‘ಮತ್ತೊಮ್ಮೆ ಮೋದಿ’, ಈ ಬಾರಿ ಬಿಜೆಪಿಯ ಚುನಾವಣಾ ಘೋಷವಾಕ್ಯ. ಆದರೆ, ಪ್ರಧಾನಿ ಮೋದಿಯವರ ಹೆಸರೇ ಈ ಬಾರಿ ಚುನಾವಣೆಯಲ್ಲಿ ದೇಶದ ಐದು ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಸ್ಥಾನ ಗಳಿಕೆಗೆ ಬರೆ ಎಳೆಯಲಿದೆ ಎಂಬುದು ಇತ್ತೀಚಿನ ಸಮೀಕ್ಷೆ ಬಹಿರಂಗಪಡಿಸಿರುವ ಸಂಗತಿ!
ಅಚ್ಛೇದಿನ್, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮುಂತಾದ ಜನಕೇಂದ್ರಿತ ಘೋಷಣೆಗಳು ಕಳೆದ ಐದು ವರ್ಷಗಳಲ್ಲಿ ವಾಸ್ತವದಲ್ಲಿ ದೇಶದ ಜನರ ಬದುಕಿನಲ್ಲಿ ಯಾವ ಬದಲಾವಣೆಯನ್ನೂ ತಂದಿಲ್ಲ ಎಂಬ ಮಾತು ಮತದಾರರಿಂದ ಮಾತ್ರವಲ್ಲ, ಶಿವಸೇನೆಯಂತಹ ಮಿತ್ರಪಕ್ಷಗಳಿಂದಲೂ ಪ್ರತಿಧ್ವನಿಸಿದ ಬಳಿಕ, ಬಿಜೆಪಿ ಇದೀಗ ವ್ಯಕ್ತಿಕೇಂದ್ರಿತ ‘ಮತ್ತೊಮ್ಮೆ ಮೋದಿ’ ಘೋಷಣೆಯ ಮೊರೆಹೋಗಿದೆ. ಆದರೆ, ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಬಿಜೆಪಿಯ ಲೋಕಸಭಾ ಸ್ಥಾನಗಳಿಕೆಗೆ ಸ್ವತಃ ಮೋದಿಯವರೇ ಅಡ್ಡಿಯಾಗಲಿದ್ದಾರೆ. ಅವರಷ್ಟೇ ಅಲ್ಲ, ಅವರ ಸಂಪುಟದ ಸಚಿವರು, ಅವರ ಆಪ್ತ ವಿವಿಧ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಮತ್ತು ಸಂಸದರ ಅಸಾಮರ್ಥ್ಯ ಮತ್ತು ಕೊಟ್ಟ ಮಾತು ಉಳಿಸಿಕೊಳ್ಳಲಾಗದ ವೈಫಲ್ಯಗಳು ಮತದಾರರನ್ನು ಬಿಜೆಪಿಯಿಂದ ವಿಮುಖರನ್ನಾಗಿಸಿವೆ ಎಂದು ಸಿ- ವೋಟರ್ ಸಮೀಕ್ಷೆ ಹೇಳಿದೆ.
ಲೋಕಸಭೆಗೆ ಅತಿಹೆಚ್ಚು ಸಂಸದರನ್ನು ಕಳುಹಿಸುವ ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ಬಿಹಾರ ಮತ್ತು ತಮಿಳುನಾಡು ಸೇರಿದಂತೆ ಐದು ರಾಜ್ಯಗಳು ಒಟ್ಟು 249 ಲೋಕಸಭಾ ಸದಸ್ಯರನ್ನು ಆಯ್ಕೆ ಮಾಡುತ್ತವೆ. ಅಂದರೆ, ಒಟ್ಟು ಲೋಕಸಭಾ ಸ್ಥಾನಬಲದ ಪೈಕಿ ಶೇ.45ರಷ್ಟು ಸದಸ್ಯರನ್ನು ಈ ಐದು ರಾಜ್ಯಗಳೇ ಕಳಿಸುತ್ತವೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಐದು ರಾಜ್ಯಗಳಿಂದ(ತಮಿಳುನಾಡಿನ ಎನ್ ಡಿಎ ಮಿತ್ರಪಕ್ಷ ಎಐಎಡಿಎಂಕೆ ಸದಸ್ಯರೂ ಸೇರಿ) ಒಟ್ಟು 187 ಸ್ಥಾನಗಳನ್ನು ಪಡೆದಿತ್ತು. ಆದರೆ, ಈ ಬಾರಿ ಈ ಐದೂ ರಾಜ್ಯಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಆಡಳಿತದ ಬಗ್ಗೆ ಜನಸಾಮಾನ್ಯರಿಗೆ ತೀವ್ರ ಭ್ರಮನಿರಸನವಾಗಿದೆ. ಹಾಗಾಗಿ ಈ ಬಾರಿ ಈ ರಾಜ್ಯಗಳಲ್ಲಿ ಬಿಜೆಪಿ ಸುಮಾರು 85 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ‘ಸಿ ವೋಟರ್’ ಬಿಡುಗಡೆ ಮಾಡಿರುವ ಸಮೀಕ್ಷೆ ಹೇಳಿದೆ.
ಈ ರಾಜ್ಯಗಳಲ್ಲಿ ಕೇವಲ ಶಾಸಕರು, ಸಂಸದರ ಬಗ್ಗೆಯಷ್ಟೇ ಅಲ್ಲದೆ, ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಕಾರ್ಯವೈಖರಿಯ ಬಗ್ಗೆಯೂ ಜನರಿಗೆ ತೀವ್ರ ಅಸಮಾಧಾನವಿದೆ. ಅಷ್ಟೇ ಅಲ್ಲ; ಸ್ವತಃ ಪ್ರಧಾನಿ ಮೋದಿಯವರ ಬಗ್ಗೆಯೂ ಮತದಾರರಲ್ಲಿ ಭಾರೀ ಆಕ್ರೋಶವಿದೆ. ಅದರಲ್ಲೂ ಬಿಜೆಪಿಯೇ ಅಧಿಕಾರದಲ್ಲಿರುವ, ಕಟ್ಟಾ ಹಿಂದುತ್ವವಾದಿ ವ್ಯಕ್ತಿಗಳೇ ಮುಖ್ಯಮಂತ್ರಿಗಳಾಗಿ ಆಡಳಿತದ ಚುಕ್ಕಾಣಿ ಹಿಡಿದಿರುವ ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಮಿತ್ರಪಕ್ಷ ಎಐಎಡಿಎಂಕೆ ಅಧಿಕಾರದಲ್ಲಿರುವ ತಮಿಳುನಾಡಿನಲ್ಲಿ ಮೋದಿ ವಿರೋಧಿ ಅಲೆ ಹೆಚ್ಚಿದೆ ಎಂದು ಸಿ ವೋಟರ್ ಹೇಳಿದೆ.
ಇನ್ನು ಪಶ್ಚಿಮಬಂಗಾಳದಲ್ಲಿ ದೀದಿ ಮಮತಾ ಬ್ಯಾನರ್ಜಿ ಹಾಗೂ ಅವರ ತೃಣಮೂಲ ಕಾಂಗ್ರೆಸ್ ಸರ್ಕಾರ ಜನಪ್ರಿಯತೆ ಮೋದಿ ಮತ್ತು ಬಿಜೆಪಿ ಜನಪ್ರಿಯತೆಗೆ ಬ್ರೇಕ್ ಹಾಕಿದೆ. ಅಲ್ಲಿ ಈ ಬಾರಿ ಮೋದಿ ಮತ್ತು ಬಿಜೆಪಿಯ ಅಲೆ ತೀರಾ ನಗಣ್ಯ. ಆದರೆ, ಈ ಐದು ರಾಜ್ಯಗಳ ಪೈಕಿ ಕೆಲಮಟ್ಟಿಗೆ ಎನ್ ಡಿಎಯ ಮಾನ ಕಾಯುವುದು ಬಿಹಾರ ಮಾತ್ರ. ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಡಳಿತದ ಕಾರಣಕ್ಕೆ ಆಡಳಿತರೂಢ ಮೈತ್ರಿಯ ಭಾಗವಾಗಿರುವ ಬಿಜೆಪಿಗೆ ಒಂದಿಷ್ಟು ಸ್ಥಾನ ಉಳಿಸಿಕೊಳ್ಳುವ ಅವಕಾಶ ಇದೆ. ಆದರೆ, ಅಲ್ಲಿಯೂ ಇರುವ ಸ್ಥಾನ ಉಳಿಸಿಕೊಳ್ಳಬಹುದೇ ಹೊರತು, ಹೆಚ್ಚುವರಿ ಸ್ಥಾನ ಗಳಿಸುವ ಸಾಧ್ಯತೆ ವಿರಳ ಎಂದೂ ಸಮೀಕ್ಷೆ ಅಂದಾಜಿಸಿದೆ.
ಉತ್ತರಪ್ರದೇಶ
ಉತ್ತರಪ್ರದೇಶದಲ್ಲಿ ಕಳೆದ ಬಾರಿ, 2014ರ ಚುನಾವಣೆಯಲ್ಲಿ ಒಟ್ಟು 80 ಲೋಕಸಭಾ ಸ್ಥಾನಗಳ ಪೈಕಿ 73 ಸ್ಥಾನಗಳನ್ನು ಎನ್ ಡಿಎ ಗೆದ್ದಿತ್ತು. ಆದರೆ, ಇದೀಗ ಐದು ವರ್ಷಗಳ ಬಳಿಕ, ರಾಜ್ಯದಲ್ಲಿ ಮೋದಿ ಜನಪ್ರಿಯತೆ ಶೇ.43.9ಕ್ಕೆ ಕುಸಿದಿದೆ. ವಿವಿಧ ಹಂತಗಳಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಪ್ರಭಲವಾಗಿದ್ದು, ಕಳೆದ ಬಾರಿ ಭಾರೀ ಬಹುಮತ ಪಡೆದಿದ್ದ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಯಲ್ಲೀ ಬಿಜೆಪಿ ಭಾರೀ ಜಯಭೇರಿ ಭಾರಿಸಿದ್ದ ರಾಜ್ಯದಲ್ಲೇ ಈ ಬಾರಿ ಇತರ ರಾಜ್ಯಗಳಿಗೆ ಹೋಲಿಸಿದರೆ ಮೋದಿಯವರ ಜನಪ್ರಿಯತೆ 16ನೇ ಸ್ಥಾನಕ್ಕೆ ಕುಸಿದಿದೆ.
ಇನ್ನು ಸಿಎಂ ಯೋಗಿ ಆದಿತ್ಯನಾಥರ ಜನಪ್ರಿಯತೆ ಕೂಡ ಭಾರೀ ಕುಸಿತ ಕಂಡಿದ್ದು, ಸಮೀಕ್ಷೆ ನಡೆಸಿದ 25 ರಾಜ್ಯಗಳ ಪೈಕಿ ಜನಪ್ರಿಯತೆಯ ಮಾನದಂಡದಲ್ಲಿ ಯೋಗಿ ಸ್ಥಾನ 21ಕ್ಕೆ ಕುಸಿದಿದೆ! ಜನಪ್ರಿಯತೆ ಕುಸಿತದ ಜೊತೆಗೆ, ಈ ಬಾರಿ ಬಿಜೆಪಿ ಅಲ್ಲಿ ಕಳೆದ ಬಾರಿಗಿಂತ ಬಲಿಷ್ಠ ಪ್ರತಿಪಕ್ಷಗಳ ಮೈತ್ರಿಕೂಟವನ್ನು ಎದುರಿಸುತ್ತಿದೆ. ಹಾಗಾಗಿ ಈ ಬಾರಿ ಕಳೆದ ಬಾರಿಗೆ ಹೋಲಿಸಿದರೆ ಸುಮಾರು 44 ಸ್ಥಾನ ಕೊರತೆಯಾಗಲಿದ್ದು, ಕೇವಲ 29 ಸ್ಥಾನ ಪಡೆಯುವ ನಿರೀಕ್ಷೆ ಇದೆ ಎಂದು ಸಿ ವೋಟರ್ ಹೇಳಿದೆ.
ಮಹಾರಾಷ್ಟ್ರ
ಹಿಂದುತ್ವದ ಪ್ರಬಲ ಅಲೆಯ ರಾಜ್ಯದಲ್ಲಿ ಕೂಡ ಮೋದಿಯವರ ಜನಪ್ರಿಯತೆ ಶೇ.47.9ರಷ್ಟಿದ್ದು, ರಾಜ್ಯವಾರು ಮಾನದಂಡದಲ್ಲಿ 14ನೇ ಸ್ಥಾನದಲ್ಲಿದೆ. ಒಟ್ಟು 48 ಸದಸ್ಯರನ್ನು ಲೋಕಸಭೆಗೆ ಕಳಿಸುವ ಮಹಾರಾಷ್ಟ್ರದಲ್ಲಿ ಕಳೆದ ಬಾರಿ ಮಿತ್ರಪಕ್ಷ ಶಿವಸೇನೆ ಸೇರಿ ಒಟ್ಟು 41 ಎನ್ ಡಿಎ ಸಂಸದರು ಆಯ್ಕೆಯಾಗಿದ್ದರು. ಈ ಬಾರಿ ಏಳು ಸ್ಥಾನ ಕುಸಿತ ಕಾಣಲಿದ್ದು, 35 ಸ್ಥಾನ ಪಡೆಯಬಹುದು ಎಂದು ಸಮೀಕ್ಷೆ ಹೇಳಿದೆ.
ತಮಿಳುನಾಡು
ಅತಿದೊಡ್ಡ ರಾಜ್ಯಗಳ ಪೈಕಿ ತಮಿಳುನಾಡು ಈ ಬಾರಿ ಎನ್ ಡಿಎ ಮತ್ತು ಮೋದಿಯವರ ಪಾಲಿಗೆ ದುರಂತದ ಫಲಿತಾಂಶ ನೀಡುವ ಸಾಧ್ಯತೆ ಇದ್ದು, ಮೋದಿಯವರ ಜನಪ್ರಿಯತೆ ರಾಜ್ಯದಲ್ಲಿ ಶೇ.2.2ರಷ್ಟಿದ್ದು, ದೇಶದ ರಾಜ್ಯಗಳ ಪೈಕಿ ಅತಿ ಕನಿಷ್ಠ ಮಟ್ಟದಲ್ಲಿದೆ. ಸ್ವತಃ ಮುಖ್ಯಮಂತ್ರಿಯ ಜನಪ್ರಿಯತೆಯೇ ಶೇ.7.7ರಷ್ಟು ಕನಿಷ್ಠ ಮಟ್ಟಕ್ಕೆ ಕುಸಿದಿರುವ ರಾಜ್ಯದ ಸಂಸದರ ಜನಪ್ರಿಯತೆ -1.5ಕ್ಕೆ ಕುಸಿದಿದೆ. ದೇಶದಲ್ಲಿ ಸಂಸದರ ಜನಪ್ರಿಯತೆ ನೆಗೇಟಿವ್ ಅಗಿರುವ ಏಕೈಕ ರಾಜ್ಯ ತಮಿಳುನಾಡು!
ಒಟ್ಟು 39 ಲೋಕಸಭಾ ಸ್ಥಾನಗಳ ಪೈಕಿ ಕಳೆದ ಬಾರಿ ಎ ಐ ಎಡಿಎಂಕೆ ಸೇರಿದಂತೆ ಎನ್ ಡಿಎ ಮೈತ್ರಿಕೂಟ ಎಲ್ಲಾ ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಆದರೆ, ಈ ಬಾರಿ ಯುಪಿಎ ಸುಮಾರು 34 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ದು, ಎನ್ ಡಿಎ ಕೇವಲ ಐದು ಸ್ಥಾನ ಉಳಿಸಿಕೊಳ್ಳಬಹುದು ಎಂದು ಸಮೀಕ್ಷೆ ಹೇಳಿದೆ.
ಪಶ್ಚಿಮಬಂಗಾಳ
ಪಶ್ಚಿಮಬಂಗಾಳದಲ್ಲಿ ಮೋದಿ ಜನಪ್ರಿಯತೆ ಕೆಲಮಟ್ಟಿಗೆ ತೃಪ್ತಿದಾಯಕವಾಗಿದ್ದು, ಬಿಜೆಪಿ ಕಳೆದ ಬಾರಿಗಿಂತ ಕೆಲವು ಸ್ಥಾನಗಳಲ್ಲ ಹೆಚ್ಚುವರಿಯಾಗಿ ಪಡೆಯಲಿದೆ. ಮೋದಿ ಅವರ ಜನಪ್ರಿಯತೆ ಶೇ.43.2ರಷ್ಟಿದ್ದು, ಅಲ್ಲಿನ ಸಿಎಂ ಮಮತಾ ಅವರ ಜನಪ್ರಿಯತೆ ಶೇ.45.6ರಷ್ಟಿದೆ. ಹಾಗಾಗಿ ಮೋದಿ ಮತ್ತು ಬಿಜೆಪಿಗೆ ರಾಜ್ಯದಲ್ಲಿ ದೀದಿ ಮತ್ತು ಅವರ ಆಡಳಿತವೇ ದೊಡ್ಡ ತಡೆಯಾಗಿದ್ದಾರೆ. 42 ಲೋಕ ಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯದಲ್ಲಿ ಕಳೆದ ಬಾರಿ ಬಿಜೆಪಿ 2 ಸ್ಥಾನ ಪಡೆದಿತ್ತು. ಈ ಬಾರಿ ಅದು ತನ್ನ ಬಲವನ್ನು 8ಕ್ಕೆ ಏರಿಸಿಕೊಳ್ಳಬಹುದು. ಆದರೆ, ಮಮತಾ ಅವರ ಟಿಎಂಸಿ ಬಲ ಕಳೆದ ಬಾರಿ(34)ಗಿಂತ ಕುಸಿಯುವ ಸಾಧ್ಯತೆ ವಿರಳ ಎನ್ನಲಾಗಿದೆ. ಆದರೆ, ಈ ಬಾರಿ ದಕ್ಷಿಣ ರಾಜ್ಯಗಳಲ್ಲಿ ಆಗುವ ನಷ್ಟವನ್ನು ಪ.ಬಂಗಾಳದಲ್ಲಿ ಸರಿದೂಗಿಸುವ ಲೆಕ್ಕಾಚಾರದಲ್ಲಿರುವ ಬಿಜೆಪಿಗೆ ಆ ಮಟ್ಟಿಗಿನ ಸ್ಥಾನ ಬರಲಾರವು ಎನ್ನಲಾಗಿದೆ.
ಬಿಹಾರ
ದೊಡ್ಡ ರಾಜ್ಯಗಳ ಪೈಕಿ ಬಿಜೆಪಿಗೆ ಒಂದಿಷ್ಟು ಮುಖ ಉಳಿಯುವುದು ಬಿಹಾರದಲ್ಲಿ ಮಾತ್ರ. ರಾಜ್ಯದಲ್ಲಿ ಮೋದಿ ಮತ್ತು ಸಿಎಂ ನಿತೀಶ್ ಜನಪ್ರಿಯತೆ ಉತ್ತಮವಾಗಿದೆ. ಮೋದಿ ಅವರು ಶೇ.50.3ರಷ್ಟು ಜನಪ್ರಿಯತೆ ಹೊಂದಿದ್ದರೆ, ನಿತೀಶ್ ಜನಪ್ರಿಯತೆ ಶೇ.55.3ರಷ್ಟಿದೆ. ಸಂಸದರ ಜನಪ್ರಿಯತೆ ಕೂಡ ತೃಪ್ತಿದಾಯಕವಾಗಿದೆ(ಶೇ.23.7). ಆದರೆ, ಸರ್ಕಾರದ ಭಾಗವಾಗಿರುವ ಬಿಜೆಪಿಯ ಶಾಸಕರ ಜನಪ್ರಿಯತೆ ಮಾತ್ರ ಶೇ.15.4ರಷ್ಟಿದ್ದು, ತೀರಾ ಕುಸಿದಿದೆ. ಒಟ್ಟು 40 ಲೋಕಸಭಾ ಸ್ಥಾನಗಳ ಪೈಕಿ ಈ ಬಾರಿ ಎನ್ ಡಿಎ 36 ಸ್ಥಾನ ಪಡೆಯಬಹುದು(2014ರಲ್ಲಿ 31 ಸ್ಥಾನ) ಎಂದು ಹೇಳಲಾಗಿದೆ.
ಒಟ್ಟಾರೆ, ಕಳೆದ ಬಾರಿ ಭಾರೀ ಸ್ಥಾನಗಳ ಮೂಲಕ ಬಿಜೆಪಿ ಮತ್ತು ಮೋದಿಯವರಿಗೆ ಬಲತುಂಬಿದ್ದ ದೇಶದ ಅತಿದೊಡ್ಡ ರಾಜ್ಯಗಳಲ್ಲೇ ಈ ಬಾರಿ ಮೋದಿ ಜನಪ್ರಿಯತೆ ಭಾರೀ ಕುಸಿತ ಕಂಡಿದ್ದು, ಐದೂ ರಾಜ್ಯಗಳ ಒಟ್ಟು 249 ಸ್ಥಾನಗಳ ಪೈಕಿ ಎನ್ ಡಿಎ 113 ಸ್ಥಾನ ಪಡೆಯಬಹುದಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಸುಮಾರು 74 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಸಾರಾಂಶ ಹೇಳಿದೆ.
ವಿಶೇಷವೆಂದರೆ, ಈ ಸಮೀಕ್ಷೆಯನ್ನು ಪುಲ್ವಾಮಾ ಉಗ್ರಗಾಮಿ ದಾಳಿ ನಡೆದ ವಾರದಲ್ಲಿಯೇ ನಡೆಸಿರುವುದಾಗಿ ಸಿ ವೋಟರ್ ಹೇಳಿದ್ದು, ಮೋದಿ ಮತ್ತು ಅವರ ಸರ್ಕಾರದ ಪರ ಜನಾಭಿಪ್ರಾಯ ಉಬ್ಬರದಲ್ಲಿದ್ದ ಅವಧಿಯಲ್ಲೇ ಪರಿಸ್ಥಿತಿ ಹೀಗಿದ್ದರೆ, ಆ ಬಳಿಕ ಈವರೆಗೆ ದೇಶಾದ್ಯಂತ ಮೋದಿಯವರ ಜನಪ್ರಿಯತೆ ಇನ್ನಷ್ಟು ಕುಗ್ಗಿರುವ ಹಿನ್ನೆಲೆಯಲ್ಲಿ ಈ ಅಂಕಿಅಂಶಗಳು ಇನ್ನಷ್ಟು ಕುಸಿಯಬಹುದು ಎಂದೂ ಹೇಳಲಾಗಿದೆ.
ಮೂಲ: ದ ಕ್ವಿಂಟ್