ಬೆಂಗಳೂರು: ಒಂದು ಕಡೆ ಅಡ್ವಾಣಿ, ಮುರಳಿ ಮನೋಹರ ಜೋಷಿಯಂತಹ ಧುರೀಣರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಅಸಮಾಧಾನ ಬಿಜೆಪಿಯಲ್ಲಿ ಕೇಳಿಬರುತ್ತಿದ್ದರೆ ಮತ್ತೊಂದು ಕಡೆ ಅರ್ಹ, ನಿರೀಕ್ಷಿತ ಅಭ್ಯರ್ಥಿ ತೇಜಸ್ವಿನಿ ಅನಂತಕುಮಾರ್ ಅವರನ್ನು ಬದಿಗೆ ಸರಿಸಿ ತೇಜಸ್ವಿ ಸೂರ್ಯನಂತ ಎಳಸು ವ್ಯಕ್ತಿಗೆ ಮಣೆ ಹಾಕುತ್ತಿರುವುದರ ಕುರಿತೂ ಅಸಮಧಾನ ವ್ಯಕ್ತವಾಗುತ್ತಿದೆ. ಬಿಜೆಪಿಯ ಹೈಕಮಾಂಡ್ ನ ಇಂತಹ ಹಲವು ನಿರ್ಧಾರಗಳು, ದಿಢೀರ್ ಬದಲಾವಣೆಗಳು ಬಿಜೆಪಿ ಕಾರ್ಯಕರ್ತರಿಗೆ ನುಂಗಲಾರದ ತುಪ್ಪವಾಗಿ ಪರಣಮಿಸುತ್ತಿವೆ.
ಇದಕ್ಕೆ ಜ್ವಲಂತ ಸಾಕ್ಷಿ ಸತತ ಆರು ಬಾರಿ ಸಂಸದರಾಗಿ ಆಯ್ಕೆಯಾಗಿ, ಕೇಂದ್ರ ಸಚಿವರಾಗಿಯೂ ಸೇವೇ ಸಲ್ಲಿಸಿದ್ದ ಹಿರಿಯಮ ಮುಖಂಡ ಅನಂತ್ ಕುಮಾರ್ ಪತ್ನಿಗೆ ಟಿಕೆಟ್ ವಂಚಿಸಿ ಶಾಸಕರೊಬ್ಬರ ಅಣ್ಣನ ಮಗ ಮತ್ತು ಆರೆಸ್ಸೆಸ್ ಕಾರ್ಯಕರ್ತ ತೇಜಸ್ವಿ ಸೂರ್ಯ ಎಂಬ ಯುವ ಕಾರ್ಯಕರ್ತನಿಗೆ ಟಿಕೆಟ್ ನೀಡಿರುವುದು.
ತೇಜಸ್ವಿ ಸೂರ್ಯ ಅವರಿಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ಹಾಗೂ ತೇಜಸ್ವಿನಿ ಅನಂತಕುಮಾರ್ ಅವರನ್ನು ಭೇಟಿ ಮಾಡಿ ನಂತರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಜಯನಗರದ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಆದರೆ ತೇಜಸ್ವಿ ನಾಮಪತ್ರ ಸಲ್ಲಿಸುವ ಮುನ್ನವೇ ಪಕ್ಷದ ಕಾರ್ಯಕರ್ತರಿಂದಲೇ ಗೋ ಬ್ಯಾಕ್ ತೇಜಸ್ವಿ ಎಂಬ ಘೋಷಣೆಗಳ ಮೂಲಕ ಅವರ ವಿರುದ್ಧ ಪಕ್ಷದಲ್ಲೇ ಪ್ರಬಲ ವಿರೋಧ ವ್ಯಕ್ತವಾಗಿದ್ದು ವಿಪರ್ಯಾಸ.
ತೇಜಸ್ವಿ ನಾಮಪತ್ರ ಸಲ್ಲಿಕೆ ಸಂದರ್ಭ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇತ್ತ ಬಿಜೆಪಿ ಹಿರಿಯ ಮುಖಂಡರೇ ತೇಜಸ್ವಿ ನಾಮಪತ್ರ ಸಲ್ಲಿಕೆಗೆ ಹೋಗದೇ ತಮ್ಮ ಅಸಮಧಾನವನ್ನು ಹೊರಹಾಕಿದ್ದರೆ, ತೇಜಸ್ವಿ ಅವರ ಆಯ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೇ ಅಚ್ಚರಿ ಮೂಡಿಸಿದೆಯಂತೆ.
ತೇಜಸ್ವಿ ಆಯ್ಕೆ ಅಧಿಕೃತ ಪ್ರಕಟವಾಗುತ್ತಿದ್ದಂತೆ ಬಿ. ಎಸ್ ಯಡಿಯೂರಪ್ಪ ಅವರು ಸಹ “ತೇಜಸ್ವಿ ಸೂರ್ಯ ಅವರ ಆಯ್ಕೆ ಆಶ್ಚರ್ಯ ಮೂಡಿಸಿದೆ. ಹೈಕಮಾಂಡ್ ಗೆ ನಾವು ತೇಜಸ್ವಿನಿ ಅನಂತಕುಮಾರ್ ಅವರ ಹೆಸರನ್ನೇ ಸೂಚಿಸಿದ್ದೆವು. ಕೊನೆ ಕ್ಷಣದಲ್ಲಿ ಹೈಕಮಾಂಡ್ ನಿರ್ಧಾರವನ್ನು ಬದಲಿಸಿದೆ,’’ ಎಂದು ಅಚ್ಚರಿಯಿಂದಲೇ ಪ್ರತಿಕ್ರಿಯಿಸಿದ್ದರು.
ದಿವಂಗತ ಅನಂತಕುಮಾರ್ ಅವರ ಪತ್ನಿ ಸಹ ಪಕ್ಷದ ಚೌಕಟ್ಟನ್ನೂ ಮೀರದೇ ತಮ್ಮ ಮಿತಿಯಲ್ಲೇ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿದ್ದಾರಾದರೂ, ಎಲ್ಲೂ ಸಹ ತೇಜಸ್ವಿ ಪರ ಪ್ರಚಾರ ಮಾಡುವುದಾಗಿ ಹೇಳದೇ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ. ‘ಹೈಕಮಾಂಡ್ ನಿರ್ಧಾರದಿಂದ ಆಘಾತವಾಗಿದೆ”, ‘ಪಕ್ಷದ ಚೌಕಟ್ಟಿನಲ್ಲಿ ‘ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಸ್ವಾತಂತ್ರ್ಯ ನನಗಿಲ್ಲ’ ಎಂದು ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಅವರ ಇಕ್ಕಟ್ಟಿನ ಸ್ಥಿತಿಗೆ ಹಿಡಿದ ಕನ್ನಡಿಯಾಗಿವೆ.
ಆದರೆ ತೇಜಸ್ವಿನಿ ಅವರಿಗೇ ಟಿಕೆಟ್ ಸಿಗುವುದಾಗಿ ಅಚಲವಾಗಿ ನಂಬಿಕೆ ಇಟ್ಟು, ಪ್ರಚಾರವನ್ನೂ ಆರಂಭಿಸಿಬಿಟ್ಟಿದ್ದ ಅನಂತಕುಮಾರ್ ಪರ ಬೆಂಬಲಿಗರು ತೇಜಸ್ವಿ ಅವರ ಆಯ್ಕೆಯನ್ನು ಬಹಿರಂಗವಾಗಿ ಖಂಡಿಸಿ, ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಇನ್ನೇನು ತೇಜಸ್ವಿನಿ ಅವರ ಆಯ್ಕೆ ಪ್ರಕಟವಾಗುತ್ತದೆ, ನಾಮಪತ್ರ ಸಲ್ಲಿಕೆಗೆ ಹೋಗಬೇಕೆಂದು ಕಾತುರರಾಗಿದ್ದ ಬೆಂಬಲಿಗರಿಗೆ ತೀವ್ರ ಬೇಸರವಾಗಿದ್ದು, ಬಸವನಗುಡಿಯ ಅನಂತಕುಮಾರ್ ಅವರ ನಿವಾಸದ ಮುಂದೆ “ಬೇಕೇ ಬೇಕು ನ್ಯಾಯ ಬೇಕು. ಅನಂತ್ ಕುಮಾರ್ ಅಮರ್ ರಹೇ… ಅಮರ್ ರಹೇ…” ಎಂದು ಘೋಷಣೆ ಕೂಗಿದರು. ಅಲ್ಲದೇ, ಗೋ ಬ್ಯಾಕ್ ತೇಜಸ್ವಿ, ಡೌನ್ ಡೌನ್ ತೇಜಸ್ವಿ ಎಂಬ ಘೋಷಣೆಗಳು ಸಹ ಕೇಳಿ ಬಂದವು.
ತೇಜಸ್ವಿ ಸೂರ್ಯ ಅವರು ತೇಜಸ್ವಿನಿ ಅವರ ಆಶೀರ್ವಾದ ಪಡೆಯಲು ಅವರ ನಿವಾಸಕ್ಕೆ ಬಂದಾಗ ಅಲ್ಲೇ ನೆರೆದಿದ್ದ ನೂರಾರು ಬಿಜೆಪಿ ಕಾರ್ಯಕರ್ತರು ಅವರನ್ನು ಅಡ್ಡಗಟ್ಟಿ ತಮ್ಮ ಆಕ್ರೋಶ ಹೊರಹಾಕಿದರು. “ಸೂರ್ಯ ನೀವು ಸರಿಯಾದ ಕ್ಯಾಂಡಿಡೇಟ್ ಅಲ್ಲ. ನಿಮ್ಮ ಡಿಬೇಟ್ ಗಳನ್ನ ನಾವು ನೋಡುತ್ತಾ ಇದ್ದೇವೆ. ನಿಮಗೆ ಈ ಸ್ಥಾನವನ್ನು ನಿಭಾಯಿಸುವ ಶಕ್ತಿ ಇಲ್ಲ,’’ ಎಂದು ಟೀಕಿಸಿದರು.
ಅಲ್ಲದೇ, ಈ ತೇಜಸ್ವಿ ಸೂರ್ಯ ಯಾರು ಅಂತಾನೇ ನಮಗೆ ಗೊತ್ತಿಲ್ಲ. ಆದರೆ ತೇಜಸ್ವಿನಿ ಅವರನ್ನು ತಾಯಿ ಎಂದು ಹೇಳುತ್ತಾ, ತಾಯಿಗೇ ದ್ರೋಹ ಮಾಡ್ತಿದ್ದಾರೆ,’’ ಎಂದು ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಇದೇ ವೇಳೆ ತೇಜಸ್ವಿನಿ ಅವರ ನಿವಾಸದಲ್ಲಿದ್ದ ರಾಜೀವ್ ಚಂದ್ರಶೇಖರ್ ಹೊರ ಬಂದು ಕಾರಿನಲ್ಲಿ ಕೂರುತ್ತಿದ್ದಂತೆ ಅಡ್ಡಗಟ್ಟಿದ ಕಾರ್ಯಕರ್ತರು ಮೇಡಂ ಅವರಿಗೆ ಯಾಕೆ ಹೀಗಾಯ್ತು ಎಂದು ನೇರವಾಗಿ ಪ್ರಶ್ನಿಸಿದರು. ಪರಿಸ್ಥಿತಿ ಅರಿತ ಪೊಲೀಸರು ಕೂಡಲೇ ಮಧ್ಯಪ್ರವೇಶಿಸಿ ಕಾರು ಹೊರಡಲು ಅನುವು ಮಾಡಿಕೊಟ್ಟರು.
ವಿಷ ಬೀಜ ಬಿತ್ತುವ ವ್ಯಕ್ತಿಗೆ ಬಿಜೆಪಿ ಟಿಕೆಟ್: ಕೃಷ್ಣಭೈರೆಗೌಡ
ಬಿಜೆಪಿ ತೇಜಸ್ವಿನಿ ಅವರಂಥ ಸುಸಂಸ್ಕೃತರಿಗೆ ಟಿಕೆಟ್ ಕೊಡದೇ ಸಮಾಜದಲ್ಲಿ ವಿಷ ಬೀಜ ಬಿತ್ತುವ ವ್ಯಕ್ತಿಗೆ ಟಿಕೆಟ್ ಕೊಟ್ಟಿರುವುದು ದುರಂತ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಬೈರೇಗೌಡ ಟೀಕಿಸಿದ್ದಾರೆ.
ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ಅಭ್ಯರ್ಥಿ ಆಗುತ್ತಾರೆ ಎಂದು ಅಂದುಕೊಂಡಿದ್ದೇವು. ಕಾರಣ ರಾಜ್ಯದಲ್ಲಿ ಅನಂತಕುಮಾರ್ ಅವರ ಕೊಡುಗೆ ಇದೆ. ಅನಂತಕುಮಾರ್ ಹಿರಿಯ ನಾಯಕರು, ದೆಹಲಿಯಲ್ಲಿ ಕನ್ನಡದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ತೇಜಸ್ವಿನಿ ಅವರು ಸಹ ಸಾರ್ವಜನಿಕ ಜೀವನದಲ್ಲಿ ಸಂಘ – ಸಂಸ್ಥೆ ಮುಖಾಂತರ, ಕಾಲೇಜಿನ ಮುಖಾಂತರ ಬಹಳ ಆಳವಾಗಿ ತೊಡಗಿಸಿಕೊಂಡವರು. ಅವರಿಗೇ ಟಿಕೆಟ್ ಸಿಗುತ್ತದೆ ಎಂದು ಭರವಸೆ ಇಟ್ಟುಕೊಂಡಿದ್ದೇವು ಆದರೆ ಕ್ಷೇತ್ರದ ಪರಿಚಯವಿಲ್ಲದ, ಕೇವಲ ಸಾಮಾಜಿಕ ಜಾಲತಣಾಗಳ ಮೂಲಕ ವಿಷ ಬೀಜ ಬಿತ್ತುವ ಯುವಕನಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ಖಂಡಿಸಿದರು.
ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣದಲ್ಲಿ ಕೊಟ್ಟಿರುವುದು ಆ ಭಾಗದ ಜನತೆಗೆ ಇಷ್ಟವಾಗುವುದಿಲ್ಲ ಎಂಬುದು ನನ್ನ ಅನಿಸಿಕೆ. ಕಠಿಣವಾಗಿರುವ ಬೆಂಗಳೂರು ದಕ್ಷಿಣದಲ್ಲೂ ಸಹ ಕಾಂಗ್ರೆಸ್ ಗೆಲ್ಲಬಹುದು ಎಂಬ ಬದಲಾವಣೆ ಸಹ ಸೋಮವಾರದಿಂದ ಕಾಣಿಸುತ್ತಿದೆ. ಬೆಂಗಳೂರು ದಕ್ಷಿಣದಲ್ಲಿ ಬೆಜೆಪಿ ಆಯ್ಕೆ ಮಾಡಿದ ಅಭ್ಯರ್ಥಿ ಹಿನ್ನೆಲೆಯಲ್ಲಿ ನಾವು ನಾಲ್ಕೂ ಸ್ಥಾನಗಳನ್ನು ಗೆಲ್ಲುವ ಅವಕಾಶ ಹೊಂದಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಅಲ್ಲದೆ ತೇಜಸ್ವಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕಾಂಗ್ರೆಸ್ ನ ಕಾರ್ಯಕರ್ತರು ರಾಹುಲ್ ಗಾಂಧಿ ಪರ ಘೊಷಣೆ ಕೂಗಿದ್ದರಿಂದ ತೇಜಸ್ವಿ ಅವರಿಗೆ ಮುಜುಗರವಾಗುವಂಥ ಪರಿಸ್ಥಿತಿಯೂ ನಿರ್ಮಾಣವಾಯಿತು.
ಇಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ತೇಜಸ್ವಿ ವಿರುದ್ಧ ಆರಂಭದಿಂದಲೇ ಸಾಕಷ್ಟು ವಿರೋಧಿ ಅಲೆಗಳು ಎದ್ದಿವೆ. ಈ ಹಿಂದೆ ತನ್ನ ಸುತ್ತಲೂ ಮಚ್ಚುಗಳನ್ನು ಇಟ್ಟುಕೊಂಡು ಪೋಟೋ ಪೋಸು ಕೊಟ್ಟಿದ್ದ ತೇಜಸ್ವಿ ಸೂರ್ಯನ ಫೋಟೋ ಒಂದು ವೈರಲ್ ಆಗಿದೆ. ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
More Articles
By the same author
Related Articles
From the same category