುನಾವಣೆಗೆ ಇವರೇ ಕಣಕ್ಕಿಳಿಯಲಿದ್ದಾರೆ ಎಂದು ನಿಗದಿಯಾಗಿದ್ದ ಕ್ಷೇತ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ. ಆದರೆ, ಈಗ ಪರಿಸ್ಥಿತಿ ತಿರುವು ಮುರುವಾಗಿದೆ.
ಆ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿದ್ದ ಹಿರಿಯ ನಾಯಕ ಅನಂತಕುಮಾರ್ ಅವರು ಕಳೆದ ನವೆಂಬರಿನಲ್ಲಿ ನಿಧನರಾದಾಗಲೇ, ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರೇ ಈ ಬಾರಿಯ ಅಭ್ಯರ್ಥಿ ಎಂಬುದು ಬಹುತೇಕ ನಿಕ್ಕಿಯಾಗಿತ್ತು. ಬಹುತೇಕ ನಾಮಪತ್ರ ಸಲ್ಲಿಕೆಗೆ ಕೊನೆ ದಿನದ ಹಿಂದಿನ ದಿನವಾದ ಸೋಮವಾರ ರಾತ್ರಿಯವರೆಗೂ ಅವರ ಹೆಸರೇ ಇತ್ತು. ಆದರೆ, ತಡರಾತ್ರಿಯ ದಿಢೀರ್ ಬದಲಾವಣೆ, ಮೂವತ್ತು ವರ್ಷಗಳ ಕಾಲ ಕ್ಷೇತ್ರದಲ್ಲಿ ತಮ್ಮ ಪತಿಯೊಂದಿಗೆ ಶ್ರಮಿಸಿ ಪಕ್ಷ ಕಟ್ಟಿದ ಅವರನ್ನು ಪಕ್ಕಕ್ಕೆ ಸರಿಸಿ, ದ್ವೇಷ ಭಾಷಣದ ಮೂಲಕ ಜಾಲತಾಣಗಳಲ್ಲಿ ಸಂಘಪರಿವಾರದ ಮುಖವಾಗಿರುವ ತೇಜಸ್ವಿ ಸೂರ್ಯ ಎಂಬ ವಕೀಲರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ.
ಬಿಜೆಪಿ ಹೈಕಮಾಂಡ್ ಕೊನೇ ಗಳಿಗೆಯಲ್ಲಿ ತೆಗೆದುಕೊಂಡಿರುವ ಈ ನಿರ್ಧಾರವನ್ನು ಅಧಿಕೃತವಾಗಿ ತೇಜಸ್ವಿನಿಯವರು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಆದರೆ, ಅವರೇ ಅಭ್ಯರ್ಥಿ ಎಂದು ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಆರಂಭಿಸಿದ್ದ ಬಿಜೆಪಿಯ ಕಾರ್ಯಕರ್ತರು ಮತ್ತು ಅನಂತ ಕುಮಾರ್ ಅಭಿಮಾನಿಗಳ ಆಕ್ರೋಶ ಕಟ್ಟೆಯೊಡೆದಿದೆ. ತೇಜಸ್ವಿನಿ ಬದಲಿಗೆ ತೇಜಸ್ವಿ ಸೂರ್ಯಗೆ ಟಿಕೆಟ್ ಘೋಷಣೆಯಾದ ಕ್ಷಣದಿಂದಲೇ ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು ಬೀದಿಗಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಪಕ್ಷದ ನಾಯಕತ್ವದ ಪಾಲಿಗೆ ಇದೀಗ ಬೆಂಗಳೂರು ದಕ್ಷಿಣ ಟಿಕೆಟ್ ನುಂಗಲಾರದ ತುತ್ತಾಗಿದೆ.
ಕಳೆದ ಒಂದು ವಾರದ ಹಿಂದೆ ಬಿಡುಗಡೆಯಾದ ಬಿಜೆಪಿ ಅಭ್ಯರ್ಥಿಗಳ ಮೊದಲ ಮತ್ತು ಆ ನಂತದ ಬಿಡುಗಡೆಯಾದ ಎರಡನೇ ಪಟ್ಟಿಯಲ್ಲಿಯೂ ಬೆಂಗಳೂರು ದಕ್ಷಿಣ ಕ್ಷೇತ್ರದ ಹೆಸರಿರಲಿಲ್ಲ. ಆಗಲೇ ಹಲವರಿಗೆ ಅನುಮಾನ ಶುರುವಾಗಿತ್ತು. ಶಾಸಕ ರವಿ ಸುಬ್ರಹ್ಮಣ್ಯ, ಆರ್ ಅಶೋಕ್ ಮುಂತಾದವರ ಹೆಸರುಗಳು ಕೇಳಿಬಂದಿದ್ದವು. ಆದರೆ, ಪ್ರಮುಖವಾಗಿ ಇದ್ದದ್ದು ಆರಂಭದಿಂದಲೂ ತೇಜಸ್ವಿನಿಯವರ ಹೆಸರೇ. ಅದಕ್ಕೆ ಕಾರಣ; ತತಕ್ಷಣಕ್ಕೆ ಅನಂತ ಕುಮಾರ್ ಅವರ ಅಕಾಲಿಕ ಅಗಲಿಕೆಯ ಹಿನ್ನೆಲೆಯಲ್ಲಿ ಅನುಕಂಪದ ಅಲೆಯ ಲಾಭ ಪಡೆಯಬಹುದು ಎಂಬುದಾದರೂ, ವಾಸ್ತವವಾಗಿ ತೇಜಸ್ವಿನಿ ಅವರು ಕಳೆದ ಮೂರು ದಶಕದಿಂದ ಕ್ಷೇತ್ರದಲ್ಲಿ ತಮ್ಮ ಪತಿಯೊಂದಿಗೆ ಹೆಚ್ಚು ಕ್ರಿಯಾಶೀಲರಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಅವರ ಸಾರ್ವಜನಿಕ ಸಂಪರ್ಕ ಅನುಕೂಲ ಪಕ್ಷಕ್ಕೆ ಆಗುತ್ತದೆ ಮತ್ತು ಅನಂತ್ ಕುಮಾರ್ ಅವರ ಪಕ್ಷಕ್ಕಾಗಿನ ತ್ಯಾಗಕ್ಕೂ ಒಂದು ಗೌರವ ನೀಡಿದಂತಾಗುತ್ತದೆ ಎಂಬ ಲೆಕ್ಕಾಚಾರಗಳಿದ್ದವು. ಅದೇ ನಿರೀಕ್ಷೆಯಲ್ಲಿ ಅವರು ಈಗಾಗಲೇ ಮನೆಮನೆ ಭೇಟಿ, ಸಭೆ-ಸಮಾರಂಭಗಳ ಮೂಲಕ ಅನಧಿಕೃತವಾಗಿ ಪ್ರಚಾರ ಆರಂಭಿಸಿದ್ದರು ಕೂಡ.
ಆದರೆ, ಮಂಡ್ಯದಲ್ಲಿ ತಮ್ಮ ಪತಿಯ ಸಾವಿನ ಅನುಕಂಪದ ಅಲೆಯ ನಿರೀಕ್ಷೆಯಲ್ಲಿ ಕಣಕ್ಕಿಳಿದಿರುವ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಅವರಿಗೆ, ಅವರು ಕೋರದೇ ಇದ್ದರೂ ಬೆಂಬಲ ಘೋಷಿಸಿರುವ ಬಿಜೆಪಿ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ತಮ್ಮದೇ ಪಕ್ಷ ಕಟ್ಟಿ ಬೆಳೆಸಿದ ನಾಯಕನ ಪತ್ನಿ ಹಾಗೂ ಸ್ವತಃ ಪಕ್ಷಕ್ಕಾಗಿ ದುಡಿದ ಮಹಿಳೆಗೆ ಅವರ ನಿರೀಕ್ಷೆಯ ಹೊರತಾಗಿಯೂ ಟಿಕೆಟ್ ತಪ್ಪಿಸಿದೆ.
ಇದೇ ಪ್ರಶ್ನೆಯನ್ನು ತೇಜಸ್ವಿನಿ ಅಭಿಮಾನಿಗಳು ಮಾತ್ರವಲ್ಲ; ಕ್ಷೇತ್ರದ ಬಿಜೆಪಿ ಕಟ್ಟಾ ಕಾರ್ಯಕರ್ತರು ಕೂಡ ಈಗ ಕೇಳತೊಡಗಿದ್ದಾರೆ. “ಪಕ್ಷದ ಟಿಕೆಟ್ ಹಂಚಿಕೆಗೆ ಮಾನದಂಡವೇನು? ಕ್ಷೇತ್ರದ ಪ್ರತಿ ಮನೆಮನೆಯ ಪರಿಚಯವಿರುವ, ದಶಕಗಳಿಂದ ಕ್ಷೇತ್ರದ ಅಭಿವೃದ್ಧಿ ಮತ್ತು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಮಾತ್ರವಲ್ಲ, ವೈಯಕ್ತಿಕವಾಗಿ ವಿವಿಧ ಸಂಘ-ಸಂಸ್ಥೆಗಳ ಮೂಲಕವೂ ಶ್ರಮಿಸುತ್ತಿರುವ ತೇಜಸ್ವಿನಿಯವರನ್ನು ಬಿಟ್ಟು, ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಭಜನೆ ಮಾಡುವ, ಕ್ಷೇತ್ರದ ಬೀದಿಗಳೂ ಕೂಡ ಪರಿಚಯವಿರದ ವ್ಯಕ್ತಿಗೆ ಟಿಕೆಟ್ ಕೊಡುವ ಹಿಂದಿನ ಉದ್ದೇಶವೇನು? ಅನಂತ್ ಕುಮಾರ್ ಅವರು ಹಿರಿಯ ನಾಯಕ ಆಡ್ವಾಣಿ ಅವರ ಪರಮಾಪ್ತರಾಗಿದ್ದರು, ಕಳೆದ ಚುನಾವಣೆಗೆ ಮುನ್ನ ಮೋದಿ ಅವರು ಪ್ರಧಾನಿ ಅಭ್ಯರ್ಥಿ ಎಂಬ ಪ್ರಸ್ತಾಪವನ್ನು ವಿರೋಧಿಸಿದ್ದರು ಎಂಬುದೇ ಅವರಿಗೆ ಟಿಕೆಟ್ ತಪ್ಪಿಸಲು ಕಾರಣವಾ? ಅಥವಾ ಪಕ್ಷನಿಷ್ಠೆ, ಸಿದ್ಧಾಂತನಿಷ್ಠೆಗಿಂತ ಬಿಜೆಪಿಯಲ್ಲಿ ಈಗ ಮೋದಿ ಮತ್ತು ಅಮಿತ್ ಶಾ ಅವರ ಕುರಿತ ವ್ಯಕ್ತಿನಿಷ್ಠೆಗೇ ಮನ್ನಣೆಯಾ?” ಎಂಬ ಪ್ರಶ್ನೆಗಳು ಬಿಜೆಪಿ ವಲಯಗಳಲ್ಲೇ ಮೊಳಗುತ್ತಿವೆ.
ಕೆಲವರಂತೂ, ಬಿಜೆಪಿ ಇದೀಗ ಇಬ್ಬರು ವ್ಯಕ್ತಿಗಳ ಆರಾಧಕರ ಪಕ್ಷವಾಗಿ ಬದಲಾಗಿದೆ. ಅದು ಹಿಂದಿನಂತೆ ದೇಶದ, ಹಿಂದೂಗಳ ಹಿತ ಕಾಯುವ ಸಿದ್ಧಾಂತವನ್ನು ಹೊಂದಿಲ್ಲ ಎಂಬ ಟೀಕೆಗಳನ್ನೂ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕ್ಷೇತ್ರದ ಮತದಾರರ ನಡುವೆಯೂ ಇದೇ ಪ್ರಶ್ನೆಗಳು ಪ್ರತಿಫಲಿಸುತ್ತಿವೆ.
ಈ ನಡುವೆ, ಅಚ್ಚರಿಯ ಅಭ್ಯರ್ಥಿ ತೇಜಸ್ವಿ ಸೂರ್ಯ, ತಮ್ಮ ಆಯ್ಕೆಗೆ ಪ್ರತಿಕ್ರಿಯಿಸುತ್ತಾ, ‘ಮೋದಿ ಮತ್ತು ಅಮಿತ್ ಶಾ ಅವರು ಯುವ ಜನತೆಯಲ್ಲಿ ನಂಬಿಕೆ ಇಟ್ಟು ನನ್ನನ್ನು ಆಯ್ಕೆಮಾಡಿದ್ದಾರೆ. ಇಂತಹ ಆಯ್ಕೆ ಮೋದಿಯವರಿಂದ ಮಾತ್ರ ಸಾಧ್ಯ. ಅವರು ನನ್ನ ಮೇಲೆ ಇಟ್ಟಿರುವ ಭರವಸೆಗೆ ಋಣಿ’ ಎಂಬರ್ಥದ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ತಮಗೆ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿರುವ ವಿರೋಧವನ್ನು ಶಮನ ಮಾಡುವ ಯತ್ನವಾಗಿ ತೇಜಸ್ವಿನಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ತೇಜಸ್ವಿ ಸೂರ್ಯ, ಅವರು ತಮ್ಮ ತಾಯಿಯ ಸಮಾನ. ಅವರೂ ನನಗೆ ಆಶೀರ್ವಾದ ಮಾಡಿದ್ದಾರೆ. ಪಕ್ಷದ ವರಿಷ್ಠರ ತೀರ್ಮಾನ ಗೌರವಿಸಿ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದಿದ್ದಾರೆ.
ಈ ನಡುವೆ, ತೇಜಸ್ವಿನಿ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಬಿಜೆಪಿ ಹೈಕಮಾಂಡ್ ಕುಟುಂಬ ರಾಜಕಾರಣವನ್ನು ತಾವು ಬೆಂಬಲಿಸುವುದಿಲ್ಲ ಎಂಬ ಸಂದೇಶ ನೀಡಿದೆ ಎಂಬ ಹೇಳಿಕೆಗಳೂ ಇವೆ. ಆದರೆ, ಸ್ವತಃ ತೇಜಸ್ವಿ ಸೂರ್ಯ ಕೂಡ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಸ್ವಂತ ತಮ್ಮನ ಮಗ ಅಲ್ಲವೆ? ಅದು ಕುಟುಂಬ ರಾಜಕಾರಣವಲ್ಲವಾ? ಯಡಿಯೂರಪ್ಪ, ಉದಾಸಿ, ಬೊಮ್ಮಾಯಿ ಸೇರಿದಂತೆ ಹಲವರ ಮಕ್ಕಳಿಗೆ ಪಕ್ಷದಲ್ಲಿ ಮಣೆ ಹಾಕಿಲ್ಲವೆ? ಎಂಬ ಪ್ರಶ್ನೆಗಳೂ ಸ್ವತಃ ಬಿಜೆಪಿ ಕಾರ್ಯಕರ್ತರು, ನಾಯಕರಿಂದಲೇ ಕೇಳಿಬಂದಿವೆ.
ಆದರೆ, ಮಾಧ್ಯಮಗಳಿಗೆ ಮಾತನಾಡಿರುವ ತೇಜಸ್ವಿನಿಯವರು, “ಪಕ್ಷ ದೊಡ್ಡದು. ನಮ್ಮ ನಿರೀಕ್ಷೆಯಂತೆ ನಡೆಯಲಿಲ್ಲ ಎಂದು ಸಿದ್ಧಾಂತ ಮತ್ತು ಪಕ್ಷಕ್ಕೆ ವಿರುದ್ಧವಾಗಿ ನಡೆಯಬಾರದು. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಇನ್ನುಳಿದಂತೆ ಯಾವ ಬಗ್ಗೆ ಪ್ರತಿಕ್ರಿಯಿಸಲೂ ಪಕ್ಷದಲ್ಲಿ ನಾನು ಅಷ್ಟು ದೊಡ್ಡವಳಲ್ಲ, ಆ ಸ್ವಾತಂತ್ರ್ಯವೂ ಇಲ್ಲ” ಎಂದಿದ್ದಾರೆ. ಆ ಮೂಲಕ ಪಕ್ಷದಲ್ಲಿ ತಮ್ಮಂಥ ಆರು ಬಾರಿ ಸಂಸದರಾದ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕನ ನೆರಳಾಗಿ ಪಕ್ಷಕ್ಕೆ ಕೆಲಸ ಮಾಡಿದವರಿಗೇ ಮಾತನಾಡುವ ಸ್ವಾತಂತ್ರ್ಯ ಪಕ್ಷದಲ್ಲಿ ಉಳಿದಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ತಮ್ಮ ವೈಯಕ್ತಿಕ ನಿರೀಕ್ಷೆಗಳಿಗಿಂತ ಪಕ್ಷ ದೊಡ್ಡದು ಎನ್ನುತ್ತಲೇ, ಪಕ್ಷದಲ್ಲಿ ಪಕ್ಷಕ್ಕಿಂತ ದೊಡ್ಡವರು ಇದ್ದಾರೆ. ಅವರ ಆದೇಶವನ್ನು ಪ್ರಶ್ನಿಸುವ ಸ್ವಾತಂತ್ರ್ಯ ತಮ್ಮನ್ನೂ ಸೇರಿ ಯಾರಿಗೂ ಇಲ್ಲ ಎಂಬುದನ್ನೂ ಅವರ ಆ ಮಾತುಗಳು ಧ್ವನಿಸುತ್ತಿವೆ.
ಅಲ್ಲದೆ, ತೇಜಸ್ವಿನಿ ಅವರಿಗೆ ಟಿಕೆಟ್ ಕೈತಪ್ಪುವಲ್ಲಿ; ಪ್ರಮುಖವಾಗಿ ಆರ್ ಎಸ್ ಎಸ್ ನಾಯಕ ಬಿ ಎಲ್ ಸಂತೋಷ್ ಮತ್ತು ಶಾಸಕ ರವಿ ಸುಬ್ರಹ್ಮಣ್ಯ ಅವರ ಪಾತ್ರ ಪ್ರಮುಖವಾಗಿದೆ. ಬಿಜೆಪಿ ಪಕ್ಷಕ್ಕಿಂತ ತಮಗೆ ನಿಷ್ಠರಾಗಿರುವವರನ್ನು ಬಿಜೆಪಿ ಭದ್ರಕೋಟೆಯಾದ ಆ ಕ್ಷೇತ್ರದಲ್ಲಿ ಬೆಳೆಸಬೇಕು ಎಂಬುದು ಅವರ ಲೆಕ್ಕಾಚಾರವಾಗಿತ್ತು. ಅಲ್ಲದೆ, ತೇಜಸ್ವಿನಿ ಅವರು ಬಿಜೆಪಿಗೆ ನಿಷ್ಠರಾಗಿದ್ದರೆ ಹೊರತು, ಆರ್ ಎಸ್ ಎಸ್ ಜೊತೆ ಅಂತಹ ನಂಟು ಹೊಂದಿರಲಿಲ್ಲ. ಅದು ಸಹಜವಾಗೇ ಮುಖಂಡರಿಗೆ ಇರಿಸುಮುರಿಸು ತರಿಸಿತ್ತು. ಅಲ್ಲದೆ, ತೇಜಸ್ವಿನಿ ಅವರು ತಮ್ಮ ಸುದೀರ್ಘ ಅನುಭವ ಮತ್ತು ವರ್ಚಸ್ಸಿನ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಬಹಳ ಬೇಗ ಬೆಳೆದುಬಿಡಬಹುದು. ಅದು ಮೋದಿ ಆಪ್ತ ವಲಯದಲ್ಲಿರುವ ಸ್ಮೃತಿ ಇರಾನಿ ಮತ್ತು ನಿರ್ಮಲಾ ಸೀತಾರಾಮನ್ ಅವರುಗಳಿಗೆ ತೊಡಕಾಗಬಹುದು. ಹಾಗಾಗಿ ಆರಂಭದಲ್ಲೇ ತೇಜಸ್ವಿನಿ ಅವರನ್ನು ಬದಿಗೆ ಸರಿಸುವುದು ಸುರಕ್ಷಿತ ಎಂಬ ಲೆಕ್ಕಾಚಾರಗಳು ಕೂಡ ಕೆಲಸ ಮಾಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಈ ನಡುವೆ, ಅನಂತ ಕುಮಾರ್ ಅವರ ಪತ್ನಿಗೆ ಟಿಕೆಟ್ ನಿರಾಕರಿಸುವ ಮುನ್ನವೇ ಬಿಜೆಪಿ ಹೈಕಮಾಂಡ್, ಅನಂತ್ ಕುಮಾರ್ ಅವರ ರಾಜಕೀಯ ಗಾಡ್ ಫಾದರ್ ಆಡ್ವಾಣಿ ಅವರಿಗೂ ಟಿಕೆಟ್ ನಿರಾಕರಿಸಿದೆ. ಅವರು ಸ್ಪರ್ಧಿಸುತ್ತಿದ್ದ ಗುಜರಾತಿನ ಗಾಂಧಿನಗರ ಕ್ಷೇತ್ರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ವತಃ ತಮಗೇ ಇಟ್ಟುಕೊಂಡಿದ್ದಾರೆ. ಇನ್ನು ಮತ್ತೊಬ್ಬ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಅವರಿಗೂ ಗೇಟ್ ಪಾಸ್ ಕೊಡಲಾಗಿದ್ದು, ಅವರಿಗೂ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸೂಚಿಸಲಾಗಿದೆ.
ಒಟ್ಟಾರೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ನಿರಾಕರಣೆಯ ಬಿಜೆಪಿ ಹೈಕಮಾಂಡ್ ನಿರ್ಧಾರ, ಕೇವಲ ತೇಜಸ್ವಿನಿ ಅನಂತ ಕುಮಾರ್ ಅವರ ಪ್ರಶ್ನೆಯಷ್ಟೇ ಆಗಿರದೆ, ಒಟ್ಟೂ ಬಿಜೆಪಿಯಲ್ಲಿ ಪಕ್ಷ, ಸಿದ್ಧಾಂತ, ಹೋರಾಟದ ಪರಂಪರೆಯ ಒಂದು ತಲೆಮಾರಿನ ನಾಯಕತ್ವ ಮತ್ತು ಅವರು ಪ್ರತಿನಿಧಿಸುತ್ತಿದ್ದ ಮೌಲ್ಯಗಳ ನಿರಾಕರಣೆಯೇ ಆಗಿದೆ. ಭಾರತೀಯ ಜನತಾ ಪಕ್ಷದ ಹಿಂದುತ್ವವಾದಿ ಸಿದ್ಧಾಂತವಾಗಲೀ, ರಾಷ್ಟ್ರೀಯವಾದಿ ವಿಚಾರವಾಗಲೀ ಈಗ ಆ ಪಕ್ಷದ ಆದ್ಯತೆಯಾಗಿ ಉಳಿದಿಲ್ಲ. ಅದು ಈಗ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ, ಮೋದಿ ಮತ್ತು ಶಾ ಜೋಡಿಯನ್ನು ಮತ್ತೆ ಅಧಿಕಾರದ ಗದ್ದುಗೆಯಲ್ಲಿ ಕೂರಿಸುವ ಏಕೈಕ ಪರಮ ಉದ್ದೇಶದ ಒಂದು ಏಕವ್ಯಕ್ತಿ ಆರಾಧನೆಯ ಪಕ್ಷವಾಗಿ ಬದಲಾಗಿದೆ.
ಈ ಬದಲಾವಣೆಗೆ ಹೊಂದಿಕೊಳ್ಳಲಾರದ, ಅದನ್ನು ಒಪ್ಪಿ ಜೈ ಎನ್ನಲಾರದವರು ಪಕ್ಷದಲ್ಲಿ ಹಂತಹಂತವಾಗಿ ಬದಿಗೆ ಸರಿಯುತ್ತಾರೆ ಮತ್ತು ಆ ಹೊಸ ವರಸೆಯನ್ನು ಹಾಡಿ ಹೊಗಳುವ, ಜಯಘೋಷ ಮೊಳಗಿಸುವ ‘ಭಕ್ತ’ರು ಹಂತಹಂತವಾಗಿ ಅವಕಾಶಗಳನ್ನು, ಸ್ಥಾನಮಾನಗಳನ್ನು ಪಡೆಯುತ್ತಾರೆ ಎಂಬ ಬಿಜೆಪಿ ಸಾಮಾನ್ಯ ಕಾರ್ಯಕರ್ತರ ಮಾತುಗಳು ಬೆಂಗಳೂರು ದಕ್ಷಿಣ ಕ್ಷೇತ್ರದ ಮಟ್ಟಿಗಂತೂ ನೂರಕ್ಕೆ ನೂರು ನಿಜವಾಗಿದೆ.
ಇನ್ನು ಬಿಜೆಪಿ ಪ್ರಾಬಲ್ಯದ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಕಣಕ್ಕಿಳಿದಿದ್ದಾರೆ. ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಮೂರು ಕಡೆ ಕಾಂಗ್ರೆಸ್ ಶಾಸಕರಿದ್ದಾರೆ. ಅತಿ ಹೆಚ್ಚು(18.50 ಲಕ್ಷ) ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ, 2014ರ ಚುನಾವಣೆಯಲ್ಲಿ ಕಾಂಗ್ರೆಸ್ ನಂದನ್ ನಿಲೇಕಣಿ ಅವರ ವಿರುದ್ಧ ಅನಂತಕುಮಾರ್ ಬರೋಬ್ಬರಿ 2.28 ಲಕ್ಷ ಮತಗಳ ಅಂತರದ ಜಯ ದಾಖಲಿಸಿದ್ದರು.