ಪ್ರಧಾನಿ ನರೇಂದ್ರ ಮೋದಿ ಆಡಳಿತದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದ ಪರಿಸರ ರಕ್ಷಣೆಗೆ ಸಂಬಂಧಪಟ್ಟ ನೀತಿ ನಿಯಮಗಳನ್ನು ದುರ್ಬಲಗೊಳಿಸಲು ಸ್ವತಃ ಮೋದಿಯೇ ಪ್ರಯತ್ನಪಟ್ಟಿದ್ದಾರೆ! ಅರಣ್ಯ ಮತ್ತು ಪರಿಸರ ಸಚಿವಾಲಯ ಎಂಬ ಸಚಿವಾಲಯವನ್ನು ಡಮ್ಮಿಯಾಗಿ ಮಾರ್ಪಡಿಸಿ ತಾನು ಆಡಿದ್ದೇ ಆಟ ಎನ್ನುವಂತೆ ಪ್ರಧಾನಿ ಕಾರ್ಯಾಲಯ ವರ್ತಿಸಿದೆ. HuffPost India ಪತ್ರಿಕೆಯು ಸಂಗ್ರಹಿಸಿರುವ ಸಾರ್ವಜನಿಕ ಮಾಹಿತಿ, ಕಾನೂನಾತ್ಮಕ ದಾಖಲಾತಿಗಳು ಮತ್ತು ಸರ್ಕಾರಿ ದಾಖಲೆಗಳು ತೋರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಆದೇಶದ ಮೇರೆಗೆ ಪರಿಸರಕ್ಕೆ ಸಂಬಂಧಿಸಿದ ಪ್ರಮುಖ ಶಾಸನಗಳು ಮತ್ತು ನಿಯಮಾವಳಿಗಳಿಗೆ ಕನಿಷ್ಟ ಐದು ಪರಿಸರ ವಿರೋಧಿ, ಜನವಿರೋಧಿ ಮತ್ತು ವಿವಾದಾತ್ಮಕ ತಿದ್ದುಪಡಿಗಳನ್ನು ತರಲು ಸೂಚಿಸಲಾಗಿತ್ತು ಎಂಬುದನ್ನು ಈ ಅಧಿಕೃತ ದಾಖಲೆಗಳು ಸೂಚಿಸುತ್ತವೆ.
ಪರಿಸರ ನ್ಯಾಯಶಾಸ್ತ್ರದ ಬುನಾದಿಯನ್ನೇ ಅಲುಗಾಡಿಸುವ ಪ್ರಸ್ತಾವ
ಇವುಗಳ ಪೈಕಿ ನಾಲ್ಕು ತಿದ್ದುಪಡಿಗಳು, ಪರಿಸರಕ್ಕೆ ಸಂಬಂಧಪಟ್ಟಂತೆ ಹಾಲಿ ಚಾಲ್ತಿಯಲ್ಲಿರುವ ಗುಣಮಟ್ಟ ಮತ್ತು ಸುರಕ್ಷತಾ ಕ್ರಮಗಳನ್ನು ಗಮನಾರ್ಹವಾಗಿ ದುರ್ಬಲಗೊಳಿಸುವಂತಿದ್ದವು. ಈ ನಾಲ್ಕೂ ತಿದ್ದುಪಡಿಗಳನ್ನು ಜಾರಿಗೆ ತರಲಾಗಿತ್ತು, ಆದರೆ ನಂತರದಲ್ಲಿ ಕೋರ್ಟುಗಳು ಅವುಗಳಿಗೆ ತಡೆಯಾಜ್ಞೆ ನೀಡಿದವು. ಐದನೇ ತಿದ್ದುಪಡಿಯಲ್ಲಿ ಭಾರತದ ಪರಿಸರ ನ್ಯಾಯಶಾಸ್ತ್ರದ ಬುನಾದಿಯಾಗಿರುವ ಕಾನೂನು ಚೌಕಟ್ಟನ್ನೇ ಮರುರೂಪಿಸುವ ಪ್ರಸ್ತಾವನೆಯಿತ್ತು. ಇದು ಅನುಷ್ಠಾನಕ್ಕೆ ಬರುವ ಮೊದಲೇ ಸಂಸದೀಯ ಸಮಿತಿಯು ಈ ತಿದ್ದುಪಡಿಯನ್ನು ಕಾನೂನುಬಾಹಿರ ಎಂದು ಘೋಷಿಸಿ ಮೂಲೆಗೆ ತಳ್ಳಿತು.
ರಿಟರ್ನ್ ಆದ ಮೋದಿಯವರ “ದೀಪಾವಳಿ ಗಿಫ್ಟ್”
2018 ನವೆಂಬರ್ 2ರಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ (ಎಮ್ಎಸ್ಎಮ್ಇ) ಅಧಿಕೃತ ಕಾರ್ಯಕ್ರಮದಲ್ಲಿ ಮೋದಿಯವರೇ ಇತ್ತೀಚಿನ ತಿದ್ದುಪಡಿಯನ್ನು “ದೀಪಾವಳಿ ಗಿಫ್ಟ್” ಎಂದು ಘೋಷಿಸಿದ್ದರು. ಈ ತಿದ್ದುಪಡಿಗೆ 2019ರ ಆರಂಭದಲ್ಲಿ ದೆಹಲಿ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ರಿಯಲ್ ಎಸ್ಟೇಟ್ ದಂಧೆ ಒತ್ತಡ – ಬದಲಾದ ಪರಿಸರ ಸುರಕ್ಷತಾ ಶಾಸನ
ರಿಯಲ್ ಎಸ್ಟೇಟ್ ಉದ್ಯಮಿಗಳ ಒತ್ತಡಕ್ಕೆ ಮಣಿದು ಎತ್ತರದ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭಗಳಲ್ಲಿ, ಬೃಹತ್ ಪ್ರಮಾಣದ ನಿರ್ಮಾಣ ಕಾಮಗಾರಿಗಳಲ್ಲಿ ಪರಿಸರ ಇಲಾಖೆಯಿಂದ ನೀಡಬೇಕಿದ್ದ ಪರವಾನಗಿಯ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಲಾಯಿತು. ಪರಿಸರದ ವಿಷಯಕ್ಕೆ ಸಂಬಂಧಿಸಿದ ಪರಿಣತಿ ಮತ್ತು ಅನುಭವವಿಲ್ಲದ ಸ್ಥಳೀಯ ಸಂಸ್ಥೆಗಳು ಇಂತಹ ಸೂಕ್ಷ್ಮವಾದ ಪರವಾನಗಿ ನೀಡಲು ಅನರ್ಹವಾಗಿರುತ್ತವೆ ಎಂಬ ವಾಸ್ತವಾಂಶದ ಅರಿವಿದ್ದೂ ವಿದೇಶಿ ಕಂಪನಿಗಳನ್ನು ಆಹ್ವಾನಿಸುವ ಭರದಲ್ಲಿ ಪ್ರಧಾನಮಂತ್ರಿ ಕಾರ್ಯಾಲಯವು ಈ ತಿದ್ದುಪಡಿಗೆ ಆದೇಶಿಸಿತು. ಇದರ ಪ್ರಕಾರ ಹೊಸ ನಿಯಮಾವಳಿಗಳನ್ನು ರೂಪಿಸಿ ಡಿಸೆಂಬರ್ 2016ರಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC) ಅಧಿಸೂಚನೆ ಹೊರಡಿಸಿತ್ತು. 2017ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಈ ಅಧಿಸೂಚನೆಯನ್ನು ತಳ್ಳಿಹಾಕಿತು.
ಪ್ರಧಾನಿ ತೆಕ್ಕೆಯಲ್ಲಿ ಉಸಿರು ಕಳೆದುಕೊಂಡ ಪರಿಸರ ಸಚಿವಾಲಯ
ಪರಿಸರ ಸಚಿವಾಲಯವು ಇಷ್ಟಕ್ಕೇ ಸುಮ್ಮನಾದಂತೆ ಕಾಣಲಿಲ್ಲ. 2018 ನವೆಂಬರ್ನಲ್ಲಿ ಕೆಲ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಅಂಥದ್ದೇ ಎರಡು ಅಧಿಸೂಚನೆಗಳನ್ನು ಹೊರಡಿಸುವ ಮತ್ತೊಂದು ಯತ್ನ ಮಾಡಿತೆಂದು ಈಗ ನ್ಯಾಯಾಲಯದ ದಾಖಲೆಗಳು ಮತ್ತು ಅಧಿಕೃತ ದಾಖಲಾತಿಗಳು ಸೂಚಿಸುತ್ತವೆ. ಪುನಃ ಅಧಿಸೂಚನೆ ಹೊರಬಿದ್ದ ಎರಡೇ ವಾರಗಳಲ್ಲಿ ಸಂಘ ಸಂಸ್ಥೆಗಳು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸಿ ತಿದ್ದುಪಡಿಗೆ ತಡೆಯಾಜ್ಞೆ ತಂದವು. ಅಂದಿನ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ರಿಗೆ ಮೋದಿಯವರು ಹೇಗೆ ನೇರ “ಮಾರ್ಗದರ್ಶನ” ನೀಡಿ ದೇಶದಲ್ಲಿ ಹಸಿರು ಕಾಯ್ದುಕೊಳ್ಳುವ ನಿಯಮಾವಳಿಗಳನ್ನು ಗಾಳಿಗೆ ತೂರಲು ನಿರಂತರವಾಗಿ ಒತ್ತಡ ಹೇರಿದರು ಎಂಬುದನ್ನು ದಾಖಲೆಗಳು ತೋರಿಸುತ್ತವೆ ಎಂದು HuffPost India ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ. ಅಲ್ಲದೆ ಆ ಸಮಯದಲ್ಲಿ ಪರಿಸರ ಕಾನೂನುಗಳು ಮತ್ತು ನಿಯಮಗಳಿಗೆ ವಿವಾದಾತ್ಮಕ ತಿದ್ದುಪಡಿಗಳನ್ನು ಜಾರಿಗೊಳಿಸಲು ನಡೆಯುತ್ತಿದ್ದ ಚರ್ಚೆ ಮತ್ತು ಅನುಷ್ಠಾನವಾಗುತ್ತಿದ್ದ ಬದಲಾವಣೆಗಳ ಬಗ್ಗೆ ಸಚಿವ ಜಾವಡೇಕರ್ ಸ್ವತಃ ಪ್ರಧಾನಿಗೆ ಕ್ಷಣಕ್ಷಣದ ಮಾಹಿತಿಯನ್ನು ರವಾನಿಸುತ್ತಿದ್ದ ಬಗ್ಗೆಯೂ ದಾಖಲೆಗಳು ಬೆಳಕು ಚೆಲ್ಲಿವೆ ಎಂದು ತಿಳಿಸಲಾಗಿದೆ.
ಹಸಿರ ಸಂರಕ್ಷಣೆಗೆ ನಿಂತ ಅಂದಿನ ರಕ್ಷಣಾ ಸಚಿವ
ಲಭ್ಯವಿರುವ ಸರ್ಕಾರಿ ದಾಖಲೆಗಳು ಹೇಳುವಂತೆ ಆ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿದ್ದ, ಇತ್ತೀಚೆಗೆ ನಿಧನರಾದ, ಹಿರಿಯ ಬಿಜೆಪಿ ನಾಯಕ ಮನೋಹರ್ ಪರಿಕ್ಕರ್ ಅವರು ಪ್ರಧಾನಮಂತ್ರಿ ಕಾರ್ಯಾಲಯದಿಂದ ಹೊರಡಿಸಲಾಗಿದ್ದ ವಿವಾದಾತ್ಮಕ ಆದೇಶದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಬೃಹತ್ ಪ್ರಮಾಣದ ನಿರ್ಮಾಣ ಯೋಜನೆಗಳಿಗೆ ಪರಿಸರ ಇಲಾಖೆ ನೀಡಬೇಕಿದ್ದ ಪರವಾನಗಿಯ ಅಧಿಕಾರ ವ್ಯಾಪ್ತಿಯನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವುದನ್ನು ಅವರು ವಿರೋಧಿಸಿ ಅವುಗಳಿಗೆ ಅಂತಹ ಸಾಮರ್ಥ್ಯ ಇಲ್ಲವೆಂದು ಸ್ಪಷ್ಟವಾಗಿ ಹೇಳಿದ್ದರೆಂದು ದಾಖಲೆಗಳು ಹೇಳುತ್ತವೆ.
ಬಂಡವಾಳಿಗರ ಓಲೈಕೆಯಲ್ಲಿ ಪರಿಸರ ಬಲಿ
ನಾಗರಿಕರ ಮತ್ತು ಪರಿಸರ ಸಂರಕ್ಷಣೆಗೆಂದು ವಿವೇಚನೆಯಿಂದ ರೂಪಿಸಲಾಗಿರುವ ಸುರಕ್ಷತಾಕ್ರಮಗಳನ್ನೇ ಸಂಸತ್ತಿಗೂ ತಿಳಿಯದಂತೆ ಕಿತ್ತೊಗೆಯುವ ಮಟ್ಟಕ್ಕೆ ಪ್ರಧಾನಿ ಮೋದಿಯವರು ಇಳಿದಿದ್ದಾರೆ ಎಂದರೆ ಬೃಹತ್ ಬಂಡವಾಳಿಗರನ್ನು ಒಲೈಸುವ ಪರಿ ಇನ್ನು ಹೇಗಿರಬಹುದು? ದೆಹಲಿಯ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಪಕ್ಕದ ಹರ್ಯಾಣ ರಾಜ್ಯದಲ್ಲಿರುವ ಅರಾವಳಿ ಪರ್ವತ ಶ್ರೇಣಿಯ ಹಸಿರನ್ನೂ ಇದೇ ರೀತಿ ನಾಶಗೊಳಿಸಲು ಕಳೆದ ತಿಂಗಳಷ್ಟೇ ಹರ್ಯಾಣದ ಬಿಜೆಪಿ ಸರ್ಕಾರ ರಿಯಲ್ ಎಸ್ಟೇಟ್ ದಂಧೆಕೋರರ ಪರವಾದ ತಿದ್ದುಪಡಿ ತಂದಿತು. ಹಾಗೇ ನ್ಯಾಯಾಲಯದಿಂದ ಛೀಮಾರಿಯನ್ನೂ ಹಾಕಿಸಿಕೊಂಡಿತು.
ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ಸರ್ಕಾರ ಪರಿಸರ ಸಂರಕ್ಷಣೆಗಾಗಿ ಒಂದೇ ಒಂದು ಶಾಸನವನ್ನೂ ರೂಪಿಸಿಲ್ಲ. ಪರಿಸರಕ್ಕೆ ಸಂಬಂಧಿಸಿದಂತೆ ಹಾಲಿ ಇರುವ ಪ್ರತಿಯೊಂದು ಶಾಸನವನ್ನೂ ದುರ್ಬಲಗೊಳಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಜನರ ಬದುಕು ತೀರಾ ದುರ್ಬರವಾಗಲಿದೆ- ರುತ್ವಿಕ್ ದತ್ತ, ಪರಿಸರಕ್ಕೆ ಸಂಬಂಧಿಸಿದ ಕಾನೂನುತಜ್ಞ
ಎಚ್ಚರವಿದ್ದು ಕಾಯುತ್ತಿದ್ದಾರೆ ಜನ!
ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಮೋದಿಯವರು ಸಂಸತ್ತಿನ ನೆಲವನ್ನು ಸ್ಪರ್ಶಿಸಿದ್ದರ ಗುಟ್ಟು ಈಗ ರಟ್ಟಾಗುತ್ತಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತೇ ಪ್ರಧಾನವಾದುದು. ಆದರೆ ಸಂಸತ್ತನ್ನು ದೇಗುಲ ಎಂದು ಬಣ್ಣಿಸಿದ್ದ ಮೋದಿಯವರು ಬಹುಶಃ ಗದ್ದುಗೆ ಏರಿದ ನಂತರ ತಮ್ಮನ್ನು ತಾವೇ ದೇಗುಲದ ಅರ್ಚಕನೆಂದು ತಿಳಿದುಬಿಟ್ಟರೇನೋ.. ಹಾಗಾಗಿ ಇಲ್ಲಿ ಪ್ರಧಾನಮಂತ್ರಿಯವರ ಕಾರ್ಯಾಲಯವೇ ಎಲ್ಲವೂ ಎನ್ನುವಂತಾಗಿಬಿಟ್ಟಿದೆ! ಶಾಸನಗಳು ಮತ್ತು ತಿದ್ದುಪಡಿಗಳು ಪ್ರಧಾನಿಯ ಕಾರ್ಯಾಲಯದಿಂದ ಸಂವಿಧಾನಬಾಹಿರವಾಗಿ ಆದೇಶದ ರೂಪದಲ್ಲಿ ಪಾಸ್ ಆಗುತ್ತವೆಂದರೆ, ಅದಕ್ಕೇ ಇರಬೇಕು, ಮೋದಿಯವರು ಸಂಸತ್ತಿನಲ್ಲಿ ಕುರ್ಚಿ ಏರುವ ಮೊದಲೇ ಸಂಸತ್ತಿಗೆ ‘ದೊಡ್ಡ ನಮಸ್ಕಾರ’ ಎಂದು ಹೇಳಿಬಿಟ್ಟಿದ್ದು! ಜನವಿರೋಧಿ ಶಾಸನಗಳು ಜನರೇ ಚುನಾಯಿಸಿದ ಸಂಸತ್ತಿನಲ್ಲಿ ಅನುಮೋದನೆಯಾಗುವುದು ಅಷ್ಟು ಸುಲಭವಲ್ಲ, ಆದರೆ ಒಬ್ಬ ಜನವಿರೋಧಿ ಪ್ರಧಾನಿಯ ಸಹಿ ಪಡೆದು ಮುಂದೆ ದಾಟಿಬಿಡಬಹುದು. ಏನೇ ಆಗಲಿ, ನ್ಯಾಯಾಂಗ, ಮಾಧ್ಯಮ, ಜನತೆ ಇವೆಲ್ಲವುಗಳ ಒಂದು ವಿಭಾಗ ಎಚ್ಚರವಾಗಿಯೇ ಇದೆ, ದೇಶದ ಜನತೆಯ ಹಿತ ಕಾಯುತ್ತಿದೆ. ತಾನು ಚೌಕೀದಾರನೆಂದು ಕೂಗಿ ಹೇಳುತ್ತಿಲ್ಲವಷ್ಟೇ!
(ಸುದ್ದಿ ಮೂಲ: HuffPost India)