ಮೋದಿ ಜೀವನಚರಿತ್ರೆ ಆಧರಿಸಿ ನಿರ್ಮಿಸಿರುವ ಚಿತ್ರವನ್ನು ಸದ್ಯ ಬಿಡುಗಡೆ ಮಾಡದೆ, ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಬಿಡುಗಡೆಗೆ ಅವಕಾಶ ನೀಡಬೇಕೆಂದು ನಿವೃತ್ತ ಸಿವಿಲ್ ಸರ್ವೀಸ್ ಅಧಿಕಾರಿಗಳ ಸಮೂಹವೊಂದು ಚುನಾವಣಾ ಆಯೋಗಕ್ಕೆ ಪತ್ರದ ಮೂಲಕ ಮನವಿ ಮಾಡಿದೆ.
ಇನ್ನೇನು ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ಮೋದಿ ಜೀವನಾಧಾರಿತ ಚಿತ್ರವನ್ನು ಬಿಡುಗಡೆ ಮಾಡಿದರೆ ಮತದಾನದ ಮೇಲೆ ಅನುಚಿತ ಪ್ರಭಾವ ಬೀರಲಿದೆ ಎಂದು ಅವರು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
‘ಪಿಎಂ ನರೇಂದ್ರ ಮೋದಿ’ ಚಿತ್ರವನ್ನು ಏಪ್ರಿಲ್ 5ರಂದು ರಿಲೀಸ್ ಮಾಡಲು ಉದ್ದೇಶಿಸಲಾಗಿದ್ದು, ಏಪ್ರಿಲ್ 11 ರಂದು ಲೋಕಸಭಾ ಚುನಾಣೆಯ ಮತದಾನ ಆರಂಭವಾಗಲಿದೆ. ಚುನಾವಣೆ ಹಾಗೂ ಸಿನಿಮಾ ಬಿಡುಗಡೆಗೆ ಕೇವಲ ಒಂದು ವಾರವಷ್ಟೇ ಅಂತರವಿದೆ. ಮೇ 23ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಪಿಎಂ ನರೇಂದ್ರ ಮೋದಿ ಸಿನಿಮಾದ ಟ್ರೇಲರ್ ಕೆಲವಾರು ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಇದು ಮತದಾರರ ಮೇಲೆ ಅನುವಿತ ಪ್ರಭಾವ ಬೀರುವ ರೀತಿಯಲ್ಲಿ ಬಿಡುಗಡೆ ಮಾಡಲಾಗಿ ಎಂದು ಚುನಾವಣಾ ಆಯೋಗದ ಅಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಒಟ್ಟು 47 ಮಂದಿ ನಿವೃತ್ತ ಸಿವಿಲ್ ಸರ್ವೀಸ್ ಅಧಿಕಾರಿಗಳು ಮುಖ್ಯ ಚುನಾವಣಾ ಆಯುಕ್ತರಿಗೆ (ಸಿಇಸಿ) ಪತ್ರ ಬರೆದಿದ್ದು ಅದರಲ್ಲಿ. “ಮೋದಿ ಜೀವನಚರಿತ್ರೆ ಆಧಾರಿತ ಚಿತ್ರವು ಬಿಡುಗಡೆಯಾದಲ್ಲಿ ಮತದಾನದಲ್ಲಿ ಅಪಾರ ಪ್ರಮಾಣದ ಮತಗಳು ಪ್ರಧಾನಿ ಹಾಗೂ ಅವರ ಪಕ್ಷದ ಪಾಲಾಗಬಹುದು. ಇದು ಆಡಳಿತ ಪಕ್ಷಕ್ಕೆ ಲಾಭ ತಂದುಕೊಡಬಹುದು’’ ಎಂದು ತಿಳಿಸಿದ್ದಾರೆ.
“ಆದ್ದರಿಂದ ಚುನಾವಣಾ ಆಯೋಗವು ಚಿತ್ರವನ್ನು ಯಾವುದೇ ಸಿನಿಮಾ ಮಂದಿರಗಳಲ್ಲಾಗಲೀ, ಯೂಟ್ಯೂಬ್, ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್, ಫೇಸ್ ಬುಕ್ ಮತ್ತು ಇತರ ಯಾವುದೇ ವೇದಿಕೆಗಳಲ್ಲಾಗಲೀ ಸಿನಿಮಾ ಬಿಡುಗಡೆಯಾಗದಂತೆ ತಡೆಯಬೇಕು” ಎಂದು ಆಗ್ರಹಿಸಿರುವ ಎಂದಿರುವ ಈ ನಿವೃತ್ತ ಅಧಿಕಾರಿಗಳು ಸಂವಿಧಾನದ 324 ವಿಧಿಯ ಅನ್ವಯ ಚುನಾವಣಾ ಆಯೋಗ ಈ ಅಧಿಕಾರ ಹೊಂದಿದೆ’ ಎಂದು ತಿಳಿಸಿದ್ದಾರೆ.
ಈ ಹಿಂದೆ ಸಿನಿಮಾವನ್ನು ಏಪ್ರಿಲ್ 12ರಂದು ಬಿಡುಗಡೆ ಮಾಡಲು ಉದ್ದೇಶಿಸಿದ್ದರೂ ಚುನಾವಣೆ ಇರುವ ಹಿನ್ನೆಲೆ, ಮತದಾನದ ಮೇಲೆ ಪರಿಣಾಮ ಬೀರುವ ಉದ್ದೇಶದಿಂದಲೇ ಇನ್ನೂ ಮುಂಚಿತವಾಗಿ ಅಂದರೆ ಏಪ್ರಿಲ್ 5ಕ್ಕೆ ಬಿಡುಗಡೆ ಮಾಡಲು ನಿರ್ದೇಶಕ-ನಿರ್ಮಾಪಕರು ಮುಂದಾಗಿದ್ದಾರೆ.
“ರಾಜಕೀಯ ಪ್ರೇರಿತವಾದಂಥ ಜೀವನಚರಿತ್ರೆ ಅಥವಾ ಡಾಕ್ಯುಮೆಂಟರಿಯನ್ನು ಚುನಾವಣೆಯ ಸಂದರ್ಭದಲ್ಲೇ ಬಿಡುಗಡೆ ಮಾಡುವಂಥ ಯಾವುದೇ ತುರ್ತು ಈಗಿಲ್ಲ. ರಾಜಕೀಯ ಧುರೀಣನೊಬ್ಬನಿಗೆ (ನರೇಂದ್ರ ಮೋದಿ) ಮತ್ತು ಅವರು ಪ್ರತಿನಿಧಿಸುವ ಪಕ್ಷಕ್ಕೆ ಸಾಕಷ್ಟು ಪ್ರಚಾರವನ್ನು ಗಳಿಸುವ ಉದ್ದೇಶ ಚಿತ್ರಕ್ಕಿದೆ,’’ ಎಂದೂ ನಿವೃತ್ತ ಅಧಿಕಾರಿಗಳು ಪತ್ರದ ಮೂಲಕ ಚಿತ್ರ ತಂಡದ ಉದ್ದೇಶವನ್ನು ಬಿಚ್ಚಿಟ್ಟಿದ್ದಾರೆ.
ಚುನವಾಣೆ ಹಿನ್ನೆಲೆ ಚುನಾವಣಾ ಆಯೋಗ ಅಭ್ಯರ್ಥಿಗಳ ಹಾಗೂ ಪಕ್ಷಗಳ ಸಾಮಾಜಿಕ ಜಾಲತಾಣಗಳನ್ನು ನಿಗಾ ಇಟ್ಟು ಪರಿಶೀಲಿಸುತ್ತಿರುವುದು, ಮೇಲ್ವಿಚಾರಣೆ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯ. “ ಇದೇ ನಿಯಮ ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವಾಗ ಮತ್ತು ಚುನಾವಣೆ ವೇಳೆ ಸಿನಿಮಾ ಬಿಡುಗಡೆ ಮಾಡುವ ಬಗ್ಗೆಯೂ ಅನ್ವಯಿಸುತ್ತದೆ,’’ ಎಂದು ಮನವರಿಕೆ ಮಾಡಿದ್ದಾರೆ.
ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಬಗ್ಗೆಯೂ ಪತ್ರದಲ್ಲಿ ವಿವರಿಸಿದ್ದು ಅದರಂತೆ, ಆಡಳಿತದಲ್ಲಿರುವ ಕೇಂದ್ರ, ರಾಜ್ಯ ಅಥವಾ ರಾಜ್ಯಕ್ಕೆ ಸಂಬಂಧಿಸಿದ ಪಕ್ಷ ಅಥವಾ ಸರ್ಕಾರವು ತನ್ನ ಅಧಿಕಾರ ಅಥವಾ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡು ಪಕ್ಷ ಅಥವಾ ಯಾವುದೇ ವ್ಯಕ್ತಿಯ ಪರ ಚುನಾವಣಾ ಪ್ರಚಾರ ಮಾಡಬಾರದು ಹಾಗೂ ಈ ಬಗ್ಗೆ ಯಾವುದೇ ದೂರು ಇರಬಾರದು ಎಂದು ತಿಳಿಸಿದೆ ಎಂಬುದಾಗಿ ಪತ್ರದಲ್ಲಿ ವಿವರಿಸಿದ್ದಾರೆ.
ಅಲ್ಲದೇ, “ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇದರಲ್ಲಿ ಯಾವುದೇ ಪಾತ್ರವಹಿಸುವುದಿಲ್ಲಎಂದು ಹೇಳಲಾಗುವುದಿಲ್ಲ. ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಟ್ ನೀಡುವುದೇ ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಧೀನದಲ್ಲಿ,’’ ಎಂದೂ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ವಿವರ ಮಾಹಿತಿ ನೀಡಿದ್ದಾರೆ.
ಮೋದಿ ಪಾತ್ರ ಮಾಡಿರುವ ಒಬೆರಾಯ್
ಇತ್ತೀಚೆಗಷ್ಟೇ ಲೋಕಸಭಾ ಚುನಾವಣೆ ಹಿನ್ನೆಲೆ ಹಣ ಪಡೆದು ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪ್ರಚಾರ ಮಾಡುವ ಕುರಿತು ಕೋಬ್ರಾ ಪೋಸ್ಟ್ ಮಾಡಿದ್ದ ತನಿಖಾ ವರದಿಯಲ್ಲಿ ಸಿಕ್ಕಿಬಿದ್ದ ಬಾಲಿವುಡ್ ನಟ ವಿವೇಕ ಓಬೆರಾಯ್ ಅವರು ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾತ್ರವನ್ನು ಮಾಡಿದ್ದಾರೆ. ಇವರು ಬಿಜೆಪಿಯ ಸದಸ್ಯರೂ ಹೌದು.
ರಾಹುಲ್ ಜೀವನಚರಿತ್ರೆ ಕುರಿತ ಸಿನಿಮಾ
ಇದೇ ಪತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕುರಿತ ಸಿನಿಮಾ ’ಮೈ ನೇಮ್ ಈಸ್ ರಾಗಾ’ ಬಗ್ಗೆಯೂ ಪ್ರಸ್ತಾಪಿಸಿರುವ ಅಧಿಕಾರಿಗಳು, ಈ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಬಗ್ಗೆ ಇನ್ನೂ ತಿಳಿಸಿಲ್ಲ. ಮೂಲಗಳ ಪ್ರಕಾರ ಚಿತ್ರವನ್ನು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.
ಆದ್ದರಿಂದ ನಾವು ಪತ್ರದಲ್ಲಿ ತಿಳಿಸಿರುವ ನಿಯಮ, ನಿಬಂಧನೆಗಳು ಎಲ್ಲಾ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ.