ದೆಹಲಿ: ದೇಶದ ಒಟ್ಟು 521 ಸಂಸದರಲ್ಲಿ ಬರೋಬ್ಬರಿ 430 (ಶೇಕಡಾ 83ರಷ್ಟು) ಸಂಸದರು ಕೋಟ್ಯಾಧಿಪತಿಗಳು. ಅದರಲ್ಲೂ ಬಹುತೇಕ ಸಂಸದರು ಬಿಜೆಪಿಯವರೇ ಆಗಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನ 2019ರ ವರದಿ ಬಹಿರಂಗಪಡಿಸಿದೆ.
ಒಟ್ಟಾರೆ 521 ಸಂಸದರಲ್ಲಿ ಬಿಜೆಪಿಯ 227 ಸಂಸದರು, ಕಾಂಗ್ರೆಸ್ ನ 37 ಸಂಸದರು ಹಾಗೂ ಎಐಎಡಿಎಂಕೆಯ 29 ಸಂಸದರು ಕೋಟ್ಯಧಿಪತಿಗಳಾಗಿದ್ದಾರೆ. ಅಷ್ಟೇ ಅಲ್ಲದೇ ಶೇಕಡಾ 33ರಷ್ಟು ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳೂ ದಾಖಲಾಗಿದೆ ಎಂದು ‘ಚುನಾವಾಣಾ ಕಾವಲು ನಾಯಿ’ ಎಂದೇ ಹೆಸರಾಗಿರುವ ಎಡಿಆರ್ ನ ಸಂಶೋಧನಾ ವರದಿ ತಿಳಿಸುತ್ತದೆ.

ಮತದಾರರ ಜಾಗೃತಿ ಹಾಗೂ ಸುಧಾರಣೆಗಾಗಿ ಕಾರ್ಯನಿರ್ವಹಿಸುವ ಸರ್ಕಾರೇತರ ಸಂಸ್ಥೆ ಎಡಿಆರ್, 2014ರ ಚುನಾವಣೆ ವೇಳೆ 543 ಅಭ್ಯರ್ಥಿಗಳು ಸಲ್ಲಿಸಿದ್ದ ಸ್ವಯಂ ದೃಢೀಕೃತ ಅಫಿಡವಿಟ್ಗಳನ್ನು ಪರಾಮರ್ಶಿಸಿ ಈ ವರದಿಯನ್ನು ಸಿದ್ಧಪಡಿಸಿದೆ.
ಹಾಲಿ ಸಂಸದರ ಸರಾಸರಿ ಆಸ್ತಿ ಮೌಲ್ಯ ಕನಿಷ್ಠ 14.72 ಕೋಟಿ ರುಪಾಯಿ ಎನ್ನಲಾಗಿದೆ. ಅಲ್ಲದೇ ಇಬ್ಬರು ಸಂಸದರು 5 ಲಕ್ಷಕ್ಕಿಂತ ಕಡಿಮೆ ಆಸ್ತಿಯನ್ನು ಹೊಂದಿದ್ದೇವೆ ಎಂಬುದಾಗಿ ಘೋಷಿಸಿದ್ದಾರೆ. ಈ ಇಬ್ಬರನ್ನು ಹೊರತುಪಡಿಸಿದರೆ, 32 ಹಾಲಿ ಸಂಸದರು 50 ಕೋಟಿ ರುಪಾಯಿಗೂ ಹೆಚ್ಚು ಆಸ್ತಿಯನ್ನು ಹೊಂದಿದ್ದೇವೆ ಎಂದು ಘೋಷಿಸಿದ್ದಾರೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಬಿಜೆಪಿ ಸಂದರದ್ದೇ ಮೇಲುಗೈ
ಕನಿಷ್ಠ ಶೇಕಡಾ 33ರಷ್ಟು ಹಾಲಿ ಸಂಸದರು ತಮ್ಮ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂದು ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ಅದರಲ್ಲಿ 106 ಸಂಸದರ ವಿರುದ್ಧ ಕೊಲೆ, ಕೊಲೆಗೆ ಯತ್ನ, ಕೋಮು ಗಲಭೆ, ಅಪಹರಣ ಮತ್ತು ಮಹಿಳೆಯ ವಿರುದ್ಧ ಅಪರಾಧದಂತಹ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿದೆ.
ಬಿಜೆಪಿಯ 4 ಸಂಸದರು, ಓರ್ವ ಸ್ವತಂತ್ರ ಅಭ್ಯರ್ಥಿ ಸೇರಿದಂತೆ ಕಾಂಗ್ರೆಸ್, ಎನ್ ಸಿಪಿ, ಎಲ್ ಜೆಪಿ, ಆರ್ ಜೆಡಿ, ಸ್ವಾಭಿಮಾನಿ ಪಕ್ಷಕ್ಕೆ ಸೇರಿದ ತಲಾ ಓರ್ವ ಸಂಸದರು, ಒಟ್ಟಾರೆ 10 ಹಾಲಿ ಸಂಸದರು ತಮ್ಮ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಸ್ವಯಂ ಘೋಷಿಸಿದ್ದಾರೆ ಎಂದು ವರದಿ ತಿಳಿಸುತ್ತದೆ.
ಮತ್ತೆ ಬಿಜೆಪಿಯ 8 ಸಂಸದರು, ಕಾಂಗ್ರೆಸ್, ಎಐಟಿಸಿ, ಎನ್ ಸಿಪಿ, ಆರ್ ಜೆಡಿ, ಶಿವಸೇನೆ ಮತ್ತು ಸ್ವಾಭಿಮಾನಿ ಪಕ್ಷದ ಓರ್ವ ಸಂಸದ ಸೇರಿದಂತೆ 14 ಸಂಸದರ ವಿರುದ್ಧ ಕೊಲೆ ಯತ್ನ ಹಾಗೂ ಬಿಜೆಪಿಯ 10 ಸಂಸದರು ಸೇರಿದಂತೆ ಒಟ್ಟು 14 ಸಂಸದರ ವಿರುದ್ಧ ಕೋಮು ಗಲಭೆ ಪ್ರಕರಣಗಳು ದಾಖಲಾಗಿರುವುದನ್ನು ವರದಿ ಸ್ಪಷ್ಟಪಡಿಸುತ್ತದೆ.
More Articles
By the same author
Related Articles
From the same category