ಬೆಂಗಳೂರು: ರಾಜ್ಯದ ಮಂಡ್ಯ, ಮೈಸೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ನಡೆದಿರುವ ಆದಾಯ ತೆರಿಗೆ ದಾಳಿ ಖಂಡಿಸಿ, ಇದು ರಾಜಕೀಯ ಪ್ರೇರಿತ ಎಂದು ಆರೋಪಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಐಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಚಿವ ಸಿ.ಎಸ್. ಪುಟ್ಟರಾಜು ಸಂಬಂಧಿಕರು ಸೇರಿದಂತೆ ಅನೇಕ ಜೆಡಿಎಸ್ ಬೆಂಬಲಿಗರು ಹಾಗೂ ಕಾರ್ಯಕರ್ತರ ಮನೆ ಮೇಲೆ ಇಂದು ಐಟಿ ದಾಳಿ ನಡೆಸಿತ್ತು. ಈ ಹಿನ್ನೆಲೆ ಕೇಂದ್ರ ಸರ್ಕಾರ ಐಟಿ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡು ದಾಳಿ ನಡೆಸುತ್ತಿದೆ ಎಂದು ಮೈತ್ರಿ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.
ಸೋಲಿನ ಭಯದಿಂದ ಐಟಿ ದಾಳಿ: ಸಿದ್ದರಾಮಯ್ಯ
ಪ್ರತಿಭಟನಾನಿರತ ಸಿದ್ದರಾಮಯ್ಯ ಮಾತನಾಡಿ, ‘ಸಾಂಕೇತಿಕವಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಈ ಪ್ರತಿಭಟನೆ ನಡೆಸುತ್ತಿದ್ದೇವೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಯಾರು ತೆರಿಗೆ ವಂಚನೆ ಮಾಡಿದ್ದಾರೋ ಅವರನ್ನು ಪತ್ತೆ ಹಚ್ಚಿ ದಾಳಿ ನಡೆಸಲು ನಮ್ಮ ಅಭ್ಯಂತರ ಇಲ್ಲ. ಆದರೆ ಬಿಜೆಪಿ ಪಕ್ಷ ಸ್ವಹಿತಾಸಕ್ತಿಗಾಗಿ ಐಟಿ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ನಾವು ಸಹ ಯಾವುದೇ ಅಧಿಕಾರಿಗಳ ಮೇಲೆ ದಾಳಿ ನಡೆಸಬಹುದು, ಆ ಅಧಿಕಾರ ನಮಗಿದೆ. ಆದರೆ ನಾವು ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ. ನರೇಂದ್ರ ಮೋದಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ಸಂವಿಧಾನದಲ್ಲಿ ನಂಬಿಕೆಯೇ ಇಲ್ಲ’ ಎಂದು ಹರಿಹಾಯ್ದರು.
‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ನಾಯಕರ ಮೇಲೆ ದಾಳಿ ನಡೆಸಿದ ಇತಿಹಾಸವೇ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಗಳ ಅನೇಕ ನಾಯಕರ ಮನೆ ಮೇಲೆ ಐಟಿ ದಾಳಿ ನಡೆಸಿತ್ತು. ಆದರೆ, ಕಾಂಗ್ರೆಸ್ 60 ವರ್ಷಗಳ ಕಾಲ ಆಡಳಿತ ನಡೆಸಿದೆ. ಚುನಾವಣೆ ವೇಳೆ ಒಂದೇ ಒಂದು ಬಾರಿಯೂ ಐಟಿ ದಾಳಿ ನಡೆಸಿದ ಇತಿಹಾಸವೇ ಇಲ್ಲ. ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಬಹುತೇಕ ನಾಯಕರ ಮೇಲೆ ದಾಳಿ ನಡೆಸಿದೆ. ಇದು ನಾಚಿಕೆಗೇಡಿನ ಸಂಗತಿ’ ಎಂದು ಸಿದ್ದರಾಮಯ್ಯ ಟೀಕಿಸಿದರು.
“ಬಿಜೆಪಿಗೆ ಸೋಲಿನ ಭಯ ಆರಂಭವಾಗಿದೆ. ಸೋಲಿನ ಭಯದಿಂದ ಇಡೀ ದೇಶದಲ್ಲಿ ಐಟಿ ದಾಳಿ ನಡೆಸಿದ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. 2019ರ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ” ಎಂದು ಭರವಸೆ ನೀಡಿದ ಇವರು, “ಈ ದಾಳಿಯನ್ನು ಇಲ್ಲಿಗೆ ನಿಲ್ಲಿಸದಿದ್ದರೆ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ” ಎಂದು ಎಚ್ಚರಿಸಿದರು.
ಐಟಿ ಮುಖ್ಯಸ್ಥ ಬಾಲಕೃಷ್ಣ ಬಿಜೆಪಿ ಪಕ್ಷದ ಕೈಬೊಂಬೆ: ಸಿ ಎಂ ಕುಮಾರಸ್ವಾಮಿ
ಮುಖ್ಯಮಂತ್ರಿ ಕುಮಾಸ್ವಾಮಿ, ಸಾಂಕೇತಿಕ ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ಅಧೀನದಲ್ಲಿರುವ ಇಲಾಖೆಗಳನ್ನು ಮೋದಿ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಐಟಿ ಇಲಾಖೆ ಮೋದಿ ಹಾಗೂ ಅಮಿತ್ ಶಾ ಆದೇಶದಂತೆ ದಾಳಿ ನಡೆಸಿದೆ. ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದೇವೆ ಎಂದರು.
ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಸಂವಿಧಾನವನ್ನು ಬುಡಮೇಲು ಮಾಡಲಿದೆ. ರಾಜ್ಯದ ಬಿಜೆಪಿ ಮುಖಂಡರು ಕೆಲವು ತಿಂಗಳ ಹಿಂದೆ ಶಾಸಕರನ್ನು ಖರೀದಿ ಮಾಡಲು ಕೋಟಿ ಕೋಟಿ ಆಮಿಷ ಒಡ್ಡಿರಲಿಲ್ಲವೇ?
‘ಸಾಗರದಲ್ಲಿ ಚುನಾವಣಾ ಅಧಿಕಾರಿಗಳು 2 ಕೋಟಿ ಹಣ ವಶಪಡಿಸಿಕೊಂಡರು. ಎಲ್ಲಿ ಹೋಯಿತು ಆ ಹಣ? ಯಾಕೆ ಬಹಿರಂಗವಾಗಲಿಲ್ಲ? ಎಂದು ಪ್ರಶ್ನಿಸಿದ ಅವರು ಬಿಜೆಪಿಯ ಪತನ ಕರ್ನಾಟಕ ರಾಜ್ಯದಿಂದಲೇ ಆರಂಭವಾಗಿದೆ’ ಎಂದು ಟೀಕಿಸಿದರು.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಕುಮಾರಸ್ವಾಮಿ “ನರೇಂದ್ರ ಮೋದಿ ನಡೆಸುತ್ತಿರುವ ನಿಜವಾದ ಸರ್ಜಿಕಲ್ ಸ್ಟ್ರೈಕ್ ಇದೇ ಇರಬೇಕು. ಐಟಿ ಅಧಿಕಾರಿ ಬಾಲಕೃಷ್ಣ ಅವರಿಗೆ ನೀಡಲಾದ ಸಾಂವಿಧಾನಿಕ ಹುದ್ದೆಯನ್ನು ನರೇಂದ್ರ ಮೋದಿ ಇಂತಹ ಕೀಳು ಸೇಡಿನಾಟಕ್ಕೆ ಬಳಸಿಕೊಳ್ಳುತ್ತಿದ್ದಾರೆ; “ಐಟಿ ಇಲಾಖೆಯ ಮುಖ್ಯಸ್ಥ ಬಾಲಕೃಷ್ಣ ಮೋದಿ ಸರ್ಕಾರದ ಕೈಬೊಂಬೆಯಾಗಿದ್ದಾರೆ. ಅಧಿಕಾರದ ದುರ್ಬಳಕೆ ಮಾಡಿಕೊಂಡಿರುವ ಅವರನ್ನು ಕೂಡಲೇ ಹುದ್ದೆಯಿಂದ ಕಿತ್ತೊಗೆಯಬೇಕು. ಬೆಳಿಗ್ಗೆಯಿಂದ ನಡೆಸಿರುವ ಎಲ್ಲಾ ಐಟಿ ದಾಳಿಗಳೂ ಬಿಜೆಪಿ ವಿರೋಧಿಗಳ ಮತ್ತು ಅವರ ಬೆಂಬಲಿಗರ ಮೇಲೆ ನಡೆಸಿದಿರುವ ರಾಜಕೀಯ ಪ್ರೇರಿತ ದಾಳಿಗಳೇ ಆಗಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
Income Tax officer Balakrishna is a puppet in the hands of the #Modi govt. He should be sacked immediately for misusing his post for #BJP's political benefit.
All the raids conducted since morning are politically motivated to target BJP'S opponents and their sympathisers..1/2
— H D Kumaraswamy (@hd_kumaraswamy) March 28, 2019
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಸಿ ಎಸ್ ಪುಟ್ಟರಾಜು, ‘ಇದೇ ದಾಳಿಯನ್ನು ಒಂದು ತಿಂಗಳ ಹಿಂದೆ ನಡೆಸಬಹುದಿತ್ತಲ್ಲ, ಈಗಲೇ ಏಕೆ ನಡೆಸುತ್ತಿದ್ದಾರೆ? ಮಂಡ್ಯ ಲೋಕಸಭಾ ಅಭ್ಯರ್ಥಿ ದಾಳಿಗೂ ಮುನ್ನವೇ ಐಟಿ ದಾಳಿ ನಡೆಯುತ್ತದೆ ಎಂದು ಹೇಳಿದ್ದರು, ಇದು ಹೇಗೆ ಸಾಧ್ಯ?’ ಎಂದು ಕಿಡಿಕಾರಿದರು.
ಪ್ರತಿಭಟನಾ ಸ್ಥಳದಲ್ಲಿಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ. ಕೆ ಶಿವಕುಮಾರ್, ಸಾ.ರಾ ಮಹೇಶ್, ಪುಟ್ಟರಾಜು, ತಮ್ಮಣ್ಣ ಹಾಗೂ ಇತರ ಶಾಸಕರು ಭಾಗವಹಿಸಿದ್ದರು.