ದೆಹಲಿ ಗದ್ದುಗೆಯ ದಿಕ್ಸೂಚಿ ಎಂದೇ ಪರಿಗಣಿಸಲಾಗುವ, ಅತಿ ಹೆಚ್ಚು ಸಂಸದರನ್ನು ಲೋಕಸಭೆಗೆ ಕಳಿಸುವ ಉತ್ತರಪ್ರದೇಶದಲ್ಲಿ ಚುನಾವಣಾ ಕಾವು ಏರತೊಡಗಿದೆ.
ಒಟ್ಟು 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 71 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರೀ ಜಯಭೇರಿ ಬಾರಿಸಿತ್ತು. ಸಮಾಜವಾದಿ ಪಕ್ಷ(ಎಸ್ಪಿ) 5 ಸ್ಥಾನ ಹಾಗೂ ಕಾಂಗ್ರೆಸ್ ಮತ್ತು ಅಪ್ನಾ ದಳ ತಲಾ 2 ಸ್ಥಾನ ಪಡೆದಿದ್ದವು. ಆ ಬಳಿಕ 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ಎಸ್ಪಿ ಹೆಚ್ಚುವರಿ ಎರಡು ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.
ಆ ಹಿನ್ನೆಲೆಯಲ್ಲಿ ಈಗ ಈ ಚುನಾವಣೆಯನ್ನು ನೋಡುವುದಾದರೆ, ಕಳೆದ ಐದು ವರ್ಷಗಳಲ್ಲಿ ರಾಜ್ಯದ ರಾಜಕೀಯ ಚಿತ್ರಣ ಸಾಕಷ್ಟು ಬದಲಾಗಿದೆ. ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿ, ರಾಜ್ಯದಲ್ಲೂ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿದು ಎರಡು ವರ್ಷ ಕಳೆದಿವೆ. ಯೋಗಿ ಆದಿತ್ಯನಾಥರ ರಾಜ್ಯ ಬಿಜೆಪಿ ಸರ್ಕಾರದ ನೀತಿ ಮತ್ತು ನಿಲುವುಗಳ ತಮ್ಮ ಬದುಕಿನ ಮೇಲೆ ಯಾವ ಪರಿಣಾಮ ಬೀರಿವೆ ಮತ್ತು ಬೀರಲಿವೆ ಎಂಬುದು ಜನರ ಅನುಭವಕ್ಕೆ ಬಂದಿದೆ.
ಈ ನಡುವೆ, ಐತಿಹಾಸಿಕ ಪ್ರತಿಸ್ಫರ್ಧಿಗಳಾಗಿದ್ದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ(ಬಿಎಸ್ ಪಿ)ಗಳು ಯಾರೂ ಊಹಿಸದೇ ಇದ್ದ ರಾಜಕೀಯ ತಿರುವು ತೆಗೆದುಕೊಂಡಿದ್ದು, ಪರಸ್ಪರ ಕೈಜೋಡಿಸಿ ಮೈತ್ರಿ ಮಾಡಿಕೊಂಡಿವೆ. ವರ್ಷದ ಹಿಂದಿನ ಉಪಚುನಾವಣೆಯ ಮೈತ್ರಿಯ ಫಲಿತಾಂಶದಿಂದ ಉರುಪುಗೊಂಡಿರುವ ಅವರೊಂದಿಗೆ ರಾಷ್ಟ್ರೀಯ ಲೋಕ ದಳ(ಆರ್ ಎಲ್ ಡಿ)ದಂತಹ ಪ್ರಾದೇಶಿಕ ಪಕ್ಷವೂ ಕೈಜೋಡಿಸಿದೆ. ಹಾಗಾಗಿ ಇದೀಗ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಎನ್ ಡಿ ಎ ಮೈತ್ರಿಕೂಟ ಒಂದೆಡೆಯಾದರೆ, ಮತ್ತೊಂದೆಡೆ ಬಿಎಸ್ ಪಿ- ಎಸ್ಪಿ-ಆರ್ ಎಲ್ ಡಿಯ ಮಹಾ ಮೈತ್ರಿ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಗಳು ಭರ್ಜರಿ ಪ್ರತಿಸ್ಪರ್ಧೆಗೆ ಸಜ್ಜಾಗಿವೆ.
ಯೋಗಿ ಆದಿತ್ಯನಾಥರ ಕಟ್ಟಾ ಹಿಂದ್ವುತ್ವವಾದಿ ಆಡಳಿತ ಮತ್ತು ಪೊಲೀಸ್ ರಾಜ್ ವ್ಯವಸ್ಥೆಯ ಪರಿಣಾಮವಾಗಿ ತಳಮಟ್ಟದಲ್ಲಿ ಸರ್ಕಾರದ ವಿರುದ್ಧ ದೊಡ್ಡಮಟ್ಟದ ಆಡಳಿತ ವಿರೋಧಿ ಅಲೆ ಮತ್ತು ಅದೇ ಹೊತ್ತಿಗೆ ಅಚ್ಛೇದಿನದ ಭರವಸೆ ಸುಳ್ಳಾಗಿಸಿದ ಮೋದಿ ನೇತೃತ್ವದ ಕೇಂದ್ರದ ಎನ್ ಡಿಎ ಸರ್ಕಾರದ ವಿರುದ್ಧದ ಭ್ರಮನಿರಸನ ರಾಜ್ಯದಲ್ಲಿ ದೊಡ್ಡ ಮಟ್ಟದ ಪರಿಣಾಮ ಬೀರುವ ಭೀತಿ ಸ್ವತಃ ಬಿಜೆಪಿಗೇ ಇದೆ. ಜೊತೆಗೆ, ಈ ಬಾರಿ ಬಿಜೆಪಿಯ ಪಾಲಿಗೆ ದೊಡ್ಡ ತಲೆನೋವಾಗಿರುವುದು ಬಿಎಸ್ ಪಿ ಮತ್ತು ಎಸ್ಪಿ ಮೈತ್ರಿಕೂಟ. ಅಷ್ಟು ಸಾಲದು ಎಂಬಂತೆ, ಕಾಂಗ್ರೆಸ್ ಕಳೆದ ತಿಂಗಳು ಗಾಂಧಿ ನೆಹರು ಕುಟುಂಬದ ಕುಡಿ, ವರ್ಚಸ್ವಿ ಯುವ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಸಕ್ರಿಯ ರಾಜಕೀಯಕ್ಕೆ ಕರೆತಂದು ಉತ್ತರಪ್ರದೇಶದ ಹೊಣೆ ವಹಿಸಿದೆ.
ಈ ಹಿಂದಿನ ಚುನಾವಣೆಗಳಲ್ಲು ಬಿಜೆಪಿಯ ಭದ್ರಕೋಟೆ ಎಂದೇ ಹೆಸರಾಗಿದ್ದ ಪೂರ್ವ ಉತ್ತರಪ್ರದೇಶದ ಬರೋಬ್ಬರಿ 42 ಲೋಕಸಭಾ ಕ್ಷೇತ್ರಗಳ ವಿಶೇಷ ಹೊಣೆಗಾರಿಕೆಯೊಂದಿಗೆ, ಇಡೀ ರಾಜ್ಯದ ಚುನಾವಣಾ ಹೊಣೆಗಾರಿಕೆಯನ್ನೂ ಪ್ರಿಯಾಂಕಾ ಹೊತ್ತಿದ್ದಾರೆ. ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಪ್ರಿಯಾಂಕಾ, ನಡೆಸಿದ ಗಂಗಾ ಯಾತ್ರೆ ಅಭಿಯಾನ ದೊಡ್ಡ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರಲ್ಲಿ ಉತ್ಸಾಹ ತುಂಬುವಲ್ಲಿ ಮಾತ್ರವಲ್ಲ, ಜನಸಾಮಾನ್ಯರ ಕಣ್ಣಲ್ಲಿ ಕಾಂಗ್ರೆಸ್ಸಿನ ಹೊಸ ಭರವಸೆ ಮೂಡಿಸುವಲ್ಲಿಯೂ ಯಶಸ್ವಿಯಾಗಿದೆ.
ಹಾಗಾಗಿ, ಇದೀಗ, ಹಿಂದುತ್ವದ ಪ್ರಯೋಗಶಾಲೆ ಎಂದೇ ಹೆಸರಾಗಿರುವ ಉತ್ತರಪ್ರದೇಶದಲ್ಲಿ ಸ್ವತಃ ಎನ್ ಡಿ ಎ ಮಿತ್ರಪಕ್ಷಗಳೇ ಬಿಜೆಪಿಯ ಸಖ್ಯ ತೊರೆದು ಕಾಂಗ್ರೆಸ್ ಮತ್ತು ಎಸ್ಪಿ-ಬಿಎಸ್ಪಿ ಮಹಾಮೈತ್ರಿಯ ಕಡೆ ವಲಸೆ ಹೊರಟಿವೆ. ಬಿಎಸ್ಪಿ ನಾಯಕಿ ಮಾಯಾವತಿ ಅವರ ಒಂದು ಕಾಲದ ಆಪ್ತ ನಾಯಕ ಬಾಬು ಸಿಂಗ್ ಖುಶ್ವಾ ಅವರ ಜನ್ ಅಧಿಕಾರ ಪಾರ್ಟಿ, ಎನ್ ಡಿಎ ಮೈತ್ರಿಕೂಟದ ಅಪ್ನಾ ದಳದ ಕೃಷ್ಣ ಪಟೇಲ್ ನೇತೃತ್ವದ ಬಣ ಹಾಗೂ ಮಹಾನ್ ದಳ್ ಗಳು ಕಾಂಗ್ರೆಸ್ಸಿನೊಂದಿಗೆ ಚುನಾವಣಾ ಮೈತ್ರಿಗೆ ಮುಂದಾಗಿವೆ. ಅಲ್ಲದೆ, ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಬಲಗೈಬಂಟ ಹಾಗೂ ಸಹೋದರ ಶಿವಪಾಲ್ ಯಾದವ್ ಅವರ ಪ್ರಗತಿಶೀಲ್ ಸಮಾಜವಾದಿ ಪಾರ್ಟಿ- ಲೋಹಿಯಾ(ಪಿಎಸ್ ಪಿ-ಎಲ್) ಮತ್ತು ಈಗಾಗಲೇ ಅದು ಮೈತ್ರಿ ಮಾಡಿಕೊಂಡಿರುವ ಪೀಸ್ ಪಾರ್ಟಿ ಹಾಗೂ ಅಪ್ನಾದಳದ ಕೃಷ್ಣ ಪಟೇಲ್ ಬಣ ಕೂಡ ಕಾಂಗ್ರೆಸ್ ಜೊತೆ ಕೈಜೋಡಿಸಿವೆ.
ಪ್ರಮುಖವಾಗಿ ಈ ದ್ರುವೀಕರಣದ ಹಿಂದೆ, ರಾಜ್ಯದ ಬಿಜೆಪಿ ಸರ್ಕಾರದ ಅವಧಿಯಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಗಳು ಹಾಗೂ ಅಂತಹ ದಬ್ಬಾಳಿಕೆಯ ಕ್ರಮಗಳ ವಿರುದ್ಧ ದನಿ ಎತ್ತದ ಬಿಎಸ್ಪಿ ಮತ್ತು ಎಸ್ಪಿ ಪಕ್ಷಗಳ ನಿಷ್ಕ್ರಿಯತೆ ಕೆಲಸ ಮಾಡುತ್ತಿದೆ. ಹಾಗಾಗಿ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಪ್ರತಿನಿಧಿಸುವ ಸಣ್ಣಪುಟ್ಟ ಪಕ್ಷಗಳು ಈ ಬಾರಿ ಕಾಂಗ್ರೆಸ್ ಜೊತೆ ಕೈಜೋಡಿಸುತ್ತಿವೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ಅವಧಿಯಲ್ಲಿ ಜನಸಾಮಾನ್ಯರ ಪರ ದನಿ ಎತ್ತಿದ ಏಕೈಕ ಪಕ್ಷ ಕಾಂಗ್ರೆಸ್ ಎಂಬುದೇ ಅದಕ್ಕೆ ಕಾರಣವಿರಬಹುದು ಎಂದು ಮಾಧ್ಯಮ ವಿಶ್ಲೇಷಣೆಗಳು ಹೇಳಿವೆ.
ಈ ನಡುವೆ, ಎಸ್ಪಿ ನಾಯಕ ಅಖಿಲೇಶ್ ಯಾದವ್ ಅವರು ಅಜಂಗಢದಿಂದ ಕಣಕ್ಕಿಳಿಯುತ್ತಿದ್ದಾರೆ. ತಮ್ಮ ತಂದೆಯ ಕ್ಷೇತ್ರವಾದ ಅಜಂಗಢದಿಂದ ಕಣಕ್ಕಿಳಿಯುವ ಅವರ ನಿರ್ಧಾರದ ಹಿಂದೆ ಪೂರ್ವ ಉತ್ತರಪ್ರದೇಶದ ವಾರಣಾಸಿ ಮತ್ತು ಗೋರಖ್ಪುರ್ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸುವ ಮೂಲಕ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ ಅವರಿಗೆ ಪೈಪೋಟಿ ನೀಡುವ ಲೆಕ್ಕಾಚಾರವೂ ಇದೆ ಎನ್ನಲಾಗುತ್ತಿದೆ.
ಈ ನಡುವೆ, ಬಿಜೆಪಿ ಅಯೋಧ್ಯಾ ರಾಮಮಂದಿರ ನಿರ್ಮಾಣದ ವಿಷಯದಲ್ಲಿ ಯಾವುದೇ ದೃಢ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿರುವುದು ಕಟ್ಟಾ ಹಿಂದುತ್ವವಾದಿಗಳಲ್ಲೂ ನಿರಾಶೆ ಮೂಡಿಸಿದೆ. ಕೇಂದ್ರ ಮತ್ತು ರಾಜ್ಯದಲ್ಲಿ; ಎರಡೂ ಕಡೆ ತಮ್ಮದೇ ಸರ್ಕಾರವಿದ್ದರೂ ರಾಮಮಂದಿರ ವಿಷಯದಲ್ಲಿ ಬಿಜೆಪಿ ಯಾವುದೇ ಧೃಡ ಹೆಜ್ಜೆ ಇಡಲಿಲ್ಲ ಎಂಬುದು ರಾಮಜನ್ಮಭೂಮಿಯ ರಾಜ್ಯದಲ್ಲಿ ಈ ಬಾರಿ ಚುನಾವಣೆಯಲ್ಲಿ ಸಾಕಷ್ಟು ಚರ್ಚೆಗೆ ಬಂದಿದೆ. ಹಾಗಾಗಿ, ಬಿಜೆಪಿ ಈ ವಿಷಯವನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಕೂಡ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಲಿದೆ.
ಅದೇ ಹೊತ್ತಿಗೆ, ಪ್ರಿಯಾಂಕಾ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಬಲಗೊಳ್ಳುತ್ತಿರುವುದು ಕಾಂಗ್ರೆಸ್ಸಿಗೆ ಎಷ್ಟರಮಟ್ಟಿಗೆ ಲಾಭ ತಂದುಕೊಡುವುದು ಎಂಬುದಕ್ಕಿಂತ, ಮತ ವಿಭಜನೆಯ ಮೂಲಕ ಬಿಜೆಪಿಗೇ ಅನುಕೂಲವಾಗುವ ಸಾಧ್ಯತೆ ಕೂಡ ಇದೆ ಎಂಬ ಲೆಕ್ಕಾಚಾರಗಳೂ ಇವೆ. ಪ್ರಮುಖವಾಗಿ ಕಾಂಗ್ರೆಸ್ ಮತ್ತು ಎಸ್ಪಿ-ಬಿಎಸ್ಪಿ ಮೈತ್ರಿಯ ಮತಬ್ಯಾಂಕ್ ಬಹುತೇಕ ಒಂದೇ ಆಗಿದ್ದು, ಎಲ್ಲಿ ಎಸ್ಪಿ-ಬಿಎಸ್ಪಿ ಪಕ್ಷಗಳು ಪ್ರಬಲವಾಗಿವೆಯೋ ಅದೇ ಭಾಗದಲ್ಲಿ ಕಾಂಗ್ರೆಸ್ ಕೂಡ ತನ್ನ ಬಲವೃದ್ದಿಸಿಕೊಳ್ಳುತ್ತಿದೆ. ಹಾಗಾಗಿ, ಬಿಜೆಪಿ ವಿರೋಧಿ ಮತಗಳು ಈ ಪ್ರಬಲ ಪಕ್ಷಗಳ ನಡುವೆ ಹಂಚಿಹೋದಲ್ಲಿ ಅದು ಅಂತಿಮವಾಗಿ ಬಿಜೆಪಿಗೆ ಅನುಕೂಲ ಮಾಡಿಕೊಡಲಿದೆ ಎನ್ನಲಾಗುತ್ತಿದೆ.
ಪ್ರಧಾನಿ ಮೋದಿ(ವಾರಣಾಸಿ), ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ(ಅಮೇಥಿ), ಸೋನಿಯಾ ಗಾಂಧಿ(ರಾಯ್ ಬರೇಲಿ), ರಾಜ್ ನಾಥ ಸಿಂಗ್ (ಲಖನೌ), ಅಖಿಲೇಶ್ ಯಾದವ್(ಅಜಂಗಢ), ಸ್ಮೃತಿ ಇರಾನಿ(ಅಮೇಥಿ) ಸೇರಿದಂತೆ ರಾಷ್ಟ್ರ ರಾಜಕಾರಣದ ಘಟಾನುಘಟಿಗಳ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದ ಚುನಾವಣೆಯ ಬೆಳವಣಿಗೆಗಳ ಮೇಲೆ ಇಡೀ ದೇಶದ ಕಣ್ಣು ನೆಟ್ಟಿವೆ. ಆ ಹಿನ್ನೆಲೆಯಲ್ಲಿ ಅಲ್ಲಿನ ಕಣದ ಪ್ರತಿ ಕದಲಿಕೆಗಳೂ ರಾಷ್ಟ್ರರಾಜಕಾರಣದ ಮೇಲೆ ತನ್ನದೇ ಪ್ರಭಾವ ಬೀರಲಿವೆ.
ಒಟ್ಟಾರೆ, ಈ ಬಾರಿ ಲೋಕಸಭಾ ಚುನಾವಣೆ ಉತ್ತರಪ್ರದೇಶದ ಮಟ್ಟಿಗೆ ಬಿಜೆಪಿ ಪಾಲಿಗೆ ಹಿಂದಿನಂತೆ ಬಹಳ ಸಲೀಸು ಸಮರವಲ್ಲ. ಕಳೆದ ಬಾರಿಯ ಅಭೂತಪೂರ್ವ ಸ್ಥಾನ ಗಳಿಕೆ ಇತಿಹಾಸವಾಗುವ ಸಾಧ್ಯತೆಗಳಂತೂ ನಿಚ್ಛಳವಾಗಿದೆ. ಆದರೆ, ಬಿಎಸ್ಪಿ ಮತ್ತು ಎಸ್ಪಿ ಮೈತ್ರಿ ಮತ್ತು ಕಾಂಗ್ರೆಸ್ ಬಲವರ್ಧನೆಗಳು ಅಂತಿಮವಾಗಿ ಅವರಿಬ್ಬರ ಸಮಾನ ವೈರಿ ಬಿಜೆಪಿಯ ಮತಗಳನ್ನು ಕಬಳಿಸಲಿವೆಯೇ ಅಥವಾ ಪರಸ್ಪರರ ಮತಗಳನ್ನೇ ಕಬಳಿಸಿ ಬಿಜೆಪಿಯ ದಾರಿ ಸಲೀಸು ಮಾಡಲಿವೆಯೇ ಎಂಬುದನ್ನು ಕಾದುನೋಡಬೇಕಿದೆ.