ನವದೆಹಲಿ: ಇತ್ತೀಚೆಗೆ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯನ್ನು ಪ್ರಧಾನಿ ಮೋದಿ ಘೋಷಿಸಿದ ನಡೆಯನ್ನು ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಅವರು ಶನಿವಾರ ತೀವ್ರವಾಗಿ ಟೀಕಿಸಿದ್ದಾರೆ. ಈ ನಡೆಯ ಹಿಂದೆ ಬಿಜೆಪಿ ಸರ್ಕಾರದ ಉದ್ದೇಶವೇನೆಂಬುದನ್ನೂ ಅವರು ಪ್ರಶ್ನಿಸಿದ್ದಾರೆ.
ಉಪಗ್ರಹವನ್ನು ಹೊಡೆಯುವ ಸಾಮರ್ಥ್ಯ ಗಳಿಸಿಕೊಂಡು ಬಹಳ ವರ್ಷಗಳೇ ಆಗಿವೆ. ಯಾವುದೇ ಬುದ್ಧಿವಂತ ಸರ್ಕಾರ ತನ್ನ ಸಾಮರ್ಥ್ಯವನ್ನು ರಹಸ್ಯವಾಗಿ ಇರಿಸುತ್ತದೆ. ಒಂದು ಮೂರ್ಖ ಸರ್ಕಾರ ಮಾತ್ರ ನಮ್ಮ ರಕ್ಷಣಾ ರಹಸ್ಯವನ್ನು ಹೊರಗೆಡಹುತ್ತದೆ” ಎಂದು ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
The capability to shoot down a satellite has existed for many years. A wise government will keep the capability secret. Only a foolish government will disclose it and betray a defence secret.
— P. Chidambaram (@PChidambaram_IN) March 30, 2019
ಬುಧವಾರ ಉಪಗ್ರಹವೊಂದನ್ನು ಹೊಡೆದುರುಳಿಸುವ ಮೂಲಕ ಭಾರತವು ಉಪಗ್ರಹ ನಿಗ್ರಹ ಕ್ಷಿಪಣಿ ಸಾಮರ್ಥ್ಯ ಹೊಂದಿದ ನಾಲ್ಕನೇ ದೇಶವಾಗಿ ಹೊರಹೊಮ್ಮಿತ್ತು.
ದೇಶವನ್ನುದ್ದೇಶಿಸಿ ವಿಶೇಷ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅದೊಂದು ಅಪರೂಪದ ಸಾಧನೆಯಾಗಿದ್ದು ದೇಶವನ್ನು ಬಾಹ್ಯಾಕಾಶ ಸೂಪರ್ ಪವರ್ ಗಳ ಗುಂಪಿಗೆ ಸೇರಿಸಿದೆ ಎಂದು ಹೇಳಿದ್ದರು.
ಲೋಕಸಭಾ ಚುನಾವಣೆಯ ಮೊದಲ ಹಂತ ಕೇವಲ ಹದಿನೈದು ದಿನಗಳಿರುವಾಗ ಮೋದಿ ನಡೆಸಿದ ಈ ಘೋಷಣೆಯ ಬಗ್ಗೆ ವಿರೋಧ ಪಕ್ಷಗಳು ವಿರೋಧ ತಕರಾರು ಎತ್ತಿವೆಯಲ್ಲದೇ ಚುನಾವಣಾ ಆಯೋಗಕ್ಕೂ ದೂರು ನೀಡಿವೆ.
ಪಿ ಚಿದಂಬರಂ ಸಹ ಈ ವಿಶೇಷ ಘೋಷಣೆಯಲ್ಲಿ ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿದ್ದಾರೆ. “ಚುನಾವಣೆ ಇರುವಾಗಲೇ ಇದನ್ನು ನಡೆಸುವ ಅಗತ್ಯವೇನಿತ್ತು? ಜನಬೆಂಬಲ ಕಳೆದುಕೊಳ್ಳುತ್ತಿರುವ ಬಿಜೆಪಿ ತನ್ನನ್ನು ತಾನು ಹೊಗಳಿಕೊಳ್ಳಲು ಮಾತ್ರ” ಎಂದು ಅವರು ಹೇಳಿದ್ದಾರೆ.
ಪ್ರಧಾನಿಯವರ ಮೇಲೆ ದೂರು ದಾಖಲಾಗುತ್ತಿದ್ದಂತೆ ಚುನಾವಣಾ ಆಯೋಗವು ಡೆಪ್ಯುಡಿ ಕಮಿಶನರ್ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಎಸ್ಯಾಟ್ ಕ್ಷಿಪಣಿ ಪರೀಕ್ಷೆಯನ್ನು ವಿಶೇಷ ಭಾಷಣದ ಮೂಲಕ ದೇಶಕ್ಕೆ ಘೋಷಿಸಿದ್ದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆಯೇ ಇಲ್ಲವೆ ಎಂದು ತೀರ್ಮಾನಿಸಲು ತಿಳಿಸಿದೆ.