ಮನ್ಮೋಹನ್ ಸಿಂಗ್ ಸರ್ಕಾರ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ (ಡಿಆರ್ಡಿಒ)ಗೆ ಉಪಗ್ರಹ ನಿಗ್ರಹ ಸಾಮರ್ಥ್ಯದ ಪರೀಕ್ಷೆ ನಡೆಸಲು ಅವಕಾಶ ಕೊಡಲಿಲ್ಲ ಎನ್ನುವ ಆರೋಪಗಳನ್ನು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ನಿರಾಕರಿಸಿದ್ದಾರೆ. “ಆ ಬಗ್ಗೆ ಕೇಳಿದ್ದೇ ಇದೇ ಮೊದಲ ಬಾರಿ. ಸಾರಸ್ವತ್ ಎಂದೂ ಎಎಸ್ಎಟಿ ಪರೀಕ್ಷೆಗೆ ಒಪ್ಪಿಗೆ ಕೇಳಿರಲಿಲ್ಲ” ಎಂದು ಶಿವಶಂಕರ್ ಹೇಳಿದ್ದಾರೆ.
ಭಾರತ ಯಶಸ್ವಿಯಾಗಿ ಭೂಮಿಗೆ ಸಮೀಪದ ಕಕ್ಷೆಯಲ್ಲಿರುವ ಉಪಗ್ರಹವನ್ನು ಹೊಡೆದು ಹಾಕಿದೆ ಎನ್ನುವ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಹಿನ್ನೆಲೆಯಲ್ಲಿ ಮಾಜಿ ಡಿಆರ್ಡಿಒ ಮುಖ್ಯಸ್ಥ ವಿ ಕೆ ಸಾರಸ್ವತ್ ಅವರು ಹಿಂದಿನ ಸರ್ಕಾರ ಅಂತಹ ಪರೀಕ್ಷೆಗೆ ಅವಕಾಶ ನೀಡಿರಲಿಲ್ಲ ಎಂದು ಹೇಳಿದ್ದರು. ನಿವೃತ್ತ ಡಿಆರ್ಡಿಒ ಮುಖ್ಯಸ್ಥ ಸಾರಸ್ವತ್ ಅವರನ್ನು 2013ರಲ್ಲಿ ಮೋದಿ ಸರ್ಕಾರ ನೀತಿ ಆಯೋಗದ ಸದಸ್ಯರನ್ನಾಗಿ ಮಾಡಿತ್ತು. “ಎಸ್ಯಾಟ್ ಪರೀಕ್ಷೆಗೆ ಹಿಂದಿನ ಸರ್ಕಾರ ಅವಕಾಶ ಕೊಟ್ಟಿರಲಿಲ್ಲ. ಯುಪಿಎ ಸರ್ಕಾರದ ಬಳಿ ಧೀರ್ಘಾವಧಿಯ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ. ಸಚಿವರಿಗೆ ನಾವು ಪ್ರಸ್ತಾಪಗಳನ್ನು ಕೊಟ್ಟಿದ್ದೆವು. ರಾಷ್ಟ್ರೀಯ ಭದ್ರತಾ ಸಂಸ್ಥೆಗೂ (ಎನ್ಎಸ್ಎ)ಗೂ ಈ ಬಗ್ಗೆ ತಿಳಿಸಿದ್ದೆವು. ಆದರೆ ಪರೀಕ್ಷೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಯಾವುದೇ ಕಾರಣ ನೀಡದೆ ಮೌನ ವಹಿಸಲಾಗಿತ್ತು” ಎಂದು ಸಾರಸ್ವತ್ ಹೇಳಿದ್ದು ವರದಿಯಾಗಿತ್ತು
ಈ ಬಗ್ಗೆ ವಿಚಾರಿಸಿದಾಗ ವೈರ್.ಇನ್ ಪತ್ರಿಕೆ ಸ್ವತಃ ಅಂದಿನ ಎನ್ ಎಸ್ ಎ ಮುಖ್ಯಸ್ಥ ಶಿವಶಂಕರ್ ಮೆನನ್ ಅವರನ್ನೇ ಕೇಳಲಾಗಿ ಅವರು, “ಎಸ್ಯಾಟ್ ಬಗ್ಗೆ ಅನೌಪಚಾರಿಕವಾಗಿ ವಿವರಗಳನ್ನು ನೀಡಲಾಗಿತ್ತಾದರೂ, ಪರೀಕ್ಷೆಗೆ ಒಪ್ಪಿಗೆಯನ್ನು ಡಿಆರ್ಡಿಒ ಕೇಳಿರಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ವಾಸ್ತವದಲ್ಲಿ 2012ರಲ್ಲಿ ಸ್ವತಃ ಸಾರಸ್ವತ್ ಪತ್ರಿಕಾ ಸಂದರ್ಶನವೊಂದರಲ್ಲಿ ತಾವು ಭಾರತ ಎಸ್ಯಾಟ್ ಸಾಮರ್ಥ್ಯ ಪರೀಕ್ಷಿಸುವುನ್ನು ಏಕೆ ಬೆಂಬಲಿಸುವುದಿಲ್ಲ ಎನ್ನುವುದನ್ನು ವಿವರಿಸಿದ್ದರು.
ಏಪ್ರಿಲ್ 27, 2012ರಂದು ಇಂಡಿಯಾ ಟುಡೆ ಪತ್ರಿಕೆಯಲ್ಲಿ ಪ್ರಕಟವಾದ ಸುದೀರ್ಘ ಸಂದರ್ಶನದಲ್ಲಿ ಅಂದಿನ ಡಿಆರ್ ಡಿಓ ಮುಖ್ಯಸ್ಥ ಹೀಗೆ ಹೇಳಿದ್ದರು.
“ನಾವು ಬಾಹ್ಯಾಕಾಶವನ್ನು ಸಶಸ್ತ್ರೀಕರಣಗೊಳಿಸಲು ಬಯಸುವುದಿಲ್ಲ. ಆದರೆ ಸಮಯ ಬಂದಾಗ ಅದರ ಅಗತ್ಯವಿರುವ ಕಾರಣ ಸಾಮರ್ಥ್ಯವನ್ನು ಕಟ್ಟಿಕೊಳ್ಳುತ್ತಿದ್ದೇವೆ. ಈಗ ಎಸ್ಯಾಟ್ ಕ್ಷಿಪಣಿಗೆ ಬೇಕಾದ ಎಲ್ಲಾ ಸಿದ್ಧತೆಗಳು ನಮ್ಮ ಬಳಿ ಇವೆ. ಕೊಂಚ ಅಧಿಕ ತಯಾರಿ ಬೇಕಿದೆ. ಅದನ್ನು ನಾವು ಎಲೆಕ್ಟ್ರಾನಿಕ್ ಸಾಧನಗಳ ಮೂಲಕವೇ ಮಾಡಿಕೊಳ್ಳಬಹುದು. ನಾವು ಭೌತಿಕ ಪರೀಕ್ಷೆ ಮಾಡುವುದಿಲ್ಲ. ಏಕೆಂದರೆ ಅಂತಹ ಉಪಗ್ರಹದ ಅವಶೇಷಗಳು ಇತರ ಉಪಗ್ರಹಗಳಿಗೆ ಹಾನಿ ತರಬಹುದು”
ಹೀಗೆ ವಿ ಕೆ ಸಾರಸ್ವತ್ ಯಾಕೆ ಭಾರತ ಎಸ್ಯಾಟ್ ಪರೀಕ್ಷೆಗೆ ಹೋಗುವುದಿಲ್ಲ ಎಂದು ವಿವರಿಸಿದ್ದರು.
ಇಂಡಿಯಾ ಟುಡೆ ಪತ್ರಿಕೆ ಅದೇ ಸಂಚಿಕೆಯಲ್ಲಿ ಎನ್ ಎಸ್ ಎ ನೇತೃತ್ವದಲ್ಲಿ 2010ರಲ್ಲಿ ರಚಿಸಲಾಗಿದ್ದ ಬಾಹ್ಯಾಕಾಶ ಭದ್ರತಾ ಸಂಯೋಜನಾ ಸಮೂಹ (Space Security Coordination Group (SSCG) ವು ಭಾರತದ ಎಸ್ಯಾಟ್ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸಿಕೊಳ್ಳಲು ಅಧಿಕಾರ ವಹಿಸಿಕೊಟ್ಟಿದ್ದ ಬಗ್ಗೆಯೂ ವರದಿ ಇದೆಯಲ್ಲದೇ ಸಾರಸ್ವತ್ ಅವರು ಭಾರತದ “ಪರಿಪೂರ್ಣ ಸಾಮರ್ಥ್ಯದ” ಎಸ್ಯಾಟ್ 2014ರಲ್ಲಿ ಸಿದ್ಧವಾಗಿರಲಿದೆ ಎಂದು ಹೇಳಿದ್ದೂ ವರದಿಯಾಗಿದೆ.
2010ರಿಂದ 2016ರ ನಡುವೆ ಭಾರತವು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟಗಳು ರೂಪಿಸಿದ್ದ ಬಾಹ್ಯಾಕಾಶ ನೀತಿ ಸಂಹಿತೆಯ ಕರಡು ಪ್ರತಿಗೆ ಭಾರತ ಸಕ್ರಿಯ ಪ್ರತಿರೋಧ ತೋರಿದ್ದೇ ಬಾಹ್ಯಾಕಾಶದಲ್ಲಿ ಯಾವುದೇ ಪರೀಕ್ಷೆಗಳನ್ನು ಭಾರತ ನಡೆಸದಿರಲು ಮುಖ್ಯ ಕಾರಣ ಎಂದು ಸೌತ್ ಬ್ಲಾಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಿಆರ್ಡಿಒ ಕ್ಷಿಪಣಿ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿದ್ದರೂ, ರಾಜತಾಂತ್ರಿಕವಾಗಿ ಭಾರತ ತನ್ನ ಕಾರ್ಯಯೋಜನೆಗಳ ಆಯ್ಕೆಗಳನ್ನು ಮುಕ್ತವಾಗಿ ಇಡಲು ಬಯಸಿತ್ತು.
2007ರಲ್ಲಿ ಚೀನಾ ಎಎಸ್ಎಟಿ ಪರೀಕ್ಷೆ ನಡೆಸಿದ ನಂತರದಲ್ಲಿ, ಹೆಚ್ಚಿನ ಎಸ್ಯಾಟ್ ಪರೀಕ್ಷೆ ನಡೆಸಬಾರದು ಮತ್ತು ಉಪಗ್ರಹ ಅವಶೇಷಗಳನ್ನು (ಡೆಬ್ರಿಸ್) ಬಾಹ್ಯಾಕಾಶದಲ್ಲಿ ಬಿಡಬಾರದು ಎಂಬ ಶರತ್ತುಗಳನ್ನು ವಿಧಿಸುವ, ಬಾಹ್ಯಾಕಾಶ ಚಟುವಟಿಕೆಗಳಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ನೀತಿ ಸಂಹಿತೆಯನ್ನು ಅಂಗೀಕರಿಸಲು ಪಾಶ್ಚಾತ್ಯ ದೇಶಗಳು ಒತ್ತಡ ಹೇರಿದ್ದವು. ಆದರೆ ಈ ನೀತಿ ಸಂಹಿತೆಗೆ ರಷ್ಯಾ, ಚೀನಾ, ಭಾರತ ಮತ್ತು ಇತರ ದೇಶಗಳು ವಿರೋಧಿಸಿದ್ದವು. ಪರಿಣಾಮವಾಗಿ ನೀತಿಸಂಹಿತೆ ಕರಡು ರೂಪಿಸುವ ಕೆಲಸ ನಿಂತಿತ್ತು.
ಭಾರತವು ವಿಶ್ವಸಂಸ್ಥೆ ಆಯೋಜಿಸಿದ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಹಲವು ವೇದಿಕೆಗಳ ಚರ್ಚೆಗಳಲ್ಲಿ ಭಾಗವಹಿಸಿತ್ತು. ಬಾಹ್ಯಾಕಾಶಕ್ಕೆ ಸಂಬಂಧಿಸಿ ವಿಶ್ವಾಸವೃದ್ಧಿ ಕ್ರಮಗಳಿಗೆ ವಿಶ್ವಸಂಸ್ಥೆ ಪ್ರಯತ್ನಿಸುತ್ತಿದ್ದರೂ ಭಾರತದ ರಾಜತಾಂತ್ರಿಕರು ಅದನ್ನು ಅಲಕ್ಷಿಸುತ್ತಲೇ ಬಂದಿದ್ದರು. ರಾಜತಾಂತ್ರಿಕ ಮತ್ತು ತಾಂತ್ರಿಕ ಮಟ್ಟದಲ್ಲಿ ಭಾರತದ ಎಸ್ಯಾಟ್ ನೀತಿ ತಟಸ್ಥವಾಗಿತ್ತು.
ವಾಸ್ತವದಲ್ಲಿ ಮೋದಿ ಸರ್ಕಾರ 2016ರಲ್ಲಿಯೇ ವಿಶೇಷ ಉಪಗ್ರಹವನ್ನು ಉಡಾಯಿಸುವ ಮೂಲಕ ಎಸ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಿತ್ತು. ಆದರೆ ಮಾರ್ಚ್ 27ರಂದು ನಡೆಸಿದ ಎಸ್ಯಾಟ್ ಪರೀಕ್ಷೆ, ಅದನ್ನು ಘೋಷಿಸಿದ ಕಾಲ, ಅದನ್ನು ಮೋದಿ ದೇಶವನ್ನು ಉದ್ದೇಶಿಸಿ ಮಾತಾಡಲು ಮಾಡಿದ ನಿರ್ಧಾರ ಎಲ್ಲವೂ ಸಹ ದೇಶದ ರಾಜಕೀಯ ಕ್ಯಾಲೆಂಡರ್ ಬದಲಾಗಿರುವ ಹಿನ್ನೆಲೆಯಲ್ಲಿ ಬಂದಿದೆಯೇ ವಿನಾ ಅಂತರರಾಷ್ಟ್ರೀಯವಾಗಿ ಬಾಹ್ಯಾಕಾಶ ಆಡಳಿತದ ಕಾನೂನು ನಿಯಮಗಳನ್ನು ಬಿಗಿಗೊಳಿಸಿದ ಕಾರಣದಿಂದಾಗಿ ಅಂತೂ ಅಲ್ಲ.
ಚೀನಾ ದೇಶ 2007 ಜನವರಿಯಲ್ಲಿ ಎಎಸ್ಎಟಿ ಪರೀಕ್ಷೆ ನಡೆಸಿದ ಕೆಲವು ವಾರಗಳಲ್ಲೇ ಆ ಬಗ್ಗೆ ಘೋಷಿಸಿತ್ತು. ಈ ಘೋಷಣೆಯನ್ನು ಆ ದೇಶದ ಪ್ರಧಾನಿ ಮಾಡಿರಲಿಲ್ಲ, ಬದಲಾಗಿ ವಿದೇಶಿ ಸಚಿವಾಲಯದ ವಕ್ತಾರರು ಘೋಷಿಸಿದ್ದರು. ಚುನಾವಣೆ ಇನ್ನು ಎರಡು ವಾರಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಮೋದಿ ಅವರು ಎಸ್ಯಾಠ್ ಪರೀಕ್ಷೆಯನ್ನು ತನ್ನ ನಾಯಕತ್ವದ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಂಡಿರುವುದಂತೂ ನಿಜ.
ಪರೀಕ್ಷೆಯ ನಂತರ ಮಾಡಿದ ಭಾಷಣದಲ್ಲಿ ಮೋದಿ, “ನನ್ನ ಗುರಿ ಪ್ರತಿಯೊಬ್ಬ ಭಾರತೀಯನೂ ತಾನು ಸುರಕ್ಷಿತವಾಗಿದ್ದೇನೆ ಎನಿಸುವಂತೆ ಮಾಡುವುದು. ದೃಢ, ಸಮೃದ್ಧ ಮತ್ತು ಸುಭದ್ರವಾದ ದೇಶವೊಂದನ್ನು ಕಟ್ಟುವಲ್ಲಿ ನನಗೆ ದೇಶದ ಜನರ ಸಾಮರ್ಥ್ಯ, ಬದ್ಧತೆ ಮತ್ತು ಕಾರ್ಯವೈಖರಿಯಲ್ಲಿ ನಂಬಿಕೆ ಇದೆ. ಜನರು ಅಂತಹ ಭವಿಷ್ಯದ ಯೋಜನೆಗಳನ್ನು ರೂಪಿಸಿ ಮುಂದಕ್ಕೆ ಸಾಗಲು ಧೈರ್ಯವನ್ನು ಒಟ್ಟುಗೂಡಿಸಿಕೊಂಡು ಹೋಗಬಲ್ಲ ಒಂದು ಭಾರತದ ನಿರ್ಮಿಸುವ ಮಹಾತ್ವಾಕಾಂಕ್ಷೆಯನ್ನು ನಾನು ಹೊಂದಿದ್ದೇನೆ” ಎಂದು ಹೇಳಿದ್ದರು.
ಮೋದಿ ಅವರು ತಾವಾಗಿಯೇ ಘೋಷಣೆ ಮಾಡಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎನ್ನುವ ವಿರೋಧ ಪಕ್ಷಗಳ ದೂರನ್ನು ಚುನಾವಣಾ ಆಯೋಗ ಪರಿಶೀಲಿಸುತ್ತಿದೆ. “ಯಾವುದೇ ಘೋಷಣೆ ಮಾಡಲು ಕಾಯುವಂತಿಲ್ಲ ಎನ್ನುವ ಸಂದರ್ಭವಿದ್ದರೂ, ಮತ್ತು… ಅದು ರಾಜಕೀಯ ಪ್ರಮುಖರೇ ಘೋಷಣೆ ಮಾಡಬೇಕೆನ್ನುವುದು ಮೊದಲೇ ನಿರ್ಧಾರವಾಗಿದ್ದರೂ, ಅದನ್ನು ಅವರ ಬದಲಿಗೆ ಅಧಿಕಾರಿಯೊಬ್ಬ ನಿಭಾಯಿಸಬೇಕು ಎಂದು ನೀತಿ ಸಂಹಿತೆ ಹೇಳುತ್ತದೆ” ಎಂದು ಮಾಜಿ ಚುನಾವಣಾ ಆಯುಕ್ತರೊಬ್ಬರ ಅಭಿಪ್ರಾಯ.
ಮಾಹಿತಿ: ದ ವೈರ್