ನೇರ ಮಾತುಗಳಿಗೆ ಹೆಸರಾದ ಖ್ಯಾತ ಆರ್ಥಿಕ ತಜ್ಞ, ಆರ್ ಬಿ ಐ ಮಾಜಿ ಗವರ್ನರ್ ರಘುರಾಮ್ ರಾಜನ್ ಸಂಘ ಪರಿವಾರದಿಂದ ದೇಶಕ್ಕೆ ಅಪಾಯ ಇದೆ ಎಂದು ಎಚ್ಚರಿಸಿದ್ದಾರೆ. ರಾಜನ್ ರಚಿಸಿರುವ ‘ದಿ ಥರ್ಡ್ ಪಿಲ್ಲರ್’ ಕೃತಿ ಬಿಡುಗಡೆ ಸಂದರ್ಭದಲ್ಲಿ ಮನಿಕಂಟ್ರೋಲ್ ಡಾಟ್ ಕಾಂಗೆ ನೀಡಿದ ಸಂದರ್ಶನದಲ್ಲಿ, ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕಾದ ಆರ್ಥಿಕ ಚೇತರಿಕೆ, ಸ್ವಾಯತ್ತತೆ ಕುರಿತು ವಿಸ್ತೃತವಾಗಿ ಚರ್ಚಿಸಿರುವ ರಾಜನ್, ‘ಇತ್ತೀಚೆಗೆ ಜಾಗತಿಕವಾಗಿ ಜನಪ್ರಿಯವಾಗುತ್ತಿರುವ ರಾಷ್ಟ್ರೀಯತೆಯು ತಾಂತ್ರಿಕತೆ ಮೂಲಕ ಒಡ್ಡಿರುವ ಆರ್ಥಿಕ ಸವಾಲುಗಳು ರಾಜಕೀಯವಾಗಿ ಚಿಂತಿಸುವಂತಾಗಿದೆ. ಸರ್ಕಾರಗಳು ಈ ಸವಾಲುಗಳನ್ನು ಸ್ಥಳೀಯ ಆಡಳಿತಗಳನ್ನು ಸಬಲೀಕರಣಗೊಳಿಸುವ ಮೂಲಕ ನಿಭಾಯಿಸಬೇಕು’ ಎಂದು ಹೇಳಿದ್ದಾರೆ.
‘ದಿ ಥರ್ಡ್ ಪಿಲ್ಲರ್’ ಕೃತಿಯು ಸ್ಥಳೀಯ ಸಂಸ್ಥೆಗಳ ಕುರಿತಾಗಿದೆ. ದೇಶ ಮತ್ತು ಮಾರುಕಟ್ಟೆ ಮೊದಲೆರಡು ಸ್ತಂಭಗಳಾದರೆ, ತೃತೀಯ ಸ್ತಂಭ ಇಲ್ಲಿ ಸ್ಥಳೀಯ ಸಂಸ್ಥೆಗಳನ್ನು ಸಂಕೇತಿಸುತ್ತದೆ. ‘ಭಾರತದಲ್ಲಿ ಹಲವು ದಶಕಗಳಿಂದ ನಾವು ಪಂಚಾಯತ್ ರಾಜ್ ಮೂಲಕ ಸ್ಥಳೀಯ ಆಡಳಿತವನ್ನು ಸಬಲೀಕರಣಗೊಳಿಸಲು ಪ್ರಯತ್ನಿಸಿದ್ದೇವೆ. ಆದರೆ, ಅದಷ್ಟೇ ಸಾಲದು, ಪುರಸಭೆ, ನಗರಸಭೆಗಳು ಸಹ ಎಷ್ಟಾಗಬೇಕಿತ್ತೋ ಅಷ್ಟು ಸಬಲೀಕರಣಗೊಂಡಿಲ್ಲ’ ಎಂದು ರಾಜನ್ ಹೇಳಿದ್ದಾರೆ. ರಾಷ್ಟ್ರೀಯತೆಯ ಜನಪ್ರಿಯತೆ ಹೆಚ್ಚುತ್ತಿರುವುದರಿಂದ ಭಾರತಕ್ಕೂ ಅಪಾಯ ಇದೆ ಎಂದು ರಾಜನ್ ಹೇಳಿದ್ದಾರೆ. ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಪೋಷಕ ಸ್ಥಾನದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಉದಾರ, ಸಹಿಷ್ಣುತಾ ಮತ್ತು ಹೊಸತನದ ಭಾರತಕ್ಕೆ ದೊಡ್ಡ ಬೆದರಿಕೆಯಾಗಿದೆ ಎಂದೂ ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ದೃಷ್ಟಿಕೋನಗಳನ್ನು ಹೊಂದಿರುವುದು ಒಳ್ಳೆಯದೇ, ಆದರೆ, ಒಂದೇ ದೃಷ್ಟಿಕೋನದ ಪ್ರಾತಿನಿಧ್ಯವು ಮಿತಿ ಮೀರಿದರೆ ಮತ್ತು ಆ ದೃಷ್ಟಿಕೋನವು ಇತರ ದೃಷ್ಟಿಕೋನಗಳ ಬಗ್ಗೆ ಅಸಹಿಷ್ಣತೆಯಿಂದಿದ್ದರೆ ಸಮಸ್ಯೆ ಉದ್ಭವಿಸುತ್ತದೆ ಎಂದು ರಾಜನ್ ಅಭಿಪ್ರಾಯ ಪಟ್ಟಿದ್ದಾರೆ.
ರಘುರಾಮ್ ರಾಜನ್ ಅವರು ಎನ್ಡಿಎ ಸರ್ಕಾರದ ಅಸಹಿಷ್ಣತೆ ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. ಅವರು ಆರ್ಬಿಐ ಗವರ್ನರ್ ಹುದ್ದೆಯಲ್ಲಿದ್ದಾಗಲೂ ಎನ್ಡಿಎ ಸರ್ಕಾರದ ಅಸಹಿಷ್ಣತೆಯನ್ನು ಪ್ರಶ್ನಿಸಿದ್ದರು. ಗೋಮಾಂಸ ತಿಂದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನ್ನು ಬರ್ಬರವಾಗಿ ಕೊಚ್ಚಿಕೊಂದಿದ್ದ ಅಮಾನವೀಯ ಘಟನೆಯ ನಂತರ ದೇಶದಲ್ಲಿ ಎದ್ದ ಎನ್ಡಿಎ ಸರ್ಕಾರದ ಅಸಹಿಷ್ಣತೆ ವಿರುದ್ಧ ಭುಗಿಲೆದ್ದ ಅಸಮಾಧಾನ ಮತ್ತು ಪ್ರತಿಭಟನೆಗಳು ರಾಷ್ಟ್ರದಲ್ಲಷ್ಟೇ ಅಲ್ಲ ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿದ್ದವು.
ದೇಶವ್ಯಾಪಿ ಅಸಹಿಷ್ಣತೆ ಹೆಚ್ಚಾಗಿ, ಪ್ರಶಸ್ತಿ ವಾಪಸಿ ಚಳವಳಿ ತೀವ್ರವಾಗಿದ್ದಾಗಲೇ 2015ರ ನವೆಂಬರ್ 1ರಂದು ದೆಹಲಿ ಐಐಟಿಯಲ್ಲಿ ಮಾತನಾಡಿದ್ದ ರಾಜನ್ ಅಸಹಿಷ್ಣತೆ ವಿರುದ್ಧ ದನಿ ಎತ್ತಿದ್ದರು.
‘ದೇಶದ ಆರ್ಥಿಕ ಭವಿಷ್ಯವು ಬೌದ್ಧಿಕ ಸ್ವಾತಂತ್ರ್ಯದ ಪರಿಸರವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಸಂಪ್ರದಾಯವಾದಿಗಳು ವೈವಿಧ್ಯತೆಯ ಅಭಿವ್ಯಕ್ತಿಯ ಬಗ್ಗೆ ಸಹಿಷ್ಣತೆಯಿಂದ ಇರಬೇಕು. ಮುಕ್ತ ಚರ್ಚೆ ಮತ್ತು ಮುಕ್ತವಾಗಿ ವಿಚಾರಿಸಿ ಅರಿತುಕೊಳ್ಳುವ ಸ್ಪೂರ್ತಿಯು ಭಾರತದ ಆರ್ಥಿಕತೆಯ ಮೂಲತಳಹದಿ’ ಎಂದು ಹೇಳಿದ್ದರು. ಸರ್ಕಾರಿ ಕೃಪಾಪೋಷಿತ ಅಸಹಿಷ್ಣತೆ ಬಗ್ಗೆ ದೇಶ ವ್ಯಾಪಿ ನಡೆಯುತ್ತಿದ್ದ ಪ್ರತಿಭಟನೆಗೆ ರಾಜನ್ ಅವರ ಮಾತಿನಿಂದ ಹೆಚ್ಚಿನ ಮೌಲ್ಯ ಬಂದಿತ್ತು. ರಾಜನ್ ಅವರ ಹೇಳಿಕೆಯನ್ನು ಫೈನಾನ್ಷಿಯಲ್ ಟೈಮ್ಸ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಪತ್ರಿಕೆಗಳು ಪ್ರಧಾನವಾಗಿ ಪ್ರಕಟಿಸಿದ್ದವು. ಇದರಿಂದ ನರೇಂದ್ರ ಮೋದಿ ಸರ್ಕಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಿತ್ತು. ಮೋದಿ ಸರ್ಕಾರದ ಅಸಹಿಷ್ಣತೆ ಬಗ್ಗೆ ಅಂತರಾಷ್ಟ್ರೀಯ ವೇದಿಕೆಗಳಲ್ಲೂ ಚರ್ಚೆಯಾಗಿತ್ತು. ರಘುರಾಮ್ ರಾಜನ್ ಅವರ ಹೇಳಿಕೆ ಬಗ್ಗೆ ಬಿಜೆಪಿ ನಾಯಕರು ತೀವ್ರವಾಗಿ ಟೀಕೆ ಮಾಡಿದ್ದರು, ಅವರ ಟೀಕೆಯಲ್ಲೇ ಅಸಹಿಷ್ಣತೆ ಅಭಿವ್ಯಕ್ತಿಗೊಂಡಿತ್ತು.
ಬಡ್ಡಿದರ ಇಳಿಸುವುದು ಸೇರಿದಂತೆ ಹಲವು ವಿಷಯಗಳಲ್ಲಿ ವಿತ್ತ ಸಚಿವರೊಂದಿಗೆ ಮತ್ತು ವಿತ್ತ ಸಚಿವಾಲಯದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ರಘುರಾಮ್ ರಾಜನ್ ವಿರುದ್ಧ ಎನ್ಡಿಎ ಸರ್ಕಾರದ ಅಸಹಿಷ್ಣತೆಯು ಹೆಚ್ಚುತ್ತಾ ಹೋಯಿತು. ರಘುರಾಮ್ ರಾಜನ್ ಅವರ ಮೂರು ವರ್ಷದ ಅವಧಿ ಮುಗಿದ ನಂತರ ಹಿಂದಿನ ಐದು ಮಂದಿ ಗವರ್ನರ್ ಗಳಿಗೆ ನೀಡಿದಂತೆ ಎರಡು ವರ್ಷಗಳ ವಿಸ್ತರಣೆಯನ್ನು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ನೀಡಲಿಲ್ಲ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ ತರುವ ಕಾರ್ಯಗಳನ್ನು ಅರ್ಧಮುಗಿಸಿದ್ದ ರಘುರಾಮ್ ರಾಜನ್ ವಿಸ್ತರಣೆಯನ್ನು ಬೇಡದೇ, ಚಿಕಾಗೋ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪ್ರಾಧ್ಯಾಪಕರಾಗಿ ಸೇರಿದರು. ಗುಜರಾತ್ ಮೂಲದ ಊರ್ಜಿತ್ ಪಟೇಲ್ ಅವರನ್ನು ಮೋದಿ ಸರ್ಕಾರ ಆರ್ಬಿಐ ಗವರ್ನರ್ ಆಗಿ ನೇಮಕ ಮಾಡಿತು. ಆರ್ಬಿಐ ಲಾಭಾಂಶವನ್ನು ಸರ್ಕಾರಕ್ಕೆ ನೀಡುವುದು ಸೇರಿದಂತೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದ ಊರ್ಜಿತ್ ಪಟೇಲ್ ಸಹ ಅವಧಿಗೆ ಮುನ್ನವೇ ರಾಜೀನಾಮೆ ನೀಡಿದರು. ಈಗ ಮೋದಿ ಸರ್ಕಾರದಲ್ಲಿ ಆರ್ಥಿಕ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದ ಶಶಿಕಾಂತ್ ದಾಸ್ ಗವರ್ನರ್ ಆಗಿದ್ದಾರೆ.
ರಘುರಾಮ್ ರಾಜನ್ ಅವರು ಮತ್ತೊಮ್ಮೆ ಅಸಹಿಷ್ಣತೆ ವಿರುದ್ಧ ದನಿ ಎತ್ತಿದ್ದು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದಾಗ. ಗೌರಿ ಲಂಕೇಶ್ ಹತ್ಯೆ ಖಂಡಿಸಿದ್ದ ರಘುರಾಮ್ ರಾಜನ್ ಭಾರತವು ಅಸಹಿಷ್ಣತಾ ಸಮಾಜವಾಗುವುದು ಸಾಧ್ಯವಿಲ್ಲ, ದೇಶದ ಆರ್ಥಿಕತೆಗೆ ಗರಿಷ್ಠ ಪ್ರಮಾಣ ಸಹಿಷ್ಣತೆ ಅತ್ಯಗತ್ಯ ಎಂದಿದ್ದರು.
ರಘುರಾಮ್ ರಾಜನ್ ಕಾಂಗ್ರೆಸ್ ಘೋಷಿಸಿರುವ ಮಿಗ್-72ಕೆ ‘ನ್ಯಾಯ್’ ಯೋಜನೆ ಕುರಿತಂತೆ ಕಾಂಗ್ರೆಸ್ ಮುಖಂಡರು ತಮ್ಮೊಂದಿಗೆ ಚರ್ಚಿಸಿದ್ದರು, ನಗದು ಪಾವತಿ ಮೂಲಕ ಬಡತನ ನಿವಾರಣೆ ಮಾಡುವುದು ಸಾಧ್ಯವಿದೆ. ಆದರೆ, ಈ ಯೋಜನೆಗಳಿಗೆ ವಿಶೇಷವಾಗಿ ಹಣಕಾಸು ಸಂಪನ್ಮೂಲ ಕ್ರೋಢೀಕರಣ ಅತ್ಯಗತ್ಯ ಎಂದೂ ರಘುರಾಮ್ ರಾಜನ್ ಹೇಳಿದ್ದಾರೆ.
ಕಾಂಗ್ರೆಸ್ ಹಾರಿಸಿದ ಮಿಗ್-72ಕೆ ಚುನಾವಣಾ ಕ್ಷಿಪಣಿಯಿಂದ ಬೆಚ್ಚಿಬಿದ್ದಿರುವ ನರೇಂದ್ರಮೋದಿ ಮತ್ತವರ ಹಿಂಬಾಲಕರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಮಾಡುತ್ತಿರುವ ಹೊತ್ತಿನಲ್ಲೇ ರಘುರಾಮ್ ರಾಜನ್ ಬಡತನ ನಿವಾರಣೆಗೆ ನ್ಯಾಯ್ ಅಂತಹ ಯೋಜನೆಗಳ ಔಚಿತ್ಯವನ್ನು ಒತ್ತಿ ಹೇಳಿರುವುದು ವಿಶೇಷ.