ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಡವರಿಗೆ ವಾರ್ಷಿಕ 72,000 ರೂ. ಕನಿಷ್ಠ ಆದಾಯ ಖಾತ್ರಿ ಯೋಜನೆಗೆ (ನ್ಯಾಯ್ ಯೋಜನೆ) ಟ್ವೀಟ್ ಮೂಲಕ ವಿರೋಧ ವ್ಯಕ್ತಪಡಿಸಿದ್ದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರಿಗೆಕೇಂದ್ರ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್ ಗೆ ಎರಡು ದಿನಗಳ ಒಳಗಾಗಿ ಉತ್ತರಿಸಬೇಕೆಂದು ಆದೇಶಿಸಿದೆ.
ರಾಹುಲ್ ಗಾಂಧಿಯವರ ನ್ಯಾಯ್- ಕನಿಷ್ಟ ಆದಾಯ ಖಾತ್ರಿ ಯೋಜನೆ ಕುರಿತ ದೇಶದಾದ್ಯಂತ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಅನೇಕ ಆರ್ಥಿಕ ಚಿಂತಕರು ಇದನ್ನು ಸ್ವಾಗತಿಸಿದ್ದಾರೆ. ಹಾಗೆಯೇ ಟೀಕೆಗಳೂ ಹರಿದು ಬರುತ್ತಿವೆ. ಆದರೆ ಕೇಂದ್ರ ಸರ್ಕಾರದ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ರಾಜಕೀಯ ಹೇಳಿಕೆ ನೀಡಿರುವುದನ್ನು ಕಾನೂನು ಬಾಹಿರವಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ನೋಟೀಸ್ ನೀಡಿದೆ.
ರಾಜೀವ್ ಕುಮಾರ್ ಓರ್ವ ಸರ್ಕಾರಿ ಅಧಿಕಾರಿಯಾಗಿದ್ದು, ಅದರಲ್ಲೂ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಈ ರೀತಿ ಟೀಕೆ ಮಾಡುವುದು ಸರಿಯಲ್ಲ. ಇದು ಕೇವಲ ಒಬ್ಬ ರಾಜಕಾರಣಿ ಮತ್ತೊಬ್ಬರನ್ನು ಟೀಕಿಸಿದಂತಲ್ಲ ಅಥವಾ ಒಂದು ಪಕ್ಷ ಮತ್ತೊಂದು ಪಕ್ಷವನ್ನು ಟೀಕಿಸಿದಂತಲ್ಲ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 25ರಂದು ಕುಮಾರ್ ಅವರು ತಮ್ಮ ಅಧಿಕೃತ ಟ್ವೀಟ್ಟರ್ ನಲ್ಲಿ ಸರಣಿ ಟ್ವೀಟ್ ಮಾಡಿದ್ದರು. ಅದರಲ್ಲಿ ಒಂದು ಟ್ವೀಟ್ ನಲ್ಲಿ ಕಾಂಗ್ರೆಸ್ ವಿರುದ್ಧ ಟೀಕಿಸಿದ್ದಾರೆ.
“ಪಕ್ಷ ಹಿಂದೆಯೂ ಚುನಾವಣೆಯನ್ನು ಗೆಲ್ಲಲು ಚಂದ್ರನನ್ನು ತೋರಿಸಿ ಭರವಸೆಗಳ ಮಹಾಪೂರವನ್ನೇ ಹರಿಸಿದೆ, ಕಾಂಗ್ರೆಸ್ ಅಧ್ಯಕ್ಷರೂ ಇದೇ ರೀತಿ ಯೋಜನೆಗಳ ಭರವಸೆ ನೀಡಿ ದೇಶದ ಆರ್ಥಿಕ ಶಿಸ್ತನ್ನು ಹಾಳುಮಾಡುತ್ತಿದ್ದಾರೆ ಹಾಗೂ ಈ ಯೋಜನೆಗಳು ಎಂದಿಗೂ ಜಾರಿಯಾಗುವುದಿಲ್ಲ,” ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಮೊದಲು ಟ್ವೀಟ್ ಮಾಡಿದ್ದರು.
ನಂತರ ರಾಹುಲ್ ಜೊತೆ ಇಂಡಿಯಾ ಟುಡೇ ನಡೆಸಿದ ಸಂದರ್ಶನದಲ್ಲಿ ರಾಹುಲ್ ನೀಡಿದ್ದ ಭರವಸೆಯ ವಿರುದ್ಧವಾಗಿಯೂ ರಾಜೀವ್ ಕುಮಾರ್ ಅವರು ಟ್ವೀಟ್ ಮಾಡಿದ್ದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ‘ನ್ಯಾಯ್’ ಯೋಜನೆಯ ಮೂಲಕ ದೇಶದ 5 ಕೋಟಿ ಬಡ ಕುಟುಂಬಗಳಿಗೆ ವಾರ್ಷಿಕ 72ಸಾವಿರ ರುಪಾಯಿ ಹಣಸಹಾಯ ಅವರ ಖಾತೆಗೆ ನೇರವಾಗಿ ವರ್ಗಾವಣೆಯಾಗಲಿದೆ ಎಂದು ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದರು.
ರಾಹುಲ್ ಅವರು ಈ ನ್ಯಾಯ್ ಯೋಜನೆ ಘೋಷಣೆ ಮಾಡಿದ ಮರುದಿನವೇ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಅವರೂ ಸಹ “ನ್ಯಾಯ್” ಬಗ್ಗೆ ಸ್ಪಷ್ಟನೆ ನೀಡಿದ್ದರು.