ಟ್ರೂಥ್ ಇಂಡಿಯಾ ಕನ್ನಡ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚುನಾವಣೆಯ ಮುಖ್ಯ ವಿಷಯ ಯಾವುದಾಗಿರಬೇಕು?
ವೈ ಎಸ್ ವಿ: 2014ರಲ್ಲಿ ನಡೆದ ಲೋಕಸಭಾ ಚುನಾವಣೆ ನಮ್ಮ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ರೀತಿಯಲ್ಲಿ ನಡೆದ ಚುನಾವಣೆ ಎನ್ನಬಹುದು. ನಾನು ಆಶಯ ಎಂದು ಹೇಳುತ್ತಿದ್ದೀನಿ. ಏಕೆಂದರೆ ನಾವು ಒಪ್ಪಿಕೊಂಡಿರುವ ಸಂವಿಧಾನದ ಅಡಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅನುಸರಿಸುತ್ತಿದ್ದೇವೆ. ಜನರು ಚುನಾವಣೆಗಳ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಯಾವ ರಾಜಕೀಯ ಪಕ್ಷಕ್ಕೆ ಹೆಚ್ಚು ಜನಪ್ರತಿನಿಧಿಗಳು ಚುನಾಯಿತರಾಗುವರೋ, ಆ ಪಕ್ಷ ಸರ್ಕಾರ ರಚಿಸುತ್ತದೆ. ಇದನ್ನ ಸಂಸದೀಯ ಪ್ರಜಾಪ್ರಭುತ್ವ ಅಂತೀವಿ. ಅಮೆರಿಕಾದಲ್ಲಿರುವುದು ಅಧ್ಯಕ್ಷೀಯ ಮಾದರಿಯ ವ್ಯವಸ್ಥೆ. ಅಲ್ಲಿ ಒಬ್ಬ ವ್ಯಕ್ತಿ ವರ್ಸಸ್ ಇನ್ನೊಬ್ಬ ವ್ಯಕ್ತಿ ಅಂತ ಚುನಾವಣೆ ನಡೆಯುತ್ತದೆ.
ದುರಂತ ಮತ್ತು ವಿಷಾದದ ಸಂಗತಿಯೆಂದರೆ, 2014ರ ಚುನಾವಣೆಯಲ್ಲಿ ಜನರ ಸಮಸ್ಯೆಗಳಾವುವೂ ಚುನಾವಣೆ ವಿಷಯಗಳಾಗಲಿಲ್ಲ. ಜನರ ಕಷ್ಟಕಾರ್ಪಣ್ಯಗಳು, ಅಭಿವೃದ್ಧಿ ಕೆಲಸ, ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು, ನೀತಿಗಳು, ಕಾರ್ಯಕ್ರಮಗಳು ಚುನಾವಣಾ ವಿಷಯಗಳಾಗಲೇ ಇಲ್ಲ. ಕೇವಲ ಮೋದಿ ಎಂಬ ವ್ಯಕ್ತಿ ಎದುರು ಮತ್ತೊಬ್ಬ ವ್ಯಕ್ತಿ ಎಕ್ಸ್! ಎಕ್ಸ್ ಬೇಕೋ ವೈ ಬೇಕೋ ಎಂಬಂಥ ಚುನಾವಣೆ ನಡೆದುಬಿಟ್ಟಿತು. ಇದು ಜನತಂತ್ರಕ್ಕೆ ಮಾರಕವಾಗಿದ್ದು, ಒಪ್ಪಿತ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧವಾಗಿ ನಡೆದ ಚುನಾವಣೆಯಾಗಿತ್ತು.
ಆದರೆ 2019ರ ಚುನಾವಣೆ ಈಗ ಅಷ್ಟರ ಮಟ್ಟಿಗೆ ವ್ಯಕ್ತಿ ಆಧಾರಿತ ಚುನಾವಣೆಯಾಗುತ್ತಿಲ್ಲ, ಅಧ್ಯಕ್ಷೀಯ ಮಾದರಿಯ ಚುನಾವಣೆ ಆಗುತ್ತಿಲ್ಲ. ಸ್ವಲ್ಪಮಟ್ಟಿಗೆ ಆಶಾದಾಯಕ ವಾತಾವರಣವಿದೆ. ಇದ್ದಿದ್ದರಲ್ಲಿ ಜನ ಈಗ ಸ್ವಲ್ಪ ಎಚ್ಚೆತ್ತುಕೊಂಡಿದ್ದಾರೆ, ಪ್ರಜ್ಞಾವಂತರಾಗಿದ್ದಾರೆ. ಹಾಗಾಗಿ ಜನರ ಬದುಕು, ಜನರ ಸಮಸ್ಯೆಗಳು, ಜನರ ಕಷ್ಟಕಾರ್ಪಣ್ಯಗಳು, 5 ವರ್ಷಗಳಲ್ಲಿ ಮೋದಿ ಸರ್ಕಾರ ಇವುಗಳಿಗೆಲ್ಲ ಎಷ್ಟರ ಮಟ್ಟಿಗೆ ಸ್ಪಂದಿಸಿತು- ಈ ವಿಷಯಗಳು ಖಂಡಿತವಾಗಿ ಚುನಾವಣೆಯ ವಸ್ತುಗಳಾಗುತ್ತವೆ. ಅಷ್ಟರ ಮಟ್ಟಿಗೆ ಚುನಾವಣೆ ಒಂದು ನೀತಿ-ಕಾರ್ಯಕ್ರಮ ಆಧಾರಿತ ಚುನಾವಣೆ ಆಗತ್ತದೆ ಎನ್ನುವುದು ನಮ್ಮ ನಿರೀಕ್ಷೆ.
ಪ್ರಶ್ನೆ: ಈಗ ಮತ್ತೊಮ್ಮೆ ಮೋದಿ, ಲಜ್ಜೆ ಬಿಟ್ಟು ಹೆಜ್ಜೆ ಹಾಕೋಣ ಎನ್ನುವ ಕ್ಯಾಂಪೇನ್ ನಡೀತಾ ಇದೆ. ಮತ್ತೆ ಒಂದು ಬಗೆಯ ಮೋದಿ ಮೇನಿಯಾ ಸೃಷ್ಟಿ ಆಗ್ತಿದೆ ಅನ್ನಿಸ್ತಿಲ್ವಾ ನಿಮಗೆ?
ವೈಎಸ್ವಿ: ಇಲ್ಲ, ಹಾಗೆ ಮಾಡುವ ಪ್ರಯತ್ನವನ್ನೇನೋ ಮಾಡುತ್ತಿದ್ದಾರೆ. ನಾನು ಈಗಷ್ಟೇ ಮಾಧ್ಯಮದಲ್ಲಿ ನೋಡಿದಂತೆ ಬಿಜೆಪಿಗೆ ಆತಂಕ ಉಂಟಾದಂತೆ ಕಾಣುತ್ತಿದೆ. ಮೋದಿ ಅವರಿಗೆ ಎಲ್ಲೋ ಒಂದು ಕಡೆ ತಾವು ನಿಂತ ನೆಲ ಕುಸಿಯುತ್ತಿದೆ ಎಂದೆನಿಸುತ್ತಿದೆ. ನನ್ನ ದೃಷ್ಟಿಯಲ್ಲಿ ಒಂದು ರಾಷ್ಟ್ರೀಯ ಪಕ್ಷ ಇಷ್ಟು ಕೆಳಮಟ್ಟದ ತಂತ್ರಗಾರಿಕೆಗೆ ಹೋಗಬಾರದಿತ್ತು. ಚುನಾವಣಾ ಆಯೋಗ ಚುನಾವಣೆ ಘೋಷಿಸಿದೆ, ನಮ್ಮ ಲೋಕಸಭಾ ಚುನಾವಣೆ ನಡಿಯತ್ತದೆ. ನಾವೆಲ್ಲಾ ಮತ ಹಾಕಿ ಪ್ರಜಾತಂತ್ರದಲ್ಲಿ ಒಂದು ಸರ್ಕಾರವನ್ನು ಚುನಾಯಿಸುತ್ತೇವೆ. ಇಷ್ಟು ವರ್ಷಗಳಿಂದ ನಾವು ಯಾವುದೇ ಗಲಾಟೆ, ಗದ್ದಲಗಳಿಲ್ಲದೆ ಜನತಂತ್ರವನ್ನ ಗಟ್ಟಿಗೊಳಿಸುತ್ತಾ ಬಂದಿದ್ದೀವಿ. ಎಲ್ಲಾ ಸಂದರ್ಭಗಳಲ್ಲೂ ಶಾಂತಿಯುತವಾಗಿ ಚುನಾವಣೆಗಳು ನಡೆದಿವೆ. ಸುಸೂತ್ರವಾಗಿ, ರಕ್ತಪಾತವಿಲ್ಲದೆ ಸರ್ಕಾರಗಳ ಬದಲಾವಣೆಗಳಾಗಿವೆ, ಹಸ್ತಾಂತರಗಳೂ ನಡೆದಿವೆ. ಆದರೆ, ಈಗ ಚುನಾವಣೆ ಘೋಷಣೆಯಾದ ತಕ್ಷಣ ‘ಚುನಾವಣೆ ನಡೆಯುತ್ತಿರುವುದು ಪಾಕಿಸ್ತಾನದಲ್ಲಿ ಅಲ್ಲ, ಭಾರತದಲ್ಲಿ’ ಅಂತ ಬಿಜೆಪಿ ಟ್ವೀಟ್ ಮಾಡಿದೆ. ಇದನ್ನ ಯಾಕೆ ಹೇಳಬೇಕಿತ್ತು? ಅವರು ಈ ಮಟ್ಟಕ್ಕೆ ಇಳಿದುಬಿಟ್ಟಿದ್ದಾರೆ. ಇದರ ಅರ್ಥವೇನೆಂದರೆ, ಚುನಾವಣೆಯಲ್ಲಿ ಬಿಜೆಪಿ ಅಂತಹ ಭಾವನಾತ್ಮಕ ವಿಷಯಗಳನ್ನು, ದ್ವೇಷ, ಯುದ್ಧೋನ್ಮಾದ ಸಂಗತಿಗಳನ್ನು, ಪಾಕಿಸ್ತಾನದ ವಿರುದ್ಧ ಮಾತಾನಾಡುವ ಮೂಲಕ ಮತಗಳ ಕ್ರೋಢೀಕರಿಸುವ ಪ್ರಯತ್ನ ಮಾಡುತ್ತಿರುವುದೆಂದು. ಜನ ಈಗ ಇವುಗಳಿಗೆಲ್ಲ ಬೆಲೆ ಕೊಡುವಷ್ಟು ದಡ್ಡರಲ್ಲ, ಪ್ರಜ್ಞಾವಂತರಾಗಿದ್ದಾರೆ. ಈಗಾಗಲೆ ಇಂಥಹದ್ದೆಲ್ಲಾ ಸವಕಲು ಕ್ಲೀಷೆಗಳಾಗಿವೆ. ಕೆಲ ದಿನಗಳ ಕಾಲ ಜನರನ್ನ ಮೂರ್ಖರನ್ನಾಗಿಸಬಹುದು, ಎಲ್ಲಾ ಕಾಲಗಳಲ್ಲಿ ಎಲ್ಲರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಹಾಗಾಗಿ ಬಿಜೆಪಿಯ ತಂತ್ರ ಈ ಸಲ ಅಷ್ಟು ಫಲಕಾರಿ ಆಗಲ್ಲ.
ಪ್ರಶ್ನೆ: ಬಿಜೆಪಿ ಯಾಕೆ ಇಂತಹ ತಂತ್ರಗಳಿಗೆ ಮೊರೆಹೋಗಿದೆ?
ವವೈ ಎಸ್ ವಿ: ಯಾಕೆ ಬಿಜೆಪಿ ಈ ತರ ಕೆಳಮಟ್ಟದ ತಂತ್ರ ಮತ್ತು ಭಾವನಾತ್ಮಕ ವಿಷಯಗಳನ್ನು ತೆಗೆದುಕೊಳ್ಳುತ್ತಿದೆ ಎಂದರೆ, ಅದು ಜನರ ಬದುಕನ್ನು ಹಸನುಗೊಳಿಸುವ ಸವಲತ್ತುಗಳನ್ನು ಕೊಡುವಾಗ, ಫಲಾನುಭವಿಗಳನ್ನು ಗುರುತಿಸುವಾಗ, ಎಲ್ಲ ವರ್ಗದ ಎಲ್ಲ ಸಮುದಾಯದ ಜನರಿಗೆ ಒಳಿತು ಮಾಡುವಂತಹ ಒಂದು ಕಾರ್ಯಕ್ರಮವನ್ನೂ ಮಾಡಿಲ್ಲ. ಈ ಐದು ವರ್ಷದಲ್ಲಿ, ಕೊಟ್ಟಿದ್ದ ಆಶ್ವಾಸನೆಗಳಲ್ಲಿ ನೂರಕ್ಕೆ 99 ರಷ್ಟು ಈಡೇರಿಸಲೇ ಇಲ್ಲ. ಅದ್ದರಿಂದ 5 ವರ್ಷಗಳಿಂದ ತಾನು ಜನರ ಕೋಪಕ್ಕೆ, ತಿರಸ್ಕಾರಕ್ಕೆ, ಧಿಕ್ಕಾರಕ್ಕೆ ಗುರಿಯಾಗಿದ್ದೀನಿ ಅಂತ ಅವರಿಗೆ ಪಾಪಪ್ರಜ್ಞೆ ಕಾಡಲು ಪ್ರಾರಂಭವಾಗಿದೆ. ಈಗ ಆತಂಕದ ಭಯ ಹುಟ್ಟಿದೆ, ಅದಕ್ಕಾಗಿ ಹೀಗೆಲ್ಲ ಮಾಡ್ತಿದ್ದಾರೆ. ಈಗೊಂದು ಮುಖ್ಯವಾದ ವಿಷಯ ಹೇಳಬೇಕಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಮೈಮೇಲೆ ಬಿದ್ದು ಮತ ಹಾಕಿದ್ದವರು, ಅದರಲ್ಲೂ 18 ರಿಂದ 25- 30 ವರ್ಷದ ಆಸುಪಾಸಿನ ಯುವಜನತೆ, ಮೋದಿ ಮಾಯಾದಂಡ ತಂದುಬಿಟ್ಟಿದ್ದಾನೆ, ದೇಶ ಸ್ವತಂತ್ರಗೊಂಡಾಗಿನಿಂದ ಎಂದೂ ಕಂಡರಿಯದ ಅದ್ಭುತವಾದ ಇಂದ್ರಲೋಕವನ್ನು ಸೃಷ್ಟಿಸಿಬಿಡುತ್ತಾನೆ ಎನ್ನುವ ಮಟ್ಟಕ್ಕೆ ಭ್ರಮೆಗೊಳಗಾಗಿದ್ದರು. ಮತ್ತೆ ತಮ್ಮ ಬದುಕಿಗೆ ಭದ್ರತೆ ಒದಗಿಸುವ ಉದ್ಯೋಗವಕಾಶಗಳು ಸಿಗತ್ತವೆಂದು ಹೇಳಿ ಕನಸುಗಳನ್ನ ಕಟ್ಟಿಕೊಂಡಿದ್ದರು. ಅದಕ್ಕಾಗಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಮೋದಿ ಹೇಳಿದರು. ಆದರೆ ವಾಸ್ತವದಲ್ಲಿ ಶೇಕಡಾ 0.1ರಷ್ಟು ಉದ್ಯೋಗಗಳೂ ಸಹ ಸೃಷ್ಟಿಯಾಗಲಿಲ್ಲ. ಸೃಷ್ಟಿಯಾಗದಿದ್ದರೆ ಕತ್ತೆ ಬಾಲ, ಆದರೆ ಇನ್ನೂ ದುರಂತವೆಂದರೆ ಯುವಜನರಿಗೆ ಇಂದಲ್ಲ ನಾಳೆ ಸಿಗಬಹುದಾಗಿದ್ದ ಉದ್ಯೋಗಾವಕಾಶವನ್ನೂ ಕಿತ್ತುಕೊಂಡು, ಸರ್ಕಾರದ ಉದ್ಯೋಗಗಳನ್ನೆಲ್ಲಾ ಖಾಸಗಿ ಕಾರ್ಪೊರೇಟ್ ಮಡಿಲಿಗೆ ಹಾಕಿಬಿಟ್ಟರು. ಯುವಕರ ಕನಸನ್ನು ಕಿತ್ತುಕೊಂಡಿರಿ, ಬದುಕನ್ನು ಹಾಳುಮಾಡಿದಿರಿ, ಯುವಕರಿಂದ ಮೋದಿ ಮೋದಿ ಅಂತ ಕೂಗಿಸಿಕೊಂಡು ಅವರ ಬದುಕನ್ನು ಮೂರಾಬಟ್ಟೆ ಮಾಡಿದಿರಿ. ಇವತ್ತು ಆ ಯುವಕರಿಗೆ ಎಚ್ಚರವಾಗಿದೆ. ಬಿಜೆಪಿಯು 2104ರ ಚುನಾವಣೆ ಸಮಯದಲ್ಲಿ ಬೆಲೆಗಳು ಏರುತ್ತಿವೆ ಅಂತ ಹೇಳಿ ಒಂದು ದೊಡ್ಡ ಜಾಹೀರಾತು ಕೊಟ್ಟು, ತರಕಾರಿ, ಹಾಲು, ಬೇಳೆಗಳ ದರಗಳಿಷ್ಟು ಎನ್ನುತ್ತ ಅದನ್ನು ಚುನಾವಣಾ ವಿಷಯ ಮಾಡಲು ಹೋಗಿತ್ತು. ಇಂದು ಬೆಲೆಗಳೆಲ್ಲಾ ಏರಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತಿದ್ದರೂ ನಮ್ಮಲ್ಲಿ ಮಾತ್ರ ಪೆಟ್ರೋಲ್ ದರ ಏರುತ್ತಲೇ ಇದೆ. ಅಲ್ಲಿ ಪೆಟ್ರೋಲ್ ದರ ಇಳಿದಿದ್ದರೂ ನಮ್ಮಲ್ಲಿ ಏರುತ್ತಲೇ ಇದೆ ಎಂದರೆ ಇದಕ್ಕೆ ಯಾವ ಸಮರ್ಥನೆ ಕೊಡುತ್ತಾರೆ?
ಇನ್ನು ಎರಡನೆಯದು, ರೈತರ ಬಗ್ಗೆ. 5 ವರ್ಷಗಳಲ್ಲಿ ಒಂದು ಸಲವೂ ನಮ್ಮ ದೇಶದಲ್ಲಿ ಭೂಮಿ, ನೇಗಿಲು ಮತ್ತು ಹಸು ಇಟ್ಟುಕೊಂಡು ಒಬ್ಬ ರೈತ ಬದುಕಿದ್ದಾನೆ ಎಂಬ ಚಿತ್ರಣವೇ ಮೋದಿ ಕಣ್ಣಿಗೆ ಬೀಳಲಿಲ್ಲ. ಭಾರತಕ್ಕಿಂತ ಹೆಚ್ಚಾಗಿ ವಿದೇಶಗಳಲ್ಲೇ ಅವರು ತಿರುಗುತ್ತಾ ಇದ್ದಿದ್ದರಿಂದ ಅವರಿಗೆ ನಮ್ಮ ರೈತರು ಮತ್ತು ಹಳ್ಳಿಗಳ ಚಿತ್ರಣವೇ ಗೊತ್ತಾಗಲಿಲ್ಲ. ಕೊನೆ ಕ್ಷಣದಲ್ಲಿ ಎಚ್ಚೆತ್ತುಕೊಂಡು ಎಲ್ಲಾ ರೈತರ ಖಾತೆಗೆ 2 ಸಾವಿರದಂತೆ ಮೂರು ಸಲ ಆರು ಸಾವಿರ ಹಾಕ್ತೀನಿ ಅಂತ ಹೊರಟಿದ್ದಾರೆ. ಅದೂ ಮೊನ್ನೆ ಘೋಷಣೆ ಮಾಡಿದ್ದಾರೆಂದರೆ ಅವರಿಗೆ ಅಭದ್ರತೆ, ಆತಂಕ, ಪಾಪಪ್ರಜ್ಞೆ ಕಾಡುತ್ತಿದೆ ಎಂದರ್ಥ. ರೈತರು, ಯುವಕರು, ಬಡವರು, ಜನಸಾಮಾನ್ಯರನ್ನು ಮರೆತು, ಬರೀ ಸೂಟು ಬೂಟು, ಕಾರ್ಪೊರೇಟ್ ವಲಯ, ಬಂಡವಾಳಶಾಹಿಗಳು, ವಿದೇಶ ವಿಮಾನ ಅಂತ ತಿರುಗುತ್ತಲಿದ್ದೆ, ಈಗ ಜನಗಳ ಮುಂದೆ ಹೋಗುವುದು ಹೇಗಪ್ಪಾ ಎಂದು ಭಯ ಕಾಡುತ್ತಿರುವುದರಿಂದ ಇಂತಹ ಸಣ್ಣತನದ ಕುತಂತ್ರಗಳಿಗೆ ಅವರು ಮುಂದಾಗಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಸಹ ಇದೇ ಥರದ ಒಂದು ಹುನ್ನಾರ.
ನಾವು ಕಾಶ್ಮೀರದ ವಿಷಯದಲ್ಲಿ ಎಷ್ಟೋ ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ. ಅದು ಮೊದಲಿಂದಲೂ ಉರಿಯುತ್ತಿರುವ ಅಗ್ನಿಕುಂಡವೇ. ಕೆಲವು ಸಂದರ್ಭಗಳಲ್ಲಿ ಮಾತ್ರ ಅಲ್ಲಿ ಶಾಂತಿ ನೆಲೆಸಿತ್ತು. ಈ ಮಾತು ಹೇಳಿದ ತಕ್ಷಣ ನಾನು ರಾಜಕೀಯ ಬೆರೆಸಿದೆ ಅನ್ನುತ್ತಾರೆ. ಆದರೆ ವಾಸ್ತವವನ್ನ ಮರೆಯಲು ಆಗದು. ಕಾಶ್ಮೀರದಲ್ಲಿ ಬಿಜೆಪಿ ಜೊತೆಗಿನ ಸಮ್ಮಿಶ್ರ ಸರ್ಕಾರ ಬಿದ್ದ ನಂತರ ವಿಧಾನಸಭೆಗೆ ಚುನಾವಣೆ ನಡೆದಿಲ್ಲ. ಈಗ ರಾಷ್ಟ್ರಪತಿ ಆಡಳಿತ ಇದ್ದು, ಚುನಾವಣೆ ನಡೆಯಬೇಕಿತ್ತು. ಅಲ್ಲಿ ಯಾಕೆ ವಿಧಾನಸಭೆ ಚುನಾವಣೆ ಮಾಡಿಲ್ಲ ಎಂದರೆ, ಕಾಶ್ಮೀರ ಹೊತ್ತಿ ಉರಿಯುತ್ತಿದೆ ಆದ್ದರಿಂದ ಚುನಾವಣೆ ಮಾಡಲ್ಲ ಎಂದಿತು ಚುನಾವಣಾ ಆಯೋಗ. ಆದರೆ ಇವತ್ತು ಕಾಶ್ಮೀರದಲ್ಲಿ ಲೋಕಸಭೆಗೆ ಚುನಾವಣೆ ಮಾಡುತ್ತೇವೆಂದು ಘೋಷಿಸಿದೆ. ಕಾಶ್ಮೀರದಲ್ಲಿ ಲೋಕಸಭೆ ಚುನಾವಣೆ ಮಾಡಲು ಸುಮಧುರವಾದ ವಾತಾವರಣ ಇದೆ, ವಿಧಾನಸಭೆ ಚುನಾವಣೆ ಮಾಡುವುದಕ್ಕೆ ಕಾಶ್ಮೀರ ಹೊತ್ತಿ ಉರಿತಿದೆ!
ಕಾಶ್ಮೀರದ ಇತಿಹಾಸವನ್ನು ನೋಡಿದಾಗ, ಇಡೀ ಕಾಶ್ಮೀರದ ಚರಿತ್ರೆಯಲ್ಲಿ, ನಮ್ಮ ಭಾರತದ ಸ್ವಾತಂತ್ರ್ಯಾನಂತರ ಇತಿಹಾಸದಲ್ಲಿ ಹೇಳುವುದಾದರೆ, ಕಾಶ್ಮೀರದೊಳಗೆ ಒಂದೇ ಒಂದು ಗುಂಡಿನ ಸಪ್ಪಳವಿಲ್ಲದೆ, ರಕ್ತಪಾತವಿಲ್ಲದೆ, ಶಾಂತಿಯುತವಾಗಿ ವಿಧಾನಸಭಾ ಚುನಾವಣೆ ನಡೆಸಿ, ಅದ್ಭುತವಾದ ಜನತಾಂತ್ರಿಕ ವ್ಯವಸ್ಥೆ ಪ್ರತಿಷ್ಠಾಪನೆಗೊಂಡಿದ್ದು 1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದಾಗ. ದೇವೇಗೌಡರು ಪ್ರಧಾನಿಯಾಗುವ ವರೆಗೆ ಕಾಶ್ಮೀರಕ್ಕೆ ಯಾವ ಪ್ರಧಾನಿಯೂ ಭೇಟಿ ಕೊಟ್ಟಿರಲಿಲ್ಲ. ಏಕೆಂದರೆ ಆಗಲೂ ಕಾಶ್ಮೀರ ಹೊತ್ತಿ ಉರಿಯುತ್ತಲೇ ಇತ್ತು. ಪ್ರಧಾನಿಗಳಿಗೆ ಜೀವ ಭಯವಿದೆ, ನಿಮ್ಮ ಜೀವಕ್ಕೆ ಅಪಾಯವಿದೆ, ಕಾಶ್ಮೀರಕ್ಕೆ ನೀವ್ಯಾರೂ ಹೋಗಬೇಡಿ ಎಂದು ಪ್ರಧಾನಿಗಳಿಗೆ ಬೇಹುಗಾರಿಕೆ ಇಲಾಖೆ ತಾಕೀತು ಮಾಡಿದ್ದರಿಂದ ಪ್ರಧಾನಿಯಾದವರು ಕಾಶ್ಮೀರಕ್ಕೆ ಭೇಟಿ ಕೊಡುವ ಧೈರ್ಯವನ್ನೇ ಮಾಡಿರಲಿಲ್ಲ. ಅಂಥ ಸಂದರ್ಭದಲ್ಲಿ ಒಬ್ಬ ಹಳ್ಳಿಯ ರೈತರ ಮಗ, ಇಂಗ್ಲಿಷ್, ಹಿಂದಿ ಗೊತ್ತೋ ಗೊತ್ತಿಲ್ಲವೋ, ದೇವೇಗೌಡರು ತಮ್ಮ ಸಹಜವಾದ ಅನುಭವದಿಂದ ಧೈರ್ಯಮಾಡಿ, ಬೇಹುಗಾರಿಕೆ ಇಲಾಖೆಯನ್ನು ಲೆಕ್ಕಿಸದೇ ಕಾಶ್ಮೀರಕ್ಕೆ ಹೋಗಿ ಕೂತರು. ಅಲ್ಲಿ ಭಾರತ-ಪಾಕಿಸ್ತಾನದ ಗಡಿಯಲ್ಲಿ ನಿಂತು, “ನಾನು ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ, ನಿಮಗೆ ಪ್ಯಾಕೇಜ್ ಕೊಡುತ್ತೇನೆ, ನಿಮ್ಮ ಅಭಿವೃದ್ಧಿಗೆ ಆದ್ಯತೆ ಕೊಡುತ್ತೇನೆ, ನಿಮ್ಮ ಕಷ್ಟಸುಖಗಳಿಗೆ ಸ್ಪಂದಿಸುತ್ತೇನೆ, ನಿಮ್ಮ ಪ್ರವಾಸೋದ್ಯಮಕ್ಕೆ ಸಾವಿರ ಕೋಟಿ ಹಣ ಕೊಡುತ್ತೇನೆ, ನೀವು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ” ಅಂತ ಜನಗಳಿಗೆ ಹೇಳಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಮಾಡಿದರು. ಚುನಾವಣೆ ಅದ್ಭುತವಾಗಿ ನಡೆಯಿತು. ಗುಂಡಿನ ಸಪ್ಪಳ ಕೇಳಲಿಲ್ಲ, ಒಂದು ಉಗ್ರನ ಹತ್ಯೆ ಆಗಲಿಲ್ಲ ಅಥವಾ ಬೇರೆಯವರ ಹತ್ಯೆಯೂ ಆಗಲಿಲ್ಲ.
ಆಗ ಬಿಟ್ಟರೆ, ಬೇರೆಲ್ಲಾ ಸಂದರ್ಭಗಳಲ್ಲೂ ಕಾಶ್ಮೀರ ಹೊತ್ತಿ ಉರಿದಿದೆ. ಈಗ ಸರ್ಜಿಕಲ್ ಸ್ಟ್ರೈಕ್ನ ಅಗತ್ಯವಿಲ್ಲವೆಂದು ನಾನು ಹೇಳುತ್ತಿರುವುದು. ಕಾಶ್ಮೀರದಲ್ಲಿ ಗುಂಡಿನ ಚಕಮಕಿ, ದಾಳಿ, ಉಗ್ರರ ಹತ್ಯೆ, ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ಇದು ಸಹಜ ಪ್ರಕ್ರಿಯೆ ಎನ್ನುವಷ್ಟರ ಮಟ್ಟಿಗೆ ನಡೆಯಬಾರದು. ಆದರೂ ಹಾಗೇ ನಡೆದುಕೊಂಡು ಬಂದುಬಿಟ್ಟಿದೆ. ಇದುವರೆಗೂ ನಡೆದುಕೊಂಡು ಬಂದಿರುವುದನ್ನ ವೈಭವೀಕರಿಸುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ನನ್ನ ದೃಷ್ಟಿಯಲ್ಲಿ ಹೇಳಬೇಕೆಂದರೆ, ಸರ್ಜಿಕಲ್ ಸ್ಟ್ರೈಕ್ ನಡೆದಿದೆಯೋ ನಡೆದಿಲ್ಲವೋ, ನಡೆದಿದ್ದರೂ ಕೂಡ ಅದನ್ನ ಅತಿಯಾಗಿ ವೈಭವೀಕರಿಸುವಂಥ ಪ್ರಯತ್ನವನ್ನು ಬಿಜೆಪಿ ಮತ್ತು ಮೋದಿ ಸರ್ಕಾರ ಮಾಡುತ್ತಿವೆ. ಫುಲ್ವಾಮ ದಾಳಿಯಲ್ಲಿ ನಮ್ಮ 45 ಯೋಧರು ಹುತಾತ್ಮರಾದರು. ಫುಲ್ವಾಮ ದಾಳಿಯ ನಂತರ ಸರ್ಜಿಕಲ್ ಸ್ಟ್ರೈಕ್ ಆಗಿದೆಯಲ್ಲ ಅದರ ವಾಸ್ತಾವಾಂಶ ಇನ್ನೂ ನಮಗೆ ಗೊತ್ತಾಗಿಲ್ಲ. ಇಡೀ ದೇಶವನ್ನು ಮೋದಿ ಸರ್ಕಾರ ಕತ್ತಲೆಯಲ್ಲಿಟ್ಟಿದೆ. ಹಾಗಾಗಿ ಕಾಶ್ಮೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ಉಗ್ರಗಾಮಿ ಚಟುವಟಿಕೆ, ಸೈನಿಕರ ದಾಳಿ ಮತ್ತು ಈ ಪ್ರಕ್ರಿಯೆಗಳನ್ನು ಅತಿಯಾಗಿ ವೈಭವೀಕರಿಸಿರುವುದು ಚುನಾವಣೆ ದೃಷ್ಟಿಯಿಂದ ಅನ್ನುವಂತಹದ್ದು ಇವರ ನಡವಳಿಕೆಯಿಂದ ಗೊತ್ತಾಗುತ್ತದೆ.
ಪ್ರಶ್ನೆ: ಚುನಾವಣಾ ಆಯೋಗ ಸಹ ಅದರೆ ಬಗ್ಗೆ ಹೇಳಿದೆಯಲ್ಲಾ?
ವೈಎಸ್ವಿ: ಚುನಾವಣಾ ಆಯೋಗ ಸ್ಪಷ್ಟವಾಗಿ ಹೇಳಿದೆ, ಯಾವ ರಾಜಕೀಯ ಪಕ್ಷವೂ ಅಭಿನಂದನ್ ಫೋಟೋ ಬಳಸಬಾರದೆಂದು. ಅದರ ಅರ್ಥ ಇವರು ಬಳಕೆ, ದುರ್ಬಳಕೆ ಮಾಡಿಕೊಳ್ಳಲು ಹೊರಟಿದ್ದರೆಂಬುದು ಗೊತ್ತಾಯಿತು.
ಪ್ರಶ್ನೆ: ನೀವು ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರಿಗೆ ಸಮೀಪದಲ್ಲಿದ್ದವು. ಅವರು ನಡೆಸಿದ ಆಡಳಿತಕ್ಕೂ, ನರೇಂದ್ರ ಮೋದಿಯವ ಆಡಳಿತ ವೈಖರಿಗೂ ಒಂದು ಹೋಲಿಕೆ ಮಾಡಿ ಹೇಳಲು ಸಾಧ್ಯವೇ?
ಮೋದಿ ಅವರ 5 ವರ್ಷದ ಅಡಳಿತಕ್ಕೂ, ದೇವೇಗೌಡರ 10 ತಿಂಗಳ ಆಡಳಿತಕ್ಕೂ ವ್ಯತ್ಯಾಸ ಇದೆ. 10 ತಿಂಗಳ ಆಡಳಿತದಲ್ಲಿ ದೇವೇಗೌಡರು ಈ ದೇಶಕ್ಕೆ ಒಂದು ದಿಕ್ಸೂಚಿ ಕೊಟ್ಟರು. ಆದರೆ 5 ವರ್ಷಗಳಲ್ಲಿ ಅಂತಹ ಒಂದು ಸಣ್ಣ ಸೂಚನೆ ಕೊಡಲೂ ಸಹ ಮೋದಿ ವಿಫಲರಾದರು. ಒಂದು ಉದಾಹರಣೆ ಹೇಳುವೆ, ಈ ದೇಶದ ಬಗ್ಗೆ ಕಾಳಜಿ ಇದೆ ಅನ್ನುವ ಒಬ್ಬ ಮುತ್ಸದ್ದಿ ರಾಜಕಾರಣಿ, ಮೊದಲಿಗೆ ಮಾಡಬೇಕಾದ ಕೆಲಸ ವಿದೇಶಗಳಿಗೆ ಹಾರಾಟ ಮಾಡುವುದಲ್ಲ, ನಮ್ಮ ದೇಶದ ಜನಸಾಮಾನ್ಯರ ಬದುಕಿಗೆ ಒತ್ತು ಕೊಡಬೇಕಾದ ಕೆಲಸ ಮಾಡಬೇಕಿತ್ತು. ಲಾಲ್ ಬಹದ್ದೂರ್ ಶಾಸ್ತ್ರಿ ಹೇಳಿದ್ದ ಜೈ ಜವಾನ್, ಜೈ ಕಿಸಾನ್ ಘೋಷಣೆಯನ್ನು ನಾವು ಈಗ ಪಾಕಿಸ್ತಾನ-ಭಾರತ ಯುದ್ಧೋನ್ಮಾದಲ್ಲಿ ಅಂತಿದ್ದೀವಲ್ಲಾ, ಜವಾನ್ ತರಾನೆ ಕಿಸಾನ್ ಇದ್ದಾರಲ್ವಾ? ಈ ಜೈ ಕಿಸಾನ್ ಅರ್ಥದಲ್ಲಿಯೇ ಇಡೀ ಭಾರತ ದೇಶದ ಆಯವ್ಯಯವನ್ನ ರೈತರ ಮುಖವಾಗಿ, ಹಳ್ಳಿಗಾಡುಗಳತ್ತ ತಿರುಗಿಸಿದ ಮೊಟ್ಟಮೊದಲ ಪ್ರಧಾನಿ ದೇವೇಗೌಡರು. ಇದೇ ಮೋದಿಗೂ, ದೇವೇಗೌಡರಿಗೂ ಇರುವ ವ್ಯತ್ಯಾಸ.
ಇಡೀ ಆಯವ್ಯಯವನ್ನ ಮೋದಿ, ಬಂಡವಾಳಶಾಹಿಗಳು, ಸೂಟು-ಬೂಟು, ಬ್ರೀಫ್ ಕೇಸಿನ ಕಾರ್ಪೊರೇಟ್ ಸಂಸ್ಥೆಗಳ ಕಡೆ ತಿರುಗಿಸಿದರೆ, ದೇವೇಗೌಡರು ಇಡೀ ಬಜೆಟ್ಟೂ ಬೊಕ್ಕಸವನ್ನ ಗ್ರಾಮೀಣಾಭಿಮುಖವಾಗಿ, ರೈತರ ಪರವಾಗಿಸಿದರು.
ಹೀಗೂ ಆಲೋಚನೆ ಮಾಡಬಹುದು ಅನ್ನುವುದಕ್ಕೆ ಒಂದು ಉದಾಹರಣೆ ನಬಾರ್ಡ್ ಎನ್ನುವ ಒಂದು ಸಂಸ್ಥೆ ಇದೆ. ಇದುವರೆಗೆ ದೇವೇಗೌಡರು ಪ್ರಧಾನಿ ಆಗುವ ವರೆಗೆ ನಬಾರ್ಡ್ ಅಂತ ಅಂದ್ರೆ, ಅದು ಕೇವಲ ಹಣಕಾಸಿನ ವಿಷಯದಲ್ಲಿ, ಕೇವಲ ಸಾಲ ಕೊಡುವುದು, ಸಾಲ ವಸೂಲಿ ಮಾಡುವುದು ಅಷ್ಟಕ್ಕೆ ಮಾತ್ರ ಸೀಮಿತವಾದ ಹಣಕಾಸಿನ ಸಂಸ್ಥೆ ಎನ್ನಲಾಗುತ್ತಿತ್ತು. ಗಾಡ್ಗೀಲ್ ವರದಿ ಬಂದಿತ್ತು, ಅದರಲ್ಲಿ ನಬಾರ್ಡನ್ನು ಅಷ್ಟಕ್ಕೆ ಮಾತ್ರ ಸೀಮಿತಗೊಳಿಸಿತ್ತು. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ದೇವೇಗೌಡರು 10 ತಿಂಗಳಲ್ಲಿ ಇಡೀ ನಬಾರ್ಡ್ನ ಆರ್ಥಿಕ ನೀತಿಯನ್ನು ಬದಲಿಸಿ, ಅದು ಬರೀ ಸಾಲ ಕೊಡುವ, ವಸೂಲಿ ಮಾಡುವ ಸಂಸ್ಥೆ ಅಲ್ಲ, ಹಣವನ್ನು ಹಳ್ಳಿಗಳ ಮೂಲಭೂತ ಸೌಕರ್ಯ ಹೆಚ್ಚಿಸಲು ಹಂಚಬೇಕು ಎಂದು ತೀರ್ಮಾನ ಮಾಡಿ ಅದಕ್ಕಾಗಿಯೇ, ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಫಂಡ್ (ಆರ್ ಐಡಿಎಫ್) ಎಂಬ ಯೋಜನೆ ಮಾಡಿದರು. ಇವತ್ತಿಗೂ ನಮ್ಮ ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆ ಆಗ್ತಿದೆ ಅಂದರೆ, ಒಂದು ಆಸ್ಪತ್ರೆ, ಕಾಲೇಜು, ಪ್ರಾಥಮಿಕ ಶಾಲೆ ಕಟ್ಟಡ ಆಗ್ತಿದೆ ಅಂದರೆ ಅದಕ್ಕೆ ಆರ್ ಐಡಿಎಫ್ ನಿಂದ ಬರುತ್ತಿರುವ ಹಣ ಕಾರಣ. ಆರ್ ಐಡಿಎಫ್ ಕಲ್ಪನೆ ಹುಟ್ಟಿದ್ದು ದೇವೆಗೌಡರಿಗೆ.
ಈಶಾನ್ಯ ರಾಜ್ಯಗಳು, ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ, ತ್ರಿಪುರ, ಇದು ಸಪ್ತ ಸೂರ್ಯರ ನಾಡು. ಈಶಾನ್ಯ ಭಾರತದಲ್ಲಿ ಸಾಕಷ್ಟು ಗಲಾಟೆ ಇದ್ದವು. ಅಲ್ಲಿ ಬಾಂಗ್ಲಾ, ಮುಸ್ಲಿಂ ವಲಸಿಗರು, ಉಗ್ರಗಾಮಿ ಸಂಘಟನೆಗಳು, ಉಲ್ಫಾಗಳು ಸೇರಿದಂತೆ ಸಾಕಷ್ಟು ಗದ್ದಲ ಇತ್ತು. ಯಾವ ಪ್ರಧಾನಿಯೂ ಸಹ ಈಶಾನ್ಯ ರಾಜ್ಯವೆಂದರೆ ಹೆದರುತ್ತಿದ್ದರು. ದೇವೇಗೌಡರು ಪ್ರಧಾನಿ ಆಗಿದ್ದಾಗ ಒಂದು ವಾರ ಪ್ರವಾಸ ಮಾಡಿದ್ದರು. ಇಡೀ ಈಶಾನ್ಯದ ಏಳೂ ರಾಜ್ಯಗಳ ಪ್ರವಾಸ ಮಾಡಿ ಪ್ಯಾಕೇಜ್ ಕೊಟ್ಟರು. ಅಷ್ಟೇ ಅಲ್ಲ, ಎಷ್ಟೋ ದಶಕಗಳಿಂದ ನಮಗೂ ಮತ್ತು ಬಾಂಗ್ಲಾದೇಶಕ್ಕೂ ಗಂಗಾ ನದಿ ನೀರಿನ ಹಂಚಿಕೆ ವಿಷಯದಲ್ಲಿ ಜಗಳವಿತ್ತು. ನಾವು ಕಾವೇರಿಯನ್ನೇ ಸರಿಯಾಗಿ ಬಗೆಹರಿಸಿಕೊಳ್ಳಲು ಆಗುತ್ತಿಲ್ಲ, ಈ ಎರಡು ದೇಶಗಳ ನಡುವಿನ ವಿವಾದವನ್ನು ದೇವೇಗೌಡರು ಸುಮಧುರವಾಗಿ ಸಂಧಾನ ಮಾತುಕತೆ ಮೂಲಕ ಬಗೆಹರಿಸಿದರು.
ಅಷ್ಟೇ ಅಲ್ಲ, ಕರ್ನಾಟಕಕ್ಕೆ ಏನು ಮಾಡಿದರು ಎನ್ನುವ ಕಥೆ ಬೇಕಾದಷ್ಟಿದೆ. ಕೇಂದ್ರ ಸರ್ಕಾರದ ಹಣವನ್ನು ಬರೀ ದೇಶದ ರಕ್ಷಣೆಗೆ ಕೊಡುವುದಷ್ಟೇ ಅಲ್ಲ, ಎಲ್ಲ ರಾಜ್ಯಗಳ ಜನ ತೆರಿಗೆ ಕಟ್ಟಿ ಕೇಂದ್ರದ ಬೊಕ್ಕಸಕ್ಕೆ ಹಣ ಬರುತ್ತದೆ. ಹಾಗಾಗಿ ಎಲ್ಲ ರಾಜ್ಯಗಳಿಗೂ ಹಣ ಹಂಚಬೇಕೆಂದು ಎಐಬಿಪಿ ಎಂಬ ಹೊಸ ಯೋಜನೆ ಮಾಡಿದರು. ಅದರ ಮೂಲಕ ಯಾವಯಾವ ರಾಜ್ಯಗಳು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡು ಯೋಜನೆ ಮುಗಿಸಲು ಹಣಕಾಸಿನ ಕೊರತೆ ಎದುರಿಸುತ್ತಿವೆಯೋ ಅವುಗಳಿಗೆ ಕೇಂದ್ರ ಸರ್ಕಾರದ ನೆರವನ್ನು ಘೋಷಣೆ ಮಾಡಿದರು. ಇಂದು ನಮ್ಮ ಕರ್ನಾಟಕ ರಾಜ್ಯದಲ್ಲಿ ಬಿಜಾಪುರ, ಕಲಬುರ್ಗಿ, ರಾಯಚೂರು, ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆಗಳಿಗೆ ಕೃಷ್ಣ ಮೇಲ್ದಂಡೆ ಯೋಜನೆಗೆಂದು 25 ಸಾವಿರ ಕೋಟಿ ರೂಪಾಯಿಗಳು ಬಂದಿವೆಯೆಂದರೆ ಅದು ದೇವೇಗೌಡರ ಯೋಜನೆಯೇ.
ಸಂದರ್ಶನದ ವಿಡಿಯೋ ವೀಕ್ಷಿಸಿ
(ನಾಳೆಗೆ ಮುಂದುವರೆಯುವುದು)