2014ರ ಚುನಾವಣಾ ಪ್ರಚಾರದ ವೇಳೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ನರೇಂದ್ರ ಮೋದಿ ಸರ್ಕಾರ, ಉದ್ಯೋಗ ಸೃಷ್ಟಿಸುವುದಿರಲಿ, ಉದ್ಯೋಗದಾತ ಕಂಪನಿಗಳೆಂದೇ ಹೆಸರಾಗಿರುವ ಸಾರ್ವಜನಿಕ ವಲಯದ ಉದ್ಯಮಗಳನ್ನು ಮುಳುಗಿಸಿದೆ. ಸುಮಾರು ಇಪ್ಪತ್ತು ಸಾರ್ವಜನಿಕ ಉದ್ಯಮಗಳಲ್ಲಿ ಹೂಡಿಕೆ ಮಾಡಿದವರೆಲ್ಲ ಹಣ ಕಳೆದುಕೊಂಡು ನಷ್ಟಕ್ಕೀಡಾಗಿದ್ದಾರೆ. ಈ ಕಂಪನಿಗಳ ಷೇರುಗಳು ಕುಸಿಯುತ್ತಲೇ ಇದ್ದು ಹೂಡಿಕೆದಾರರ ಸಂಪತ್ತನ್ನು ನಾಶ ಮಾಡಿವೆ. ಇದು ಮೋದಿ ಸರ್ಕಾರ ಬಂದ ನಂತರದ ಬೆಳವಣಿಗೆ. ಈ ಹಿಂದೆ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಪ್ರಮಾಣದಲ್ಲಿ ಲಾಭ ಬರುತ್ತಿತ್ತು. ಅದಕ್ಕೆ ಕಾರಣ ಹಿಂದಿನ ಯುಪಿಎ-1 ಮತ್ತು ಯುಪಿಎ-2 ಅವಧಿಯಲ್ಲಿನ ಉದ್ಯಮ ಮತ್ತು ಕಾರ್ಮಿಕ ಸ್ನೇಹಿ ನೀತಿ. ಹೀಗಾಗಿ ಆ ಅವಧಿಯಲ್ಲಿ ಸಾರ್ವಜನಿಕ ಉದ್ಯಮಗಳಲ್ಲಿ ಹೂಡಿಕೆ ಮಾಡಿದವರೆಲ್ಲ ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಂಡಿದ್ದರು.
ಆದರೆ, ಮೋದಿ ಸರ್ಕಾರವು ಅದಾನಿ, ಅಂಬಾನಿ ಇತ್ಯಾದಿ ಬೆರಳೆಣಿಕೆಯ ಕಾರ್ಪೊರೇಟ್ ಕುಳಗಳಿಗೆ ನೆರವು ಒದಗಿಸುವ ಸಲುವಾಗಿ ಸಾರ್ವಜನಿಕ ವಲಯದ ಉದ್ಯಮಗಳನ್ನು ಬಲಿಕೊಟ್ಟಿದೆ.
ತೀರಾ ಇತ್ತೀಚಿನ ಉದಾಹರಣೆ ಎಂದರೆ ಬೆಂಗಳೂರಿನಲ್ಲೇ ಇರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್). ಮೋದಿ ಸರ್ಕಾರ ಅತಿಯಾಗಿ ಪ್ರಚಾರ ಪಡೆದ ಮೇಕ್ ಇನ್ ಇಂಡಿಯಾ ಯೋಜನೆಯಡಿ ರಕ್ಷಣಾ ಇಲಾಖೆ ಖರೀದಿಸಲಿರುವ ರಫೆಲ್ ಯುದ್ದ ವಿಮಾನಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಸಿದ್ದ ಪಡಿಸಬೇಕಿತ್ತು. ಫ್ರಾನ್ಸ್ ದೇಶದ ಡಸ್ಸಾಲ್ಟ್ ಏವಿಯೇಷನ್ ರಫೆಲ್ ಯುದ್ಧ ವಿಮಾನಗಳ ತಂತ್ರಜ್ಞಾನ ಮತ್ತು ಬಿಡಿಭಾಗಗಳನ್ನು ಎಚ್ಎಎಲ್ ಗೆ ಒದಗಿಸುವುದು ಮತ್ತು ಎಚ್ಎಎಲ್ ನಲ್ಲಿ ಯುದ್ದ ವಿಮಾನ ಸಿದ್ಧ ಪಡಿಸುವ ಬಗ್ಗೆಯು ಪ್ರಾಥಮಿಕವಾಗಿ ಒಡಂಬಡಿಕೆಗಳಾಗಿದ್ದವು. ಈಗಾಗಲೇ ಲಘು ಯುದ್ಧ ವಿಮಾನಗಳನ್ನು ರಕ್ಷಣಾ ಇಲಾಖೆ ಪೂರೈಸುತ್ತಿರುವ ಎಚ್ಎಎಲ್ ರಫೆಲ್ ಯುದ್ಧ ವಿಮಾನ ಸಿದ್ದಪಡಿಸಲು ಹೆಚ್ಚು ಸಮರ್ಥವಾಗಿದೆ ಕೂಡಾ.
ಭಾರತದ ರಕ್ಷಣಾ ಪಡೆ ಉನ್ನತಾಧಿಕಾರಿಗಳು ಮತ್ತು ಎಚ್ಎಎಲ್ ಉನ್ನತಾಧಿಕಾರಿಗಳು ಎಚ್ಎಎಲ್ ನಲ್ಲಿಯೇ ಯುದ್ಧವಿಮಾನ ಸಿದ್ದವಾಗತ್ತದೆಂದೇ ಭಾವಿಸಿದ್ದರು. ಅದು ಎಚ್ಎಎಲ್ ಪಾಲಿಗೆ ಹೆಮ್ಮೆಯ ಸಂಗತಿಯೂ ಆಗುತ್ತಿತ್ತು. ಆದರೆ, ಸದಾ ಕಾರ್ಪೊರೆಟ್ ಗಳ ಹಿತರಕ್ಷಣೆಗೆ ಕಟಿಬದ್ಧವಾಗಿರುವ ನರೇಂದ್ರ ಮೋದಿ ಸರ್ಕಾರ ಏಕಾಏಕಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್ ಕಂಪನಿಗೆ ಯುದ್ಧ ವಿಮಾನ ಸಿದ್ಧ ಮಾಡಲು ಅವಕಾಶ ನೀಡಿದ್ದಾರೆ. ಅನುಭವ ಮತ್ತು ಸಾಮರ್ಥ್ಯ ಇದ್ದರೂ ಎಚ್ಎಎಲ್ ರಫೆಲ್ ಯುದ್ಧ ವಿಮಾನ ತಯಾರಿಸಲಾಗುತ್ತಿಲ್ಲ.
ಯುಪಿಎ-2 ಸರ್ಕಾರದ ಅವಧಿಯಲ್ಲಿ 2012 ಜನವರಿ 31 ರಂದು ಫ್ರಾನ್ಸ್ ದೇಶದ ಡಸ್ಸಾಲ್ಟ್ ಏವಿಯೇಷನ್ ಕಂಪನಿಯಿಂದ 126 ಯುದ್ಧ ವಿಮಾನಗಳನ್ನು(ಎಂಎಂಆರ್ಸಿಎ- ಮಿಡಿಯಂ ಮಲ್ಟಿರೋಲ್ ಕಾಂಬ್ಯಾಟ್ ಏರ್ಕ್ರಾಫ್ಟ್) ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮೂಲ ಒಪ್ಪಂದದ ಪ್ರಕಾರ 18 ಯುದ್ದ ವಿಮಾನಗಳನ್ನು ಪೂರ್ಣವಾಗಿ ಸಿದ್ದಪಡಿಸಿ ಡಸ್ಸಾಲ್ಟ್ ಏವಿಯೇಷನ್ ಭಾರತಕ್ಕೆ ಪೂರೈಸುವುದು ಮತ್ತು ಉಳಿದ 108 ಯುದ್ಧ ವಿಮಾನಗಳನ್ನು ಡಸ್ಸಾಲ್ಟ್ ಏವಿಯೇಷನ್ ಕಂಪನಿಯಿಂದ ತಂತ್ರಜ್ಞಾನ ಮತ್ತು ಬಿಡಿ ಭಾಗಗಳನ್ನು ಪಡೆದು ಹಿಂದೂಸ್ತಾನ್ ಏರೋನಾಟಿಕ್ಸ್ ನಲ್ಲಿ ತಯಾರಿಸುವುದಾಗಿತ್ತು. ಪ್ರತಿ ಯುದ್ಧವಿಮಾನ ದರ 746 ಕೋಟಿ ರುಪಾಯಿಗಳೆಂದು ನಿಗದಿ ಮಾಡಲಾಗಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯುಪಿಎ ಸರ್ಕಾರದ ಒಪ್ಪಂದ ಮಾರ್ಪಾಡು ಮಾಡಿ 36 ರಫೆಲ್ ಯುದ್ಧ ವಿಮಾನಗಳನ್ನು ಖರೀದಿಗೆ ಒಪ್ಪಂದ ಮಾಡಿಕೊಂಡಿತು. ಪ್ರತಿ ಯುದ್ದ ವಿಮಾನದ ವೆಚ್ಚವು 1600 ಕೋಟಿ ರುಪಾಯಿಗೆ ಏರಿತು. ಈ ಬಗ್ಗೆ ಪಾರದರ್ಶಕತೆ ಕಾಯ್ದುಕೊಳ್ಳಲು ವಿಫಲವಾದ ಮೋದಿ ಸರ್ಕಾರ ಭ್ರಷ್ಟಾಚಾರದ ಆರೋಪ ಹೊತ್ತಿದೆ. ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾರಣಕ್ಕಾಗಿಯೇ ಕಾಂಗ್ರೆಸ್ ನಾಯಕ ಪ್ರಧಾನಿ ಮೋದಿಗೆ ‘ಚೌಕಿದಾರ್ ಚೋರ್ ಹೈ’ ಎಂದು ಟೀಕಿಸುತ್ತಿದ್ದಾರೆ.
ಎಲ್ಲಕ್ಕೂ ಮಿಗಿಲಾಗಿ, ರಫೆಲ್ ಯುದ್ಧ ವಿಮಾನಗಳ ನಿರ್ವಹಣೆ ಮತ್ತು ಬಾಕಿ ಯುದ್ಧ ವಿಮಾನಗಳ ನಿರ್ಮಾಣದ ಹೊಣೆಯನ್ನು ಇತ್ತೀಚೆಗೆ ಹುಟ್ಟಿಕೊಂಡ ರಿಲಯನ್ಸ್ ಡಿಫೆನ್ಸ್ ಗೆ ನೀಡಲು ಮುಂದಾಗಿರುವುದು ವಿವಾದಕ್ಕೆ ಎಡೆ ಮಾಡಿದೆ. ಹಲವು ದಶಕಗಳಿಂದ ಯುದ್ಧ ವಿಮಾನಗಳ ಸಂಶೋಧನೆ ಮತ್ತು ಅಭಿವೃದ್ದಿಯಲ್ಲಿ ತೊಡಗಿರುವ ಎಚ್ಎಎಲ್ ನಿರ್ಲಕ್ಷಿಸಿದ ಪರಿಣಾಮ ಬಂಡವಾಳ ಮಾರುಕಟ್ಟೆಯಲ್ಲಿ ಎಚ್ಎಎಲ್ ಕಂಪನಿಯ ಮೌಲ್ಯ ಕುಸಿದಿದೆ. ಕಳೆದ ವರ್ಷ ಐಪಿಒ ಮೂಲಕ ಷೇರುಪೇಟೆಯಲ್ಲಿ ಪ್ರತಿ ಷೇರಿಗೆ 1240 ರುಪಾಯಿಗೆ ಲಿಸ್ಟಾದ ಎಚ್ಎಎಲ್ ಷೇರು ದರ ನಂತರ ಸತತ ಕುಸಿತ ಕಂಡಿದೆ. ಪ್ರಸ್ತುತ ಎಚ್ಎಎಲ್ ಷೇರಿನ ಬೆಲೆ 720 ರುಪಾಯಿಗೆ ಇಳಿದಿದೆ. ಎಚ್ಎಎಲ್ ನ ಹಿಂದಿನ ಸಾಧನೆ ನೋಡಿ ಹೂಡಿಕೆ ಮಾಡಿದವರು ಮೋದಿ ಸರ್ಕಾರ ಮಾಡಿದ ಗಂಡಾಂತರದಿಂದಾಗಿ ನಷ್ಟ ಅನುಭವಿಸಿದ್ದಾರೆ.
ಇದು ಎಚ್ಎಎಲ್ ಕಂಪನಿಯೊಂದರ ಕತೆ ಮಾತ್ರವಲ್ಲ. ಮೋದಿ ಸರ್ಕಾರದ ಅವಧಿಯಲ್ಲಿ ಇನಿಷಿಯಲ್ ಪಬ್ಲಿಕ್ ಆಫರ್ (ಐಪಿಒ) ಮತ್ತು ಆಫರ್ ಫಾರ್ ಸೇಲ್ (ಒಎಫ್ಎಸ್) ಮೂಲಕ ಸಾರ್ವಜನಿಕ ವಲಯದ ಉದ್ದಿಮೆಗಳು ಬಂಡವಾಳ ಪೇಟೆ ಪ್ರವೇಶಿಸಿವೆ. ಸಾರ್ವಜನಿಕ ಉದ್ಯಮಗಳ ಪೈಕಿ ಎರಡು ಕಂಪನಿಗಳು ಮಾತ್ರ ಹೂಡಿಕೆದಾರರಿಗೆ ಲಾಭ ತಂದುಕೊಟ್ಟಿವೆ. ಉಳಿದ ಕಂಪನಿಗಳಲ್ಲಿ ಹೂಡಿಕೆ ಮಾಡಿದವರು ನಷ್ಟ ಅನುಭವಿಸಿದ್ದಾರೆ.
ಕಂಪನಿಯೊಂದರ ಆಡಳಿತ ಮತ್ತು ಕಾರ್ಯಕ್ಷಮತೆ ಬಗ್ಗೆ ವಿಶ್ವಾಸ ಕುಸಿದಾಗ ಕಂಪನಿಯ ಷೇರು ದರ ಕುಸಿಯುತ್ತದೆ. ಐಪಿಒ ಮೂಲಕ ಲಿಸ್ಟಾದ ದರಕ್ಕಿಂತಲೂ ಕೆಳಮಟ್ಟಕ್ಕೆ ಕುಸಿದರೆ ಹೂಡಿಕೆದಾರರು ನಷ್ಟ ಅನುಭವಿಸುತ್ತಾರೆ.
20 ಕಂಪನಿಗಳ ಪೈಕಿ 18 ಕಂಪನಿಗಳ ಷೇರು ದರ ಲಿಸ್ಟಾದ ದರಕ್ಕಿಂತ ಕೆಳಮಟ್ಟಕ್ಕೆ ಕುಸಿದಿವೆ ಎಂದರೆ ಹೂಡಿಕೆದಾರರಿಗೆ ಕೇಂದ್ರ ಸರ್ಕಾರದ ಮೇಲೆ ವಿಶ್ವಾಸ ಇಲ್ಲ ಎಂದೇ ಅರ್ಥ. ಬಂಡವಾಳ ಪೇಟೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಗುಜರಾತ್ ಮೂಲದ ಅದಾನಿ ಕಂಪನಿಗಳ ಷೇರುಗಳ ಎರಡರಿಂದ ನಾಲ್ಕು ಪಟ್ಟು ಏರಿದ್ದರೆ ಅದಕ್ಕೆಆ ಕಂಪನಿಗಳು ಶ್ರೇಷ್ಠ ಕಂಪನಿಗಳು ಎಂಬುದು ಕಾರಣವಲ್ಲ. ಆಡಳಿತಾರೂಢ ಬಿಜೆಪಿ ಮತ್ತು ಖುದ್ದು ಪ್ರಧಾನಿಯೇ ಆ ಕಂಪನಿಗಳ ರಕ್ಷಕರಂತೆ (ಚೌಕೀದಾರ್) ವರ್ತಿಸುತ್ತಿದ್ದಾರೆ. ಆ ಕಂಪನಿಗಳಿಗೆ ಪೂರಕವಾಗುವಂತೆ ನೀತಿ ನಿಯಮಗಳನ್ನು ಮಾರ್ಪಾಡು ಮಾಡುತ್ತಿದ್ದಾರೆ. ಹೀಗಾಗಿಯೇ ಹೂಡಿಕೆದಾರರು ಸಹಜವಾಗಿಯೇ ಸರ್ಕಾರ ಶ್ರೀರಕ್ಷೆ ಇರುವ ಕಂಪನಿಗಳ ಮೇಲೆ ಹೂಡಿಕೆ ಮಾಡುತ್ತಾರೆ. ಸಾರ್ವಜನಿಕ ಉದ್ದಿಮೆಗಳು ಸರ್ಕಾರದ ಒಡೆತನದಲ್ಲೇ ಇದ್ದರೂ ಸರ್ಕಾರದ ಶ್ರೀರಕ್ಷೆ ಇಲ್ಲದಂತಾಗಿದೆ. ಹೀಗಾಗಿ ಹೂಡಿಕೆದಾರರು ಸಾರ್ವಜನಿಕ ವಲಯದ ಕಂಪನಿಗಳ ಮೇಲೆ ಹೂಡಿಕೆ ಮಾಡುತ್ತಿಲ್ಲ. ಹೂಡಿಕೆ ಮಾಡಿದವರು ನಷ್ಟಕ್ಕೀಡಾಗಿದ್ದಾರೆ.
ಎಚ್ಎಎಲ್ ನಲ್ಲಿ ಹೂಡಿಕೆ ಮಾಡಿದವರಿಗೆ ಆಗಿರುವ ನಷ್ಟ ಶೇ.42ರಷ್ಟು. ಹುಡ್ಕೊದಲ್ಲಿ ಹೂಡಿಕೆ ಮಾಡಿದವರು ಶೇ.26ರಷ್ಟು ನಷ್ಟಕ್ಕೀಡಾಗಿದ್ದಾರೆ. ಮ್ಯಾಂಗನೀಸ್ ಓರ್ ಇಂಡಿಯಾ ಲಿಮಿಡೆಡ್ (ಎಂಒಐಎಲ್) ನಲ್ಲಿ ಹೂಡಿದವರಿಗೆ ಭಾರಿ ನಷ್ಟವಾಗಿದ್ದು, ನಷ್ಟದ ಪ್ರಮಾಣ ಶೇ.58ರಷ್ಟಿದೆ. ನ್ಯಾಷನಲ್ ಫರ್ಟಿಲೈಸರ್ ಕಂಪನಿಯಲ್ಲಿ ಹೂಡಿದವರು ಶೇ.51ರಷ್ಟು ಕಳೆದುಕೊಂಡಿದ್ದಾರೆ.
ಮೋದಿ ಅಧಿಕಾರಕ್ಕೆ ಬಂದ ನಂತರ, ಕಳೆದ ಮೂರು ವರ್ಷಗಳಲ್ಲಿ ಹೂಡಿಕೆದಾರರಿಗೆ ನಷ್ಟ ಮಾಡಿದ ಸಾರ್ವವಲಯದ ಕಂಪನಿಗಳ ವಿವರ ಇಲ್ಲಿದೆ. ಕಂಸದಲ್ಲಿರುವುದು ಹೂಡಿಕೆದಾರರಿಗೆ ಆಗಿರುವ ಶೇಕಡವಾರು ನಷ್ಟದ ಪ್ರಮಾಣ. ಎಂಒಐಎಲ್ (58%) ನ್ಯಾಷನಲ್ ಫರ್ಟಿಲೈಸರ್ಸ್ (51%) ಎಚ್ಎಎಲ್ (42%) ಬಿಡಿಎಲ್ (39%) ಎನ್ಎಂಡಿಸಿ (34%) ಬಿಇಎಲ್ (33%) ನೈವೇಲಿ ಲಿಗ್ನೈಟ್ (26%) ಹಿಂದೂಸ್ತಾನ್ ಕಾಪರ್ (25%) ಹುಡ್ಕೊ (26%) ಎನ್ಬಿಸಿಸಿ (23%) ಇಕ್ರಾನ್ (16%), ಗಾರ್ಡನ್ ರೀಚ್ ಷಿಪ್ (17%), ಕೋಲ್ ಇಂಡಿಯಾ (11%) ನಾಲ್ಕೊ (21%) ಆರ್ಸಿಎಫ್ಎಲ್ (20%) ಕೊಚಿನ್ ಶಿಪ್ಯಾರ್ಡ್ (16%) ಎನ್ಟಿಪಿಸಿ (19%).