ಭಾರತದಲ್ಲಿ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಶೋಧಿಸುವ ಹೆಮ್ಮೆಯ ಸಾರ್ವಜನಿಕ ವಲಯದ ಸಂಸ್ಥೆ ONGC (ಆಯಿಲ್ & ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್). ಭಾರತ ಸರ್ಕಾರದ ಅಧೀನದಲ್ಲಿರುವ, ಸಾಲವನ್ನೇ ಅರಿಯದಂತಿದ್ದ ಆಯಕಟ್ಟಿನ ಲಾಭದಾಯಕ ಸಂಸ್ಥೆಯಾಗಿದ್ದ ONGC, ನಗದು ಸಮೃದ್ಧ ಕಂಪನಿಗಳ ಪೈಕಿ ಮುಂಚೂಣಿಯಲ್ಲಿತ್ತು. ಅದನ್ನೀಗ ಮೋದಿ ಸರ್ಕಾರ ಸಂಪೂರ್ಣವಾಗಿ ಹಿಂಡಿ ಹಿಪ್ಪೆಮಾಡಿಬಿಟ್ಟಿದೆ.
ದೇಶದ ಅತ್ಯಂತ ಲಾಭದಾಯಕ ಸಾರ್ವಜನಿಕ ಸ್ವಾಮ್ಯದ ಕಂಪನಿಗಳಲ್ಲಿ ಪ್ರಮುಖವಾಗಿದ್ದ ಒಎನ್ಜಿಸಿ ಮೇಲೆ ಸಾಲದ ಪರ್ವತವನ್ನೇ ಹೊರಿಸಿದೆ ಮೋದಿ ಸರ್ಕಾರ. ಇದಕ್ಕೆ ಕಾರಣವಾಗಿದ್ದು ಮಾತ್ರ ಮೋದಿಯ ಮತ್ತು ಅವರ ಮಿತ್ರರ ಸ್ವಾರ್ಥ ಎಂಬುದು ಸ್ಪಷ್ಟ.
ಸಾರ್ವಜನಿಕ ಉದ್ದಿಮೆಯಾಗಿ 1956ರಲ್ಲಿ ಸ್ಥಾಪನೆಗೊಂಡ ONGC, ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ. ಭಾರತದ ಇಂಧನ ಕ್ಷೇತ್ರವನ್ನು ಸುಭದ್ರಗೊಳಿಸಿರುವ ONGC, ದೇಶದ ಶೇ.70ರಷ್ಟು ಕಚ್ಚಾತೈಲವನ್ನು ಮತ್ತು ಶೇ.62ರಷ್ಟು ನೈಸರ್ಗಿಕ ಅನಿಲವನ್ನು ಉತ್ಪಾದಿಸಿ, ರಾಷ್ಟ್ರದ ಒಟ್ಟು ಬೇಡಿಕೆಯ ಶೇ.30ರಷ್ಟು ಪೂರೈಸುತ್ತದೆ. 2016-17ರಲ್ಲಿ ಅತಿದೊಡ್ಡ ಲಾಭದಾಯಕ ಸಾರ್ವಜನಿಕ ಉದ್ದಿಮೆ ಎಂಬ ಹೆಗ್ಗಳಿಕೆಗೆ ONGC ಪಾತ್ರವಾಗಿತ್ತು.
ಸಾರ್ವಜನಿಕ ಸಂಸ್ಥೆಗಳ ವೈರಿ ಉದಾರೀಕರಣ
90ರ ದಶಕದಲ್ಲಿ ಭಾರತಕ್ಕೆ ದಾಪುಗಾಲಿಟ್ಟ ಉದಾರೀಕರಣ ನೀತಿ, ಸಾರ್ವಜನಿಕ ಉದ್ದಿಮೆಗಳನ್ನು ಕೊರೆಯಲಾರಂಭಿಸಿತು. ಲಾಭದಲ್ಲಿದ್ದ ಸಾರ್ವಜನಿಕ ತೈಲೋದ್ಯಮವನ್ನು ಖಾಸಗಿ ಉದ್ಯಮಪತಿಗಳಿಗೆ ಧಾರೆಯೆರೆಯಲು ಹೆಜ್ಜೆಹಾಕಿದ ಕಾಂಗ್ರೆಸ್ ಸರ್ಕಾರ ONGCಯನ್ನು ಮುಳುಗಿಸಲು ಚೌಕಟ್ಟು ನಿರ್ಮಿಸಿತು. ONGC ಅಭಿವೃದ್ಧಿಪಡಿಸಿದ್ದ 28 ತೈಲ-ಅನಿಲ ಘಟಕಗಳನ್ನು 1992-93ರಲ್ಲಿ ಪುಡಿಗಾಸಿಗೆ ಖಾಸಗಿಯವರಿಗೆ ವಿತರಿಸಲಾಯಿತು. 1991ರಲ್ಲಿ ಭಾರತ ಸರ್ಕಾರವು ವಿಶ್ವ ಬ್ಯಾಂಕಿನಿಂದ 450 ಮಿಲಿಯನ್ ಡಾಲರುಗಳ ಸಾಲ ಪಡೆಯುವಂತೆ ONGCಯನ್ನು ಒತ್ತಾಯಿಸಿ, ONGC ಮತ್ತು OIC (ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು) ಪತ್ತೆಹಚ್ಚಿದ್ದ ತೈಲ ನಿಕ್ಷೇಪ ಪ್ರದೇಶಗಳನ್ನು ಖಾಸಗಿ ಮತ್ತು ವಿದೇಶಿ ಬಂಡವಾಳದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಬೇಕೆಂಬ ಷರತ್ತು ಹೇರಲಾಯಿತು. ಹೀಗಿದ್ದಾಗ್ಯೂ 2016-17ರ ವರೆಗೆ ONGC ಲಾಭದಲ್ಲೇ ಮುಂದುವರಿಯಿತು.
ನರೇಂದ್ರಮೋದಿ ಸರ್ಕಾರವು ಲಾಭದಾಯಕ ಸಾರ್ವಜನಿಕ ಉದ್ದಿಮೆಗಳಿಂದ ಹಣ ಹೀರಲು ಹೊಸ ವಿಧಾನಗಳನ್ನು ಹುಡುಕಿಕೊಂಡಿದೆ. ಈ ಸರ್ಕಾರ ಅನಗತ್ಯವಾಗಿ ಸ್ವಾಧೀನ ಪ್ರಕ್ರಿಯೆಗಳಿಗೆ ಒತ್ತಾಯಿಸಿದ್ದರಿಂದಾಗಿ ONGC ತನ್ನ ಕೂಡಿಟ್ಟ ಮೀಸಲು ನಗದನ್ನೂ ಖಾಲಿ ಮಾಡಿಕೊಂಡು ಸಾಲದ ಹೊರೆಯಲ್ಲಿ ಮುಳುಗಿದೆ.
2017ರ ನವೆಂಬರಿನಲ್ಲಿ, ONGCಯ ಆಯಕಟ್ಟಿನ ತೈಲ-ಅನಿಲ ಉತ್ಪಾದನಾ ಘಟಕಗಳಲ್ಲಿನ ಶೇ.60ರಷ್ಟು ಷೇರುಗಳನ್ನು ಖಾಸಗಿ ಕಂಪನಿಗಳಿಗೆ ಮಾರಲು ತೈಲ ಸಚಿವಾಲಯ ಒತ್ತಾಯಿಸಿ ONGCಯ ಪ್ರತಿರೋಧದಿಂದ ತೆಪ್ಪಗಾಯಿತು.
ONGCಯ ಕಳೆದ 5 ವರ್ಷಗಳ ಆಯವ್ಯಯಪಟ್ಟಿ ರಾಷ್ಟ್ರದ ಹೆಮ್ಮೆಯ ಸಾರ್ವಜನಿಕ ಉದ್ದಿಮೆ ಅಧೋಗತಿಗಿಳಿದಿರುವುದನ್ನು ತೋರಿಸುತ್ತದೆ.
ಮೋದಿ ಸರ್ಕಾರದ ಮೊದಲ ವರ್ಷ – ಅಂಬಾನಿಗೆ ಹರ್ಷವೋ ಹರ್ಷ
ಮೀಸಲು ನಗದನ್ನು ಬಂಡವಾಳವೆಚ್ಚಕ್ಕೆ ಮತ್ತು ಕಂಪೆನಿ ತನ್ನ ಷೇರುದಾರರಿಗೆ ಪಾವತಿಸುವ ವಾರ್ಷಿಕ ಲಾಭಾಂಶಕ್ಕೂ ಬಳಸಲಾಗುತ್ತದೆ. ಹೈಡ್ರೋಕಾರ್ಬನ್ ನಿಕ್ಷೇಪಗಳನ್ನು ಪತ್ತೆಹಚ್ಚುವ ತೈಲ-ಅನಿಲ ಕಂಪೆನಿಗಳಲ್ಲಿ ಬಂಡವಾಳವೆಚ್ಚ ಅಗಾಧವಾಗಿರುತ್ತದೆ. 2014-15ರಲ್ಲಿ, ಅಂದರೆ ಮೋದಿ ಸರ್ಕಾರದ ಮೊದಲ ಹಣಕಾಸು ಸಾಲಿನಲ್ಲಿ ONGCಯ ನಗದು ಪ್ರಮಾಣ ಕಳೆದ ವರ್ಷಕ್ಕಿಂತ ಶೇ.74ರಷ್ಟು ಕುಸಿಯಿತು. ಆಗ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಭಾರತದ ಅತಿದೊಡ್ಡ ಲಾಭದಾಯಕ ಕಂಪೆನಿ ಎನಿಸಿಕೊಂಡು, 18,334 ಕೋಟಿ ರೂ.ಗಳ ನಿವ್ವಳ ಲಾಭ ಸಂಪಾದಿಸಿದ್ದ ONGC 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು. 2016/2017ರಲ್ಲಿ ನಗದು ಚೇತರಿಸಿಕೊಂಡಿತಾದರೂ 2016-17 ಮತ್ತು 2017-18ರ ಅವಧಿಯಲ್ಲಿ ನಗದು ಶೇ.92ರಷ್ಟು ಕುಸಿಯಿತು. ಇದಕ್ಕೆ ಕಾರಣಗಳು ಹಲವಾರು.
ONGCಯ ಅತ್ಯಧಿಕ ಲಾಭಾಂಶ ಪಾವತಿ

ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ ಪೈಕಿ ONGC ಅತ್ಯಧಿಕ ಲಾಭಾಂಶ ನೀಡುತ್ತಿದ್ದರೂ ಸರ್ಕಾರ ಅದನ್ನು ಸದಾಕಾಲ ಹೆಚ್ಚುವರಿ/ವಿಶೇಷ ಲಾಭಾಂಶಗಳಿಗಾಗಿ ಪೀಡಿಸುತ್ತಲಿದೆ, ಲಾಭದಾಯಕ ಸಾರ್ವಜನಿಕ ಸ್ವಾಮ್ಯದ ತೈಲ-ಅನಿಲ ಕಂಪನಿಗಳನ್ನೆಲ್ಲಾ ಕಿತ್ತುತಿನ್ನುತ್ತಲಿದೆ. 2017-18ರಲ್ಲಿ ONGC ಅತಿಹೆಚ್ಚು ಲಾಭಾಂಶ ನೀಡಿದ್ದಲ್ಲದೆ ಲಾಭಾಂಶದ ಮೇಲೆ ತೆರಿಗೆಯನ್ನೂ ಕಟ್ಟಿದೆ.
ಇಂಧನ ಸಬ್ಸಿಡಿ – ಕೈಚೆಲ್ಲಿ ಕುಳಿತ ಮೋದಿ ಸರ್ಕಾರ
ONGC ಮತ್ತು OILಗಳಂತಹ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆಲ್ಲಾ ಪೂರ್ಣಪ್ರಮಾಣದಲ್ಲಿ ಇಂಧನ-ಸಬ್ಸಿಡಿಯನ್ನು ಸರ್ಕಾರ ಪಾವತಿಸಿಲ್ಲ. ಆ ಹೊರೆಯನ್ನು ಕಂಪೆನಿಗಳೇ ಹೊರುವಂತೆ ತಾಕೀತು ಮಾಡುತ್ತಿದೆ. ಒಂದೆಡೆ ತೈಲ ಬೆಲೆ ಏರಿದ್ದರಿಂದ ಸಂಸ್ಕರಣ ಘಟಕಗಳಿಗೆ ತೈಲವನ್ನು ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಬೇಕಾಯಿತು; ಇನ್ನೊಂದೆಡೆ ಸರ್ಕಾರ ಪೂರ್ಣವಾಗಿ ನೀಡದ ಇಂಧನ-ಸಬ್ಸಿಡಿಯನ್ನು ONGCಯೇ ಭರಿಸಬೇಕಾಯಿತು. ಸಹಜವಾಗಿ ONGCಯ ಲಾಭ ಕುಸಿಯಿತು.
2014ರಲ್ಲಿ ONGC 56,384 ಕೋಟಿ ರೂ.ಗಳ ದಾಖಲೆ ಸಬ್ಸಿಡಿ ಮೊತ್ತವನ್ನು ಪಾವತಿಸಿದ್ದು, 2013ಕ್ಕಿಂತ ಶೇ.14ರಷ್ಟು ಅಧಿಕವಾಗಿತ್ತು. 2013-14ರಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಸಗಟುದಾರರು ಅನುಭವಿಸಿದ್ದ ನಷ್ಟವನ್ನು ಇದರಿಂದಲೇ ಭರಿಸಬೇಕಾಯಿತು! 31.12.2014ರಂದು ಕೊನೆಯಾದ ತ್ರೈಮಾಸಿಕವೊಂದರಲ್ಲೇ ONGC 8,716 ಕೋಟಿ ರೂ.ಗಳನ್ನು ಪಾವತಿಸುವಂತಾಯಿತು. ಜೂನ್ 2015ರಲ್ಲಿ ಒಟ್ಟು ವಾರ್ಷಿಕ ಸಬ್ಸಿಡಿ ಬಿಲ್ನ ಶೇ.40ಕ್ಕೂ ಹೆಚ್ಚು ONGC ಮತ್ತು OILಗಳೇ ಪಾವತಿಸಿವೆ. ಮೋದಿ ಅಧಿಕಾರ ವಹಿಸಿಕೊಂಡ ವರ್ಷವಿದು.
ಪೆಟ್ರೋಲ್ ದರ ಇಳಿಸಲು ತೆರಿಗೆ ಕಡಿತಗೊಳಿಸದ ಸರ್ಕಾರ 2018ರಲ್ಲೂ ONGCಯನ್ನು ತೈಲ-ಸಬ್ಸಿಡಿ ಭರಿಸಲು ಒತ್ತಾಯಿಸಿತು. ತನ್ನ ಹಣಕಾಸು ಸ್ಥಿತಿ ತೀರಾ ಹದಗೆಟ್ಟಿದ್ದರಿಂದ ONGC ನಿರಾಕರಿಸಿದ್ದು, ಕೊನೆಗೆ ವಿನಾಯಿತಿ ನೀಡಲಾಯಿತು.
ಲಾಭದಲ್ಲಿದ್ದ ONGCಗೆ ನಷ್ಟವಾಗಿದ್ದೇಕೆ?
2014-15ರಲ್ಲಿ ONGCಯ ನಗದು-ಲಾಭ ಕುಸಿತವನ್ನು ಅಧಿಕ ಲಾಭಾಂಶ ಪಾವತಿ ಮತ್ತು ತೈಲ-ಸಬ್ಸಿಡಿಗಳು ವಿವರಿಸಿದರೆ, 2017-18ರಲ್ಲಿ ಶೇ.92ರಷ್ಟು ನಗದು ಇಳಿಯಲು ಕಾರಣವೇನು? ಮೋದಿ ಸರ್ಕಾರ ONGCಯ ಆರ್ಥಿಕತೆ/ಭವಿಷ್ಯತ್ತಿಗೆ ಮಾರಕವಾಗುವ 2 ವಿನಾಶಕಾರಿ ಹೆಜ್ಜೆಗಳನ್ನಿಟ್ಟಿದ್ದು ಇಲ್ಲೇ – ಸಾಲದಲ್ಲಿ ಮುಳುಗಿದ್ದ ಗುಜರಾತ್ ರಾಜ್ಯ ಪೆಟ್ರೋಲಿಯಮ್ ಕಾರ್ಪೊರೇಷನ್ಅನ್ನು (GSPCL) ಬಿಡಿಸಿಕೊಳ್ಳಲು ಮತ್ತು ಹಿಂದುಸ್ಥಾನ್ ಪೆಟ್ರೋಲಿಯಮ್ ಕಾರ್ಪೊರೇಷನ್ ಲಿಮಿಟೆಡ್ನಲ್ಲಿ (HPCL) ಕೇಂದ್ರದ ಷೇರುಗಳನ್ನು ಕೊಳ್ಳಲು ONGC ಬಳಸಿಕೊಂಡಿದ್ದು!
ಸಾಲದಲ್ಲಿ ಮುಳುಗಿದ್ದ GSPCL ನ್ನು ಮೇಲೆತ್ತಲು…
2014ರ ಚುನಾವಣೆಯಲ್ಲಿ “ಗುಜರಾತ್ ಮಾದರಿ ಅಭಿವೃದ್ಧಿ”ಯನ್ನು ಮುಂದಿಟ್ಟು ಬಿಜೆಪಿ ಪ್ರಚಾರ ನಡೆಸಿತ್ತು. ಆಗಸ್ಟ್ 2017ರಲ್ಲಿ ಕೃಷ್ಣ-ಗೋದಾವರಿ ಜಲಾನಯನದ ಅನಿಲ ಘಟಕದಲ್ಲಿ, ಗುಜರಾತ್ ಸರ್ಕಾರದ ಅಧೀನದಲ್ಲಿರುವ GSPCLನ ಶೇ.80ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವಂತೆ ONGCಯನ್ನು ಒತ್ತಾಯಿಸಲಾಯಿತು. (KG-OSN-2003/1 DDU ಬಂಗಾಳ ಕೊಲ್ಲಿಯ ರಾಜಮುಂಡ್ರಿ ಕಡಲಾಚೆ). ಇದಕ್ಕಾಗಿ ONGCಯಿಂದ 2017-18ರಲ್ಲಿ ಸುಮಾರು 7480 ಕೋಟಿ ರೂ.ಗಳನ್ನು ವೆಚ್ಚಮಾಡಲಾಗಿದೆ ಎಂದು ಹೇಳಲಾಗಿದೆ. ಭಾರತದ ಶತಮಾನದ ಶೋಧ ಎಂದು 2005ರಲ್ಲಿ GSPCL ಬಣ್ಣಿಸಿದ್ದ ಈ ಘಟಕದಲ್ಲಿ 10 ವರ್ಷಗಳಾದರೂ, ವಾಣಿಜ್ಯ ಉತ್ಪಾದನೆಯಾಗಲಿಲ್ಲ. 19,576 ಕೋಟಿ ರೂ.ಗಳ ಸಾಲ ಹೊತ್ತ GSPCL ವರ್ಷಂಪ್ರತಿ 1,804.06 ಕೋಟಿ ರೂ.ಗಳ ಬಡ್ಡಿ ತೆರುತ್ತಿದೆ. ನಷ್ಟದಲ್ಲಿರುವ GSPCLನಿಂದ ONGC ಷೇರು ಕೊಳ್ಳುವಂತೆ ಮಾಡಿದ್ದು ಮುಳುಗಿದ್ದ ಗುಜರಾತ್ ಮಾದರಿಯನ್ನು ಮೇಲೆತ್ತಲೇ ಹೊರತು ONGCಯ ಹಿತರಕ್ಷಣೆಗಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಷೇರುಗಳನ್ನು ಕೊಂಡಿದ್ದೋ ಸಾಲವನ್ನೋ…??
ಮೋದಿ ಸರ್ಕಾರ ತನ್ನ ಹಣಕಾಸು ಕೊರತೆಯ ನೀಗಿಸಲು, ಜನವರಿ 2018ರಲ್ಲಿ HPCLನಲ್ಲಿದ್ದ ಕೇಂದ್ರ ಸರ್ಕಾರದ ಶೇ.51.11ರಷ್ಟೂ ಇಕ್ವಿಟಿ ಷೇರುಗಳನ್ನು 31.01.2018ರ ಮಾರುಕಟ್ಟೆ ಮುಕ್ತಾಯ ದರಕ್ಕಿಂತ ಶೇ. 14ರಷ್ಟು ಹೆಚ್ಚಿನ ಬೆಲೆಯಲ್ಲಿ (36,915 ಕೋಟಿ ರೂ.) ONGC ಕೊಳ್ಳುವಂತೆ ಮಾಡಿ ಸಂಸ್ಥೆಯನ್ನು ಸಾಲದ ಕೂಪಕ್ಕೆ ತಳ್ಳಿದೆ. 35,000 ಕೋಟಿ ರೂ.ಗಳಿಗೆ ಕೈಚಾಚುವ ಅನಿವಾರ್ಯತೆಗೊಳಗಾದ ONGC, 4 ಸಾರ್ವಜನಿಕ ಮತ್ತು 3 ಖಾಸಗಿ ಬ್ಯಾಂಕುಗಳಿಂದ ಸಾಲ ಪಡೆದಿದೆ. 2017-18ರಲ್ಲಿ ಅದರ ಒಟ್ಟು ಸಾಲಗಳು 25,592.2 ಕೋಟಿ ರೂ.ಗಳಾಗಿವೆ!
ಮೋದಿ ಸರ್ಕಾರಕ್ಕೆ ONGC ಮೇಲಿಲ್ಲದ ಒಲವು ವೇದಾಂತದ ಮೇಲೆ!
ಇಂಧನ ನಿಕ್ಷೇಪಗಳ ಶೋಧನಾ ಕಾರ್ಯವು ಬಂಡವಾಳತೀಕ್ಷ್ಣ ಉದ್ಯಮವಾಗಿದ್ದು, ONGCಯ ಹಾಲಿಸ್ಥಿತಿ ಆಶಾದಾಯಕವಲ್ಲ. ಕಳೆದ ವರ್ಷ ಮೋದಿ ಸರ್ಕಾರವು ಉದಾರೀಕೃತ ಮುಕ್ತ ನೀತಿಯಡಿ (OALP) ದೇಶದ ತೈಲ/ಅನಿಲ ಶೋಧನಾ ಘಟಕಗಳನ್ನು ಹರಾಜಿಗಿಟ್ಟು, 55ರ ಪೈಕಿ 41 ಘಟಕಗಳನ್ನು ಅನಿಲ್ ಅಗರವಾಲನ ವೇದಾಂತ ರಿಸೋರ್ಸಸ್ಗೆ ನೀಡಿದೆ, 6 ದಶಕಗಳ ಸರ್ಕಾರಿ ಸ್ವಾಮ್ಯದ ONGCಗೆ ಕೇವಲ 2 ಘಟಕಗಳು ದಕ್ಕಿದವು! ONGCಯ ಮೇಲೆ ಸಾಂಪ್ರದಾಯಿಕತೆಯ ಆರೋಪ ಹೊರಿಸಲಾಯಿತು. 2001-02ರಿಂದಲೂ ಸಾಲಮುಕ್ತ ಸಂಸ್ಥೆಯಾಗಿದ್ದ ONGCಗೆ ಈಗ ಸರ್ಕಾರದ ನಿರಂತರ ಹಸ್ತಕ್ಷೇಪದಿಂದ ಈ ದುಃಸ್ಥಿತಿ ಉದ್ಭವಿಸಿದೆ.

ದೇಶಭಕ್ತಿಯ ಜಪ – ರಾಷ್ಟ್ರದ ಲೂಟಿ: ಬಿಜೆಪಿಯ ನೀತಿ
ರಾಷ್ಟ್ರದ ಇಂಧನ ಸ್ವಾವಲಂಬನೆಯನ್ನು ಕೊಲ್ಲುತ್ತಿರುವ ಮೋದಿ ಸರ್ಕಾರ ದೇಶದ ಇಂಧನದ ಭವಿಷ್ಯತ್ತಿಗೆ ಅಪಾಯ ತಂದಿದೆ. ದೇಶಭಕ್ತಿಯ ಜಪ ಮಾಡುತ್ತಲೇ ರಾಷ್ಟ್ರದ ಸಂಪತ್ತನ್ನು ಅಂಬಾನಿ, ಅದಾನಿ, ಅನಿಲ್ ಅಗರ್ವಾಲ್ನಂತಹ ಖಾಸಗಿ ವ್ಯಕ್ತಿಗಳ ಮಡಿಲಿಗೆ ಸೇರಿಸುತ್ತಿರುವ ಬಿಜೆಪಿ ಸರ್ಕಾರ, ತನ್ನ “ಗುಜರಾತ್ ಮಾದರಿ” ಸೋತು ಸುಣ್ಣವಾಗಿರುವಾಗ, ಅದನ್ನು ನಷ್ಟದಿಂದ ಬಿಡುಗಡೆಗೊಳಿಸಲು ನಮ್ಮ ಲಾಭದಾಯಕ ಸಾರ್ವಜನಿಕ ಉದ್ದಿಮೆಗಳನ್ನು ಬಳಸಿಕೊಂಡು, ಅವುಗಳನ್ನೂ ನಾಶಮಾಡಲು ಹೊರಟಿರುವುದು ದೇಶದ್ರೋಹದ ಕೆಲಸವೇ. ಸಾರ್ವಜನಿಕ ಉದ್ಯಮಗಳೆಂದರೆ ಅವು ನಮ್ಮದು; ಅವು ಜನತೆಯ, ದೇಶದ ಆಸ್ತಿ. ಅವುಗಳನ್ನು ಮಾರುವುದು ಇಲ್ಲವೇ ಉದ್ದೇಶಪೂರಿತವಾಗಿ ನಾಶಪಡಿಸುವುದು ಜನವಿರೋಧಿ, ದೇಶವಿರೋಧಿ ಕೃತ್ಯವೇ.