ಈ ಬಾರಿಯ ಲೋಕಸಭಾ ಚುನಾವಣೆಗೆ ಹಲವು ಕಾರಣಗಳಿಂದಾಗಿ ಹಿಂದೆಂದೂ ಇಲ್ಲದಷ್ಟು ಮಹತ್ವ ಬಂದುಬಿಟ್ಟಿದೆ. ಮಾಧ್ಯಮಗಳು ಈ ಚುನಾವಣೆಯನ್ನು ’ಮಹಾಸಂಗ್ರಾಮ’ ಎಂದೇ ಬಣ್ಣಿಸುತ್ತಿವೆ. 2014ರಲ್ಲಿ ಮೈಮರೆಸುವಂತಹ ಭರವಸೆಗಳೊಂದಿಗೆ ಜನಸಾಮಾನ್ಯರಲ್ಲಿ ಅಪಾರ-ಅಸಾಧ್ಯ ಕನಸುಗಳನ್ನು ಮೂಡಿಸಿ ದೊಡ್ಡ ಸದ್ದುಗದ್ದಲಗಳೊಂದಿಗೆ ಗೆದ್ದು, ತನ್ನ ಪಕ್ಷದ ಇತಿಹಾಸದಲ್ಲೇ ಹೊಸ ಪುಟವನ್ನು ತೆರೆದಿದ್ದ ಮೋದಿ ಪಡೆಯ ಮೌಲ್ಯಮಾಪನೆಯ ಪರೀಕ್ಷೆ ಇದು ಎಂಬುದು ಇದಕ್ಕೆ ಒಂದು ಮುಖ್ಯ ಕಾರಣ. ಎರಡನೆಯದಾಗಿ ಈಗಿನ ಆಡಳಿತ ಪಕ್ಷದ ಸಾಂಪ್ರದಾಯಿಕ ವಿರೋಧಿ ಪಕ್ಷವಾದ ಕಾಂಗ್ರೆಸ್ ಪಕ್ಷವು ತನ್ನ ಹೊಸ ನಾಯಕ ರಾಹುಲ್ ಗಾಂಧಿಯ ನೇತೃತ್ವದಲ್ಲಿ ಎದುರಿಸುತ್ತಿರುವ ಪೂರ್ಣ ಪ್ರಮಾಣದ ಮೊದಲ ಭಾರೀ ಚುನಾವಣೆ ಇದು ಎಂಬುದೂ ಕೂಡಾ ಎರಡನೇ ಅತಿಮುಖ್ಯ ಕಾರಣ. ಹಾಗಾಗಿ ಒಂದರ್ಥದಲ್ಲಿ ಈ ಚುನಾವಣೆಗೆ ನಿಜಕ್ಕೂ ಒಂದು ಬಗೆಯ ‘ಸಂಗ್ರಾಮ’ದ ಸ್ವರೂಪ ಬಂದುಬಿಟ್ಟಿದೆ. ಇಂತಹ ದೊಡ್ಡ ರಣಾಂಗಣದೊಳಗೆ ಮಾಧ್ಯಮಗಳ ಮತ್ತು ದೇಶದ ಗಮನ ಸೆಳೆದಿಟ್ಟಿರುವ ಹಲವು ಮಿನಿ ರಣಾಂಗಣಗಳೂ ಕೂಡಾ ತಯಾರಾಗಿವೆ. ವಿಶೇಷವಾದ ಸಂಗತಿಯೆಂದರೆ ಈ ಮಿನಿ ರಣಾಂಗಣಗಳ ಅಧಿಪತಿಗಳಾಗಿರುವುದು ಮಹಿಳೆಯರು. ಹೌದು, ಈ ಬಾರಿಯ ಚುನಾವಣೆಯ ವಿಶೇಷಗಳಲ್ಲಿ, ದೇಶ ರಾಜಕಾರಣದ ಜೂಜಾಟದಲ್ಲಿ ದಾಳ ಉರುಳಿಸುತ್ತಿರುವ ಪ್ರಮುಖರಲ್ಲಿ ಕೆಲವು ಮಹಿಳೆಯರು ಕೂಡಾ ಸದ್ದು ಮತ್ತು ಸುದ್ದಿ ಮಾಡುತ್ತಿರುವುದು ಮುಖ್ಯವಾದುದು!
ಈ ಹಿಂದೆಯೂ ಮಹಿಳೆಯರು ಕೆಲವು ಬಾರಿ ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಿದೆ. ಆದರೆ, ಈ ಬಾರಿ ಅದು ಕೇವಲ ಸೀಟು ಮತ್ತು ಓಟಿನ ಲೆಕ್ಕಾಚಾರವನ್ನು ದಾಟಿ ಮಹಿಳೆಯರ ದಿಟ್ಟತನ, ಅಸರ್ಶನ್ ಮತ್ತು ರಾಜಕೀಯ ಚತುರತೆಯನ್ನೂ ಎದ್ದು ಕಾಣುವಂತೆ ತೋರುತ್ತಿದೆ. ಮಾಯಾವತಿ, ಮಮತಾ ಬ್ಯಾನರ್ಜಿ, ಪ್ರಿಯಾಂಕಾ ಗಾಂಧಿ, ಸುಮಲತಾ ಅಂಬರೀಷ್ ಸೇರಿದಂತೆ ಇನ್ನೂ ಕೆಲವರನ್ನು ಉಲ್ಲೇಖಿಸಬಹುದು. ಅದರ ಜೊತೆಗೇನೆ, ಮಹಿಳೆಯರ ಸಾಧ್ಯತೆ ಮತ್ತು ಸಾಮರ್ಥ್ಯಗಳನ್ನು ಸಾಬೀತುಮಾಡುವ ಅಸಂಖ್ಯಾತ ಉದಾಹರಣೆಗಳ ನಂತರವೂ ಇಂದಿಗೂ ತಮ್ಮ ಎದುರಾಳಿ ಮಹಿಳೆಯರನ್ನು ‘ಪುರುಷಾಹಂಕಾರ’ದೊಂದಿಗೆ ಮಾತ್ರವೇ ಅಸಭ್ಯವಾಗಿ ಎದುರುಗೊಳ್ಳುವ ಗಂಡಸರ ಪೊಳ್ಳುತನವೂ ಅಸಹನೀಯವಾಗಿ ಪ್ರದರ್ಶನಗೊಳ್ಳುತ್ತಿದೆ. ಈ ಚುನಾವಣಾ ಸೀಸನ್ನ ಇಂತಹ ಕೆಲವು ‘ಮಹಿಳಾ ವಿಶೇಷ’ಗಳು ಇಲ್ಲಿವೆ ನೋಡಿ.
ಮಹಿಳೆಯೆಂದೇ ಟಾರ್ಗೆಟ್ ಮಾಡುವ ಕೆಳದರ್ಜೆಯ ತಂತ್ರಗಳು:
ಮಹಿಳೆಯನ್ನು ಆಕೆಯ ಮದುವೆ ಮತ್ತು ಲೈಂಗಿಕತೆಯ ವಿಷಯಗಳನ್ನಿಟ್ಟುಕೊಂಡು ಸಲೀಸಾಗಿ ಚಾರಿತ್ರ್ಯವಧೆ ಮಾಡುವ ಟ್ರೆಂಡ್ ಬಹಳ ಹಳೆಯದು. ಇಂದಿರಾಗಾಂಧಿಯನ್ನು ಕುರಿತು ಆಕೆ ಕಾಂಗ್ರೆಸ್ ಪಕ್ಷದೊಳಗಿರುವ ಏಕೈಕ ಪುರುಷ ಎಂದು ಹೇಳಿದಂತೆ, ಸೋನಿಯಾಗಾಂಧಿ ಅನ್ಯಧರ್ಮ ಮತ್ತು ಅನ್ಯದೇಶದಿಂದ ಬಂದು ರಾಜೀವ್ ಗಾಂಧಿಯ ಸಾವಿನ ನಂತರವೂ ರಾಜಕಾರಣದಲ್ಲಿ ಸಕ್ರಿಯವಾಗಿರುವುದನ್ನು ಇಂದಿಗೂ ಬಿಜೆಪಿ ಚುನಾವಣಾ ವಿಷಯವಾಗಿಸಿಕೊಂಡಿರುವಂತೆ, ಭಾರತದ ಊಳಿಗಮಾನ್ಯ ಮನಸ್ಥಿತಿಯಲ್ಲಿ ಇಂತಹವು ಸಾಧ್ಯ! ಈ ಬಾರಿ ಇದರ ಅಸಹ್ಯಾರಂಭವಾದದ್ದು ವಿಷಭಟ್ಟನೆಂದೇ ಕರೆಸಿಕೊಳ್ಳುವ ವಿಶ್ವೇಶ್ವರಭಟ್ಟನ ಮಮತಾ ಬ್ಯಾನರ್ಜಿ ಕುರಿತ ಬರಹದಿಂದ!
ದ್ವೇಷ ಹರಡುತ್ತಿರುವ ಆಡಳಿತ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಮಣಿಸಲಿಕ್ಕಾಗಿ ಎಲ್ಲ ಸಮಾನ ಮನಸ್ಕ ಪಕ್ಷಗಳೂ ಜೊತೆಗೂಡಿ ಒಂದು ವೇದಿಕೆಗೆ ಬರುವಂತೆ ಮಮತಾ ಬ್ಯಾನರ್ಜಿ ಕರೆ ನೀಡಿದ್ದರು. ವೇದಿಕೆ ಎಂಬ ಪದಕ್ಕೆ ಹಿಂದಿಯಲ್ಲಿರುವ ಪದ ‘ಮಂಚ್. ಇದನ್ನೇ ತನ್ನ ವಿಕೃತ ವ್ಯಂಗ್ಯಕ್ಕೆ ಬಳಸಿಕೊಂಡ ಭಟ್ಟ ಮೋದಿ ವಿರೋಧಿಗಳನ್ನು ‘ಮಂಚ’ಕ್ಕೆ ಕರೆದ ಮಮತಾ ಎಂಬ ಟೈಟಲ್ನಲ್ಲಿ ಮಮತಾ ಬ್ಯಾನರ್ಜಿಯನ್ನು ಅಪಹಾಸ್ಯ ಮಾಡುವ ಬರಹವೊಂದನ್ನು ಹಾಕಿದ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಯಾವ ಪಕ್ಷವೂ ಟಿಕೆಟ್ ನೀಡದಿದ್ದಾಗ ಸ್ವತಂತ್ರ ಅಭ್ಯರ್ಥಿಯೆಂದು ಸುಮಲತಾ ಅಂಬರೀಷ್ ಕಣಕ್ಕಿಳಿಯಲಿರುವುದು ಖಚಿತವಾದ ತಕ್ಷಣ, ಕೆಲವು ರಾಜಕಾರಣಿಗಳ ಆಕ್ರೋಶ ಅವರೆಡೆ ತಿರುಗಿತು. ಗಂಡ ಸತ್ತು ತಿಂಗಳಾಗಿಲ್ಲ, ಈಗಲೇ ಅಧಿಕಾರ ಬೇಕಂತಾ ಈಯಮ್ಮಂಗೆ? ಎಂದು ತಮ್ಮ ಕುಟುಂಬದ ಕುಡಿಗೆ ಎದುರಾಗಿ ನಿಂತ ಸುಮಲತಾ ಅವರ ಮೇಲೆ ತಮ್ಮ ಆತಂಕವನ್ನು ಕಾರಿಕೊಂಡವರು ಎಚ್.ಡಿ.ರೇವಣ್ಣ. ಹಾಸನದ ತಮ್ಮ ಪಾಳೇಪಟ್ಟಿನಲ್ಲಿ ತಾವು ನಡೆಸುತ್ತಿರುವ ಪಾಳೆಗಾರಿಕೆಯನ್ನೇ ರಾಜಕಾರಣವೆಂದು ಕರೆದುಕೊಂಡಿರುವ ಇವರುಗಳು, ಅದೇ ದರ್ಪದಲ್ಲಿ ಆಡಿರುವ ಇಂತಹ ಹಲವು ಮಾತುಗಳು ಅವರಿಗೇ ತಿರುಗುಬಾಣವಾಗುವ ಪರಿಸ್ಥಿತಿ ಬಂದಿದೆ ಎಂದು ಸ್ಪಷ್ಟವಾಗಿ ಕಂಡ ಮೇಲೆ, ಈಗೀಗಷ್ಟೆ ಇಂತಹವು ಸ್ವಲ್ಪ ಕಡಿಮೆಯಾಗಿವೆ. ಅಷ್ಟಾದರೂ, ಸುಮಲತಾ ಅವರು ನಾಮಪತ್ರ ಸಲ್ಲಿಸಲು ಹೋದ ದಿನ ಬೆಂಬಲಿಸಲು ಬಂದ ಸಿನೆಮಾರಂಗದ ಜನರಿಗೆ ಕೆ.ಆರ್.ಪೇಟೆ ಶಾಸಕ ಐಟಿ ದಾಳಿಯ ಬೆದರಿಕೆ ಒಡ್ಡುತ್ತಾರೆ.
ಇವೆಲ್ಲ ರಾಜಕೀಯ ಎದುರಾಳಿಗಳು ಮಹಿಳೆಯರಾಗಿದ್ದಾಗ ಅವರನ್ನು ಹೀನಾಯವಾಗಿ ನಿಂದನೆಗಳಿಗೊಳಪಡಿಸಿ ಬೆದರಿಸುವ ಬಹಳ ಹಿಂದಿನಿಂದ ನಡೆದುಕೊಂಡು ಬಂದಿರುವ ಥರ್ಡ್ರೇಟ್ ಕುತಂತ್ರ.
ಬೆಚ್ಚದ ಬೆದರದ ರಾಜಕಾರಣಿ ಮಹಿಳಾಮಣಿಗಳ ಚತುರ ನಡೆಗಳು:
ಇಂತಹ ಅನೇಕ ಅಡ್ಡಿ ಆತಂಕಗಳ ನಡುವೆಯೂ ಈ ಬಾರಿಯ ಮಹಿಳಾ ರಾಜಕಾರಣಿಗಳು ತಮ್ಮ ರಾಜಕೀಯ ಚತುರ ನಡೆಗಳಿಂದ ಸಂಚಲನ ಮೂಡಿಸುತ್ತಿದ್ದಾರೆ. ಸುಮಲತಾ ಅಂಬರೀಷ್ರವರ ಮೇಲೆ ಎಷ್ಟೇ ದಾಳಿಗಳು ನಡೆಯುತ್ತಿದ್ದಾಗಲೂ ಅವರು ಅದಕ್ಕೆ ಪ್ರತಿಕ್ರಿಯೆಯಾಗಿ ತಾವು ಮಾತನಾಡದೇ ಮಂಡ್ಯದ ಮತದಾರರನ್ನು ಜೆಡಿಎಸ್ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದ್ದು (ಅವರು ತಕ್ಕಮಟ್ಟಿಗೆ ಈ ಪ್ರಯತ್ನದಲ್ಲಿ ಯಶಸ್ವಿಯೂ ಆಗುತ್ತಿರುವಂತೆ ಸದ್ಯಕ್ಕೆ ಕಾಣುತ್ತಿದೆ) ಅಂತಹ ಒಂದು ನಡೆಯೆಂದೇ ಹೇಳಬೇಕು. ಅವರ ಪ್ರತಿ ಭಾಷಣದಲ್ಲೂ ಜನರ ಮನಸ್ಸಿನ ಸೂಕ್ಷ್ಮ ಸ್ಥಳಗಳನ್ನು ಮುಟ್ಟಿ ಅವರನ್ನು ಸೆಳೆಯುವ ಅಂಶಗಳು ಧಾರಾಳವಾಗಿರುವುದನ್ನೂ, ತಮ್ಮ ವಿರೋಧಿಗಳ ವಿರೋಧಿಗಳನ್ನು ಪಕ್ಷಾತೀತವಾಗಿ ಜೊತೆಗೂಡಿಸಿಕೊಳ್ಳುತ್ತಿರುವುದನ್ನು ಗಮನಿಸಿದರೆ, ಅವರು ಪಳಗಿದ ರಾಜಕಾರಣಿಯಂತೆ ಕಾಣುತ್ತಾರೆ.
ಅದೇ ರೀತಿ ಉತ್ತರ ಪ್ರದೇಶದ ರಾಜಕಾರಣದಲ್ಲಿ ತಮ್ಮ ಕಡು ವಿರೋಧಿಗಳಾದ ಸಮಾಜವಾದಿ ಪಕ್ಷದ ಜೊತೆ ಜಂಟಿಯಾಗಿ ಚುನಾವಣೆ ಎದುರಿಸುವ ಮಾಯಾವತಿಯವರ ತೀರ್ಮಾನ ಮತ್ತು ತಾನು ಈ ಬಾರಿ ಸ್ಫರ್ಧಿಸದೆ, ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿ ಹೆಚ್ಚಿನ ಸದಸ್ಯಬಲ ಗಳಿಸಿಕೊಳ್ಳುವ ನಿರ್ಧಾರವನ್ನು ಇಂತಹ ಜಾಣನಡೆಯೆಂದೇ ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಿದ್ದಾರೆ.
ಆದರೆ…….ಇವೆಲ್ಲ ಮಹಿಳಾ ಸಮುದಾಯದ ಹಿತಾಸಕ್ತಿಯನ್ನು ಧ್ವನಿಸುತ್ತಿವೆಯೇ?
ಈ ಮೇಲಿನವರ ದಿಟ್ಟತನ, ಜಾಣತನ ಮತ್ತು ಇಂದಿನ ಸಂದರ್ಭದಲ್ಲಿ ಅದೇನೇ ಆದರೂ ಮೇಲಿನ ಹಂತಗಳಲ್ಲಿ ಮಹಿಳಾ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಬೇಕೆಂಬುದನ್ನು ಒಪ್ಪುತ್ತಲೇ, ರಾಜಕೀಯ ಮುತ್ಸದ್ದಿತನದೊಳಗೆ ತಮ್ಮ ಸಮುದಾಯದ ಕುರಿತಾಗಿ ಇರಬೇಕಿದ್ದ ಕಳಕಳಿಯ ಸೆಲೆ ನಾಪತ್ತೆಯಾಗಿರುವುದನ್ನೂ ಗುರುತಿಸಲೇಬೇಕು. ರಾಜಕಾರಣಿಗಳು ಯಾವುದೋ ಒಂದು ಸಮುದಾಯಕ್ಕೆ ಸೇರಿದವರಾದ ಕಾರಣಕ್ಕೆ ಆ ಸಮುದಾಯ ಅವರನ್ನು ತಮ್ಮವರೆಂದು ಭಾವಿಸುವಂತೆ, ಅವರುಗಳು ಎಷ್ಟೋಬಾರಿ ತಮ್ಮ ಸಮುದಾಯದ ನೋವು ಸಂಕಟಗಳನ್ನು ನೀಗಲು ಮುಂದಾಗಿರುವುದಿಲ್ಲ ಎಂಬ ವಸ್ತುಸ್ಥಿತಿಯೂ ಕೂಡಾ ನಮ್ಮ ಮುಂದಿದೆ. ಮಹಿಳಾ ಸಮುದಾಯ ಮಾತ್ರವಲ್ಲ, ಇನ್ನಿತರ ಅಂಚಿಗೊತ್ತಲ್ಪಟ್ಟ ಮತ್ತು ಶೋಷಿತ ಸಮುದಾಯಗಳ ಮಟ್ಟಿಗೂ ಇದು ಬಹುತೇಕ ಸತ್ಯ. ಈ ಮೇಲೆ ನಾವು ಚರ್ಚಿಸುತ್ತಿರುವ ವಿಷಯದಲ್ಲಂತೂ, ಈ ಮಹಿಳೆಯರ ಮೇಲೆ ನಡೆಯುತ್ತಿರುವ ದಾಳಿ ಅವರು ‘ಮಹಿಳೆ’ಯೆಂಬ ಅಸ್ಮಿತೆ ಹೊಂದಿರುವ ಕಾರಣಕ್ಕೆ ಎಂಬುದು ಖಂಡಿತ. ಆದರೆ, ಅದಕ್ಕೆ ಎದುರಾಗಿ ಅವರು ಮುಂದಿಡುತ್ತಿರುವ ಪ್ರತ್ಯಸ್ತ್ರಗಳು ಮಹಿಳಾ ಅಸ್ಮಿತೆಯನ್ನು ಗೌರವಿಸುವಂತಹವೇ ಆಗಿರುತ್ತವೆಂದು ಹೇಳಲು ಬರುವುದಿಲ್ಲ. ಉದಾಹರಣೆಗೆ, ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮಾಡಿದ ಬಹುಚರ್ಚಿತ ಭಾಷಣದಲ್ಲಿ ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತಾ ಸುಮಲತಾ ನಾನ್ಯಾರು ಎಂದು ಕೆಲವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ನಾನು ಮಳವಳ್ಳಿಯ ಹುಚ್ಚೇಗೌಡರ ಸೊಸೆ, ಅಭಿಷೇಕ್ ಗೌಡನ ತಾಯಿ………. ಇತ್ಯಾದಿಯಾಗಿ ಹೇಳಿಕೊಂಡರು. ರಾಷ್ಟ್ರರಾಜಕಾರಣದಲ್ಲಿ ಕೆಲವು ಬಲಾಢ್ಯ ಮಹಿಳಾ ರಾಜಕಾರಣಿಗಳು, ಎಲ್ಲ ಬಗೆಯ ಮಹಿಳೆಯರ ಸ್ವತಂತ್ರ ಅಸ್ತಿತ್ವ ಮತ್ತು ಮುನ್ನಡೆಗೆ ಸದಾಕಾಲ ವಿರೋಧಿಯಾದ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಬೆಂಬಲಿಸಿದ್ದನ್ನು/ಬೆಂಬಲಿಸುತ್ತಿರುವುದನ್ನಂತೂ ಮರೆಯಲು ಸಾಧ್ಯವಿಲ್ಲ. ಇದನ್ನು ಮಹಿಳಾ ಸಂವೇದನೆಯೆಂದು ಹೇಗೆ ಕರೆಯವುದು?
ಪ್ರಿಯಾಂಕಾ ಪ್ರವೇಶ ಮೂಡಿಸಿದ ಸಂಚಲನ:
ಇದಕ್ಕೂ ಒಂದು ಅಪವಾದವೆಂದರೆ ಪ್ರಿಯಾಂಕಾ ಗಾಂಧಿಯ ಸಕ್ರಿಯ ರಾಜಕಾರಣ ಪ್ರವೇಶ ಮತ್ತು ತನ್ನ ಈವರೆಗಿನ ಮಾತುಗಳಲ್ಲಿ ಆಕೆ ತೋರುತ್ತಿರುವ ಖಚಿತವಾದ ಮಹಿಳಾ ಸಂವೇದನಾಶೀಲತೆ! ಭಾರತದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷಕ್ಕೆ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕ ಗಾಂಧಿ ನೇಮಕಗೊಂಡಿದ್ದಾರೆ-ಹುದ್ದೆಯಾಗಿ ಇದು ಅಷ್ಟು ಪವರ್ಫುಲ್ ಅಲ್ಲದಿರಬಹುದು. ಆದರೆ, ಅದಕ್ಕೆ ಪ್ರಿಯಾಂಕ ಗಾಂಧಿಯ ನೇಮಕದಿಂದ ಆಕೆ ಸಕ್ರಿಯ ರಾಜಕಾರಣದೊಳಗೆ ಪ್ರವೇಶಿಸಿದ ಸಂಗತಿ ಈ ಭಾರಿಯ ಲೋಕಸಭಾ ಚುನಾವಣೆಯ ಲೆಕ್ಕಾಚಾರಗಳಿಗೆ ಪವರ್ಫುಲ್ ಪಂಚ್ ನೀಡಿತು. ಆಕೆಯ ಮುಖಚಹರೆ ಮತ್ತು ಬಾಡಿ ಲ್ಯಾಂಗ್ವೇಜ್ನಲ್ಲಿ ಇಂದಿರಾಗಾಂಧಿಯನ್ನು ಹೋಲುತ್ತಾರೆಂಬುದಕ್ಕೋ, ಮೆಚ್ಚಬಹುದಾದ ಹಲವು ವಿಚಾರಗಳಿರುವ ಸ್ಥಳೀಯ ಹಿಂದಿ ಭಾಷೆಯನ್ನು ಸುಲಲಿತವಾಗಿ ಮಾತನಾಡುವ ಆಕೆಯ ಭಾಷಣದ ಶೈಲಿಗೋ, ಅಥವಾ ಅವರ ಕುಟುಂಬದ ಮೇಲಾದ ದಾಳಿಗಳ ಕಾರಣದ ಸಹಾನುಭೂತಿಗೋ-ಒಟ್ಟಿನಲ್ಲಿ ಜನ ಪ್ರಿಯಾಂಕರನ್ನು ಮೆಚ್ಚುತ್ತಾರೆ.
ಈ ಬಾರಿ ಈ ಮೆಚ್ಚುಗೆ ವಿಸ್ತರಣೆಗೊಳ್ಳಲು ಕಾರಣಗಳಿವೆ. ಹುದ್ದೆ ಸ್ವೀಕರಿಸಿದ ಮೊದಲ ದಿನದಿಂದ ಪ್ರಿಯಾಂಕ ಸಂಘಪರಿವಾರದ ದ್ವೇಷ ಹರಡುವ ರಾಜಕಾರಣದ ವಿರುದ್ಧ ಬಹಳ ನೇರನುಡಿಗಳನ್ನಾಡಲಾರಂಭಿಸಿದರು. ಎರಡನೆಯದಾಗಿ, ಮಹಿಳೆಯರ ಸುರಕ್ಷತೆಯ ಪ್ರಶ್ನೆ ಚುನಾವಣೆಯ ವಿಷಯವೇ ಆಗದಿದ್ದ ಸಂದರ್ಭದಲ್ಲೂ, ಅದು ತಮ್ಮ ಸರ್ಕಾರದ ಆದ್ಯತೆಯಾಗಲಿದೆಯೆಂದು ಖಚಿತವಾಗಿ ಘೋಷಿಸಿದರು. ಹಾಗೆಯೇ, ಸಕ್ರಿಯ ರಾಜಕಾರಣದಲ್ಲಿ ತಾನಿನ್ನೂ ಎಳೆಯವಳಾದರೂ ಮೋದಿಯನ್ನು ವಾರಣಾಸಿಯಲ್ಲಿ ಎದುರಿಸಲು ಸಿದ್ಧವೆಂದು ಹೇಳುವ ಮೂಲಕ ‘ಗಂಡು ಮೇಲರಿಮೆ’ಯನ್ನು ಭಯಂಕರವಾಗಿ ಮುಂದೆಳೆದು ತಂದಿದ್ದ (56 ಇಂಚಿನ ಎದೆ…..ಇತ್ಯಾದಿ ಇತ್ಯಾದಿ) ಮೋದಿ ಪ್ರಚಾರದ ಬಲೂನನ್ನು ಸದ್ದಿಲ್ಲದೆ ‘ಟುಸ್’ಮಾಡಿದ್ದಾರೆ.
ಇದೆಲ್ಲದರಷ್ಟೇ ಮುಖ್ಯವಾಗಿ, ಮೊನ್ನೆ ಗುಜರಾತಿನ ತಮ್ಮ ಭಾಷಣವನ್ನು ಪ್ರಿಯಾಂಕ ‘ಮೇರಿ ಬೆಹನೋಂ ಔರ್ ಮೇರೆ ಭಾಯಿಯೋಂ’(ನನ್ನ ಸಹೋದರಿಯರೆ ಮತ್ತು ನನ್ನ ಸಹೋದರರೇ) ಎಂದು ಆರಂಭಿಸುವ ಮೂಲಕ, ಉದ್ದೇಶಪೂರ್ವಕವಾಗಿಯೇ ‘ಸಹೋದರ-ಸಹೋದರಿಯರೆ’ಎಂದೇ ಕರೆಯುವ ರೂಢಿಗತ ಸಂಪ್ರದಾಯವನ್ನು ಮುರಿದಿದ್ದಾರೆ.
ಈ ಎಲ್ಲ ಮಹಿಳೆಯರ ಹೆಜ್ಜೆಗಳೆಲ್ಲವೂ ದೊಡ್ಡ ಗದ್ದಲವನ್ನೇನೂ ಸೃಷ್ಟಿಸದಿರಬಹುದು; ಆದರೆ, ಭಾರತ ಬದಲಾಗಲೇಬೇಕು ಮತ್ತು ಭಾರತದ ಮಹಿಳೆಯರೂ ಕೂಡಾ. ಹಾಗಾಗಿ ಮುಂದೊಮ್ಮೆ ಸದ್ದಿಲ್ಲದೆ ಇವರುಗಳು ದೊಡ್ಡ ಸುದ್ದಿಯಾಗಬಹುದು……ಇಂದಲ್ಲ ನಾಳೆ ಮಹಿಳೆಯರ ಕುರಿತ ಚಿಂತನಾಕ್ರಮವೂ ಬದಲಾಗಲು ಇವೆಲ್ಲ ಮೆಟ್ಟಿಲಾಗಬಹುದು!