ಫೆ. 14ರಂದು ಪುಲ್ವಾಮಾ ದಾಳಿ ನಡೆದು ಭಾರತದ 42 ಮಂದಿ ಸಿ ಆರ್ ಪಿ ಎಫ್ ಸೈನಿಕರು ಹುತಾತ್ಮರಾದ ನಂತರ ಫೆ 26ರಂದು ಭಾರತದ ವಾಯುಪಡೆ ಬಾಲಾಕೋಟ್ ವಾಯುದಾಳಿ ನಡೆಸಿತು. ಮರುದಿನವೇ ಭಾರತ-ಪಾಕಿಸ್ತಾನಗಳ ಗಡಿ ಭಾಗದಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿತ್ತು. ಭಾರತದ ಗಡಿಯೊಳಗೆ ಬರಲು ಯತ್ನಿಸಿದ ಎಫ್ 16 ಯುದ್ಧ ವಿಮಾನವನ್ನು ಭಾರತದ ಪಡೆಗಳು ಹೊಡೆದುರುಳಿಸಿದರೆ ಭಾರತದ ಮಿಗ್ ಯುದ್ಧ ವಿಮಾನವನ್ನು ಪಾಕಿಸ್ತಾನ ಉರುಳಿಸಿತ್ತು. ಈ ಘರ್ಷಣೆಯಲ್ಲಿ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ವಶಕ್ಕೆ ಸಿಕ್ಕಿದ್ದರು.
ಈ ನಡುವೆ ಇಡೀ ದೇಶ ಒಂದು ಸಂಗತಿಯನ್ನು ಗಮನಿಸುತ್ತಾ ಬರುತ್ತಿತ್ತು. ಪುಲ್ವಾಮಾ ದಾಳಿ ನಡೆದ ದಿನವೂ ಸೇರಿದಂತೆ ದೇಶದ ಸೈನಿಕರ ಮೇಲೆ ಆಕ್ರಮಣ ನಡೆದ ಸುದ್ದಿ ಕಿವಿಗೆ ಬಿದ್ದಾಗಲೂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರೂ ತಮ್ಮ ಡಾಕ್ಯುಮೆಂಟರಿ ಶೂಟಿಂಗ್ ಮತ್ತು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡೇ ಇದ್ದರು. ಮೋದಿ ಉತ್ತರಾಖಂಡದ ಜಿಮ್ ಕಾರ್ಬೆಟ್ ನ್ಯಾಶನಲ್ ಪಾರ್ಕಿನಲ್ಲಿ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿದ್ದರೆ ಅಮಿತ್ ಷಾ ಹೊಸಪೇಟೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತಲ್ಲೀನರಾಗಿದ್ದರು. ಪುಲ್ವಾಮಾ ದಾಳಿ ನಡೆದು ಹಲವು ಗಂಟೆಗಳೇ ಆದ ಮೇಲೂ ಇವರು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದರು.
ಇನ್ನು ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ವಶದಲ್ಲಿ ಸಿಲುಕಿದ ಕೂಡಲೇ ಭಾರತೀಯರೆಲ್ಲರೂ ಅಭಿನಂದನ್ ಸುರಕ್ಷಿತವಾಗಿ ಮರಳಿ ಬರಲೆಂದು ಹಾರೈಸುತ್ತಾ ದುಗುಡದಿಂದ ಕಾಯುತ್ತಿದ್ದರು. ಆರಂಭದಲ್ಲಿ ಪಾಕಿಸ್ತಾನದ ಉದ್ರಿಕ್ತ ಜನರು ಅಭಿನಂದನ್ ಮೇಲೆ ಹಲ್ಲೆ ನಡೆಸಿದ್ದರೂ ಸಹ ಪಾಕಿಸ್ತಾನದ ಸೈನಿಕರು ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದರು. ನಂತರ ಜಿನೆವಾ ಒಪ್ಪಂದದ ಪ್ರಕಾರ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ‘ಶಾಂತಿ ಸ್ಥಾಪನೆಯ’ ಪ್ರಯತ್ನದ ಭಾಗವಾಗಿ ಅಭಿನಂದನ್ ಭಾರತಕ್ಕೆ ಸುರಕ್ಷಿತವಾಗಿ ಮರಳುವಂತಾಯಿತು.ಭಾರತೀಯರು ನಿಟ್ಟುಸಿರು ಬಿಡುವಂತಾಯಿತು
ಈಗ ಅಸಲಿ ವಿಷಯ ಏನಂದರೆ, ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷತೆ ಬಗ್ಗೆ ಇಡೀ ದೇಶದ ಗಮನ ಹರಿದಿದ್ದು, ದೇಶದಲ್ಲಿ ಯಾರಿಗಾರದೂ ತೀವ್ರ ಅಸಮಧಾನ, ಕೋಪ ತರಿಸಿತ್ತೆಂದರೆ ಅದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರಿಗೇ.
ಇಂದು ಬಿಜೆಪಿಯೇ ಮಾಡಿರುವ ಟ್ವೀಟ್ ಸಂದೇಶದಲ್ಲಿ ಈ ಸಂಗತಿ ಬಯಲಾಗಿದೆ.
ಮೋದಿಯವರು ಹೇಳಿರುವ ಮಾತೊಂದನ್ನು ಬಿಜೆಪಿ ಉಲ್ಲೇಖಿಸಿ ಹಿಂದಿಯಲ್ಲಿ ಬರೆದಿರುವ ಸಂದೇಶದ ಸಾರಾಂಶವೇನೆಂದರೆ, ‘ಅಭಿನಂದನ್ ಘಟನೆ ನಡೆದಾಗ ನಮ್ಮ ಸೇನೆ ಎಫ್ -16 ಹೊಡೆದುರುಳಿಸಿದೆ ಎಂದು ಹೆಮ್ಮೆಯಿಂದ ದೇಶದ ಎಲ್ಲಾ ಪಕ್ಷಗಳಿಗೆ ಹೇಳಬೇಕಿತ್ತು. ಆದರೆ ಅದರ ಬದಲಿಗೆ “ಈ ಅಭಿನಂದನ್ ಯಾವಾಗ ಬರ್ತಾನೆ” ಎಂಬುದರ ಸುತ್ತ ಚರ್ಚೆಯಾಯಿತು” ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಬಿಜೆಪಿ ಉಲ್ಲೇಖಿಸಿರುವ ಮೋದಿಯವರ ಮಾತಿನ ಕುರಿತು ಟ್ವಿಟರಿಗರು ಆಘಾತ ವ್ಯಕ್ತಪಡಿಸಿದ್ದಾರಲ್ಲದೇ, ಇವರೆಂತಹ ಪ್ರಧಾನಿ ಎಂದು ಅಪಹಾಸ್ಯ ಮಾಡಿದ್ದಾರೆ. ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
How shameless is our prime minister…Inhe Abhinandan sir ki koi chinta nahi thi bas vote dedo inko
— Ravi Ranjan | راوی رنجن (@khopdiwala) March 29, 2019
ಅಭಿನಂದನ್ ರನ್ನು ಭಾರತಕ್ಕೆ ಕರೆಸುವ ವಿಷಯದಲ್ಲಿ ಪ್ರಧಾನಿ ಮೋದಿ ಯಾವುದೇ ಆಸಕ್ತಿ ತಳೆದಿರಲಿಲ್ಲ, ವಾಪಾಸು ಬರುವ ದಿನವೂ ಸ್ವಾಗತಿಸಲಿಲ್ಲ. ಆದರೆ ಅಭಿನಂದನ್ ಜನಪ್ರಿಯತೆ ಬಳಸಿಕೊಂಡು ಭಾಷಣದಲ್ಲಿ ಮಾತ್ರ “ಇದು ಪೈಲಟ್” ಯೋಜನೆ ಎಂದು ವ್ಯಂಗ್ಯವಾಡಿದ್ದರು. ಇದರ ಅರ್ಥ ಇಷ್ಟೇ, ಇಡೀ ದೇಶ ಮೋದಿಯನ್ನು ಹಾಡಿ ಹೊಗಳುವ ಬದಲಿಗೆ ವಿಂಗ್ ಕಮಾಂಡರ್ ಅಭಿನಂದನ್ ಅವರ ಬಗ್ಗೆ ಕಾಳಜಿ ತೋರಿಸಿತ್ತು. ಇದು ಸ್ವತಃ ಮೋದಿಯರಿಗೆ ಇಷ್ಟವಾಗಿರಲಿಲ್ಲ.