ಈ ಬಾರಿ ಒಂದು ಕಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ಗರೀಬಿ ಹಠಾವೋ 0.2’ ಸೇರಿದಂತೆ ದೇಶದ ಬಡವರು ಮತ್ತು ಕೃಷಿಕರ ಬದುಕಿನ ಸುಧಾರಣೆಯ ನಿಟ್ಟಿನಲ್ಲಿ ಕೆಲವು ಭರವಸೆಗಳನ್ನು ನೀಡಿದ್ದಾರೆ. ಒಂದು ವೇಳೆ ಅವರ ಪಕ್ಷ ಅಧಿಕಾರಕ್ಕೆ ಬಂದರೆ ಆ ಭರವಸೆಗಳನ್ನು ಎಷ್ಟರಮಟ್ಟಿಗೆ ಈಡೇರಿಸುತ್ತಾರೆ ಎಂಬುದು ಬೇರೆ ಪ್ರಶ್ನೆ. ಸದ್ಯ ಚುನಾವಣಾ ಕಣದಲ್ಲಿ ನಾವಿದನ್ನು ಮಾಡಬಲ್ಲೆವು ಎಂಬ ಭರವಸೆ ಹುಟ್ಟಿಸುತ್ತಿದ್ದಾರೆ. ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ಸಿಗೆ ಅದು ಸಹಜ. ಆದರೆ, ತನ್ನ ಅಧಿಕಾರವಧಿಯ ಸಾಧನೆಗಳನ್ನು ಜನರ ಮುಂದಿಟ್ಟು ಮತ ಯಾಚಿಸಬೇಕಿದ್ದ ಬಿಜೆಪಿ ವಾಸ್ತವವಾಗಿ ಏನು ಮಾಡುತ್ತಿದೆ?
ಈ ಪ್ರಶ್ನೆ ಮುಂದಿಟ್ಟುಕೊಂಡು ಈ ಬಾರಿಯ ಚುನಾವಣಾ ಪ್ರಚಾರದ ವೈಖರಿಯನ್ನು ಗಮನಿಸಿದರೆ, ನಿಮಗೆ ವಿಚಿತ್ರ ಎನಿಸದೇ ಇರದು. 2014 ಲೋಕಸಭಾ ಚುನಾವಣೆಯಲ್ಲಿ ‘ಅಚ್ಛೇದಿನ್’, ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’, ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದುಪ್ಪಟ್ಟು ಮುಂತಾದ ಭಾರೀ ಘೋಷಣೆಯೊಂದಿಗೆ ಐದು ವರ್ಷಗಳಲ್ಲಿ ಇಡೀ ದೇಶದ ಚಿತ್ರಣವನ್ನೇ ಬದಲಾಯಿಸಿಬಿಡುವೆವು ಎಂದು ‘ಅಬ್ ಕಿ ಬಾರ್, ಮೋದಿ ಸರ್ಕಾರ್’ ಘೋಷಣೆ ಮೊಳಗಿಸಿದ್ದ ಬಿಜೆಪಿ, ಅದರಂತೆ ಭಾರೀ ಜನಾದೇಶ ಪಡೆದು ಸರ್ಕಾರವನ್ನೂ ರಚಿಸಿ, ಐದು ವರ್ಷಗಳ ಪೂರ್ಣಾವಧಿ ಆಡಳಿತವನ್ನೂ ನಡೆಸಿತು.
ಇದೀಗ ‘ಮೋದಿ ಮತ್ತೊಮ್ಮೆ’ ಎಂಬ ಘೋಷಣೆಯೊಂದಿಗೆ ಮತ್ತೊಮ್ಮೆ ತಮ್ಮನ್ನು ಗೆಲ್ಲಿಸಿ ಅಧಿಕಾರಕ್ಕೆ ತನ್ನಿ ಎಂದು ಜನರ ಮುಂದೆ ಬಂದಿದೆ. ಆದರೆ, ಪ್ರತಿಪಕ್ಷಗಳು, ಸಣ್ಣಪುಟ್ಟ ಇತರ ಪಕ್ಷಗಳು ಕೂಡ ತಮಗೆ ಯಾಕೆ ಮತ ನೀಡಬೇಕು? ತಾವು ಅಧಿಕಾರಕ್ಕೆ ಬಂದರೆ ಮುಂದೆ ಏನೇನು ಮಾಡುತ್ತೇವೆ ಎಂದು ಹೇಳಿ ಮತಯಾಚಿಸುತ್ತಿವೆ. ಆದರೆ, ಐದು ವರ್ಷ ಅಧಿಕಾರ ನಡೆಸಿದ ಬಿಜೆಪಿ, ಮುಂದೆ ಏನು ಮಾಡುತ್ತೇವೆ ಎನ್ನುವ ಬದಲಾಗಿ, 2014ರ ಕಾಂಗ್ರೆಸ್ ವಿರುದ್ಧದ ಅದೇ ಹಳಸಲು ಮಾತುಗಳನ್ನೇ ಜಪಿಸುತ್ತಿದೆ.
60 ವರ್ಷಗಳಲ್ಲಿ ಕಾಂಗ್ರೆಸ್ ಏನೂ ಮಾಡಲಿಲ್ಲ, ದೇಶದ ಸಮಸ್ಯೆಗೆಲ್ಲಾ ನೆಹರು ಕಾರಣ ಎಂಬುದನ್ನೇ ಮುಂದಿಟ್ಟುಕೊಂಡು ‘ಮತ್ತೊಮ್ಮೆ ಮೋದಿ’ ಅಧಿಕಾರಕ್ಕೆ ತನ್ನಿ ಎನ್ನುತ್ತಿದೆ. ಕನಿಷ್ಠ ಮೋದಿಯನ್ನು ಒಮ್ಮೆ ಅಭೂತಪೂರ್ವ ಜನಾದೇಶದೊಂದಿಗೆ ಗೆಲ್ಲಿಸಿದ ಬಳಿಕ ಈ ಐದು ವರ್ಷಗಳಲ್ಲಿ ಅವರು ದೇಶದ ಜನಸಾಮಾನ್ಯರಿಗಾಗಿ ಏನು ಮಾಡಿದ್ದಾರೆ? ಐದು ವರ್ಷಗಳ ಹಿಂದಿನ ತಮ್ಮ ‘ಅಚ್ಛೇದಿನ್’, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮುಂತಾದ ರಂಗುರಂಗಿನ ಘೋಷಣೆಗಳನ್ನು ನಿಜ ಮಾಡಲು ಯಾವ ಪ್ರಯತ್ನ ಮಾಡಿದ್ದಾರೆ ಎಂಬುದನ್ನು ಕೂಡ ಜನರ ಮುಂದೆ ಹೇಳುತ್ತಿಲ್ಲ.
ಬಾಲಾಕೋಟ್ ದಾಳಿ, ಪುಲ್ವಾಮಾ ದಾಳಿ, ದೇಶದ ಗಡಿ, ಭದ್ರತೆ ವಿಷಯಗಳನ್ನೇ ಮುಂದೆ ಮಾಡಿ, ಅಭಿವೃದ್ಧಿ, ಜನಕಲ್ಯಾಣ ಕಾರ್ಯಕ್ರಮ, ಯೋಜನೆ, ಆರ್ಥಿಕ ದೂರದೃಷ್ಟಿಯ ನೀತಿಗಳು, ಮುಂತಾದ ಒಂದು ದೇಶದವನ್ನು ಸಮಗ್ರವಾಗಿ ಕಟ್ಟುವ ಯಾವ ನಿರ್ದಿಷ್ಟ ಕಾರ್ಯಸೂಚಿಯೇ ಇಲ್ಲದೆ ಚುನಾವಣೆ ಗೆಲ್ಲಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದು. ದೇಶದ ಏಕೈಕ ರಕ್ಷಕ ಮೋದಿ ಎಂಬ ವರ್ಚಸ್ಸು ವೃದ್ಧಿಯ ಚಿತ್ರಣವನ್ನು ಜನರ ಮುಂದಿಟ್ಟು ‘ಮತ್ತೊಮ್ಮೆ ಮೋದಿ’ ಅಭಿಯಾನ ಆರಂಭಿಸಿದೆ. ಅದಕ್ಕೆ ಪೂರಕವಾಗಿ ಮೇ ಭೀ ಚೌಕಿದಾರ್ ಅಭಿಯಾನದಂಥವು ಚಾಲ್ತಿಗೆ ಬಂದಿವೆ.
ಐದು ವರ್ಷಗಳ ಕಾಲ ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಗುರುತಿಸುವಂತೆ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರದ, ಕನಿಷ್ಠ ರಸ್ತೆ, ಸೇತುವೆ, ನೀರು, ವಿದ್ಯುತ್, ಶಾಲೆಯಂತಹ ಮೂಲ ಸೌಕರ್ಯ ಒದಗಿಸುವ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಮೈಮರೆತ ಮತ್ತು ಕ್ಷೇತ್ರ ಮತ್ತು ಮತದಾರರ ನಿರೀಕ್ಷೆ ಮತ್ತು ಬೇಡಿಕೆಗಳನ್ನು ಬದಿಗೊತ್ತಿ ತಮ್ಮ ಸ್ವಂತ ಆದಾಯವನ್ನು ಐದೇ ಐದು ವರ್ಷದಲ್ಲಿ ನೂರಾರು ಪಟ್ಟು ವೃದ್ಧಿಸಿಕೊಳ್ಳುವಲ್ಲಿ ಹಗಲಿರುಳು ಶ್ರಮಿಸಿದ ಸಂಸದರು ಇದೀಗ ಮತ್ತೊಂದು ಚುನಾವಣೆಗೆ ಜನರ ಮುಂದೆ ಹೋಗುವಾಗ, ಬಹಳ ಸಲೀಸಾಗಿ ‘ಮತ್ತೊಮ್ಮೆ ಮೋದಿ’ ಮಂತ್ರ ಜಪಿಸತೊಡಗಿದ್ದಾರೆ.
ಕರ್ನಾಟಕದಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ ಎಂಬುದಕ್ಕೆ ಸ್ವತಃ ಬಿಜೆಪಿ ಹಿರಿಯ ನಾಯಕ, ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯೇ ಸಾಕ್ಷಿ. ಮಂಗಳವಾರ ಬೆಂಗಳೂರಿನ ಟಿಕೆಟ್ ವಂಚಿತ ನಾಯಕಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಸಾಂತ್ವನ ಹೇಳುವ ಸಂದರ್ಭದಲ್ಲಿ ಅವರು, “ಬಿಜೆಪಿಯಲ್ಲಿಯೂ ಸಾಕಷ್ಟು ಮಂದಿ ಅಯೋಗ್ಯರಿದ್ದಾರೆ. ಆದರೆ, ಮೋದಿ ಮುಖ ನೋಡಿ ಜನ ಓಟು ಹಾಕುತ್ತಿದ್ದಾರೆ” ಎಂದಿದ್ದಾರೆ. ಹಾಗೆ ನೋಡಿದರೆ, ಈ ಬಾರಿ ಕರ್ನಾಟಕದ ಮಟ್ಟಿಗೆ ಮಾತ್ರ ಬಿಜೆಪಿಯ ಒಟ್ಟು 17 ಹಾಲಿ ಸಂಸದರ ಪೈಕಿ ಬಹುತೇಕರ ವಿಷಯದಲ್ಲಿ ಈ ಮಾತು ನಿಜ.
ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಐದು ವರ್ಷಗಳಲ್ಲಿ ಜನರ ಸಮಸ್ಯೆ-ಸಂಕಟಗಳಿಗೆ ಸ್ಪಂದಿಸಿದ್ದಾರೆ. ಆ ಮೂಲಕ ಅಚ್ಛೇದಿನ್ ಅಲ್ಲದಿದ್ದರೂ, ಕನಿಷ್ಠ ಜನರ ಮುಖದರ್ಶನವನ್ನಾದರೂ ಮಾಡಿದ್ದಾರೆ ಎಂಬ ಸಮಾಧಾನಕರ ಜನಾಭಿಪ್ರಾಯ ಹೊಂದಿರುವ ಸಂಸದರ ಸಂಖ್ಯೆ ಬೆರಳೆಣಿಕೆಯಷ್ಟೂ ಇಲ್ಲ. ಮೋದಿ ಮತ್ತು ದೇಶಭಕ್ತಿಯ ಅಲೆಯ ಮೇಲೆ ತೇಲುತ್ತಿರುವ ಬಿಜೆಪಿ ಯಾರಿಗೇ ಟಿಕೆಟ್ ಕೊಟ್ಟರೂ ಈ ಬಾರಿ ರಾಜ್ಯದ ಒಟ್ಟು 28 ಸ್ಥಾನಗಳ ಪೈಕಿ 22ರಲ್ಲಿ ಗೆಲ್ಲುತ್ತೇವೆ ಎನ್ನುತ್ತಿದ್ದರೂ, ವಾಸ್ತವವಾಗಿ ಶೋಭಾ ಕರಂದ್ಲಾಜೆ, ಪ್ರತಾಪಸಿಂಹ, ಅನಂತಕುಮಾರ ಹೆಗಡೆ, ನಳೀನ್ ಕುಮಾರ್ ಕಟೀಲು ಅವರಂಥ ಬಿಜೆಪಿಯ ‘ಫೈರ್’ ಬ್ರಾಂಡ್ ಸಂಸದರ ಸ್ವಕ್ಷೇತ್ರಗಳಲ್ಲೇ ಸ್ವತಃ ಪಕ್ಷದ ಕಾರ್ಯಕರ್ತರೇ ಅವರಿಗೆ ಟಿಕೆಟ್ ನೀಡದಂತೆ ಬಂಡಾಯ ಸಾರಿದ್ದರು.
ಕೋಮು ದ್ವೇಷ, ಸಂವಿಧಾನ ವಿರೋಧಿ ಹೇಳಿಕೆ, ಕೆಲವು ಜಾತಿ-ಜನಾಂಗಗಳ ವಿರುದ್ಧದ ವಿಷ ಕಾರುವ ಮತ್ತು ಕರಾವಳಿ ಕರ್ನಾಟಕಕ್ಕೆ ಬೆಂಕಿ ಹಚ್ಚುವ ಹೇಳಿಕೆಗಳ ಮೂಲಕ ಹಿಂದುತ್ವ ಮತಬ್ಯಾಂಕ್ ಓಲೈಕೆಗೆ ಭಾರೀ ಸಾಹಸ ಮಾಡಿದ ಈ ನಾಯಕರ ಬಗ್ಗೆಯೇ ಆಯಾ ಕ್ಷೇತ್ರಗಳ ಮತದಾರರು ಅವರಿಗೆ ಟಿಕೆಟ್ ನೀಡಬೇಡಿ ಎಂದು ಬಂಡೆದಿದ್ದರು. ಆ ಮೂಲಕ ನಾಯಕರು ಸಂಸದರಾಗಿ ಕ್ಷೇತ್ರದಲ್ಲಿ ಮಾಡಬೇಕಾದ ಕೆಲಸಗಳನ್ನು ಮಾಡಿಲ್ಲ ಎಂಬುದನ್ನು ಸಾರಿ ಹೇಳಿದ್ದರು. ಕ್ಷೇತ್ರದಲ್ಲಿ ಈ ನಾಯಕರ ದರ್ಶನವೇ ಮತದಾರರಿಗೆ ಇಲ್ಲ ಎಂಬ ದೂರುಗಳೂ ಕೇಳಿಬಂದಿದ್ದವು. ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ, ಮೈಸೂರು ಸಂಸದ ಪ್ರತಾಪಸಿಂಹ ಅವರ ವಿಷಯದಲ್ಲಿ ಪ್ರಮುಖವಾಗಿ ಜನರಿಗಿದ್ದ ಆಕ್ರೋಶವೇ ಅವರು ಒಮ್ಮೆ ಗೆದ್ದು ಹೋದವರು, ಮತ್ತೆ ಹಳ್ಳಿಗಳತ್ತ ತಿರುಗಿ ನೋಡಿಲ್ಲ ಎಂಬುದಾಗಿತ್ತು.
ಹಾಗೇ, ಶಿವಮೊಗ್ಗ ಕ್ಷೇತ್ರಕ್ಕೆ ಕಳೆದ ನವೆಂಬರಿನಲ್ಲಿ ನಡೆದ ಉಪಚುನಾವಣೆಗೆ ಮುನ್ನ ನಾಲ್ಕು ವರ್ಷ ಕಾಲ ಸಂಸದರಾಗಿದ್ದ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಬಗ್ಗೆಯೂ ಅದೇ ಆರೋಪವಿತ್ತು. ಕ್ಷೇತ್ರದಲ್ಲಿ ಹತ್ತಾರು ಗಂಭೀರ ಸಮಸ್ಯೆಗಳಿದ್ದರೂ, ಅರಣ್ಯಹಕ್ಕು, ಬಗರ್ ಹುಕುಂ ಮುಂತಾದ ಜನರ ಬದುಕಿಗೆ ಸಂಬಂಧಿಸಿದ ಬಿಕ್ಕಟ್ಟುಗಳ ವಿಷಯದಲ್ಲಿ ಸಂಸದರು ಎಂದೂ ಸರ್ಕಾರದ ಮಟ್ಟದಲ್ಲಿ ಮಾತನಾಡುವ ಪ್ರಯತ್ನ ಮಾಡಲಿಲ್ಲ ಎಂಬ ತೀವ್ರ ಅಸಮಾಧಾನವಿತ್ತು. ಇದೇ ಅಸಮಾಧಾನ ಬಿಜೆಪಿಯ ಬೀದರ್ ಸಂಸದ ಭಗವಂತ ಖೂಬಾ, ಹಾವೇರಿ ಸಂಸದ ಶಿವಕುಮಾರ ಉದಾಸಿ, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ಬೆಂಗಳೂರು ಉತ್ತರ ಕ್ಷೇತ್ರದ ಡಿ ವಿ ಸದಾನಂದ ಗೌಡ, ಕೊಪ್ಪಳ ಸಂಸದ ಸಂಗಣ್ಣ ಕರಡಿ ವಿರುದ್ಧವೂ ಇದೆ.
ಐದು ವರ್ಷಗಳ ಕಾಲ ತಮ್ಮದೇ ಸರ್ಕಾರವಿದ್ದೂ, ಕೆಲವರು ತಾವೇ ಸ್ವತಃ ಸಚಿವರೂ ಆಗಿದ್ದೂ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಅಸೀಮ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಜನರ ಆಕ್ರೋಶಕ್ಕೆ ಕಾರಣ. ಆದರೆ, ಕೋಮುವಾದದ ಬಲದ ಮೇಲೆ ಮತ ಪಡೆಯುವ ತಂತ್ರಗಾರಿಕೆಯಲ್ಲಿ ನಂಬಿಕೆ ಇಟ್ಟಿರುವ ಈ ಜನನಾಯಕರಿಗೆ ಈ ಬಾರಿ ‘ಮತ್ತೊಮ್ಮೆ ಮೋದಿ’ ಮಂತ್ರ ಹೊಸ ಗುರಾಣಿಯಾಗಿ ಒದಗಿಬಂದಿದೆ. ಮೋದಿ ಮಂತ್ರದ ಮುಖವಾಡದಲ್ಲಿ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜನರ ಮುಂದೆ ನೈಜ ಅಭಿವೃದ್ಧಿಯ ವಿಷಯಗಳೇ ಬರದಂತೆ, ದೇಶದ ಗಡಿ, ಭಯೋತ್ಪಾದನೆ, ಭದ್ರತೆ ಮತ್ತು ಮೋದಿ ವರ್ಚಸ್ಸನ್ನು ಎದುರು ಹಿಡಿದಿದ್ದಾರೆ.
‘ವ್ಯಕ್ತಿ ವಿಜೃಂಭಣೆ’ ಮತ್ತು ‘ದೇಶಭಕ್ತಿ’ ಎಂಬ ಈ ಅಸ್ತ್ರಗಳು, ಬಿಜೆಪಿಯ ವೈಫಲ್ಯಗಳನ್ನಷ್ಟೇ ಅಲ್ಲದೆ, ‘ಅಚ್ಛೇದಿನ್’, ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮತ್ತಿತರ ಈ ಹಿಂದಿನ ಅವರ ಭಾರೀ ಭರವಸೆಯ ಘೋಷಣೆ ಮತ್ತು ಅವುಗಳ ಹೀನಾಯ ಸೋಲನ್ನೂ ಮರೆಮಾಚುವಲ್ಲಿ ಯಶಸ್ವಿಯಾಗುತ್ತಿವೆ. ಹಾಗಾಗಿ, ಇದು ಬಿಜೆಪಿ ಪಾಲಿಗೆ ಮತ್ತೊಂದು ಹೊಸ ಪ್ರಯೋಗದ ಚುನಾವಣೆ. ಮತದಾರರಿಗೆ ಮಂಕಿಬೂದಿ ಎರಚುವ ಹೊಸ ಅಸ್ತ್ರದ ಪ್ರಯೋಗ ಶಾಲೆ.
Bullshit biased article pls read the manifesto of 2014 and tick how many promises are got full filled then write one more article??? People are not fool. They know what has done in last 5 years