ಭಾರತದ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್, ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞ ರಘುರಾಂ ರಾಜನ್ , ತಾವು ಬರೆದಿರುವ ‘ದ ಥರ್ಡ್ ಪಿಲ್ಲರ್’ ಎಂಬ ಕೃತಿಯ ಬಿಡುಗಡೆ ಸಂದರ್ಭದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಭಾರತದ ಆರ್ಥಿಕತೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
‘ಭಾರತದ ಆರ್ಥಿಕತೆ 7% ಜಿಡಿಪಿ ದರದಲ್ಲಿ ಬೆಳೆಯುತ್ತಿದೆ ಎಂದು ಹೇಳಲಾಗುತ್ತಿದೆ, ಆದರೆ ಉದ್ಯೋಗಗಳೇ ಸೃಷ್ಟಿಯಾಗದೇ ಜಿಡಿಪಿ ಬೆಳವಣಿಗೆ ಸಾಧ್ಯವಿಲ್ಲ. ಹೀಗಾಗಿ ಈಗ ತೋರಿಸಲಾಗುತ್ತಿರುವ ಜಿಡಿಪಿ ದರದ ಸತ್ಯಾಸತ್ಯತೆಯ ಕುರಿತಾಗಿಯೇ ಒಂದು ನಿಷ್ಪಕ್ಷಪಾತಿ ಸಮಿತಿಯೊಂದನ್ನು ನೇಮಿಸಿ ನೈಜ ಅಂಕಿಅಂಶಗಳನ್ನು ಪರೀಕ್ಷಿಸಿ, ವಾಸ್ತವ ಏನೆಂದು ದೇಶದ ಮುಂದಿಡುವ ಅಗತ್ಯವಿದೆ’ ಎಂದು ರಘುರಾಂ ರಾಜನ್ ತಿಳಿಸಿದ್ದಾರೆ.
ಐಎಂಎಫ್ ನಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞನಾಗಿ ಸೇವೆ ಸಲ್ಲಿಸಿರುವ ರಘುರಾಮ್ ರಾಜನ್ ಭಾರತದ ಆರ್ಥಿಕ ಪರಿಸ್ಥಿತಿಯ ಬಗ್ಗೆ ನೀಡಲಾಗುತ್ತಿರುವ ಅಂಕಿಅಂಶಗಳು ನಿಜಕ್ಕೂ ಏನು ಹೇಳುತ್ತಿವೆ ಎಂಬ ಬಗ್ಗೆ ನನಗೆ ತಿಳಿಯುತ್ತಿಲ್ಲ, ಭಾರತದ ನಿಜವಾದ ಅಭಿವೃದ್ಧಿ ದರ ಏನಾಗಿದೆ ಎಂಬ ಬಗ್ಗೆ ಪುನರ್ ಪರಶೀಲತೆ ತುರ್ತಾಗಿ ಅಗತ್ಯವಿದೆ ಎಂದು ಅವರು ಮಂಗಳವಾರ ಸಂದರ್ಶನದಲ್ಲಿ ಹೇಳಿದ್ದಾರೆ.
“ಸಚಿವರೊಬ್ಬರು (ನರೇಂದ್ರ ಮೋದಿ ಸರ್ಕಾರದ) ನನ್ನ ಬಳಿ ಮಾತಾಡುತ್ತಾ, ‘ಉದ್ಯೋಗಗಳನ್ನೇ ಸೃಷ್ಟಿಸದೇ ನಾವು 7% ಅಭಿವೃದ್ಧಿ ಸಾಧಿಸುವುದು ಹೇಗೆ ಸಾಧ್ಯ? ಒಂದು ಸಾಧ್ಯತೆ ಏನೆಂದರೆ ನಾವು 7% ದರದಲ್ಲಿ ಅಭಿವೃದ್ಧಿ ಹೊಂದುತ್ತಿಲ್ಲ’ ಎಂದು ಹೇಳಿದ್ದರು” ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ. ಆ ಸಚಿವರ ಹೆಸರು ಹೇಳಲು ಅವರು ನಿರಾಕರಿಸಿದ್ದಾರೆ.
ಭಾರತದಲ್ಲಿ ಅಭಿವೃದ್ಧಿ, ನಿರುದ್ಯೋಗ ಇತ್ಯಾದಿಗಳಿಗೆ ಸಂಬಂಧಿಸಿದ ಅಂಕಿಅಂಶಗಳ ವಿಷಯದಲ್ಲಿ ಸಾಕಷ್ಟು ಗೊಂದಲ ತಲೆದೋರಿರುವ ಹಿನ್ನೆಲೆಯಲ್ಲಿ ರಾಜನ್, “ಈ ಪರಿಸ್ಥಿತಿಯಲ್ಲಿ ದೇಶದಲ್ಲಿ ಉಂಟಾಗಿರುವ ಗೊಂದಲಗಳ ಮೂಲಗಳನ್ನು ಶೋಧಿಸಿಕೊಳ್ಳಬೇಕು, ನನ್ನ ಪ್ರಕಾರ ಒಂದು ನಿಷ್ಪಕ್ಷಪಾತಿಯಾದ ಸಮಿತಿಯೊಂದನ್ನು ನೇಮಿಸಿ, ಆ ಮೂಲಕ ಅಂಕಿ ಅಂಶಗಳ ವಿಷಯದಲ್ಲಿ ಹೊಸ ವಿಶ್ವಾಸ ಮೂಡಿಸುವ ಕೆಲಸವಾಗಬೇಕು” ಎಂದು ಹೇಳಿದ್ದಾರೆ.
2013ರಿಂದ 2016ರ ನಡುವೆ ಆರ್ ಬಿ ಐ ಗವರ್ನರ್ ಆಗಿದ್ದ ರಘುರಾಮ್ ರಾಜನ್, ದೇಶದಲ್ಲಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬಲ್ಲಂತಹ, ಇನ್ನೂ ಬಲಿಷ್ಠ ವಿಶಾಲ ತಳಹದಿಯ ಬೆಳವಣಿಗೆ ಅಗತ್ಯವಿದೆ ಎಂದಿದ್ದಾರೆ.
“ಬಹುತೇಕ ಜನತೆಗೆ ಬೆಳವಣಿಗೆ ಎಂದರೆ ಉತ್ತಮ ಉದ್ಯೋಗವೇ ಆಗಿದೆ. ಶಾಲಾ ಕಾಲೇಜುಗಳಿಂದ ಹೊರಬರುತ್ತಿರುವ, ವಿಶ್ವವಿದ್ಯಾಲಯಗಳಿಂದ, ಕೃಷಿ ಕ್ಷೇತ್ರದಿಂದ, ಹೊರಬರುತ್ತಿರುವ ದೊಡ್ಡ ಸಂಖ್ಯೆಯ ಯುವ ಜನರಿಗೆ ಉತ್ತಮ ಉದ್ಯೋಗಗಳನ್ನು ಸೃಷ್ಟಿಸುವ ಕಡೆಗೆ ನಾವು ಗಮನ ಕೇಂದ್ರೀಕರಿಸಬೇಕಿದೆ. ಆ ಮೂಲಕವೇ ಭಾರತದ ಬೆಳವಣಿಗೆಯನ್ನು ವಿಸ್ತರಿಸಬಹುದಾಗಿದೆ. ನಮಗೆ ಇನ್ನಷ್ಟು ಬಲಿಷ್ಟ, ವಿಶಾಲ ತಳಹದಿಯ ಬೆಳವಣಿಗೆ ಅಗತ್ಯವಿದೆ” ಎಂದು ರಾಜನ್ ಹೇಳಿದ್ದಾರೆ.
‘ಜನಸಂಖ್ಯೆಯ ಲಾಭ ನಮಗೆ ಜನಸಂಖ್ಯೆಯ ಶಾಪವಾಗಿ ಪರಿಣಮಿಸಬಾರದು ಎಂದು ಬಹಳ ಮಂದಿ ಹೇಳಿದ್ದಾರೆ. ಆಂತಹದ್ದು ನಿಜವಾಗಿಯೂ ಸಂಭವಿಸದಂತೆ ನೋಡಿಕೊಳ್ಳುವ ಸಮಯ ಈಗ ನಿಜಕ್ಕೂ ಬಂದಿದೆ” ಎಂದವರು ಹೇಳಿದ್ದಾರೆ.
“ನೋಟ್ ಬ್ಯಾನ್ ಬಗ್ಗೆ ಪುನರವಲೋಕನ ಬೇಕು”
ಇದೇ ಸಂದರ್ಭದಲ್ಲಿ ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ರಘುರಾಮ್ ರಾಜನ್, ಭಾರತ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ನೋಟ್ ಬ್ಯಾನ್ ನಂತಹ ತೀರ್ಮಾನದ ಬಗ್ಗೆ ಪುನರವಲೋಕನದ ಅಗತ್ಯವಿದೆ’ ಎಂದೂ ರಾಜನ್ ಅಭಿಪ್ರಾಯಪಟ್ಟಿದ್ದಾರೆ.
“ಡಿಮಾನಿಟೈಸೇಶನ್ ಕುರಿತು ಹಿಂತಿರುಗಿ ನೋಡಲು ಬೇಕಾದಷ್ಟು ಸಮಯವಾಗಿದೆ. ಅದರಿಂದ ನಾವು ಕಲಿತದ್ದೇನು? ಅದು ಕೆಲಸ ಮಾಡಿತೇ, ಇಲ್ಲವೇ? ಅದರ ಸಕಾರಾತ್ಮಕ ಅಂಶಗಳೇನು, ನಕಾರಾತ್ಮಕ ಅಂಶಗಳೇನು… ಎಂದು ನೋಡಬೇಕು. ಉತ್ತಮ ಆಡಳಿತ ಹಾಗೂ ದಕ್ಷ ಆಡಳಿತಕ್ಕಾಗಿ ಯಾವುದೇ ಸರ್ಕಾರ ಸ್ವಯಂ ಪರೀಕ್ಷೆ ನಡೆಸಿಕೊಳ್ಳಬೇಕು” ಎಂದು ಪ್ರಸಿದ್ಧ ಅರ್ಥಶಾಸ್ತ್ರಜ್ಞ ಹೇಳಿದ್ದಾರೆ.
ಎನ್ಎಸ್ಎಸ್ಒ ಸೂಚಿಸಿದ ನಿರುದ್ಯೋಗ ದತ್ತಾಂಶಗಳ ಕುರಿತು ಪ್ರತಿಕ್ರಿಯಿಸಿದ ರಘುರಾಮ ರಾಜನ್ “ವಿಶ್ವಾಸಾರ್ಹ ಅಂಕಿಅಂಶಗಳ ಅಗತ್ಯವಿದೆ ಎಂದಿದ್ದಾರೆ. “ಒಂದು ರೀತಿಯ ಆತಂಕ ಮನೆಮಾಡಿರುವ ಹೊತ್ತಿನಲ್ಲಿ, ನಾವು ಯಾವುದೇ ಅಂಕಿಅಂಶಗಳನ್ನು ದುರ್ಬಳಕೆ ಮಾಡುತ್ತಲ್ಲ, ಅಥವಾ ತಿರುಚುತ್ತಿಲ್ಲ ಎಂದು ವಿಶ್ವಸಮುದಾಯಕ್ಕೆ ಮನವರಿಕೆ ಮಾಡಿಕೊಡುವ ಜರೂರಿದೆ.. ನಮ್ಮ ಡೇಟಾ ಹೀಗಿದೆ ನೋಡಿ.. ಎಂದು ಯಾವುದಾದರೂ ಸ್ವತಂತ್ರ ತಂಡವೊಂದರ ಮುಂದಿಟ್ಟು ನಮ್ಮ ಅಂಕಿಅಂಶಗಳು ಸರಿ ಇವೆಯೇ ಇಲ್ಲವೇ ಎಂಬುದನ್ನು ನೋಡಿ ಎಂದು ಹೇಳುವ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ. “ಅಂಕಿ ಅಂಶಗಳ ವಿಷಯದಲ್ಲಿ ಭಾರತ ಒಳ್ಳೆಯ ಹೆಸರನ್ನು ಇದುವರೆಗೆ ಪ್ರಪಂಚ ಮಟ್ಟದಲ್ಲಿ ಉಳಿಸಿಕೊಂಡು ಬಂದಿದೆ” ಎಂದು ಹೇಳಿದ್ದಾರೆ. “ಈ ಕಾರಣದಿಂದಲೇ ಸ್ವತಂತ್ರ ತಜ್ಞರರನ್ನು ಈ ಅಂಕಿ ಅಂಶಗಳನ್ನು ಪರಿಶೀಲಿಸಿ ವಸ್ತುಸ್ಥಿತಿಯನ್ನು ಮುಂದಿಡಲು ಕ್ರಮ ಕೈಗೊಳ್ಳಬೇಕು… ನಾವು ಈ ವಿಷಯದಲ್ಲಿ ಬಹಳ ಹುಷಾರಾಗಿ ಹೆಜ್ಜೆ ಇಡಬೇಕಾಗಿದೆ” ಎಂದು ರಾಜನ್ ಹೇಳಿದ್ದಾರೆ.
ರ್ ಬಿ ಐನ ಗವರ್ನರ್ ಆಗಿ ರಘುರಾಂ ರಾಜನ್ ಅವರ ಅವಧಿ ಮುಗಿದ ಸಂದರ್ಭದಲ್ಲಿ ಮೋದಿ ಸರ್ಕಾರವು ಅವರನ್ನು ಎರಡನೆಯ ಅವಧಿಗೆ ಮುಂದುವರಿಸಲು ನಿರಾಕರಿಸಿತ್ತು.
“ಈಗ ನಾನು ಇರುವ ಕಡೆ ಸಂತೋಷದಿಂದ ಇದ್ದೇನೆ, ಆದರೆ ಭವಿಷ್ಯವದಲ್ಲಿ ಯಾವುದೇ ಅವಕಾಶ ಬಂದರೂ ಮುಕ್ತವಾಗಿದ್ದೇನೆ” ಎಂದು ಸಹ ಹೇಳಿದ್ದಾರೆ. ಸಧ್ಯ ರಘುರಾಂ ರಾಜನ್ ಅವರು ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ಹಲವಾರು ಕಠಿಣ ಕ್ರಮಗಳನ್ನು ರಘುರಾಮ್ ರಾಜನ್ ಕೈಗೊಂಡಿದ್ದನ್ನು ಸ್ಮರಿಸಬಹುದು.