ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷ ರಿಜ್ವಾನ್ ಅರ್ಷದ್ ಹೆಸರು ಅಂತಿಮಗೊಳಿಸಿ ಘೋಷಿಸಿದೆ. ಈಗ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್, ಬಹುಭಾಷಾ ನಟರಾಗಿ, ಕಳೆದ ವಿಧಾನಸಭಾ ಚುನಾವಣೆಯಿಂದೀಚೆಗೆ ರಾಜಕೀಯ ರಂಗದಲ್ಲಿ ಸುದ್ದಿ ಮಾಡುತ್ತಿರುವ ಪ್ರಕಾಶ್ ರಾಜ್ ಮತ್ತು ರಿಜ್ವಾನ್ ಅರ್ಷದ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಪಿ.ಸಿ.ಮೋಹನ್ ಬಿಜೆಪಿ ಅಭ್ಯರ್ಥಿ ಎಂಬುದು ಹೇಗೂ ನಿಶ್ಚಿತವಾಗಿತ್ತು. ತಾನು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಮೂರು ತಿಂಗಳ ಹಿಂದೆ ಘೋಷಿಸಿದ್ದ ಪ್ರಕಾಶ್ ರಾಜ್ ಕಳೆದ ಒಂದೂವರೆ ತಿಂಗಳಿಂದ ಕ್ಷೇತ್ರದಲ್ಲಿ ತೀವ್ರ ಪ್ರಚಾರಕ್ಕಿಳಿದಿದ್ದರು. ಕಾಂಗ್ರೆಸ್ ಮಾತ್ರ ಕಡೆಯಲ್ಲಿ ರಿಜ್ವಾನ್ ಹೆಸರನ್ನು ಅಂತಿಮಗೊಳಿಸಿಕೊಂಡಿದೆ.
ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿ ವಿರುದ್ಧ ಜಾತ್ಯತೀತ ಶಕ್ತಿಗಳ ಮೈತ್ರಿ ಎಂಬ ಆಶಯ ಬೆಂಗಳೂರು ಸೆಂಟ್ರಲ್ನಲ್ಲಿ ಜಾರಿಯಾಗದೇ ಜಾತ್ಯತೀತ ಶಕ್ತಿಗಳೂ ತಮ್ಮೊಳಗೇ ಸ್ಪರ್ಧಿಸಿಕೊಳ್ಳುವ ಸ್ಥಿತಿ ಏರ್ಪಟ್ಟಿದೆ. ಇದಕ್ಕೆ ಯಾರೇ ಹೊಣೆ ಇದ್ದರೂ ತೆರಬೇಕಾದ ಬೆಲೆ ದೊಡ್ಡದೇ ಆಗಿರಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಚುನಾವಣಾ ಪೂರ್ವ ಹೊಂದಾಣಿಕೆ ನಡೆದಿರುವುದು ಸಕಾರಾತ್ಮಕ ಅಂಶ. 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇಂತಹುದೇ ಒಂದು ಹೊಂದಾಣಿಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸಾಧ್ಯವಾಗಬೇಕು, ಆ ಮೂಲಕ ಇಬ್ಬರ ನಡುವೆ ಅನಗತ್ಯ ಸ್ಪರ್ಧೆ ತಪ್ಪಿಸಿ 20ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದನ್ನು ತಪ್ಪಿಸಬಹುದು ಎಂದು ಎರಡೂ ಪಕ್ಷಗಳ ಮೇಲೆ ಒತ್ತಡ ತರಲು ಯತ್ನಿಸಿದ್ದವರಲ್ಲಿ ಪ್ರಕಾಶ್ ರೈ ಸಹ ಮುಂಚೂಣಿಯಲ್ಲಿದ್ದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ಅವರೊಂದಿಗೆ ಸೇರಿ ಕರ್ನಾಟಕದ ಮೂಲೆ ಮೂಲೆಗೆ ‘ಸಂವಿಧಾನ ಉಳಿಸಿ” ಅಭಿಯಾನದಲ್ಲಿ ಪಾಲ್ಗೊಂಡಿದ್ದರು ಪ್ರಕಾಶ್ ರಾಜ್. ಒಂದು ಹಂತದಲ್ಲಿಯಂತೂ ಜೆಡಿಎಸ್ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕೆಂದು ಆಗ್ರಹವನ್ನೂ ಮಾಡಿದ್ದರು. ಆದರೆ ಆಗ ಕಾಂಗ್ರೆಸ್ – ಜೆ ಡಿ ಎಸ್ ಎರಡೂ ಈ ಧ್ವನಿಯನ್ನು ಕೇಳಿಸಿಕೊಳ್ಳಲಿಲ್ಲ. ಪರಿಣಾಮವಾಗಿ ಇಂದು ಸಮ್ಮಿಶ್ರ ಸರ್ಕಾರ ರಚನೆ ಮಾಡಿದ ನಂತರವೂ ಯಡಿಯೂರಪ್ಪ ಅವರ ‘ಅಪರೇಶನ್ ಕಮಲ’ಕ್ಕೆ ಸದಾ ಹೆದರಿಕೊಂಡೇ ಸರ್ಕಾರ ನಡೆಸಬೇಕಾಗಿ ಬಂದಿದೆ. ಅಂದು ಕಾಂಗ್ರೆಸ್-ಜೆಡಿಎಸ್ ನಡುವೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿದ್ದರೆ ಕನಿಷ್ಟ 10-15 ಸೀಟುಗಳು ಬಿಜೆಪಿ ಪಾಲಾಗದೇ ಕಾಂಗ್ರೆಸ್ ಜೆ ಡಿ ಎಸ್ ತೆಕ್ಕೆಗೆ ಸೇರುತ್ತಿದ್ದವು. ಇರಲಿ ಅದೀಗ ಹಳೇ ಕತೆ.
ವಿಧಾನಸಭಾ ಚುನಾವಣೆಯ ಆ ಸಂದರ್ಭದಲ್ಲಿ ಪ್ರಕಾಶ್ ರಾಜ್ ಜಸ್ಟ್ ಆಸ್ಕಿಂಗ್ ಎಂಬ ವೇದಿಕೆಯ ಮೂಲಕ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ‘ಪ್ರಶ್ನೆ ಕೇಳುವ’ ಅಭಿಯಾನ ಜೋರಾಗಿ ನಡೆದಿತ್ತು. ಇದೇ ಕಾರಣಕ್ಕಾಗಿ ಅಂದು ಪ್ರಕಾಶ್ ರಾಜ್ ಮೇಲೆ ಶುರುವಾದ ಅಕ್ಷರ ದಾಳಿ ಇಂದಿನವರೆಗೂ ನಿಂತಿಲ್ಲ. ಬಿಜೆಪಿಯ ಐಟಿ ಸೆಲ್ ಪ್ರಕಾಶ್ ರಾಜ್ ಮೇಲೆ ಅದ್ಯಾವ ಪರಿ ಮುಗಿಬಿದ್ದಿತೆಂದರೆ, ಅವರಾಡುವ ಒಂದೊಂದು ಮಾತಿಗೂ ಸಾವಿರ ಅಶ್ಲೀಲ ಪದಗಳನ್ನು ಕೇಳಬೇಕಾಯಿತು. ‘ಪ್ರಕಾಶ್ ರಾಜ್ ಸಾಬರಿಗೆ ಹುಟ್ಟಿದವ, ಹಿಂದೂ ವಿರೋಧಿ, ದೇಶದ್ರೋಹಿ, ಕಾಂಗಿ, ಕಮ್ಮಿನಿಷ್ಟ್, ಗಂಜಿ ಗಿರಾಕಿ, ಎಂದು ಸಾಮಾಜಿಕ ಜಾಲತಾಣದಲ್ಲೆಲ್ಲ ವೈರಲ್ ಮಾಡತೊಡಗಿದ್ದರು.. ಇನ್ನೂ ಕೀಳು ಮಟ್ಟಕ್ಕಿಳಿದು ಅವರ ವೈಯಕ್ತಿಗಳ ಸಂಗತಿಗಳನ್ನು ತಿರುಚಿ ವೈರಲ್ ಮಾಡಲಾಯಿತು.
ಆ ಸಂದರ್ಭದಲ್ಲಿ ಪತ್ರಕರ್ತರು ನೀವು ರಾಜಕಾರಣ ಪ್ರವೇಶಿಸುತ್ತೀರಾ ಎಂದು ಕೇಳಿದಾಗ ಇಲ್ಲ ಎಂದೇ ಹೆಳುತ್ತಿದ್ದ ಪ್ರಕಾಶ್ ರಾಜ್ ಲೋಕಸಭೆ ಚುನಾವಣೆಗೆ ತಾವೇ ಸ್ಪರ್ಧಿಸಲು ತಯಾರಾದದ್ದು ಅವರ ರಾಜಕೀಯ, ಸಾಮಾಜಿಕ ಬದುಕಿನಲ್ಲಿ ಉಂಟಾದ ಮತ್ತೊಂದು ಜಿಗಿತವೇ ಹೌದು.
ತಮ್ಮ ಮೇಲೆ ಬಿಜೆಪಿ ಐಟಿಸೆಲ್ ನಡೆಸಿದ ದೊಡ್ಡ ಮಟ್ಟದ ಅವೈಚಾರಿಕ ದಾಳಿಯಿಂದ ವಿಚಲಿತಗೊಳ್ಳದ ಪ್ರಕಾಶ್ ರಾಜ್ ಮತ್ತಷ್ಟು ಗಟ್ಟಿಗೊಳ್ಳುತ್ತಲೇ ಹೋದರೆನ್ನಬೇಕು. ಗೌರಿ ಲಂಕೇಶ್ ಅವರ ಹತ್ಯೆಯ ನಂತರದಲ್ಲಿ ಸಾವನ್ನು ಸಂಭ್ರಮಿಸುವ ಮನಸ್ಥಿತಿ ಸಮಾಜದಲ್ಲಿ ಇರುವುದನ್ನು ಕಂಡು ಅಲ್ಲಿಂದ ದೊಡ್ಡ ಧ್ವನಿಯಲ್ಲಿ ರಾಜಕೀಯ ಮಾತಾಡಲು ಆರಂಭಿಸಿದ ಪ್ರಕಾಶ್ ರಾಜ್ ಪ್ರಯಾಣ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಲ್ಲಿಗೆ ಮುಂದುವರೆದಿದೆ.
ಈಗ ವಿಷಯಕ್ಕೆ ಬರುವುದಾದರೆ, ಸಾಕಷ್ಟು ಮುಂಚಿತವಾಗಿಯೇ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ತಮ್ಮ ಸ್ಪರ್ಧೆಯನ್ನು ಘೋಷಿಸಿದ್ದ ಪ್ರಕಾಶ್ ರಾಜ್ ಜೊತೆಗೆ ಕಾಂಗ್ರೆಸ್ನಿಂದ ಮತ್ತೊಬ್ಬ ಅಭ್ಯರ್ಥಿ ನಿಲ್ಲಿಸುವುದು ಸ್ಪಷ್ಟವಾಗಿ ಬಿಜೆಪಿಗೆ ಅನುಕೂಲ ಎಂಬುದು ಕಾಂಗ್ರೆಸ್ ರಾಜ್ಯ, ರಾಷ್ಟ್ರ ನಾಯಕರಿಗೂ ತಿಳಿಯದ ವಿಷಯವೇನಲ್ಲ.
ತಕ್ಷಣ ಕೇಳಿ ಬರುವ ಒಂದು ಪ್ರಶ್ನೆ, ಪ್ರಕಾಶ್ ರಾಜ್ ಕಾಂಗ್ರೆಸ್ ನಿಂದಲೇ ಸ್ಪರ್ಧಿಸಬಹುದಿತ್ತು. ಆಗ ಕಾಂಗ್ರೆಸ್ ಬೆಂಬಲಿಸಬಹುದಿತ್ತು. ಆದರೆ ಇದು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬೆಂಬಲಿಗರ ಬಯಕೆಯಾದರೂ ಪಾಲಿಸಿಯೇನಲ್ಲ. 2017ರಲ್ಲಿ ಗುಜರಾತ್ ನಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ವಡಗಾಂವ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಲಿತ ಯುವ ನೇತಾರ ಜಿಗ್ನೇಶ್ ಮೇವಾನಿಗೆ ‘ತಮ್ಮ ಅಭ್ಯರ್ಥಿಯನ್ನು’ ಕಣದಿಂದ ಹಿಂದೆ ಸರಿಯುವಂತೆ ಮಾಡಿ ಬೆಂಬಲ ನೀಡಿದ್ದು ಕಾಂಗ್ರೆಸ್ ಪಕ್ಷವೇ. ಇದರಿಂದ ಕಾಂಗ್ರೆಸ್ಗೆ ತನ್ನದೆನ್ನುವ ಒಬ್ಬ ಅಭ್ಯರ್ಥಿ ನಷ್ಟವಾದರೂ ರಾಷ್ಟ್ರ ಮಟ್ಟದಲ್ಲಿ ಗಳಿಸಿಕೊಂಡ ಗೌರವ ಹೆಚ್ಚಾಗಿತ್ತಲ್ಲದೇ, ಬಿಜೆಪಿ ವಿರುದ್ಧ ಯಾರೂ ಮಾತೇ ಆಡಲಾರರೆನ್ನುವ ಸ್ಥಿತಿಯಲ್ಲಿ ಗುಜರಾತಿನಿಂದಲೇ ಬಂದ ದಲಿತ ಧ್ವನಿಯಾದ ಜಿಗ್ನೇಶ್ ಮೇವಾನಿಯನ್ನು ಬೆಂಬಲಿಸುವ ಮೂಲಕ ಬಿಜೆಪಿಯ ಸ್ಥೈರ್ಯವನ್ನೇ ಕುಗ್ಗಿಸಲಾಗಿತ್ತು. ಬಿಜೆಪಿಯನ್ನು ಮಣಿಸಬೇಕು ಎನ್ನುವ ಉದ್ದೇಶ ಈಡೇರುವುದರ ಜೊತೆಗೆ ಸೈದ್ಧಾಂತಿಕ ಕಾರಣಗಳಿಂದಾಗಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಒಪ್ಪಿಕೊಂಡು ಅದಕ್ಕೆ ಸೇರ್ಪಡೆಯಾಗಲು ಸಾಧ್ಯವಿಲ್ಲ ಎನ್ನುವ ಜಿಗ್ನೇಶ್ ಗೂ ಸಹಕಾರಿಯಾಗಿತ್ತು. ಈ ವಿಷಯದಲ್ಲಿ ಕಾಂಗ್ರೆಸ್ ಅದರಲ್ಲೂ ರಾಹುಲ್ ಗಾಂಧಿ ತೋರಿದ್ದ ಪ್ರಬುದ್ಧತೆ ದೇಶದಾದ್ಯಂತ ಮೆಚ್ಚುಗೆಗೆ ಒಳಗಾಗಿತ್ತು.
ಆದರೆ ಅಂತಹುದೇ ಒಂದು ಅವಕಾಶವನ್ನು ಕಾಂಗ್ರೆಸ್ ಕರ್ನಾಟಕದಲ್ಲಿ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕೈಚೆಲ್ಲಿದೆ. ರಾಹುಲ್ ಗಾಂಧಿ, ವೇಣೂಗೋಪಾಲ್ ಆದಿಯಾಗಿ ರಾಜ್ಯದ ನಾಯಕತ್ವವೂ ಬೆಂಗಳೂರೂ ಸೆಂಟ್ರಲ್ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಸು ತೋರಿದ್ದರೂ ಕೆಲ ರಾಜ್ಯ ಕಾಂಗ್ರೆಸ್ ನಾಯಕರು ಒಪ್ಪದ ಕಾರಣದಿಂದ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಇನ್ನು ಬೆಂಗಳೂರು ಸೆಂಟ್ರಲ್ ಕ್ಷೇತ್ರ ಮುಸ್ಲಿಮರಿಗೆ ಕಾಂಗ್ರೆಸ್ ಮೀಸಲಾಗಿಡುವ ಕ್ಷೇತ್ರ ಎಂಬ ಬಗ್ಗೆ ಹೇಳುವುದಾದರೆ, ಇಂದು ಇರುವ ರಾಷ್ಟ್ರಮಟ್ಟದ ಪರಿಸ್ಥಿತಿಯ ಬಗ್ಗೆ ಗಂಭೀರ ಅವಗಾಹನೆ ಬೇಕಿದೆ. 2019ರ ಚುನಾವಣೆಯಲ್ಲಿ ನಿಜಕ್ಕೂ ಗೆಲ್ಲಬೇಕಿರುವುದು ದೇಶದ ಸಂವಿಧಾನವೇ ಹೊರತು ಯಾವ ರಾಜಕೀಯ ಪಕ್ಷ, ಯಾವ ಧರ್ಮ, ಯಾವ ಜಾತಿ ಎನ್ನುವುದು ಹಿಂಬದಿ ಸೀಟು ಪಡೆಯಬೇಕಾಗಿದೆ. ಪ್ರಕಾಶ್ ರಾಜ್ ಮುಸ್ಲಿಮರಲ್ಲದಿರಬಹುದು, ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಒಬ್ಬ ಮುಸ್ಲಿಂ ಅಭ್ಯರ್ಥಿ ಎಷ್ಟರ ಮಟ್ಟಿಗೆ ಮುಸ್ಲಿಮರನ್ನು ಪ್ರತಿನಿಧಿಸಬಲ್ಲನೋ ಅಷ್ಟೇ ಮಟ್ಟದಲ್ಲಿ ಮುಸ್ಲಿಮರನ್ನು ಪ್ರಕಾಶ್ ರಾಜ್ ಸಹ ಪ್ರತಿನಿಧಿಸಬಲ್ಲರು. ಅಷ್ಟಕ್ಕೂ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯಾದ ಕೂಡಲೇ ಗೆದ್ದುಬಿಡುವ ಸಾಧ್ಯತೆಯೂ ಇಲ್ಲವಲ್ಲ.
ಇದರ ನಡುವೆ, ಪ್ರಕಾಶ್ ರಾಜ್ ಇಡೀ ರಾಜ್ಯಕ್ಕೆ ಮಾದರಿ ಆಗಬಹುದಾದಂತಹ ಒಂದು ನಮೂನೆಯ ಸ್ಪರ್ಧೆಯನ್ನು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಒಡ್ಡುತ್ತಿರುವುದೂ ಮುಖ್ಯವಾಗಿದೆ. ಬಿಜೆಪಿ ಪುಲ್ವಾಮಾ, ಪಾಕಿಸ್ತಾನ ಎಂದು ಬಡಬಡಿಸುತ್ತಾ, ಹಿಂದೂ-ಮುಸ್ಲಿಂ ಬೈನರಿ ಬಲಗೊಳಿಸುತ್ತಾ ಚುನಾವಣೆ ಎದುರಿಸುತ್ತಿದ್ದರೆ, ಮಿಕ್ಕ ಪಕ್ಷಗಳು ಅದೇ ವಿಷಯಗಳಿಗೆ ಪ್ರತಿಕ್ರಿಯಿಸುತ್ತಾ ಇರುವಾಗ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಜನಸಾಮಾನ್ಯರ ಸಮಸ್ಯೆ, ಬೇಡಿಕೆಗಳನ್ನು ಮುಂದೆ ಮಾಡಿ, ನಿಜವಾದ ಜನಪ್ರತಿನಿಧಿತ್ವ ತತ್ವವನ್ನು ಮುಂದೆ ಮಾಡಿಕೊಂಡು ಚುನಾವಣಾ ಪ್ರಚಾರ ಮಾಡುತ್ತಿರುವ ಪ್ರಕಾಶ್ ರಾಜ್ ಚಿಂತನೆ ಮತ್ತು ಶ್ರಮವನ್ನು ಸಹ ಗುರುತಿಸಬೇಕಾಗಿದೆ.
ಕೊಳಗೇರಿ ನಿವಾಸಿಗಳ ಸಮಸ್ಯೆಗಳು, ನೀರಿನ ಸಮಸ್ಯೆ, ಕೆರೆಗಳನ್ನು ಉಳಿಸುವ ಬದ್ಧತೆ, ಬೆಂಗಳೂರಿನಲ್ಲಿ ದಿನನಿತ್ಯ ಟನ್ ಗಟ್ಟಲೆ ಸೃಷ್ಟಿಯಾಗುವ ಕಸ ಸಮಸ್ಯೆ ನಿರ್ವಹಣೆ, ಅಮಾನವೀಯವಾದ ಮಲಹೊರುವ ಪದ್ಧತಿಯ ವಿರುದ್ಧ, ಪೌರಕಾರ್ಮಿಕರ ಹಕ್ಕುಗಳು, ಪರವಾಗಿ, ಬಡವರಿಗೆ ಶಿಕ್ಷಣ, ಕೋಮು ಸೌಹಾರ್ದತೆ, ಇವೆಲ್ಲವನ್ನೂ ಚುನಾವಣಾ ಆದ್ಯತೆಯ ವಿಷಯಗಳಾಗಿ ಜನರ ಮುಂದೆ ಕೊಂಡೊಯ್ಯುತ್ತಿರುವ ಎಷ್ಟು ಅಭ್ಯರ್ಥಿಗಳು ಇಡೀ ರಾಜ್ಯದ ಚುನಾವಣಾ ಕಣದಲ್ಲಿದ್ದಾರೆ ಯಾರಾದರೂ ಹೇಳಬಹುದುದೇ?
ಕೇಂದ್ರದಲ್ಲಿ 2019ರಲ್ಲಿ ಸಹ ಯಾವ ಒಂದೇ ಪಕ್ಷ ಸಂಪೂರ್ಣ ಬಹುಮತ ಪಡೆದು ಸರ್ಕಾರ ರಚಿಸಲಾರದ ಸ್ಥಿತಿ ಇದೆ. ಕಾಂಗ್ರೆಸ್ ಪಕ್ಷ ಇರುವ ಸ್ಥಿತಿಯಲ್ಲಿ ಇದು ಇನ್ನಷ್ಟು ಸ್ಪಷ್ಟ. ಹೀಗಿರುವಾಗ ಕಾಂಗ್ರೆಸ್ ತನ್ನದೇ ಅಭ್ಯರ್ಥಿ ನಿಲ್ಲಿಸಿ ಸೋತು, ಕೇಂದ್ರದಲ್ಲಿ ಬಿಜೆಪಿಗೆ ಒಂದು ಸೀಟು ಹೆಚ್ಚಿಸಬೇಕೋ ಅಥವಾ ಪ್ರಕಾಶ್ ರಾಜ್ ರಂತಹ ಗಟ್ಟಿ, ಸ್ವತಂತ್ರ ಅಭ್ಯರ್ಥಿಗೆ ಬೆಂಬಲಿಸಿ ಕೇಂದ್ರದಲ್ಲಿ ತನ್ನ ಪರವಾದ ಮೈತ್ರಿಗೆ ಒಂದು ಸೀಟು ಹೆಚ್ಚಿಸಿಕೊಳ್ಳಬೇಕೋ ತೀರ್ಮಾನ ಮಾಡಬೇಕು.
ಬಹುಶಃ ಪ್ರಕಾಶ್ ರಾಜ್ ಮತ್ತು ಸಿದ್ದರಾಮಯ್ಯ ಇಬ್ಬರಿಗೂ ಆಪ್ತರಾಗಿದ್ದ ಗೌರಿ ಲಂಕೇಶ್ ಈ ಹೊತ್ತಿನಲ್ಲಿ ಇದ್ದಿದ್ದರೆ ಪ್ರಕಾಶ್ ರಾಜ್ ಪರವಾಗಿ ಸಿದ್ದರಾಮಯ್ಯ ಅವರ ಮನವೊಲಿಸುವಲ್ಲಿ ಸಫಲರಾಗುತ್ತಿದ್ದರು…