ಇಂದು ಮುಂಜಾನೆ ರಾಜ್ಯ ಸರ್ಕಾರದ ಸಚಿವರನ್ನು ಗುರಿಯಾಗಿಸಿಕೊಂಡು ಮಂಡ್ಯ ಹಾಗೂ ಹಾಸನಗಳಲ್ಲಿ ಐಟಿ ದಾಳಿ ನಡೆದಿದೆ.
ಸರ್ಕಾರದ ಪ್ರಭಾವಿ ಸಚಿವ ಹಾಗೂ ಮುಖ್ಯಮಂತ್ರಿಗಳ ಆಪ್ತ ಸಿಎಸ್.ಪುಟ್ಟರಾಜು ಅವರ ಮನೆ, ಪುಟ್ಟರಾಜು ಮನೆ, ಅವರ ಸಂಬಂಧಿಕರ ಮನೆಗಳ ಮೇಲೆ ಐಟಿ ರೇಡ್ ನಡೆದಿದೆ. ಹಾಗೆಯೇ ಪುಟ್ಟರಾಜು ಅಣ್ಣನ ಮಗ, ಜಿಪಂ. ಸದಸ್ಯ ಅಶೋಕ್ ಅವರ ಮೈಸೂರಿನ ವಿಜಯನಗರದಲ್ಲಿರುವ ಮನೆ ಮೇಲೂ ಐಟಿ ತಂಡ ದಾಳಿ ನಡೆಸಿದೆ. ಪುಟ್ಟರಾಜು ಸ್ವಗ್ರಾಮ ಚಿನಕುರಳಿಯಲ್ಲಿರುವ ಮನೆ ಮೇಲೂ ಐಟಿ ರೇಡ್ ನಡೆದಿದೆ.
ವಿಧಾನ ಪರಿಷತ್ನ ಜೆಡಿಎಸ್ ಸದಸ್ಯ, ಸಿಎಂ ಕುಮಾರಸ್ವಾಮಿ ಆಪ್ತ ಬಿಎಂ ಫಾರೂಖ್ ಮೇಲೂ ಈ ಐಟಿ ದಾಳಿ ನಡೆದಿದೆ.
ಇಂದು ಬೆಳಿಗ್ಗೆ 5 ಗಂಟೆಗೆ ಈ ಐಟಿ ದಾಳಿ ನಡೆದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಪುಟ್ಟರಾಜು, ‘ನಿನ್ನೆ ಸಿಎಂ ಕುಮಾರಸ್ವಾಮಿ ಅವರು ಐಟಿ ರೇಡ್ ಮಾಡ್ತಾರೆ ಅಂತ ಹೇಳಿದ್ರು, ಉದ್ದೇಶ ಪೂರ್ವಕವಾಗೇ ರೇಡ್ ಮಾಡ್ತಾರೆ ಅಂತ ತಿಳಿಸಿದ್ರು,ಅದೇ ರೀತಿ ಐಟಿ ರೇಡ್ ನಡೆದಿದೆ’ ಎಂದಿದ್ದಾರೆ.
‘ಕಳೆದ 35 ವರ್ಷಗಳಲ್ಲಿ ಪಾರದರ್ಶಕವಾಗಿ ಬದುಕಿದ್ದೇನೆ. ಒಂದೇ ಕಪ್ಪುಚುಕ್ಕೆ ನನ್ನ ಮೇಲಿಲ್ಲ. ರಾಜಕೀಯ ಪ್ರೇರಿತವಾಗಿ ನಡೆದಿರುವ ಈ ದಾಳಿಯಿಂದ ನಾನು ಯಾವ ರೀತಿಯಿಂದಲೂ ವಿಚಲಿತನಾಗಿಲ್ಲ. ಇದು ನಮಗೆ ಒಳ್ಳೆಯದೇ ಮಾಡಿದೆ, ನಮ್ಮ ಕಾರ್ಯಕರ್ತರು ರೊಚ್ಚಿಗೇಳಲಿದ್ದಾರೆ. ಇದರಿಂದ ಬಿಜೆಪಿಯವರು ಅವರ ಬೆಂಬಲಿತ ಅಭ್ಯರ್ಥಿಗೆ ಅನುಕೂಲ ವಾಗುತ್ತದೆ ಎಂದುಕೊಂಡಿದ್ದರೆ ಇದು ಅವರ ಭ್ರಮೆ ಅಷ್ಟೇ’ ಎಂದು ಪುಟ್ಟರಾಜು ಹೇಳಿದ್ದಾರೆ.
ಹಾಸನದಲ್ಲಿ 10 ಪ್ರಮುಖ ಸ್ಥಳಗಳಲ್ಲಿ ಧಾಳಿ….
ಹಾಸನದಲ್ಲಿ ಹೆಚ್.ಡಿ.ರೇವಣ್ಣನ ಆಪ್ತರು ಹಾಗೂ ಗುತ್ತಿಗೆದಾರರ ಮನೆಗಳ ಮೇಲೆ ಐಟಿ ಧಾಳಿ ನಡೆಸಿದೆ.. ಎಕ್ಸಿಕುಟಿವ್ ಎಂಜಿನಿಯರ್ ಮಂಜುನಾಥ್ ಮನೆ ಹಾಗೂ ಹಾಸನದ ಎಕ್ಸಿಕುಟಿವ್ ಎಂಜಿನಿಯರ್ ಕಚೇರಿಯಲ್ಲಿಯೂ ತೆರಿಗೆ ಅಧಿಕಾರಿಗಳ ತಂಡ ತಪಾಸಣೆ ನಡೆಸಿದೆ. ನಾರಾಯಣ ರೆಡ್ಡಿ, ಅಶ್ವಥ್ ರಾಯಗೌಡ ಎಂಬ ಗುತ್ತಿಗೆದಾರರ ನಿವಾಸಗಳ ಮೇಲೆ ಧಾಳಿ.
ಗುತ್ತಿಗೆದಾರರು ಹಾಗೂ 7 ಎಂಜಿನಿಯರ್ ಗಳ ಮೇಲೆ 20 ಕಡೆಗಳಲ್ಲಿ ಐಟಿ ಅಧಿಕಾರಿಗಳಿಂದ ಧಾಳಿ ನಡೆದಿದೆ.
ತಮ್ಮ ಆಪ್ತರ ಮನೆಗಳ ಮೇಲೆ ಐಟಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಎಚ್ ಡಿ ರೇವಣ್ಣ ಕಾರವಾಗಿ ಪ್ರತಿಕ್ರಿಯಿಸಿದ್ದಾರೆ. “ಐಟಿ ದಾಳಿ ನಡೆಸಿ ದೇವೇಗೌಡರನ್ನು ಹೆದರಿಸ್ತೀವಿ ಅಂದುಕೊಂಡಿದ್ದರೆ, ಇದು ಇದು ಬಿಜೆಪಿಯ ಅಂತ್ಯ ಕಾಲ, ಮೋದಿಯ ಕಾಲ. ಈ ಐಟಿ ಚೀಫ್ ಹೋಗಿ ಯಡಿಯೂರಪ್ಪ ಮನೆ ಮೇಲೆ ದಾಳಿ ನಡೆಸಲಿ ನೋಡೋಣ, ಐಟಿ ಮುಖ್ಯಸ್ಥ ಫೋರ್ ಟ್ವೆಂಟಿ” ಎಂದು ಪ್ರತಿಕ್ರಿಯಿಸಿದ್ದಾರೆ.
ಕಟ್ಟೆಯೊಡೆದ ಕಾರ್ಯಕರ್ತರ ಆಕ್ರೋಶ:
ಸಿ ಎಂ ಕುಮಾರಸ್ವಾಮಿ ಆಪ್ತರನ್ನು ಗುರಿಪಡಿಸಿಕೊಂಡು ನಡೆಸಿರುವ ದಾಳಿಗಳಿಂದ ಜೆಡಿಎಸ್ ಕಾರ್ಯಕರ್ತರು, ಸಿ ಎಸ್ ಪುಟ್ಟರಾಜು ಅವರ ಬೆಂಬಲಿಗರ ಆಕ್ರೋಶದ ಕಟ್ಟೆಯೊಡೆದಿದ್ದು ರಸ್ತೆ ತಡೆ ನಡೆಸಿ ಪ್ರತಿಭಟನೆಗಿಳಿದಿದ್ದಾರೆ.