ಶವಿಮೊಗ್ಗ: ಪ್ರಜ್ಞಾವಂತ ನಾಗರಿಕರು, ಎಂದು ಕರೆದುಕೊಂಡು ಅನಾಮಧೇಯ ವ್ಯಕ್ತಿಗಳು ಭದ್ರಾವತಿಯ ಮೆಸ್ಕಾಂ ಎಇಇಗೆ ಅಂಚೆ ಮೂಲಕ ಬೆದರಿಕೆ ಪತ್ರವೊಂದನ್ನು ಕಳಿಸಿದ್ದಾರೆ.
ಅಂಚೆ ಕಾರ್ಡಿನಲ್ಲಿ ಬರೆದಿರುವ ಈ ಪತ್ರವು ‘ಎಚ್ಚರಿಕೆ’ ಎಂದು ಆರಂಭವಾಗುತ್ತದೆ.
30/03/19 ರಂದು ಟಿವಿಯಲ್ಲಿ ಕೆಜಿಎಫ್ ಸಿನಿಮಾ ಪ್ರಸಾರವಾಗಲಿದ್ದು, ವಿದ್ಯುತ್ ಕಡಿತ ಮಾಡಬಾರದು ಎಂದು ಅಂಚೆ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ಅಂದು ಕರೆಂಟ್ ತೆಗೆದರೆ ನೀವು ಇರಲ್ಲ, ನಿಮ್ಮ ಆಫೀಸ್ ಇರಲ್ಲ, ಸುಟ್ಟು ಭಸ್ಮ ಮಾಡುತ್ತೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ.
‘ಶನಿವಾರ ಯಶ್ ಚಲನಚಿತ್ರ ಕೆಜಿಎಫ್ ಟೀವಿಯಲ್ಲಿ ಪ್ರಸಾರವಾಗುತ್ತಿದೆ, ಇದನ್ನು ರಾಜಕೀಯ ಪುಡಾರಿಗಳ, ಕುಮಾರಸ್ವಾಮಿ, ಅಪ್ಪಾಜಿ ಇವರ ಕುಮ್ಮಕ್ಕಿನಿಂದ ವಿದ್ಯುತ್ ಕಡಿತಗೊಳಿಸಿದರೆ ಮೆಸ್ಕಾಂ ಕಚೇರಿಗೆ ಬಾಂಬ್ ಫಿಕ್ಸ್ ಮಾಡುತ್ತೇನೆ’ ಎಂದು ಪತ್ರದಲ್ಲಿ ಬೆದರಿಕೆ ಒಡ್ಡಲಾಗಿದೆ.
ಶಿವಮೊಗ್ಗ ಎಂಆರ್ ಎಸ್, ಕೆಇಬಿ ಕಚೇರಿಗೂ ಎಚ್ಚರಿಕೆ ನೀಡಿದ್ದು ಶನಿವಾರ ಅಪ್ಪಿತಪ್ಪಿ ಕರೆಂಟ್ ಹೋದರೆ ನಿಮ್ಮ ಜೀವ ಹೋಗುತ್ತದೆ, ಎಚ್ಚರಿಕೆ ಎಂದು ತಿಳಿಸಲಾಗಿದೆ.
ಕೊನೆಯಲ್ಲಿ, ಇಂತಿ ಪ್ರಜ್ಞಾವಂತ ನಾಗರಿಕರು, BJP…(ಅಸ್ಪಷ್ಟ ಅಕ್ಷರಗಳು) ಎಂದು ಬರೆಯಲಾಗಿದೆ.