ಕೋಲ್ಕತ್ತಾ: ‘ಲೋಕಸಭಾ ಚುನಾವಣೆಯ ನಂತರ ದೇಶದಲ್ಲಿ ಪ್ರತಿಪಕ್ಷಗಳ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ನೋಟು ಅಮಾನ್ಯ ಕುರಿತು ತನಿಖೆ ನಡೆಸಲಾಗುವುದು ಮತ್ತು ಯೋಜನಾ ಆಯೋಗವನ್ನು ಪುನರಚಿಸಲಾಗುವುದು’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಭರವಸೆ ನೀಡಿದ್ದಾರೆ.
ಬುಧವಾರ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು, ‘100 ದಿನದ ಕೂಲಿ ಯೋಜನೆಯನ್ನು 200 ದಿನಗಳಿಗೆ ಹೆಚ್ಚಳ ಮಾಡಲಾಗುವುದು ಹಾಗೂ ದುಪ್ಪಟ್ಟು ವೇತನ ಹೆಚ್ಚಿಸಲಾಗುವುದು’ ಎಂದೂ ಶ್ರಮಿಕ ವರ್ಗಕ್ಕೆ ಭರವಸೆ ನೀಡಿದ್ದಾರೆ.
‘ಪ್ರಸ್ತುತ ಇರುವ ನೀತಿ ಆಯೋಗದಿಂದ ಯಾವುದೇ ಪ್ರಯೋಜನವಿಲ್ಲ. ಅದರ ಬದಲಾಗಿ ಮೊದಲಿದ್ದ ಯೋಜನಾ ಆಯೋಗವನ್ನು ಮತ್ತೆ ರಚಿಸುತ್ತೇವೆ’ ಎಂದ ಅವರು, ಸದ್ಯ ಜಾರಿಯಿರುವ ‘ಜಿಎಸ್ ಟಿ ಬಗ್ಗೆಯೂ ಪರಿಶೀಲಿಸುತ್ತೇವೆ. ಇದು ನಿಜವಾಗಿಯೂ ಜನರಿಗೆ ಸಹಕಾರಿಯಾಗಿದ್ದರೆ ಇದನ್ನೇ ಮುಂದುವರೆಸುತ್ತೇವೆ‘ಎಂದು ತಿಳಿಸಿದರು.
ಕೇಂದ್ರವು ಮಾಜಿ ಬಿಎಸ್ಎಫ್ ಪ್ರಧಾನ ನಿರ್ದೇಶಕ ಕೆ ಕೆ ಶರ್ಮಾ ಅವರನ್ನು ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ನ ವಿಶೇಷ ಪೊಲೀಸ್ ವೀಕ್ಷಕರಾಗಿ ನೇಮಿಸಿ ಆದೇಶ ಹೊರಡಿಸಿರುವ ಬಗ್ಗೆ ಮಮತಾ ಬ್ಯಾನರ್ಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಶರ್ಮಾ ಅವರು ಡೆಪ್ಯುಟಿ ಜನರಲ್ ಆಗಿದ್ದ ವೇಳೆ ಸಮವಸ್ತ್ರದಲ್ಲೇ ಆರ್ ಎಸ್ ಎಸ್ ನ ಕಾರ್ಯಕ್ರಮದಲ್ಲಿ ಭಾಗವಾಹಿಸುತ್ತಿದ್ದರು” ಎಂದು ಟೀಕಿಸಿರುವ ಮಮತಾ “ನಿವೃತ್ತ ಅಧಿಕಾರಿಯೊಬ್ಬರು ಸೇವಾನಿರತ ಪೊಲೀಸ್ ಅಧಿಕಾರಿಗಳ ನಿಯೋಜನೆಯ ಉಸ್ತುವಾರಿ ನಡೆಸಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.
ನೋಟ್ ಬ್ಯಾನ್ ಕುರಿತು ತನಿಖೆ, ಯೋಜನಾ ಆಯೋಗದ ಮರುರಚನೆ: ಮಮತಾ ಚುನಾವಣಾ ಭರವಸೆ
100 ದಿನದ ಕೂಲಿ ಯೋಜನೆಯನ್ನು 200 ದಿನಗಳಿಗೆ ಹೆಚ್ಚಳ ಮಾಡಲಾಗುವುದು ಹಾಗೂ ದುಪ್ಪಟ್ಟು ವೇತನ ಹೆಚ್ಚಿಸಲಾಗುವುದು ಎಂದು ಶ್ರಮಿಕ ವರ್ಗಕ್ಕೆ ಭರವಸೆ ನೀಡಿದ ಮಮತಾ ಬ್ಯಾನರ್ಜಿ

Best wishes Mamath deedi