ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಶಾಸಕರು ಸೇರಿದಂತೆ ಪಕ್ಷದ ಎಲ್ಲ ಸ್ಥಳೀಯರನ್ನು ಧಿಕ್ಕರಿಸಿ ತೇಜಸ್ವಿ ಸೂರ್ಯ ಎಂಬ ಸಾರ್ವಜನಿಕ ಜೀವನದ ಅನನುಭವಿ ಯುವಕನಿಗೆ ಟಿಕೆಟ್ ನೀಡುವ ಮೂಲಕ ಭಾರೀ ಪ್ರತಿರೋಧವನ್ನು ಕಟ್ಟಿಕೊಂಡಿದ್ದ ಬಿಜೆಪಿ ಹೈಕಮಾಂಡಿಗೆ, ಇದೀಗ ಆ ಅಭ್ಯರ್ಥಿಯ ಇತಿಹಾಸವೇ ದೊಡ್ಡ ತಲೆನೋವಾಗಿ ಕಾಡತೊಡಗಿದೆ.
ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರು ಕಳೆದ ಮೂರು ದಶಕಗಳಿಂದ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಈ ಬಾರಿ ಅವರ ಪತ್ನಿ ಹಾಗೂ ಸಾಮಾಜಿಕ ಕಾರ್ಯಕರ್ತೆ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಸ್ವತಃ ಕ್ಷೇತ್ರದ ಶಾಸಕರೂ ಸೇರಿದಂತೆ ಹಲವು ಬಿಜೆಪಿ ನಾಯಕರು ಹೇಳಿದ್ದರು. ಆದರೆ, ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ಮುನ್ನಾ ರಾತ್ರಿ, ಬಿಜೆಪಿ ಹೈಕಮಾಂಡ್ ದಿಢೀರನೇ ತೇಜಸ್ವಿ ಸೂರ್ಯ ಎಂಬ ತನ್ನ ಪರ ಟ್ರೋಲ್ ನಾಯಕನಿಗೆ ಟಿಕೆಟ್ ಘೋಷಿಸಿತ್ತು.
ಆದರೆ, ಕ್ಷೇತ್ರದ ಪರಿಚಯವಿರದ, ಜನಸಂಪರ್ಕವಿರದ ಅನನುಭವಿ ಯುವಕನಿಗೆ, ಆತ ಮೋದಿ ಪರ ಆನ್ ಲೈನ್ ಕ್ಯಾಂಪೇನ್ ಮಾಡಿದ್ದಾನೆ ಎಂಬುದನ್ನೇ ಮಾನದಂಡವಾಗಿಟ್ಟುಕೊಂಡು ಟಿಕೆಟ್ ನೀಡಿದ್ದಾರೆ. ಆರ್ ಎಸ್ ಎಸ್ ನಾಯಕರೊಬ್ಬರು ಮತ್ತು ಸ್ವತಃ ತೇಜಸ್ವಿ ಚಿಕ್ಕಪ್ಪ, ಶಾಸಕ ರವಿ ಸುಬ್ರಹ್ಮಣ್ಯ ಅವರ ಲಾಬಿಯಿಂದ ತೇಜಸ್ವಿನಿಯ ಅವರಿಗೆ ಟಿಕೆಟ್ ತಪ್ಪಿಸಲು ಈತನನ್ನು ಕಣಕ್ಕಿಳಿಸಲಾಗಿದೆ ಎಂಬ ವ್ಯಾಪಕ ದೂರುಗಳು ಮತ್ತು ಬಹಿರಂಗ ಆಕ್ರೋಶ ವ್ಯಕ್ತವಾಗಿತ್ತು. ಅದೇ ಹಿನ್ನೆಲೆಯಲ್ಲಿ ತೇಜಸ್ವಿ ನಾಮಪತ್ರ ಸಲ್ಲಿಕೆಯಲ್ಲೂ ಕಾಣಿಸಿಕೊಳ್ಳದೆ ಕ್ಷೇತ್ರ ವ್ಯಾಪ್ತಿಯ ಐವರು ಶಾಸಕರ ಪೈಕಿ ಆರ್ ಅಶೋಕ್, ಸೋಮಣ್ಣ ಸೇರಿದಂತೆ ಮೂವರು ದೂರವೇ ಉಳಿದಿದ್ದರು.
ಆ ಬಿಕ್ಕಟ್ಟನ್ನು ಹೇಗೆ ನಿಭಾಯಿಸುವುದು, ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಮನವೊಲಿಸಿ ತಮ್ಮ ಆಪ್ತನ ಪರ ಪ್ರಚಾರಕ್ಕೆ ಹೇಗೆ ಅಣಿಗೊಳಿಸುವುದು ಎಂಬ ಆತಂಕದಲ್ಲಿ ಹೈಕಮಾಂಡ್ ಇರುವಾಗಲೇ, ಇದೀಗ ಆನ್ ಲೈನ್ ವೀರನ ಇತಿಹಾಸ ದುತ್ತೆಂದು ಎದ್ದುಕೂತಿದ್ದು, ಹೈಕಮಾಂಡ್ ಪಾಲಿಗೆ ಇದೀಗ ಸ್ವತಃ ತೇಜಸ್ವಿಯೇ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ.
ಡಾ ಸೋಮ್ ದತ್ ಎಂಬ ಯುವ ಉದ್ಯಮಿ ಹಾಗೂ ಹೂಡಿಕೆ ಸಲಹೆಗಾರ್ತಿ ತಮ್ಮ ಟ್ವಿಟರ್ ಮೂಲಕ ತೇಜಸ್ವಿ ಸೂರ್ಯ ವಿರುದ್ಧ ‘ಮೀಟೂ’ ಆರೋಪ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ‘ಪ್ರಜಾವಾಣಿ’ ಸೇರಿದಂತೆ ಹಲವು ಮುಖ್ಯವಾಹಿನಿ ಮುದ್ರಣ ಮತ್ತು ಟಿವಿ ಮಾಧ್ಯಮಗಳಲ್ಲಿ ಸೋಮ್ ದತ್ತಾ ಟ್ವೀಟ್ ಬುಧವಾರದಿಂದಲೇ ಸದ್ದು ಮಾಡುತ್ತಿದ್ದು, ಅದರಲ್ಲೂ, ತಮಗೂ ತೇಜಸ್ವಿಗೂ ಐದು ವರ್ಷಗಳ ಹಿಂದೆಯೇ ಸಂಬಂಧವಿತ್ತು ಎಂಬುದನ್ನು ಬಹಿರಂಗಪಡಿಸಿರುವ ಸೋಮ್, ಇಬ್ಬರ ನಡುವೆ ಆಳವಾದ ಪ್ರೀತಿ ಇತ್ತು ಎಂದಿದ್ದಾರೆ.
ಅಲ್ಲದೆ, ತೇಜಸ್ವಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂಬುದು ಗೊತ್ತಾಗುತ್ತಿದ್ದಂತೆ ಅವರಿಗೆ ಬೆಂಬಲ ಘೋಷಿಸಿರುವ ಹಲವರನ್ನು ಟ್ಯಾಗ್ ಮಾಡಿ, ಸೋಮ್ ಅವರ ಮತ್ತು ತನ್ನ ನಡುವಿನ ಸಂಬಂಧ ಮತ್ತು ಬಳಿಕ ಹಲ್ಲೆ ನಡೆಸಿದ್ದು, ವಂಚಿಸಿದ್ದು ಎಲ್ಲವನ್ನೂ ವಿವರಿಸಿದ್ದಾರೆ. ಆ ಪೈಕಿ ಶೆಫಾಲಿ ವೈದ್ಯ ಎಂಬವರ ಟ್ವಿಟರ್ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ, ಡಾ ಸೋಮ್, “ತೇಜಸ್ವಿ ಕುರಿತು ಸತ್ಯ ತಿಳಿಯದೆ, ಆತನ ಪರ ಬೆಂಬಲ ಘೋಷಿಸಬೇಡಿ. ಹೆಣ್ಣುಬಾಕ, ಮಹಿಳಾ ಶೋಷಕ, ಹೆಣ್ಣಿನ ಮೇಲೆ ಹಲ್ಲೆ ನಡೆಸುವ ಒಬ್ಬ ನಮ್ಮ ನಾಯಕನಾಗಬೇಕು ಎಂದು ನೀವು ಬಯಸುತ್ತೀರಾ? ಇದಕ್ಕೆ ಸಾಕ್ಷಿಬೇಕಿದ್ದರೆ, ಕಳಿಸುವೆ. ದೊಡ್ಡದಾಗಿ ಮಾತನಾಡಿದ ಮಾತ್ರಕ್ಕೆ ಯಾರೂ ದೊಡ್ಡವರಾಗಲ್ಲ. ಹಾಗೇ ಪ್ರತಿ ಹಿಂದೂವೂ ಧರ್ಮನಿಷ್ಠನಾಗಿರುವುದಿಲ್ಲ” ಎಂದಿದ್ದಾರೆ.
ಅಲ್ಲದೆ, ಇದೇ ಸೋಮ್ ಅವರು ಸರಣಿ ಟ್ವೀಟ್ ಮಾಡಿದ್ದು, ತೇಜಸ್ವಿ ಮತ್ತು ತಮ್ಮ ನಡುವಿನ ಸಂಬಂಧ, ಆತ ವಂಚಿಸಿದ್ದು, ಅದರಿಂದಾಗಿ ತಮ್ಮ ತಂದೆ ತಾಯಿ ನೊಂದುಕೊಂಡದ್ದು ಸೇರಿ ಎಲ್ಲವನ್ನೂ ವಿವರಿಸಿದ್ದರು. ಆದರೆ, ಈ ಟ್ವೀಟ್ ಮಾಧ್ಯಮಗಳ ಮೂಲಕ ಸುದ್ದಿಯಾಗುತ್ತಿದ್ದಂತೆ ದಿಢೀರನೇ ಅವರು ಟ್ವೀಟ್ ಅಷ್ಟೇ ಅಲ್ಲದೆ, ತಮ್ಮ ಟ್ವಿಟರ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ. ಆದರೆ, ಅವರ ಟ್ವೀಟ್ ಸ್ಕ್ರೀನ್ ಶಾಟ್ ವೈರಲ್ ಆಗಿದ್ದು, ಸಾಮಾಜಿಕ ಜಾಲ ತಾಣದ ಮೂಲಕವೇ ನಾಯಕ ಎಂಬ ಅರ್ಹತೆ ಗಿಟ್ಟಿಸಿದ ತೇಜಸ್ವಿಗೆ, ಇದೀಗ ಅದೇ ಸಾಮಾಜಿಕ ಜಾಲತಾಣವೇ ತಿರುಗುಬಾಣವಾಗಿದೆ. ಕಾಂಗ್ರೆಸ್ ಪ್ರಮುಖವಾಗಿ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿದೆ. “ತೇಜಸ್ವಿ ಸೂರ್ಯ ಮತ್ತೊಬ್ಬ ಎಂಜೆ ಅಕ್ಬರ್ ಆಗಲಿದ್ದಾರೆಯೇ? ಬಿಜೆಪಿ, ನಿಮ್ಮ ಪಾಲಿಗೆ ತೇಜಸ್ವಿ ಮಹಾನ್ ಆಯ್ಕೆ ಬಿಡಿ” ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದೆ.
ಇದೊಂದೇ ಅಲ್ಲದೆ, ಮಹಿಳಾ ಮೀಸಲಾತಿ ವಿಷಯದಲ್ಲಿ ತೇಜಸ್ವಿ ಸೂರ್ಯ ತನ್ನ ಅಸಹನೆ ತೋಡಿಕೊಂಡ ಟ್ವೀಟ್ ಕೂಡ ಈಗ ವೈರಲ್ ಆಗಿದ್ದು, ‘ಚೌಕಿದಾರ್ ತೇಜಸ್ವಿ ಸೂರ್ಯ’ ಟ್ವಿಟರ್ ಖಾತೆಯಿಂದ “ಮಹಿಳಾ ಮೀಸಲಾತಿ ವಿಷಯದಲ್ಲಿ ಸಂಸತ್ ನಲ್ಲಿ ಮೋದಿ ಸರ್ಕಾರದ ನಿಲುವು ಹೊರತುಪಡಿಸಿ ಉಳಿದೆಲ್ಲಾ ಅಜೆಂಡಾಗಳು ಸ್ಫೂರ್ತಿದಾಯಕ. ಮಹಿಳಾ ಮೀಸಲಾತಿ ವಾಸ್ತವವಾಗಿ ಜಾರಿಗೆ ಬಂದರೆ ಭೀತಿ ಹುಟ್ಟಿಸುತ್ತದೆ” ಎಂಬ ಆ ಟ್ವೀಟ್ ತೇಜಸ್ವಿಯ ಮಹಿಳಾ ವಿರೋಧಿ, ಮನುವಾದಿ ಧೋರಣೆಯ ಫಲ. ಆರ್ ಎಸ್ ಎಸ್ ಮನಸ್ಥಿತಿ ಕೂಡ ಇದೇ. ಹಾಗಾಗಿಯೇ ತೇಜಸ್ವಿನಿ ಅನಂತಕುಮಾರ ಅವರಂತಹ ಕ್ರಿಯಾಶೀಲ ಮಹಿಳೆಯನ್ನು ಮೂಲೆಗುಂಪು ಮಾಡಿ ಈತನಿಗೆ ಟಿಕೆಟ್ ನೀಡಲಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಒಂದು ಕತೆಯಾದರೆ, ತೇಜಸ್ವಿ ಸೂರ್ಯ ಅರಬ್ ಮಹಿಳೆಯರ ಲೈಂಗಿಕ ಸಂಗತಿಗಳ ಬಗ್ಗೆ ಮಾಡಿರುವ ಟ್ವೀಟ್ ಕೂಡ ಭಾರೀ ವಿವಾದ ಹುಟ್ಟುಹಾಕಿದೆ. “ಶೇ.95ರಷ್ಟು ಅರಬ್ ಮಹಿಳೆಯರು ಕಳೆದ ಕೆಲವು ನೂರು ವರ್ಷಗಳಿಂದ ಲೈಂಗಿಕವಾಗಿ ಸಂಪೂರ್ಣ ತೃಪ್ತಿಯನ್ನೇ ಹೊಂದಿಲ್ಲ. ಪ್ರತಿ ತಾಯಿಯೂ ಲೈಂಗಿಕ ಕ್ರಿಯೆಯ ಫಲವಾಗಿ ಮಕ್ಕಳನ್ನು ಹಡೆದಿದ್ದಾರೆಯೇ ವಿನಃ, ಪ್ರೀತಿಯ ಫಲವಾಗಿ ಅಲ್ಲ” ಎಂಬ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದು, “ಇಂತಹ ಕೊಳಕು ಮನಸ್ಥಿತಿಯ, ವಿಕೃತನಿಗೆ ಬಿಜೆಪಿ ಸಂಸದನ್ನಾಗಿ ಮಾಡಲು ಹೊರಟಿದೆಯೇ” ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೆ, ಈ ಹಿಂದೆ ವಿವಾದಕ್ಕೆ ಕಾರಣವಾಗಿದ್ದ ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಅವರನ್ನು ‘ದೇಶದ್ರೋಹಿ’ ಎಂದು ಕರೆದಿದ್ದ ತೇಜಸ್ವಿ ಹೇಳಿಕೆ ಕೂಡ ಇದೀಗ ದೊಡ್ಡಮಟ್ಟದಲ್ಲಿ ಚರ್ಚೆಗೆ ಬಂದಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ದಲಿತರು ಮತ್ತು ಹಿಂದುಳಿದವರ ನಡುವೆ ಅಂಬೇಡ್ಕರ್ ಬಗೆಗಿನ ಈ ಅವಹೇಳನಕಾರಿ ಮಾತುಗಳು ಸಾಕಷ್ಟು ಚರ್ಚೆಗೆ ಬಂದಿವೆ.
ಒಟ್ಟಾರೆ, ಒಂದೆಡೆ ಪಕ್ಷದ ಶಾಸಕರು ಸೇರಿದಂತೆ ಆಂತರಿಕವಾಗಿ ಪಕ್ಷದ ಹಿರಿಯ ನಾಯಕರ ವಿರೋಧ ಪಕ್ಷದ ಹೈಕಮಾಂಡಿಗೆ ತಲೆಬಿಸಿ ತಂದಿದೆ. ಮತ್ತೊಂದೆಡೆ ದಲಿತರು, ಮಹಿಳೆಯರು, ಮುಸ್ಲಿಮರ ವಿರುದ್ಧದ ತೀರಾ ದ್ವೇಷದ, ಅವಮಾನಕರವಾದ ಮತ್ತು ಹೀನಾಯ ಮಾತು ಮತ್ತು ನಡವಳಿಕೆಗಳು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಷ್ಟೇ ಅಲ್ಲದೆ, ಇಡಿಯಾಗಿ ಆ ಪಕ್ಷದ ಮಾನವನ್ನೇ ಬೀದಿಗೆ ಇಟ್ಟಿವೆ. ಮತದಾರರ ಕೂಡ ತಮ್ಮ ಮಾನ ಕಾಯ್ದುಕೊಳ್ಳಲು ತಮ್ಮ ಬೆರಳ ಗುರುತಿನ ದಾರಿ ನಿರ್ಧರಿಸುವ ಸಮಯವೂ ಬಂದಿದೆ. ಹಾಗಾಗಿ, ಕರಾಳ ಇತಿಹಾಸದ ಪಾಠ, ಭವಿಷ್ಯದ ಬದಲಾವಣೆಯ ಸೂಚನೆಯಾಗುವ ಸಾಧ್ಯತೆ ಎದ್ದುಕಾಣುತ್ತಿದೆ.