ಆಪರೇಷನ್ ಜಾಕ್ಪಾಟ್…
ಪಾಕಿಸ್ತಾನಿ ಪಡೆಗಳು ‘ಆಪರೇಷನ್ ಸರ್ಚ್ಲೈಟ್’ ಆರಂಭಿಸಿದ ಬೆನ್ನಲ್ಲೇ ಭಾರತ ಸೇನೆಯ ಪೂರ್ವ ಕಮ್ಯಾಂಡ್ ಯುದ್ಧವೊಂದಕ್ಕೆ ಎಲ್ಲ ರೀತಿಯ ತಯಾರಿಗಳನ್ನೂ ಆರಂಭಿಸಿತು. ಪಾಕಿಸ್ತಾನದ ವಿರುದ್ಧ ಅಧಿಕೃತ ಯುದ್ಧವಿಲ್ಲದೇ ಬಾಂಗ್ಲಾದೇಶವನ್ನು ವಿಮೋಚನೆಗೊಳಿಸುವುದು ಭಾರತದ ಮುಂದಿನ ಮೊದಲ ಆಯ್ಕೆಯಾಗಿತ್ತು. ಆದರೆ ಅದು ಅಷ್ಟು ಸುಲಭವಿರಲಿಲ್ಲ. ಪಶ್ಚಿಮ ಪಾಕಿಸ್ತಾನದ ಪಡೆಗಳ ಎದುರು ಬಾಂಗ್ಲಾದೇಶೀಯರ ಸೀಮಿತ ಶಕ್ತಿಯ ಬಂಡುಕೋರ ಪಡೆ ಗೆದ್ದು ನಿಲ್ಲುವುದು ಕಷ್ಟಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತ ಸೇನಾಪಡೆಯ ಪೂರ್ವ ಕಮಾಂಡ್ ಆರಂಭಿಸಿದ ಕಾರ್ಯಾಚರಣೆಯೇ ‘ಆಪರೇಷನ್ ಜಾಕ್ಪಾಟ್’. ಪೂರ್ವ ಪಾಕಿಸ್ತಾನದ ಬಂಡುಕೋರ ಪಡೆಯಾದ ಮುಕ್ತಿವಾಹಿನಿಗೆ ಎಲ್ಲ ರೀತಿಯ ಬೆಂಬಲವನ್ನು ಭಾರತೀಯ ಸೈನ್ಯ ನೀಡುತ್ತಿತ್ತು. ಪಶ್ಚಿಮ ಪಾಕಿಸ್ತಾನದ ಆಪರೇಷನ್ ಸರ್ಚ್ಲೈಟ್ಗೆ ಪ್ರತಿಯಾಗಿ ಮುಕ್ತಿವಾಹಿನಿ ಪೂರ್ವ ಪಾಕಿಸ್ತಾನದ ಕಾನೂನು ಸುವ್ಯವಸ್ಥೆಯನ್ನು ಅಲುಗಾಡಿಸತೊಡಗಿತು. ಸರ್ಕಾರಿ ಸಂಸ್ಥೆಗಳ ಮೇಲೆ ದಾಳಿಗಳು ಅವ್ಯಾಹತವಾಗಿ ನಡೆದವು. ವಿಶೇಷವಾಗಿ ಚಿತ್ತಗಾಂಗ್, ಚಂದಾಪುರ, ಮೊಂಗ್ಲಾ ಮತ್ತು ನಾರ್ಯಾನ್ಗಂಜ್ಗಳಲ್ಲಿ ಈ ದಾಳಿಗಳು ನಡೆಯುತ್ತಿದ್ದವು.
‘ಆಪರೇಷನ್ ಜಾಕ್ಪಾಟ್’ ಭಾರತದ ಪೂರ್ವ ಕಮಾಂಡ್ಗೆ ಯುದ್ಧದ ಮೊದಲಿನ ಸಣ್ಣ ಯುದ್ಧವಾಗಿತ್ತು. ಮಾರ್ಚ್ ಆರಂಭದಲ್ಲಿ ಮುಕ್ತಿವಾಹಿನಿಗೆ ಬೇಕಾದ ಸಹಕಾರಗಳನ್ನು ಗಡಿ ಭದ್ರತಾ ಪಡೆ (ಬಿ.ಎಸ್.ಎಫ್) ನೀಡುತ್ತಿತ್ತು. ಆ ನಂತರ ಭಾರತ ಭೂಸೇನೆಯೇ ನೇರವಾಗಿ ಮುಕ್ತಿವಾಹಿನಿಗೆ ಎಲ್ಲ ರೀತಿಯ ಬೆಂಬಲ ನೀಡಿತು. ಮೇಜರ್ ಜನರಲ್ ಶಬೇಗ್ ಸಿಂಗ್ ಇದರ ನೇತೃತ್ವ ವಹಿಸಿಕೊಂಡರು. ಭಾರತ ಸೇನಾಪಡೆಯ ಮಿಲಿಟರಿ ಬೇಹುಗಾರಿಕಾ ನಿರ್ದೇಶನಾಲಯ (ಡಿಎಂಐ) ಅಗತ್ಯ ಮಾಹಿತಿಗಳನ್ನು ಒದಗಿಸಿತು.
ಪೂರ್ವ ಪಾಕಿಸ್ತಾನದ ಗಡಿ ಭಾಗಗಳನ್ನು ಆರು ವಿಭಾಗಗಳನ್ನಾಗಿ ವಿಂಗಡಿಸಿ, ಪ್ರತಿಯೊಂದು ವಿಭಾಗಕ್ಕೂ ಭೂಸೇನೆಯ ಬ್ರಿಗೇಡಿಯರ್ ಒಬ್ಬರಿಗೆ ಜವಾಬ್ದಾರಿ ನೀಡಲಾಯಿತು. ಈ ಆರು ವಿಭಾಗಗಳನ್ನು ಆಲ್ಫಾ, ಬ್ರಾವೋ, ಚಾರ್ಲಿ, ಡೆಲ್ಟಾ, ಎಕೋ, ಫಾಕ್ಸ್ ಟ್ರಾಟ್ ಎಂದು ಹೆಸರಿಸಲಾಗಿತ್ತು. ಆಲ್ಫಾ ಮತ್ತು ಬ್ರಾವೋ ಹೆಡ್ ಕ್ವಾರ್ಟರ್ಗಳು ಪಶ್ಚಿಮ ಬಂಗಾಳದಲ್ಲಿದ್ದವು. ಮಿಕ್ಕವನ್ನು ಬಿಹಾರ, ತ್ರಿಪುರ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಸ್ಥಾಪಿಸಲಾಗಿತ್ತು. ಬ್ರಿಗೇಡಿಯರ್ಗಳಾದ ಬಿ.ಸಿ.ಜೋಷಿ, ಪ್ರೇಮ್ ಸಿಂಗ್, ಎನ್.ಎ.ಸಾಲಿಕ್, ಸಾಬೇಗ್ ಸಿಂಗ್, ಎಂ.ಬಿ.ವಾದ್, ಸಂತ್ ಸಿಂಗ್ ಈ ವಿಭಾಗಗಳ ಮುಖ್ಯಸ್ಥರಾಗಿದ್ದರು. ಪೂರ್ವ ಕಮಾಂಡ್ನ ಕಮ್ಯಾಂಡರ್ ಲೆಫ್ಟಿನೆಂಟ್ ಜನರಲ್ ಜೆ.ಎಸ್.ಅರೋರ ಈ ಎಲ್ಲ ಕಾರ್ಯಾಚರಣೆಗಳ ಮೇಲುಸ್ತುವಾರಿ ವಹಿಸಿದ್ದರು.
ಪಶ್ಚಿಮ ಪಾಕಿಸ್ತಾನದ ಯಾಹ್ಯಾ ಆಡಳಿತವು ಪೂರ್ವ ಪಾಕಿಸ್ತಾನದಲ್ಲಿ ಎದ್ದ ದಂಗೆಯನ್ನು ಸಂಪೂರ್ಣ ಅಡಗಿಸಿರುವುದಾಗಿಯೂ, ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಯ ಸಮಸ್ಯೆ ಇಲ್ಲವೆಂದೂ ಹೇಳಿಕೊಳ್ಳುತ್ತಿತ್ತು. ಮತ್ತೊಂದು ದೇಶ ಅಥವಾ ವಿಶ್ವಸಂಸ್ಥೆ ಮೂಗು ತೂರಿಸದೇ ಇರುವಂತೆ ಮಾಡಲು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿತ್ತು. ಆದರೆ ಮುಕ್ತಿವಾಹಿನಿ ಸರಣಿಯೋಪಾದಿಯಲ್ಲಿ ದಾಳಿಗಳನ್ನು ನಡೆಸಿತು. ಪಶ್ಚಿಮ ಪಾಕಿಸ್ತಾನದ ಪರವಾಗಿರುವ ರಾಜಕಾರಣಿಗಳ ಹತ್ಯೆ ನಡೆಯಿತು. ಸರ್ಕಾರಿ ಸಂಸ್ಥೆಗಳು, ರೈಲ್ವೆ ನಿಲ್ದಾಣಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಗಳು ನಡೆದವು.
ಆದರೆ ಮುಕ್ತಿವಾಹಿನಿಯ ತರಬೇತಿ ಕೇಂದ್ರಗಳೆಲ್ಲವೂ ಭಾರತದಲ್ಲೇ ಇದ್ದವು. ಗೆರಿಲ್ಲಾಗಳನ್ನು ಪೂರ್ವ ಪಾಕಿಸ್ತಾನದ ಒಳಗೆ ಕಳುಹಿಸುವುದು ಅಷ್ಟು ಸುಲಭವಿರಲಿಲ್ಲ. ಗೆರಿಲ್ಲಾಗಳಿಗೆ ಅಗತ್ಯ ವಸ್ತುಗಳನ್ನು ಕಾಲಕಾಲಕ್ಕೆ ಪೂರೈಸುವುದೂ ಕಷ್ಟಸಾಧ್ಯವಾಗಿತ್ತು. ಪಾಕಿಸ್ತಾನ ಮಿಲಿಟರಿಯ ಬೇಹುಗಾರಿಕಾ ದಳದ ಪ್ರಕಾರ ಭಾರತ ಕನಿಷ್ಠ ಒಂದು ಲಕ್ಷ ಗೆರಿಲ್ಲಾಗಳನ್ನು ತರಬೇತಿ ನೀಡಿ ಕಳುಹಿಸಲು ಹವಣಿಸಿತ್ತು, ಆದರೆ ಈ ಸಂಖ್ಯೆ ಮೂವತ್ತು ಸಾವಿರವನ್ನು ದಾಟಲಿಲ್ಲ.
ಇಷ್ಟಾಗಿಯೂ ಮುಕ್ತಿವಾಹಿನಿ ನಡೆಸಿದ ಕಾರ್ಯಾಚರಣೆಗಳು ಕಡಿಮೆ ಪ್ರಮಾಣದ್ದೇನೂ ಆಗಿರಲಿಲ್ಲ. ಮುಕ್ತಿವಾಹಿನಿ ಕನಿಷ್ಠ 231 ರಸ್ತೆ ಸೇತುವೆಗಳನ್ನು ನಾಶಗೊಳಿಸಿತು. 122 ರೈಲ್ವೆ ಲೈನ್ಗಳನ್ನು ಹಾಳುಗೆಡವಿತು. 90 ಪವರ್ ಸ್ಟೇಷನ್ಗಳನ್ನು ಧ್ವಂಸಗೊಳಿಸಿತು. ಪೂರ್ವ ಪಾಕಿಸ್ತಾನ ಪೊಲೀಸ್ ಮತ್ತು ಪುರ್ವ ಪಾಕಿಸ್ತಾನ ರೈಫಲ್ಸ್ನ 237 ಅಧಿಕಾರಿಗಳು, 136 ವಾರಂಟ್ ಅಧಿಕಾರಿಗಳು, 3559 ಸೈನಿಕರು ಮುಕ್ತಿವಾಹಿನಿಯ ದಾಳಿಗಳಿಂದ ಹತರಾದರು.
ಜುಲೈ ನಂತರ ಪ್ರತಿ ತಿಂಗಳು ಎರಡು ಸಾವಿರದಿಂದ ಐದುಸಾವಿರ ಗೆರಿಲ್ಲಾಗಳನ್ನು ಬಾಂಗ್ಲಾದೇಶದೊಳಗೆ ಕಳುಹಿಸುವುದು, ಗಡಿ ಔಟ್ಪೋಸ್ಟ್ಗಳನ್ನು ಸೇನೆಯ ಮೂಲಕವೇ ನಾಶಪಡಿಸುತ್ತ ಸಾಗುವುದು ಭಾರತ ಸೇನೆಯ ಯೋಜನೆಯಾಗಿತ್ತು. ಆದರೆ ಈ ಯೋಜನೆ ಹಲವಾರು ಕಾರಣಗಳಿಗಾಗಿ ಸಂಪೂರ್ಣ ಫಲಕಾರಿಯಾಗಲಿಲ್ಲ. ಮುಕ್ತಿವಾಹಿನಿಯ ದಾಳಿಗಳನ್ನು ಪಶ್ಚಿಮ ಪಾಕಿಸ್ತಾನದ ಪಡೆಗಳು ಪ್ರತಿರೋಧಿಸುತ್ತಲೇ ಬಂದವು. ಪರಿಣಾಮವಾಗಿ ಪೂರ್ವ ಪಾಕಿಸ್ತಾನದಲ್ಲಿ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಅಲ್ಲಿನ ಆಡಳಿತ ಘೋಷಣೆ ಮಾಡಿತು. ಈ ಘೋಷಣೆಯನ್ನು ಸುಳ್ಳು ಮಾಡಲೆಂದೇ ಮುಕ್ತಿವಾಹಿನಿ ಮತ್ತೆ ಎರಡು ಬೃಹತ್ ಕಾರ್ಯಾಚರಣೆಗಳನ್ನು ನಡೆಸಿತು. ಮೊದಲನೆಯದಾಗಿ ಆಗಸ್ಟ್ 15ರಂದು ಢಾಕಾ ನಗರದ ಮೇಲೆ ಗೆರಿಲ್ಲಾಗಳ ಸರಣಿ ದಾಳಿ ನಡೆಯಿತು. ಅದೇ ಸಂದರ್ಭದಲ್ಲಿ ಚಿತ್ತಗಾಂಗ್, ಚಂದಾಪುರ, ಮೊಂಗ್ಲಾ ಮತ್ತು ನರವನ್ಗಾನಿಗಳಲ್ಲಿ ಅದೇ ದಿನ ಪಶ್ಚಿಮ ಪಾಕಿಸ್ತಾನ ನೌಕಾಪಡೆಗಳ ಮೇಲೆ ದೊಡ್ಡ ಪ್ರಮಾಣದ ದಾಳಿಗಳು ನಡೆದವು. ಆಪರೇಷನ್ ಜಾಕ್ಪಾಟ್ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಮತ್ತು ಬಾಂಗ್ಲಾದೇಶದಲ್ಲಿ ಕರೆಯಲ್ಪಟ್ಟ ಮುಖ್ಯ ಘಟನೆಗಳು ಇವು.
ಪೂರ್ವ ಪಾಕಿಸ್ತಾನದಲ್ಲಿ ಆ ಕಾಲದಲ್ಲಿ ಜಲಸಾರಿಗೆ ವ್ಯವಸ್ಥೆಯೇ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿತ್ತು. ಯಾಕೆಂದರೆ ಬಾಂಗ್ಲಾದೇಶ ನದಿಗಳ ದೇಶ. ನೂರಾರು ನದಿಗಳು, ಉಪನದಿಗಳು, ಕಾಲುವೆಗಳು ಎಲ್ಲೆಡೆ ಇರುವುದರಿಂದ ಜನರು ಹೆಚ್ಚು ಹೆಚ್ಚಾಗಿ ಜಲಮಾರ್ಗವನ್ನೇ ಬಳಸುತ್ತಿದ್ದರು. ಮಾನ್ಸೂನ್ನಲ್ಲಿ ರಸ್ತೆಗಳು ವಿಪರೀತ ಹಾಳಾಗಿ, ಮಣ್ಣಿನಿಂದ ತುಂಬಿಹೋಗುವುದರಿಂದ ರಸ್ತೆಮಾರ್ಗವನ್ನು ಬಳಸುವುದು ಕಷ್ಟಸಾಧ್ಯವಾಗುತ್ತದೆ.
ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಭಾರತ ಸೇನೆಯ ಪೂರ್ವ ಕಮಾಂಡ್, ಜಲಮಾರ್ಗಗಳ ಮೇಲೆ ಗೆರಿಲ್ಲಾ ದಾಳಿಗಳನ್ನು ಸಂಘಟಿಸುವ ಪ್ರಯತ್ನಕ್ಕೆ ಕೈ ಹಾಕಿತು. ಪಶ್ಚಿಮ ಬಂಗಾಳದ ಪ್ಲಾಸ್ಸಿ ಎಂಬಲ್ಲಿ ಸುಮಾರು 799 ಗೆರಿಲ್ಲಾ ಕಮಾಂಡೋಗಳಿಗೆ ಅಂತಿಮ ಹಂತದ ತರಬೇತಿ ನೀಡಲಾಯಿತು. ಈ ತರಬೇತಿಯಲ್ಲಿ ಈಜಿನಿಂದ ಹಿಡಿದು ಬರಿಗೈಯಲ್ಲಿ ಕಾದಾಡುವುದು, ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸುವುದನ್ನು ಹೇಳಿಕೊಡಲಾಯಿತು. ಈ ತರಬೇತಿ ಶಿಬಿರವನ್ನು ಪಾಕ್ ಗುಪ್ತಚರ ಏಜೆಂಟರು ಜೂನ್ ತಿಂಗಳಿನಲ್ಲಿ ಕಂಡುಹಿಡಿದರಾದರೂ ಶಿಬಿರದ ಮೇಲೆ ಯಾವುದೇ ರೀತಿಯ ದಾಳಿ ಆಗದಂತೆ ಸೇನಾಪಡೆ ಎಚ್ಚರ ವಹಿಸಿದ್ದರಿಂದ ಯಾವುದೇ ಹಾನಿ ಆಗಲಿಲ್ಲ.
ಪೂರ್ವ ಪಾಕಿಸ್ತಾನದ ಜಲಸಾರಿಗೆ ವ್ಯವಸ್ಥೆಯನ್ನು ಅಲ್ಲೋಲಕಲ್ಲೋಲ ಮಾಡುವ ಕಾರ್ಯಾಚರಣೆಯನ್ನು ಜುಲೈ ಕೊನೆಯ ವಾರದಲ್ಲಿ ಸಂಘಟಿಸಲಾಗಿತ್ತು. ನದಿಗಳ ಸ್ಥಿತಿಗತಿ, ಹವಾಮಾನಗಳ ಬಗ್ಗೆ ಮುಕ್ತಿವಾಹಿನಿಯ ಸ್ಲೀಪರ್ ಸೆಲ್ಗಳು ಖಚಿತ ಮಾಹಿತಿಗಳನ್ನು ನೀಡುತ್ತಿದ್ದವು. ಆಯ್ಕೆಯಾದ ಕಮ್ಯಾಂಡೋಗಳಿಗೆ ತ್ರಿಪುರ ಮತ್ತು ಪಶ್ಚಿಮ ಬಂಗಾಳದಲ್ಲಿ ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡುವ ಮೂಲಕ ಕಾರ್ಯಾಚರಣೆಯ ರೂಪುರೇಷೆಗಳನ್ನು ವಿವರಿಸಲಾಯಿತು. ಪ್ರತಿಯೊಬ್ಬ ಕಮ್ಯಾಂಡೋಗೂ ಒಂದು ಚಾಕು, ಸ್ವಿಮ್ಮಿಂಗ್ ಟ್ರಂಕ್, ಮೂವರು ಕಮ್ಯಾಂಡೋಗಳಲ್ಲಿ ಒಬ್ಬರಿಗೆ ಸ್ಟೆನ್ ಗನ್, ಹ್ಯಾಂಡ್ ಗ್ರನೈಡ್ಗಳನ್ನು ನೀಡಲಾಗಿತ್ತು. ವಿಶೇಷವೆಂದರೆ ಪ್ರತಿಯೊಬ್ಬ ಕಮ್ಯಾಂಡೋ ಮುಖ್ಯಸ್ಥನಿಗೂ ಒಂದು ಟ್ರಾನ್ಸಿಸ್ಟರ್ ನೀಡಲಾಗಿತ್ತು. ಆಗಸ್ಟ್ ಮೂರರಿಂದ 9ರೊಳಗೆ ಎಲ್ಲ ಕಮಾಂಡೋಗಳು ಉದ್ದೇಶಿತ ಕಾರ್ಯಾಚರಣೆಗಳು ನಡೆಯಬೇಕಿದ್ದ ಸ್ಥಳಗಳನ್ನು ತಲುಪಿಕೊಂಡರು. ಹೀಗೆ ತಲುಪಿಕೊಂಡವರಿಗೆ ಸ್ಥಳೀಯ ಮುಕ್ತಿವಾಹಿನಿ ಕಾರ್ಯಕರ್ತರು ಆಶ್ರಯವನ್ನು ನೀಡಿದರು.
ಆಗಸ್ಟ್ 13ರಂದು ಭಾರತ ಆಕಾಶವಾಣಿಯ ಕೋಲ್ಕತ್ತಾ ಕೇಂದ್ರವು ‘ಅಮರ್ ಪುತುಲ್ ಅಜ್ಕೆ ಪ್ರೋಥೋಮ್ ಜಾಬೆ ಷೋಶೂರ್ ಬರಿ..’ ಎಂಬ ಗೀತೆಯನ್ನು ಪ್ರಸಾರ ಮಾಡಿತು. ಅದು ಕಮ್ಯಾಂಡೋಗಳಿಗೆ ನೀಡಲಾಗಿದ್ದ ಕೋಡ್ ಸಿಗ್ನಲ್. ಆ ಹಾಡು ಪ್ರಸಾರವಾಗುತ್ತಿದ್ದಂತೆ, ಅದನ್ನು ಕೋಡ್ ಆಗಿ ಯಾರಿಗೆ ನೀಡಲಾಗಿತ್ತೋ ಅವರು ದಾಳಿಗೆ ಇಳಿದರು. ಆಗಸ್ಟ್ 14ರಂದು ಎರಡನೇ ಹಾಡು ‘ಅಮಿ ಟೊಮೆ ಜೋಟೊ ಷುನಿಯಾಚಿಲ್ ಗನ್ ಟಾರ್ ಬೋಡೋಲ್ ಚೈನಿ ಕೋನೊ ಡಾನ್’ ಪ್ರಸಾರವಾಯಿತು. ಅದು ಉಳಿದ ಕಮ್ಯಾಂಡೋಗಳಿಗೆ ದಾಳಿ ನಡೆಸಲು ನೀಡಿದ್ದ ಸೂಚನೆಯಾಗಿತ್ತು.
ತರಬೇತಿ ಪಡೆದ ಕಮ್ಯಾಂಡೋಗಳ ಪೈಕಿ ಅರವತ್ತು ಮಂದಿಯನ್ನು ಚಿತ್ತಗಾಂಗ್ಗೆ ಕಳುಹಿಸಲಾಗಿತ್ತು. ಈ ಅರವತ್ತು ಮಂದಿಯನ್ನು ತಲಾ ಇಪ್ಪತ್ತು ಮಂದಿ ಮೂರು ತಂಡಗಳನ್ನಾಗಿ ಮಾಡಲಾಗಿತ್ತು. ಈ ಪೈಕಿ ಒಂದು ತಂಡ ಪಾಕಿಸ್ತಾನ ಸೈನ್ಯದ ಮುನ್ನೆಚ್ಚರಿಕಯಿಂದಾಗಿ ಗೊತ್ತುಪಡಿಸಲಾದ ಜಾಗವನ್ನು ತಲುಪಿಕೊಳ್ಳಲು ಸಾಧ್ಯವಾಗಲಿಲ್ಲ. ಉಳಿದ ನಲವತ್ತು ಮಂದಿಯಲ್ಲಿ ಒಂಭತ್ತು ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದರು. 31 ಮಂದಿಯಷ್ಟೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ತಮಗೆ ನೀಡಲಾಗಿದ್ದ 22 ಹಡಗುಗಳ ಮೇಲೆ ದಾಳಿ ನಡೆಸುವ ಕಾರ್ಯಾಚರಣೆಯನ್ನು ಈ ತಂಡ ಸಂಪೂರ್ಣವಾಗಿ ನಡೆಸಲು ಸಾಧ್ಯವಾಗದೇ ಇದ್ದರೂ ಹತ್ತು ಹಡಗುಗಳ ಮೇಲೆ ದಾಳಿ ಸಂಘಟಿಸಿತು. ಬೃಹತ್ ಸ್ಫೋಟದಿಂದಾಗಿ ಎಂವಿ ಅಲ್-ಅಬ್ಬಾಸ್, ಎಂವಿ ಹೋರ್ಮುಝ್ ನೌಕೆಗಳು ಮುಳುಗಿದವು. 19,000 ಟನ್ನಷ್ಟು ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಈ ದಾಳಿಯಿಂದ ಮುಳುಗಿಹೋದವು. ಇವುಗಳಲ್ಲಿ ಇನ್ನೂ ಏಳು ನೌಕೆಗಳ ಮೇಲೆ ಭಾಗಶಃ ದಾಳಿಗಳು ನಡೆದವು.
ಚಂದಾಪುರಕ್ಕೆ ಒಟ್ಟು ಇಪ್ಪತ್ತು ಕಮ್ಯಾಂಡೋಗಳನ್ನು ಕಳುಹಿಸಲಾಗಿತ್ತು. ಈ ಪೈಕಿ ಇಬ್ಬರು ಕಾರ್ಯಾಚರಣೆಯಿಂದ ಹಿಂದೆ ಸರಿದರು. ಉಳಿದ 18 ಮಂದಿಯನ್ನು 6 ತಂಡಗಳನ್ನಾಗಿ ವಿಂಗಡಿಸಲಾಗಿತ್ತು. ಈ ಗೆರಿಲ್ಲಾಗಳು ನಾಲ್ಕು ನೌಕೆಗಳ ಮೇಲೆ ದಾಳಿ ನಡೆಸಿದರು. ಮೂರು ಹಡಗುಗಳು ಭಾರಿ ನಷ್ಟಕ್ಕೆ ಒಳಗಾದವು ಅಥವಾ ಮುಳುಗಲ್ಪಟ್ಟವು.
ನಾರಾಯಣಗಂಜ್ನಲ್ಲಿ ಇಪ್ಪತ್ತು ಮಂದಿ ಕಮ್ಯಾಂಡೋಗಳು ಕಾರ್ಯಾಚರಣೆ ನಡೆಸಿ ನಾಲ್ಕು ನೌಕೆಗಳನ್ನು ಮುಳುಗಿಸಿದರು. ಮೊಂಗ್ಲಾದಲ್ಲಿ ಒಟ್ಟು ಅರವತ್ತು ಕಮ್ಯಾಂಡೋಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಆರು ನೌಕೆಗಳನ್ನು ಈ ತಂಡಗಳು ಮುಳುಗಿಸಿದವು.
ಏಕಕಾಲಕ್ಕೆ ಪೂರ್ವ ಪಾಕಿಸ್ತಾನದ ಹಲವು ಭಾಗಗಳಲ್ಲಿ ನಡೆದ ಈ ಸರಣಿ ದಾಳಿಗಳಿಂದಾಗಿ ‘ಎಲ್ಲವೂ ಸರಿಹೋಗಿದೆ’ ಎಂಬ ಯಾಹ್ಯಾ ಸರ್ಕಾರದ ಹೇಳಿಕೆ ಸುಳ್ಳಾಗಿಹೋಯಿತು. ಸುದ್ದಿ ಎಲ್ಲ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಆದ್ಯತೆ ಮೇರೆಗೆ ಪ್ರಕಟಗೊಂಡಿತು. ಪಾಕಿಸ್ತಾನ ಸೈನ್ಯ ನಂತರ ನಡೆಸಿದ ತನಿಖೆಯ ನಂತರ, ಯಾರೂ ಸಹ ‘ಮುಕ್ತಿವಾಹಿನಿ ಇಂಥ ಕಾರ್ಯಾಚರಣೆ ನಡೆಸಬಹುದು’ ಎಂದು ಊಹಿಸಿರಲಿಲ್ಲ ಎಂದು ಹೇಳಿಕೊಂಡಿತು.
ದಿನೇಶ್ ಕುಮಾರ್ ದಿನೂ
ಬಾಂಗ್ಲಾದೇಶ ವಿಮೋಚನೆಯ ಭಾರತ-ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 7
ಬಾಂಗ್ಲಾದೇಶ ವಿಮೋಚನೆಯ ಭಾರತ ಪಾಕಿಸ್ತಾನ ಯುದ್ಧ ಚರಿತ್ರೆ- ಭಾಗ 6 ಓದಲು ಕ್ಲಿಕ್ ಮಾಡಿ
ಬಾಂಗ್ಲಾದೇಶ ವಿಮೋಚನೆಯ ಭಾರತ-ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 5 ಓದಲು ಕ್ಲಿಕ್ ಮಾಡಿ
Disclaimer: The views expressed in the articles are those of the authors and do not necessarily represent or reflect the views of TruthIndia
(ಮುಂದುವರೆಯುತ್ತದೆ.)