ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 14,000 ಕೋಟಿ ರುಪಾಯಿ ವಂಚಿಸಿ ಪರಾರಿಯಾಗಿರುವ ಗುಜರಾತಿನ ನೀರವ್ ಮೋದಿ ಈಗ ಲಂಡನ್ ನಲ್ಲಿ ಜೈಲು ಹಕ್ಕಿ. ಇಂಗ್ಲೆಂಡ್ ಪೋಲೀಸರು ನೀರವ್ ಮೋದಿಯನ್ನು ಬಂಧಿಸುವ ಮುನ್ನ ಆತ ಹತ್ತಾರು ದೇಶಗಳ ನಡುವೆ ಹಾರಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದ.
ಈಗ ಸದ್ಯಕ್ಕೆ ಅತಿ ದೊಡ್ಡ ಸುದ್ದಿಯಾಗಿರುವುದು ನೀರವ್ ಮೋದಿ ಬಂಧನವಲ್ಲ. ಬದಲಿಗೆ ಆತ ಲಂಡನ್ ಬೀದಿಗಳಲ್ಲಿ ಅಡ್ಡಾಡುತ್ತಿದ್ದಾಗ ತೊಟ್ಟಿದ್ದ ಜಾಕೆಟ್ ಅತಿ ದೊಡ್ಡ ಸುದ್ದಿಯಾಗಿದೆ.
ಅಷ್ಟಕ್ಕೂ ನೀರವ್ ಮೋದಿ ತೊಟ್ಟಿದ್ದ ಜಾಕೆಟ್ ಭಾರತದ ಪ್ರಧಾನಿ ನರೇಂದ್ರಮೋದಿ ತೊಟ್ಟಿದ್ದ ‘ಸ್ವರ್ಣದಾರ ಸ್ವನಾಮಲಿಖಿತ’ 15 ಲಕ್ಷದ ದುಬಾರಿ ಸೂಟಿಗಿಂತಲೂ ದುಬಾರಿಯಾಗಿದ್ದೇ? ಖಂಡಿತಾ ಇಲ್ಲ.
ನರೇಂದ್ರ ಮೋದಿ 2015 ಜನವರಿ 26 ರಂದು ಗಣರಾಜ್ಯೋತ್ಸವದ ಹೊತ್ತಿಗೆ ತೊಟ್ಟಿದ್ದ 15 ಲಕ್ಷದ ಸ್ಯೂಟ್ ಭಾರಿ ಸುದ್ದಿಯಾಗಿತ್ತು. ಸುದ್ದಿಯಾಗಿದ್ದು ಅದು 15 ಲಕ್ಷ ರುಪಾಯಿ ಮೌಲ್ಯದ್ದು ಎಂಬುದು ಒಂದು ಕಾರಣವಾದರೆ, ಆ ಸ್ಯೂಟಿನಲ್ಲಿ ಚಿನ್ನದ ದಾರ ಬಳಸಿ ‘ನರೇಂದ್ರ ದಾಮೋದರ ದಾಸ್ ಮೋದಿ’ ಎಂದು ಬರೆದಿದ್ದು ಮತ್ತೊಂದು ಕಾರಣ.
ವಾಸ್ತವವಾಗಿ ಆ ಸ್ಯೂಟಿನ ಮೇಲೆ ನರೇಂದ್ರ ದಾಮೋದರ ದಾಸ್ ಮೋದಿ ಎಂದು ಚಿನ್ನದ ದಾರದಲ್ಲಿ ಬರೆದಿದ್ದು ಹೆಚ್ಚಿನ ಚರ್ಚೆಗೆ ಗ್ರಾಸವಾಗಿತ್ತು. ತಮ್ಮದೇ ಕೋಟಿನ ಮೇಲೆ ತಮ್ಮದೇ ಹೆಸರನ್ನು ಚಿನ್ನದ ದಾರದಲ್ಲಿ ಬರೆಸಿ ಹಾಕಿಕೊಂಡಿದ್ದೇ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. 65ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಧಿಯಾಗಿ ಬಂದಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜತೆ ಹೈದರಾಬಾದ್ ಹೌಸ್ ನಲ್ಲಿ ಮಾತುಕತೆ ನಡೆಸುವ ಹೊತ್ತಿಗೆ ಮೋದಿ ಈ ದುಬಾರಿ ಸ್ಯೂಟ್ ತೊಟ್ಟಿದ್ದರು.
ಪ್ರಧಾನಿ ಮೋದಿ 15 ಲಕ್ಷ ರುಪಾಯಿ ಮೌಲ್ಯದ ಸ್ವರ್ಣಧಾರ ಸ್ವನಾಮಲಿಖಿತ ಸ್ಯೂಟ್ ತೊಟ್ಟಿದ್ದನ್ನು ಮೋದಿ ಅಭಿಮಾನಿಗಳು ಕೊಂಡಾಡಿದ್ದರು. ವಿಶ್ವದ ಶ್ರೀಮಂತ ರಾಷ್ಟ್ರವಾದ ಅಮೆರಿಕದ ಅಧ್ಯಕ್ಷರನ್ನು ಭೇಟಿ ಮಾಡುವಾಗ ಆ ದೇಶಕ್ಕೆ ತಕ್ಕನಾಗಿ ಸ್ಯೂಟ್ ತೊಡುವುದು ‘ಶಿಷ್ಟಾಚಾರ’ ಎಂದು ಸಮರ್ಥಿಸಿಕೊಂಡಿದ್ದರು.
ಇತ್ತ ಮೋದಿ ವಿರೋಧಿಗಳು ಅವರು ತೊಟ್ಟಿದ್ದ 15 ಲಕ್ಷದ ಸ್ಯೂಟ್ ಬಗ್ಗೆ ಮನಸೋ ಇಚ್ಛೆ ಟೀಕೆ ಮಾಡಿದ್ದರು. ದೇಶದ ತಲಾ ಆದಾಯ 80,388 ರುಪಾಯಿ ಇದೆ. ಪ್ರಧಾನಿ ಮೋದಿ ಅವರು ದೇಶದ ಜನರ ತಲಾ ಆದಾಯದ 15 ಪಟ್ಟು ದುಬಾರಿ ಸ್ಯೂಟನ್ನು ತೊಡುವುದು ಸರಿಯೇ ಎಂದು ಪ್ರಶ್ನಿಸಿದ್ದರು. ಕೋಟ್ಯಾಂತರ ಜನರಿಗೆ ಶುದ್ಧ ಕುಡಿಯುವ ನೀರಿಲ್ಲ, ಆರೋಗ್ಯ ಸೌಲಭ್ಯವಿಲ್ಲ, ಲಕ್ಷಾಂತರ ಗ್ರಾಮಗಳಲ್ಲಿ ಇನ್ನೂ ಬಯಲು ಶೌಚ ವ್ಯವಸ್ಥೆ ಇದೆ. ಇವೆಲ್ಲದರ ನಡುವೆಯೂ ಪ್ರಧಾನಿ ಮೋದಿ ಅವರು ಅಷ್ಟು ದುಬಾರಿ ಸ್ಯೂಟ್ ತೊಟ್ಟಿದ್ದು ತಪ್ಪು ಎಂಬ ಟೀಕೆಯೂ ವ್ಯಕ್ತವಾಗಿತ್ತು.
ನಂತರದ ದಿನಗಳಲ್ಲಿ ಮೋದಿ ತೊಟ್ಟಿದ್ದ ಸ್ವರ್ವದಾರ ಸ್ವನಾಮಲಿಖಿತ ಸ್ಯೂಟ್ ಮೌಲ್ಯವು 10 ಲಕ್ಷ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಗುಜರಾತ್ ಮೂಲದ ಅನಿವಾಸಿ ಭಾರತೀಯ ವ್ಯಾಪಾರಿ ರಮೇಶ್ ಕುಮಾರ್ ಭಿಕಾಬಾಯ್ ವಿರಾನಿ ಈ ಸ್ಯೂಟ್ ಅನ್ನು ಉಡುಗೊರೆಯಾಗಿ ಮೋದಿಗೆ ನೀಡಿದ್ದರಂತೆ. ವೈಬ್ರೆಂಟ್ ಗುಜರಾತ್ ಸುಮಿತ್ ನಲ್ಲಿ ಭಾಗಿಯಾಗಿದ್ದ ರಮೇಶ್ ಕುಮಾರ್ ತಮ್ಮ ಪುತ್ರ ಸ್ಮಿತ್ ವಿರಾನಿ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿ, ಈ ಸ್ಯೂಟ್ ಉಡುಗೊರೆಯಾಗಿ ನೀಡಿದ್ದಾಗಿ 2015 ಫೆಬ್ರವರಿ 18 ರಂದು ಎಎನ್ಐಗೆ ನೀಡಿದ್ದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದರು. ಮದುವೆಗೆ ಆಗಮಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದ ಮೋದಿ, ಸ್ಯೂಟ್ ತೊಡುವುದಾಗಿಯೂ ನಂತರ ಅದನ್ನು ಚಾರಿಟಿಗೆ ನೀಡುವುದಾಗಿಯೂ ಹೇಳಿದ್ದರೆಂದು ರಮೇಶ್ ಕುಮಾರ್ ತಿಳಿಸಿದ್ದರು. ಅದಾದ ನಂತರವೂ ಮೋದಿ ಅವರು ಸ್ವರ್ಣದಾರ ಸ್ವನಾಮಲಿಖಿತ ಸ್ಯೂಟ್ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಲೇ ಇತ್ತು. ವಿರೋಧ ಪಕ್ಷಗಳು ಟೀಕಿಸುತ್ತಲೇ ಇದ್ದವು.
ಈಗ ನೀರವ್ ಮೋದಿ ಲಂಡನ್ ನಲ್ಲಿ ತೊಟ್ಟಿದ್ದ ಜಾಕೆಟ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಅದು ಅತಿ ದುಬಾರಿ ಜಾಕೆಟ್ ಅದರ ಮೊತ್ತ 9 ಲಕ್ಷ ರುಪಾಯಿ. ನರೇಂದ್ರ ಮೋದಿ ಅವರ ಸ್ಯೂಟ್ ಗಿಂತ ಒಂದು ಲಕ್ಷ ಕಮ್ಮಿಯೇ.
ಆದರೆ, ನೀರವ್ ಮೋದಿ ತೊಟ್ಟಿರುವ ಜಾಕೆಟ್ ಉಷ್ಟ್ರಪಕ್ಷಿ (ಆಸ್ಟ್ರಿಚ್) ಚರ್ಮದಿಂದ ತಯಾರಿಸಿದ್ದು. ಅತ್ಯಂತ ಮೃದುವಾಗಿರುವ ಕಾರಣಕ್ಕೆ ಐಷಾರಾಮಿ ಪ್ರಿಯರ ಅಚ್ಚುಮೆಚ್ಚಿನ ಉಡುಗೆ. ಎಕನಾಮಿಕ್ ಟೈಮ್ಸ್ ವರದಿ ವರದಿ ಪ್ರಕಾರ ಪೈಥಾನ್, ಆನಕೊಂಡ ಹಾವುಗಳ ಚರ್ಮಕ್ಕಿಂತಲೂ ಆಸ್ಟ್ರಿಚ್ ಚರ್ಮ ದುಬಾರಿ. ಆಸ್ಟ್ರಿಚ್ ಚರ್ಮದ ಕೈಚೀಲಗಳೆಂದರೆ ವಿಶ್ವದ ಶ್ರೀಮಂತ ಸುಂದರಿಯರಿಗೆ ಅಚ್ಚುಮೆಚ್ಚು. ದುಬಾರಿ ಬ್ರಾಂಡ್ ಗಳಾದ ಪ್ರಾಡ, ಹರ್ಮ್ಸ್, ಬೊಟ್ಟೆಗಾ ವಿನೆಟಾ, ಗುಸಿ ಆಸ್ಟ್ರಿಚ್ ಚರ್ಮದ ಹ್ಯಾಂಡ್ ಬ್ಯಾಗ್ ಮಾರಾಟ ಮಾಡುತ್ತವೆ.
ನೀರವ್ ಮೋದಿ 9 ಲಕ್ಷದ ಜಾಕೆಟ್ ತೊಟ್ಟು ಸುದ್ದಿಯಾದ ನಂತರ ನರೇಂದ್ರಮೋದಿ ಅವರು ತೊಟ್ಟಿದ್ದ 10 ಲಕ್ಷದ ಸ್ಯೂಟ್ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮತ್ತೆ ಚರ್ಚೆಯಾಗುತ್ತಿದೆ. ಒಂದಂತೂ ಸ್ಪಷ್ಟ. ನೀರವ್ ಮೋದಿ ಆಸ್ಟ್ರಿಚ್ ಚರ್ಮದ ಜಾಕೆಟ್ ಗಿಂತ ಪ್ರಧಾನಿ ನರೇಂದ್ರ ಮೋದಿ ಅವರು ತೊಟ್ಟಿದ್ದ ಸ್ವರ್ಣದಾರ ಸ್ವನಾಮಲಿಖಿತ ಸ್ಯೂಟ್ ಹೆಚ್ಚಿನ ಮೌಲ್ಯದ್ದು!
ಈ ನಡುವೆ, ಉತ್ತರ ಪ್ರದೇಶದ ಬಿಜೆಪಿ ಮುಖಂಡ ಐಪಿ ಸಿಂಗ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಐಪಿ ಸಿಂಗ್ ಅವರು, ಪ್ರಧಾನಿ ನರೇಂದ್ರಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ‘ಗುಜರಾತಿ ಠಕ್ಕರು’ ಎಂದು ಟೀಕಿಸಿದ್ದರು!