ಹೆಸರಾಂತ ಅರ್ಥಶಾಸ್ತ್ರಜ್ಞ, ಗಾಂಧಿವಾದಿ, ಜೀನ್ ಡ್ರೀಝ್ ಅವರನ್ನು ಇಂದು ಬೆಳಿಗ್ಗೆ ಜಾರ್ಖಂಡ್ ಪೊಲೀಸರು ಬಂಧಿಸಿ ಕೆಲ ಸಮಯದ ನಂತರ ಬಿಡುಗಡೆಗೊಳಿಸಿದ ಘಟನೆ ನಡೆದಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ ರಾಷ್ಟ್ರೀಯ ಸಲಹಾ ಮಂಡಳಿ (ಎನ್ ಎ ಸಿ)ಯ ಸದಸ್ಯರಾಗಿದ್ದರೂ ಆಗಿದ್ದ ಜೀನ್ ಡ್ರೀಝ್ ಅವರನ್ನು ಪಶ್ಚಿಮ ಜಾರ್ಖಂಡ್ ನ ಗರ್ವಾ ಪಟ್ಟಣದಿಂದ 40 ಕಿಮೀ ದೂರದಲ್ಲಿ ಬಂಧಿಸಲಾಗಿತ್ತು.
ಅನುಮತಿ ಇಲ್ಲದೇ ಸಾರ್ವಜನಿಕರೊಂದಿಗೆ ಸಭೆ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ಜೀನ್ ಡ್ರೀಝ್ ಹಾಗೂ ಅವರೊಂದಿಗಿದ್ದ ಇನ್ನಿಬ್ಬರು ಜೊತೆಗಾರರನ್ನು ಪೊಲೀಸರು ಪೊಲೀಸರು ಬಂಧಿಸಿದ್ದರು. ಈ ಬಂಧನಕ್ಕೆ ಸಾರ್ವಜನಿಕರಿಂದ ಮತ್ತು ರಾಷ್ಟ್ರಮಟ್ಟದಲ್ಲಿ ಟೀಕೆ ವ್ಯಕ್ತವಾಗುತ್ತಿದ್ದಂತೆ ಬಿಡುಗಡೆಗೊಳಿಸಲಾಗಿದೆ.
ಜೀನ್ ಡ್ರೀಝ್ ಬಂಧನವಾಗುತ್ತಿದ್ದಂತೆ ವಿಷಯ ತಿಳಿದು ಆಘಾತ ವ್ಯಕ್ತಪಡಿಸಿದ್ದ ಜೈ ಕಿಸಾನ್ ಆಂದೋಲನದ ರೂವಾರಿ ಯೋಗೇಂದ್ರ ಯಾದವ್ ಅವರು ಜೀನ್ ಡ್ರೀಝ್ ಅವರ ಬಂಧನವು, “ಪದಗಳಲ್ಲಿ ಹೇಳತೀರದಷ್ಟು ಆಘಾತಕಾರಿ ವಿಷಯ. ಜೀನ್ ಡ್ರೀಝ್ ಒಬ್ಬ ಸಂತ ಅರ್ಥತಜ್ಞ. ಕೊಳಗೇರಿ ಜನರೊಂದಿಗೆ ವಾಸಿಸುತ್ತಾ ಬರವಣಿಗೆ ನಡೆಸುವ ಅವರು ನೊಬೆಲ್ ಪ್ರಶಸ್ತಿ ಪಡೆಯುವ ಸಾಮರ್ಥ್ಯವಿರುವ ಒಬ್ಬ ಚಿಂತಕ, ಯಾವುದೇ ಅರ್ಥಶಾಸ್ತ್ರಜ್ಞ ಮಾಡಿದರಷ್ಟು ಕೆಲಸವನ್ನು ಭಾರತದ ಬಡವರಿಗೆ ಅವರು ಮಾಡಿದ್ದಾರೆ. ತಮ್ಮೆಲ್ಲಾ ಶ್ರೀಮಂತಿಕೆ ತೊರೆದು ಭಾರತದ ಪೌರತ್ವ ಪಡೆದು ಇಲ್ಲಿನ ಭಾರತದ ಜನರಿಗಾಗಿ ಬದುಕುತ್ತಿರುವ ಅವರು ಒಬ್ಬ ಶಾಂತಿವಾದಿ. ಅವರನ್ನು ಬಂಧಿಸುವುದಕ್ಕಿಂತ ನಾಚಿಕೆಗೇಡಿನ ಕೆಲಸ ಮತ್ತೊಂದಿಲ್ಲ” ಎಂದು ಕೆಂಡ ಕಾರಿದ್ದಾರೆ.
ಭಾರತೀಯರ ಆಹಾರದ ಹಕ್ಕಿಗಾಗಿನ ಹೋರಾಟ ನಡೆಸುತ್ತಿರುವ ಡ್ರೀಝ್ ಮೂಲತಃ ಬೆಲ್ಜಿಯಂ ದೇಶದವರಾಗಿದ್ದು, 1979ರ ಹೊತ್ತಿಗೆ ಭಾರತಕ್ಕೆ ಬಂದು ನೆಲೆಸಿದರು. ಆಧುನಿಕ ಜಗತ್ತಿನಲ್ಲಿ ಹಸಿವೆಯ ಸಮಸ್ಯೆ ಕುರಿತು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರೊಂದೊಗೆ ಸೇರಿ ಕೃತಿ ರಚಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರವು ಬಡವರ ಆಹಾರದಂತ ದೇಶದ ಜ್ವಲಂತ ಸಮಸ್ಯೆಯನ್ನು ಕಡೆಗಣಿಸಿ ಕೇವಲ ಕಾರ್ಪೊರೇಟ್ ಉದ್ದಯಮಪತಿಗಳಿ ಪರವಾಗಿ ಕೆಲಸ ಮಾಡುವುದರ ಟೀಕಿಸಿರುವ ಪ್ರಮುಖರಲ್ಲಿ ಜೀನ್ ಡ್ರೀಝ್ ಕೂಡಾ ಒಬ್ಬರು ಎಂಬುದನ್ನು ಗಮನಿಸಬಹುದು.