ಇಂಡಿಯಾ ಟುಡೇ ಪತ್ರಕರ್ತ ಅವರಿಬ್ಬರನ್ನು ಪರಸ್ಪರ ಚರ್ಚೆಗೆ ಕುಳ್ಳಿರಿಸಿದಾಗಲೇ ತಿಳಿದು ಹೋಗಿತ್ತು ಇದು ಹೀಗೇ ಆಗುತ್ತದೆ ಎಂದು. ಅದು ಹಾಗೇ ಆಯಿತು ಕೂಡಾ. ಏನಾಯಿತೆಂದು ಕಡೆಯಲ್ಲಿ ನೋಡುವಾ…
ಇಬ್ಬರೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ತರುಣ ಅಭ್ಯರ್ಥಿಗಳು.
ಒಬ್ಬ ಅಭ್ಯರ್ಥಿ ಭಾರತೀಯ ಸಮಾಜದ ಜನರ ಬದುಕಿನಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಎಬಿಸಿಡಿ ಗೊತ್ತಿಲ್ಲದೇ ಕೇವಲ ಸಂಘದ ಗುರೂಜಿಗಳ ಮಾತುಗಳನ್ನೇ ವೇದವಾಕ್ಯವೆಂದು ನಂಬಿಕೊಂಡು ತನ್ನನ್ನು ತಾನು ರಾಷ್ಟ್ರವಾದಿ ಎಂದುಕೊಂಡು, ಕೆಲವು ಟಿವಿ ಚಾನಲ್ ಚರ್ಚೆಗಳಲ್ಲಿ ಮಾತ್ರ ಭಾಗವಹಿಸಿ, ಬಿಜೆಪಿ ಐಟಿ ಸೆಲ್ ಭಾಗವಾಗಿ ಒಂದಿಷ್ಟು ಸುಳ್ಳುಗಳನ್ನೇ ಜಪಿಸುವ ಎಳಸು ಹುಡುಗ, ತೇಜಸ್ವಿ ಸೂರ್ಯ; ಮತ್ತೊಬ್ಬ ಬಿಹಾರದ ಕುಗ್ರಾಮವೊಂದರ, ಬಡ ತಂದೆ ತಾಯಿಗಳ, ಮಗನಾಗಿ ಬಂದು ದೇಶದ ಹಳ್ಳಿಗಾಡಿನ ನಾಡಿಮಿಡಿತವನ್ನು ಅರಿತು, ದೂರದ ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ಯೂನಿವರ್ಸಿಟಿಯ ರಾಜಕೀಯ ಸಂಘರ್ಷದ ಕುಲುಮೆಯಲ್ಲಿ ಹದಗೊಂಡು, ಆಫ್ರಿಕನ್ ಸಮಾಜದ ಕುರಿತು ಪಿಎಚ್ಡಿ ಪದವಿ ಪಡೆದು, ತನ್ನ ಮಾತುಗಾರಿಕೆಯಂದ ಸಣ್ಣ ವಯಸ್ಸಿಗೇ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ಕನ್ಹಯ್ಯ ಕುಮಾರ್. ತೇಜಸ್ವಿ ಸೂರ್ಯ ಬೆಂಗಳೂರು ಸೆಂಟ್ರಲ್ ಬಲಪಂಥೀಯ ಬಿಜೆಪಿ ಅಭ್ಯರ್ಥಿಯಾದರೆ, ಕನ್ಹಯ್ಯ ಕುಮಾರ್ ಬಿಹಾರದ ಬೇಗುಸರಾಯ್ ಕ್ಷೇತ್ರದ ಕಮ್ಯುನಿಷ್ಟ್ ಅಭ್ಯರ್ಥಿ. ಒಬ್ಬ ತನ್ನನ್ನು ತಾನು ದೇಶಭಕ್ತ ಎನ್ನುತ್ತಲೇ ಮೋದಿಯ ಪರವಾಗಿರುವುದೇ ದೇಶಭಕ್ತಿ, ಮೋದಿಯ ವಿರೋಧ ಇರುವುದೇ ದೇಶದ್ರೋಹ ಎಂದು ಹೇಳುವವ ಮತ್ತೊಬ್ಬ ಜೆ ಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ, ಮೋದಿ ಸರ್ಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿದ ಒಂದೇ ಕಾರಣದಿಂದಲೇ ‘ತುಕಡೆ ಗ್ಯಾಂಗ್ ಸದಸ್ಯ” ‘ದೇಶದ್ರೋಹಿ’ ಎಂಬ ಹಣೆಪಟ್ಟಿ ಕಟ್ಟಿಸಿಕೊಂಡು, ದೇಶಭಕ್ತರಿಂದ ಹಲ್ಲೆಗೊಳಾಗಿ, ಸುಳ್ಳು ಕೇಸ್ ಹಾಕಿಸಿಕೊಂಡು ಜೈಲಿಗೂ ಹೋಗಿ ಬಂದವ.
ಇಬ್ಬರನ್ನೂ ಇಂಡಿಯಾ ಟುಡೆ ವಾಹಿನಿ ಯಂಗ್ ಇಂಡಿಯಾ ಡಿಬೇಟ್ ಗೆ ಕೂರಿಸಿತ್ತು. ನಿರೂಪಕನಾಗಿದ್ದು ಪತ್ರಕರ್ತ ರಾಹುಲ್ ಕನ್ವಾಲ್.
ಈ ಸಂದರ್ಶನ ಬಹಳ ಇಂಟರೆಸ್ಟಿಂಗ್ ಆಗಿತ್ತು. ಒಬ್ಬ ಬಲ, ಮತ್ತೊಬ್ಬ ಎಡ, ಇಬ್ಬರೂ ಯುವ ಭಾರತದ ಪ್ರತಿನಿಧಿಗಳು.
ನಿರೂಪಕ ರಾಹುಲ್ ಮೊದಲ ಪ್ರಶ್ನೆಯೇ ದಾರಿ ತಪ್ಪಿಸುವಂತಿತ್ತು. ಈ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಸ್ಥಿರವಾದ ಸರ್ಕಾರ ಮತ್ತು ಮಹಾಮೈತ್ರಿ ನೇತೃತ್ವದ ಅಸ್ಥಿರ ಸರ್ಕಾರಗಳ ನಡುವಿನ ಆಯ್ಕೆಯಲ್ಲಿ ದೇಶದ ಯುವಜನ ಆಯ್ಕೆ ಏನು? ಎಂಬುದಾಗಿತ್ತು.
ಈ ಪ್ರಶ್ನೆಗೆ ಮೊದಲು ಪ್ರತಿಕ್ರಿಯಿಸಿದ ಕನ್ಹಯ್ಯ ಕುಮಾರ್, “ಭಾರತ ಇಡೀ ವಿಶ್ವದಲ್ಲೇ ಅತ್ಯಂತ ತರುಣ ದೇಶ, ಇಲ್ಲಿನ ಪ್ರತಿ ಐವರಲ್ಲಿ ಒಬ್ಬ ವ್ಯಕ್ತಿ ತರುಣನೇ ಆಗಿರುತ್ತಾನೆ. ಇಲ್ಲಿ ನಾವು ಸರಿ ವರ್ಸಸ್ ತಪ್ಪು, ಬಲ ವರ್ಸಸ್ ಎಡ, ಮೋದಿ ವರ್ಸಸ್ ರಾಹುಲ್ ಗಾಂಧಿ ಎಂದೆಲ್ಲಾ ಚರ್ಚೆ ಹಾಕಿಕೊಳ್ಳುತ್ತೇವೆ, ಆದರೆ ನನ್ನ ಪ್ರಕಾರ ಹೀಗೆ ಹಾಕಿಕೊಳ್ಳುವ ಮೂಲಕ ನಾವು ಮೂಲಭೂತ ವಿಷಯಗಳನ್ನು ಬಿಡುತ್ತಿದ್ದೇವೆ. ಒಂದು ಕಡೆ ಸರ್ಕಾರ ನಡೆಸುವ ಪಕ್ಷ ನೀಡಿದ್ದ ವಿಕಾಸ ಅಥವಾ ಅಭಿವೃದ್ಧಿಯ ಭರವಸೆ ಸುಳ್ಳಾಗಿದ್ದರೆ ಮತ್ತೊಂದು ಕಡೆ ಕಳೆದ 45 ವರ್ಷಗಳಲ್ಲಿಯೇ ಅತಿ ಹೆಚ್ಚು ನಿರುದ್ಯೋಗ ಭಾರತದಲ್ಲಿ ದಾಖಲಾಗಿರುವುದನ್ನು ಕಾಣುತ್ತಿದ್ದೇವೆ. ಹಿಂದೆಂದೂ ಇಲ್ಲದಷ್ಟು ಯುವಕರು ದೇಶದಲ್ಲಿ ನಿರುದ್ಯೋಗಿಗಳಾಗಿದ್ದಾರೆ. ಈ ಕಾರಣದಿಂದ ನಿಜವಾದ ಚರ್ಚಾ ವಿಷಯ ಜುಮ್ಲಾ (ಸುಳ್ಳುಪೊಳ್ಳು ಬೂಟಾಟಿಕೆ) ವರ್ಸಸ್ ನಿರುದ್ಯೋಗ ಎಂದಾಗಬೇಕು’ ಎಂದು ಹೇಳಿದರು. “ನೀವು ಮೋದಿ ವರ್ಸಸ್ ಮಹಾಮೈತ್ರಿ ಎಂದು ಹೇಳಿದಿರಿ. ಆದರೆ ಒಂದು ವಿಷಯ ತಿಳಿದುಕೊಳ್ಳಬೇಕು. ಅದೇನೆಂದರೆ ಮೋದಿ ಸರ್ಕಾರ ಕೂಡಾ ಒಂದೇ ಪಕ್ಷವಲ್ಲ. ಅದೂ ಒಂದು ಮೈತ್ರಿಕೂಟವೇ. ದೇಶದಲ್ಲಿರುವುದು ಕೇವಲ ಬಿಜೆಪಿ ಸರ್ಕಾರವಲ್ಲ, ಇದು ಎನ್ ಡಿಎ ಸರ್ಕಾರ. ಹೀಗಾಗಿ ನೀವು ಮುಂದಿಟ್ಟ ಚರ್ಚೆಯ ದಾರಿಯೇ ದೋಷಪೂರಿತವಾಗಿದೆ’ ಹೀಗಾಗಿ ನೀವು ಸರಿಯಾದ ದಾರಿಯಲ್ಲಿ ಚರ್ಚೆ ನಡೆಸಬೇಕೆಂದರೆ ನರೇಂದ್ರ ಮೋದಿ ಮಾಡುತ್ತಿರುವ ನಾಟಕಗಳು ಮತ್ತು ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳು. ಇದೇ ಚರ್ಚೆಯ ವಿಷಯವಾಗಬೇಕು”
“ಒಂದು ಕಡೆ ಫಳಪಳ ಹೊಳೆಯುವ ಮೋದಿಯವರ ಮುಖವಿದೆ. ಅವರು ತಮ್ಮ ಫೇಶಿಯಲ್ ಗಾಗಿಯೇ ಕೋಟಿಗಟ್ಟಲೆ ರೂಪಾಯಿಗಳ ಜನರ ಹಣ ಖರ್ಚು ಮಾಡುತ್ತಿದ್ದಾರೆ. ಮತ್ತೊಂದು ಕಡೆ ಈ ದೇಶದ ಬಡಜನತೆ, ಕೋಟ್ಯಂತರ ಸಂಖ್ಯೆಯಲ್ಲಿದ್ದಾರೆ. ವಾಸ್ತವದಲ್ಲಿ ಇದು ಮೋದಿ ವರ್ಸಸ್ ವಿ ದ ಪೀಪಲ್ ಆಫ್ ಇಂಡಿಯಾ ಚುನಾವಣೆ’ ಎಂದು ಕನ್ಹಯ್ಯ ಹೇಳಿದರು.
ಮುಂದಿನ ಸರದಿ ತೇಜಸ್ವಿ ಸೂರ್ಯ ಅವರದ್ದು.

ಕಳೆದ ಐದು ವರ್ಷಗಳ ಮೋದಿ ಆಡಳಿತದಲ್ಲಿ ಆಗಿರುವ ಸಾಧನೆಗಳ ಪಟ್ಟಿಯನ್ನೇ ನೀಡಿದ ಸೂರ್ಯ ಈ 5 ವರ್ಷದ ಅವಧಿಯಲ್ಲಿ ದೇಶದ ರಾಜಕೀಯ ಚರ್ಚೆಯ ದಿಕ್ಕೇ ಬದಲಾಗಿದೆಯಲ್ಲದೇ ಆಡಳಿತದ ಸ್ವರೂಪದಲ್ಲೇ ಒಂದು ದೊಡ್ಡ ಬದಲಾವಣೆ ಬಂದಿದೆ. ಉತ್ತಮ ಆಡಳಿತ, ಸ್ಥಿತ ಆಡಳಿತ ಮತ್ತು ಸೂಕ್ಷ್ಮ ಪ್ರಜ್ಞೆಯ ಆಡಳಿತ ನೀಡುವ ಭರವಸೆಯನ್ನು ನರೇಂದ್ರ ಮೋದಿ ಸರ್ಕಾರ ಈಡೇರಿಸಿದೆ. ಸಾಲಿನ ಕೊನೆ ಮನುಷ್ಯನಿಗೂ ಇದರ ಪ್ರಯೋಜನವಾಗಿದೆ. ವಿದೇಶಾಂಗ ನೀತಿ, ರಕ್ಷಣೆ, ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಯಶಸ್ವಿಯಾಗಿದೆ. ದೇಶದ ಬಡವರಲ್ಲೇ ಬಡವರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ. ಅಸಾವಯವ ಮತ್ತು ಅನೌಪಚಾರಿಕ ಆರ್ಥಿಕತೆಯನ್ನು ದೊಡ್ಡ ಮಟ್ಟಿಗೆ ಔಪಚಾರಿಕಗೊಳಿಸಿದೆ. ಐದು ವರ್ಷಗಳ ಹಿಂದೆ ಇದ್ದ ಆರ್ಥಿಕ ಸ್ಥಿತಿಗಿಂತ ಇಂದು ಉತ್ತಮ ಸ್ಥಿತಿ ಸಾಧಿಸಿದೆ. ನಿರುದ್ಯೋಗ ಹೆಚ್ಚಾಗಿದೆ ಎಂದು ವಿರೋಧ ಪಕ್ಷವೇನೋ ಹೇಳಬಹುದು ಆದರೆ ವಸ್ತುಸ್ಥತಿ ಏನೆಂದರೆ ಈ ಐದು ವರ್ಷಗಳಲ್ಲೇ ಅತಿಹೆಚ್ಚು ಸಾರ್ವಜನಿಕ ಕ್ಷೇತ್ರದ ಉದ್ಯೋಗ ಸೃಷ್ಟಿಯಾಗಿದೆ. ಸಾರ್ವಜನಿಕ ಮೂಲಸೌಕರ್ಯಗಳು ಸೃಷ್ಟಿಯಾದ ಕಾರಣದಿಂದ ಉದ್ಯೋಗ ಸೃಷ್ಟಿಯಾಗಿದೆ, ಮುದ್ರಾ ಯೋಜನೆ ಮೂಲಕ ಸಾಲ ನೀಡಿರುವುದೇ ರೂ.16 ಲಕ್ಷ ಕೋಟಿಗಿಂತ ಹೆಚ್ಚಾಗಿದೆ. ಸ್ವಚ್ಛಭಾರತ, ರಸ್ತೆ ನಿರ್ಮಾಣ, ರೈಲ್ವೇ ನಿರ್ಮಾಣಗಳು ಸಾಕಷ್ಟು ಉದ್ಯೋಗ ಸೃಷ್ಟಿಸಿವೆ. ಆರ್ಥಿಕತೆಯ ಡಿಜಿಟಲೀ ಕರಣವೂ ಸಾಕಷ್ಟು ಸ್ವಯಂ ಉದ್ಯೋಗ ಸೃಷ್ಟಿಸಿದೆ. ದೇಶದ ಅಭಿವೃದ್ಥಿಯ ಗತಿಯೂ ಹೆಚ್ಚಾಗಿದೆ. ಸರ್ಕಾರದ ನೀತಿ ಬಡತನವನ್ನು ಮರುಹಂಚಿಕೆ ಮಾಡುವುದಲ್ಲ ಬದಲಿಗೆ ದೇಶವನ್ನು ಸಂಪದ್ಭರಿತಗೊಳಿಸಿ ಶ್ರೀಮಂತ ದೇಶವನ್ನಾಗಿಸುವುದು- ಈ ತತ್ವವನ್ನು ಕನ್ಹಯ್ಯನ ಪಕ್ಷ ಒಪ್ಪುವುದಿಲ್ಲ. ಯಾಕೆಂದರೆ ಕನ್ಹಯ್ಯ ಅವರ ಪಕ್ಷ ಭಾರತದ ಜನರನ್ನು ಬಡವರಾಗಿಯೇ ಇಡಬಯಸುತ್ತದೆ. ಯಾಕೆಂದರೆ ಕಮ್ಯುನಿಸಂ ಅಂದರೇನೇ ಬಡತನವನ್ನು ಮರುಹಂಚಿಕೆ ಮಾಡಿ ಜನರನ್ನು ಬಡವರಾಗಿಯೇ ಇಡುತ್ತದೆ ಮತ್ತು ಒಂದು ವರ್ಗದ ಜನರನ್ನು ಮತ್ತೊಂದು ವರ್ಗದ ಜನರ ಮೇಲೆ ಎತ್ತಿ ಕಟ್ಟುತ್ತದೆ. ಆದರೆ ನರೇಂದ್ರ ಮೋದಿ ಸರ್ಕಾರ ಸಮಾಜದ ಜನರನ್ನು ಸೌಹಾರ್ದಯುತವಾಗಿ ಒಂದುಗೂಡಿಸಿದೆ. ಉದಾಹರಣೆಗೆ ಉಜ್ವಲಾ ಯೋಜನೆಯಡಿ ಅನುಕೂಲಸ್ತರು ತಮ್ಮ ಸಬ್ಸಿಡಿ ತ್ಯಾಗ ಮಾಡಿದರು. ಅದೇ ಹಣವನ್ನು ಅಗತ್ಯ ಇರುವ ಬಡವರಿಗೆ ಕೊಡಲು ಮೇಲ್ವರ್ಗದ ಜನರು ತಮ್ಮ ಸೌಲಭ್ಯ ಬಿಟ್ಟುಕೊಟ್ಟರು”.
“ಈ ನೀತಿ ಎಲ್ಲರನ್ನು ಒಳಗೊಳ್ಳುವ ಅಭಿವೃದ್ಧಿ, ಕ್ಷಿಪ್ರಗತಿಯ ಅಭಿವೃದ್ಧಿ, ಎಲ್ಲರ ಅಭಿವೃದ್ಧಿ ಮತ್ತು ಬೃಹತ್ ಪ್ರಮಾಣದ ಅಭಿವೃದ್ಧಿ. ನರೇಂದ್ರ ಮೋದಿ ಕಳೆದ ಐದು ವರ್ಷಗಳಲ್ಲಿ ನೀಡಿದ ಒಂದು ಅಭಿವೃದ್ಧಿಯನ್ನು ಭಾರತದ ಚರಿತ್ರೆಯಲ್ಲೇ ಯಾರೂ ಕಂಡಿರಲಿಲ್ಲ. ಹೀಗಾಗಿಯೇ ದೇಶದ ಜನರು ಮುಂದಿನ ಐದು ವರ್ಷಗಳ ಕಾಲ ನರೇಂದ್ರ ಮೋದಿಯವರನ್ನೇ ಬಯಸುತ್ತಿದ್ದಾರೆ”
ಎಂದು ಬಿಜೆಪಿ ಅಭ್ಯರ್ಥಿ ತಮ್ಮ ವಾದ ಮಂಡಿಸಿದರು
ಮತ್ತೆ ಕನ್ಹಯ್ಯ ಕುಮಾರ್ ಪ್ರತಿಕ್ರಿಯೆ ಹೀಗಿತ್ತು.
“ಆರ್ಥಿಕ ಬೆಳವಣಿಗೆ ವಿಷಯದಲ್ಲಿ ಇಂದು 7% ಬೆಳವಣಿಗೆ ಎಂದು ಹೇಳುತ್ತಿರುವುದು ಸುಳ್ಳು ಎಂದು ಆರ್ ಬಿ ಐ ಮಾಜಿ ನಿರ್ದೇಶಕ ರಘುರಾಮ್ ರಾಜನ್ ಅವರು ಹೇಳಿದ್ದಾರೆ. ವಿಶೇಷವಾಗಿ ನೋಟ್ ಬ್ಯಾನ್ ಮತ್ತು ಜಿಎಸ್ ಟಿ ಜಾರಿಯಾದ ನಂತರ ದೇಶದ ಸಣ್ಣ ಪುಟ್ಟ ಉದ್ಯಮಗಳು ನಾಶವಾಗಿವೆ. ನಿರುದ್ಯೋಗದ ಅಂಕಿ ಅಂಶಗಳು 45 ವರ್ಷದಲ್ಲಿ ಅತಿಹೆಚ್ಚು ನಿರುದ್ಯೋಗ ದಾಖಲಾಗಿರುವುದನ್ನು ತೋರಿಸುತ್ತಿವೆ. ಇವರು ಹೇಳುವ ಯೋಜನೆಗಳ ವಸ್ತು ಸ್ಥಿತಿ ಏನಾಗಿದೆ ನೋಡಿ. ಉಜ್ವಲಾ ಯೋಜನೆಯನ್ನೇ ತೆಗೆದುಕೊಳ್ಳಿ.
ಈ ಯೋಜನೆಯಲ್ಲಿ ಯಾರೆಲ್ಲಾ ಗ್ಯಾಸ್ ಸಂಪರ್ಕ ಪಡೆದರೋ ಅವರು ಅದನ್ನು ರಿಫಿಲ್ ಮಾಡಿಸಿಕೊಳ್ಳಲು ಹೋಗುತ್ತಿಲ್ಲ. ಯಾಕೆಂದರೆ ರೀಫಿಲ್ ಮಾಡಿಕೊಳ್ಳುವ ವೆಚ್ಚ 1000ರೂ.ಗಿಂತ ಹೆಚ್ಚಾಗಿದೆ”
“ಇವರು ಹೇಳುತ್ತಿರುವಂತೆ ಆರ್ಥಿಕತೆಯಲ್ಲಿ ಅಷ್ಟೆಲ್ಲಾ ಬಂಡವಾಳ ಹೂಡಿಕೆಯಾಗಿದ್ದರೆ ಮತ್ತೆ ಉದ್ಯೋಗಗಳು ಯಾಕೆ ಸೃಷ್ಟಿಯಾಗಿಲ್ಲ? ಇದನ್ನೇ ರಘುರಾಮ್ ರಾಜನ್ ಕೂಡಾ ಹೇಳಿದ್ದಾರೆ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ನೀವೇ ಸರ್ಕಾರ ನಡೆಸುತ್ತಿದ್ದೀರಿ, ಆದರೆ ಸರ್ಕಾರದ ಅಂಕಿ ಅಂಶಗಳನ್ನೇ ನೋಡುವುದಾದರೆ, ಕೇಂದ್ರ ಸರ್ಕಾರ ಒಂದರಲ್ಲೇ 27,00,000 (27 ಲಕ್ಷ) ಹುದ್ದೆಗಳು ಖಾಲಿ ಇವೆ. ನೀವು ಯಾವುದೇ ಸರ್ಕಾರಿ ಇಲಾಖೆಯಲ್ಲಿ ಖಾಲಿ ಹುದ್ದೆಗಳನ್ನು ನೋಡಬಹುದು. ಕೆಲ ತಿಂಗಳ ಹಿಂದೆ ದೆಹಲಿಯ ಬೀದಿಗಳಲ್ಲಿ ಇಡೀ ದೇಶದ ಯುವಕರು ಬಂದು ಪ್ರತಿಭಟನೆ ನಡೆಸಿದರು. ಎಸ್ ಎಸ್ ಸಿ ಪ್ರಶ್ನಪತ್ರಿಕೆಗಳು ಲೀಕ್ ಆಗಿದ್ದನ್ನು ಅವರು ಪ್ರತಿಭಟಿಸಿದ್ದರು. ಒಂದು ಕಡೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಿಲ್ಲ, ಮತ್ತೊಂದು ಕಡೆ ಮೊದಲೇ ಪ್ರಶ್ನೆಪತ್ರಿಕೆಗಳ ಸೋರಿಕೆಯಿಂದ ಆಗಬಹುದಾದ ಕೆಲ ಹುದ್ದೆಗಳೂ ಭರ್ತಿಯಾಗುವುದಿಲ್ಲ. ಜನರನ್ನು ಕತ್ತಲೆಯಲ್ಲಿಡಲಾಗಿದೆ”
ಯಾವುದೇ ಯೋಜನೆ ತೆಗೆದು ನೋಡಿ. ಉದಾಹರಣೆಗೆ ಸ್ಕಿಲ್ ಇಂಡಿಯಾ ಯೋಜನೆ ಕುರಿತ ಅಂಕಿ ಅಂಶ ಏನು ಹೇಳುತ್ತದೆ? ಇದರ ಅಡಿಯಲ್ಲಿ 70,000 ಯುವಕರಿಗೆ ತರಬೇತಿ ನೀಡಲಾಗಿದೆ. ಈ 70 ಸಾವಿರ ತಬೇತಿ ಪಡೆದ ಯುವಕರಲ್ಲಿ ಕೇವಲ ಶೇಕಡಾ 1ರಷ್ಟು (1%) ಯುವಕರೀಗೂ ನೌಕರಿ ಸಿಕ್ಕಿಲ್ಲ. ಸ್ವಚ್ಛ ಭಾರತ್ ಅಭಿಯಾನದ ಸತ್ಯವೇನೆಂದರೆ, ಯಾರು ಇಂದಿಗೂ ಪೌರ ಕಾರ್ಮಿಕರಾಗಿ ಸ್ವಚ್ಛತೆಯಲ್ಲಿ ತೊಡಗಿದ್ದಾರೋ ಅವರಿಗೆ ಈ ಕ್ಷಣಕ್ಕೂ ಸರಿಯಾದ ದಿನಗೂಲಿ ಸಿಗುತ್ತಿಲ್ಲ. ಮ್ಯಾನ್ ಹೋಲ್ ಗಳಲ್ಲಿ ಸ್ವಚ್ಛತೆಗೆ ಹೋದವರು ಸಾವಿಗೀಡಾಗುವ ಘಟನೆಗಳ ಸುದ್ದಿಗಳು ಪ್ರತಿದಿನ ಬರುತ್ತಿವೆ. ದೆಹಲಿಯಂತಹ ನಗರದಲ್ಲಿ ಕೆಲವೇ ದಿನಗಳ ಹಿಂದೆ 9 ಜನರು ಪ್ರಾಣ ಕಳೆದುಕೊಂಡು ಘಟನೆ ನಡೆಯಿತು. ಇದೆಲ್ಲಾ ಏನು ತೋರಿಸುತ್ತದೆ ಎಂದರೆ ಇವರೆಲ್ಲಾ ಜನರಿಗೆ ಹಗಲುಕನಸೊಂದನ್ನು ತೋರಿಸುತ್ತಿದ್ದಾರೆ, ದೊಡ್ಡ ಪ್ರಚಾರ ಮಾಡುತ್ತಿದ್ದಾರೆ, ಆದರೆ ಇದರ ವಾಸ್ತವ ಬೇರೆಯೇ ಇದೆ. “ಬೇಟೀ ಬಚಾವೋ ಬೇಟೀ ಪಡಾವೋ” ಯೋಜನೆಯ ಕುರಿತ ವೆಚ್ಚದ ಅಂಕಿಅಂಶ ತೆಗೆದು ನೋಡಿ. ಆ ಯೋಜನೆಗೆ ಮಾಡಿದ ವೆಚ್ಚದ ಶೇ.51ರಷ್ಟನ್ನು ಕೇವಲ ಮೋದಿಯವರ ಫೋಟೋ ಮತ್ತಿತರ ಪ್ರಚಾರಕ್ಕಾಗಿಯೇ ಬಳಸಲಾಗಿದೆ. ಆ ಹಣವನ್ನು ಹೆಣ್ಣುಮಕ್ಕಳಿಗೆ ಶಾಲೆ ತೆರೆಯಲು, ಇಲ್ಲವೇ ಉದ್ಯೋಗ ವ್ಯವಸ್ಥೆ ಕಲ್ಪಿಸಿಕೊಡಲು ಬಳಸಿದ್ದರೂ ಒಳ್ಳೆಯದಾಗುತ್ತಿತ್ತು. ಇವರ ಸರ್ಕಾರ ಭಾರೀ ಮಾತಿನ ಭರವಸೆ ನೀಡುತ್ತದೆ. ಬಿಜೆಪಿ ವಿರೋಧ ಪಕ್ಷವಾಗಿದ್ದಾಗಲೂ ಭರವಸೆ ನೀಡುತ್ತಿತ್ತು. ಈಗ ಸರ್ಕಾರ ರಚಿಸಿದ ಮೇಲೂ ಆಶ್ವಾಸನೆ ನೀಡುತ್ತಿದೆ. ಇವರು ಹೇಳುವ ಯಾವುದೇ ಯೋಜನೆಯನ್ನು ತಳಮಟ್ಟದಲ್ಲಿ ನೋಡಿದರೂ ಸತ್ಯ ತಿಳಿಯುತ್ತದೆ. ಕಳೆದ 5 ವರ್ಷಗಳಲ್ಲಿ ಜನರ ಆದಾಯ ಕಡಿಮೆ ಆಗಿದೆ. ಮತ್ತೊಂದೆಡೆ ಕೆಲವು ಕಾರ್ಪೊರೇಟ್ ಸಂಸ್ಥೆಗಳ ಆದಾಯ ಅಪಾರ ಮಟ್ಟದಲ್ಲಿ ಹೆಚ್ಚಾಗಿದೆ. ಬಡವರು ಇನ್ನೂ ಬಡವರಾಗುತ್ತಿದ್ದಾರೆ. ಅತ್ಯಂತ ಶ್ರೀಮಂತರು (ನಾನು ಮಧ್ಯಮ ವರ್ಗದವರ ಬಗ್ಗೆ ಹೇಳುತ್ತಿಲ್ಲ) ಯಾರು ಅತಿ ಹೆಚ್ಚು ಶ್ರೀಮಂತರಾಗಿದ್ದಾರೋ ಅವರ ಆದಾಯ ಹಲವು ಪಟ್ಟು ಹೆಚ್ಚಾಗಿದೆ. ಮತ್ತೊಂದು ಅಂಕಿ ಅಂಶದ ಪ್ರಕಾರ ನಮ್ಮ ಸಂಸತ್ತಿನ 545 ಸದಸ್ಯರ ಪೈಕಿ 200 ಸಂಸದರ ಆದಾಯ ಕಳೆದ ಐದು ವರ್ಷದಲ್ಲಿ ದುಪ್ಪಟ್ಟು ಹೆಚ್ಚಿದೆ. ಜನರ ಸಂಪತ್ತು ನಷ್ಟವಾಗಿದೆ. ರೈತರ ಸ್ಥಿತಿ ನೋಡಿ. ಪ್ರತಿ ಅರ್ಧ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ರೈತರಿಗೆ ವಿಮೆ ಕೊಡುವ ಕಂಪನಿಗೆ 10,000 ಕೋಟಿ ರೂಪಾಯಿ ಲಾಭವಾಗಿದೆ. ನನ್ನ ಅಭಿಪ್ರಾಯದಲ್ಲಿ ನರೇಂದ್ರ ಮೋದಿ ಸರ್ಕಾರ “ಲಾಭದ ಖಾಸಗೀಕರಣ ಮತ್ತು ನಷ್ಟದ ಸಾಮಾಜಿಕರಣ” (Privatization of profit and socialization of loss) ಮಾದರಿಯಲ್ಲಿ ಕೆಲಸ ಮಾಡುತ್ತಿದೆ”
ಹೀಗೆ ಅಂಕಿ ಅಂಶಗಳೊಂದಿಗೆ ಮೋದಿ ಸರ್ಕಾರದ ಯೋಜನೆಗಳ ಬಂಡವಾಳವನ್ನು ಕನ್ಹಯ್ಯ ಬಯಲು ಮಾಡಿದರು.
ಇದಕ್ಕೆ ದನಿಗೂಡಿಸಿದ ನಿರೂಪಕ ರಾಹುಲ್ ಕನ್ವಲ್, “ತೇಜಸ್ವಿ ಸೂರ್ಯ ಅವರೇ ದೊಡ್ಡ ಸಂಖ್ಯೆಯ ಜಾಗತಿಕ ಮಟ್ಟದ ಆರ್ಥಿಕ ತಜ್ಞರು ಸರ್ಕಾರದ ಅಂಕಿಅಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನೀವು ನಿಮ್ಮನ್ನು ಅಭಿನಂದಿಸಿಕೊಳ್ಳಲು ಅಂಕಿಅಂಶಗಳನ್ನು ತಿರುಚುತ್ತಿದ್ದೀರಿ ಎಂದು ಕನ್ಹಯ್ಯ ಕುಮಾರ್ ನಿಮ್ಮ ಮೇಲೆ ಆರೋಪಿಸುತ್ತಿದ್ದಾರೆ. ಇದಕ್ಕೆ ನೀವೇನಂತೀರಿ?” ಎಂದು ಪ್ರಶ್ನೆ ಹಾಕಿದರು.
ನಂತರ ನಡೆದ ಚರ್ಚೆ ತಮಾಷೆಯಾಗಿದೆ. ತೇಜಸ್ವಿ ಸೂರ್ಯ ಕನ್ಹಯ್ಯ ಕೇಳಿದ ಒಂದೇ ಒಂದು ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಮಾಮೂಲಿ ತಮ್ಮ ಟಿಪಿಕಲ್ ಶೈಲಿಯಲ್ಲಿ ಕಮ್ಯುನಿಷ್ಟರ ಭಂಜನೆಗೆ ಇಳಿದರು.
ಅವರ ಪ್ರತಿಕ್ರಿಯೆ ಹೀಗಿತ್ತು.
“ನೋಡಿ ರಾಹುಲ್, ಈ ಎಡಪಂಥೀಯರಿಗೆ ಒಂದು ಸಮಸ್ಯೆ ಇದೆ. ಅವರಿಗೆ ಯಾವುದಾದರೂ ಅಂಕಿಅಂಶ ಸರಿಹೊಂದದಿದ್ದರೆ ಅದನ್ನು ನೀಡಿದ ಸಂಸ್ಥೆಯನ್ನೇ ದೂರುತ್ತಾರೆ. ಬೇರೆ ಸಂದರ್ಭದಲ್ಲಿ ತಮಗೆ ಹೊಂದುವ ಅಂಕಿ ಅಂಶಗಳನ್ನು ತಮಗೆ ಬೇಕಾದಂತೆ ಮಾತ್ರ ಹೇಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇವತ್ತು ರಘುರಾಮ್ ರಾಜನ್ ಹೇಳಿಕೆ ಅವರಿಗೆ ಅನುಕೂಲಕರವಾಗದ್ದರೆ ಆಗ ರಘುರಾಮ್ ರಾಜನ್ ಅವರಿಗೆ ಡಾರ್ಲಿಂಗ್ ಆಗುತ್ತಾರೆ, ನಾಳೆ ರಘುರಾಮ್ ರಾಜ್ ಮೋದಿ ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದರೆ ಆಗ ಇವರಿಗೆ ರಘುರಾಮ್ ರಾಜನ್ ಕೆಟ್ಟವರಾಗಿ ಕಾಣುತ್ತಾರೆ. ಇಂದು ಐಎಂಎಫ್, ವಿಶ್ವಬ್ಯಾಂಕ್, ಎಡಿಬಿ ಮುಂತಾದ ಅಂತರರಾಷ್ಟ್ರೀಯ ಸಂಸ್ಥೆಗಳೆಲ್ಲಾ ಭಾರತ ಅತಿವೆಗದಲ್ಲಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ ಎಂದು ಹೇಳಿವೆ. ಬಡತನ ರೇಖೆಯಿಂದ ಹೊರಕ್ಕೆ ಬಂದಿರುವ ಜನರ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚಾಗಿದೆ. ಕಳೆದ 5 ವರ್ಷದಲ್ಲಿ ಭಾರತೀಯನ ತಲಾದಾಯ ಶೇ. 45ರಷ್ಟು ಹೆಚ್ಚಾಗಿದೆ. ಕನ್ಹಯ್ಯ ಕುಮಾರ್ ತನ್ನ ಕಮ್ಯುನಿಷ್ಟ್ ಸಿದ್ಧಾಂತಕ್ಕೆ ಬದ್ಧನಾಗಿ ದೇಶದ ಬಗ್ಗೆ ಬಹಳ ನಿರಾಶಾದಾಯಕ ಚಿತ್ರಣ ನೀಡುತ್ತಿದ್ದಾರೆ. ಭಾರತೀಯ ಜನತಾ ಪಕ್ಷದವನಾದ ನಾನು ಭಾರತದ ಆಶೋತ್ತರಗಳ ಬಗ್ಗೆ ನಂಬಕೆ ಇಟ್ಟುಕೊಂಡು ಸಕಾರಾತ್ಮಕವಾಗಿ ನೋಡುತ್ತೇನೆ. ಕನ್ಹಯ್ಯ ಹೇಳುವುದು ನಿಜವಾಗಿದ್ದರೆ ಸಮಾಜದಲ್ಲೆ ಅಶಾಂತಿ ಇರುತ್ತಿತ್ತು. ಆದರೆ ಭಾರತ ಪ್ರಶಾಂತವಾಗಿದೆ, ಜನರು ಖುಷಿಯಾಗಿದ್ದಾರೆ”
ಎಂದು ಶಾಂತವಾಗಿ ಹೇಳಿದರು ತೇಜಸ್ವಿ ಸೂರ್ಯ.
ಚರ್ಚೆಯಲ್ಲಿ ಎದುರು ಬದುರಾಗಿದ್ದು ತದ್ವಿರುದ್ಧ ಸಿದ್ಧಾಂತಗಳನ್ನು ನಂಬಿ ಆಚರಿಸುತ್ತಿರುವ ಯುವಕರು. ಮೇಲಾಗಿ ಒಬ್ಬ ಆರೆಸ್ಸೆಸ್ ಹೇಳುವ ಸೊಕಾಲ್ಡ್ ರಾಷ್ಟ್ರವಾದದ ಸಮರ್ಥಕ ಮತ್ತೊಬ್ಬ ಅದರ ಬಲಿಪಶು. ಆದರೆ ರಾಷ್ಟ್ರೀಯವಾದದ ಚರ್ಚೆಯನ್ನು ಭಿನ್ನ ರೀತಿಯಲ್ಲಿ ತಿಳಿಸಬಲ್ಲ ಯುವಕ ಕನ್ಹಯ್ಯ.
ನಿರೂಪಕ ರಾಹುಲ್, ಈಗ ಚರ್ಚೆಯನ್ನು ರಾಷ್ಟ್ರೀಯವಾದ ಮುಖ್ಯವೋ, ಉದ್ಯೋಗದ ಪ್ರಶ್ನೆ ಮುಖ್ಯವೋ ಎಂದು ಮುಂದಿಟ್ಟರು.
ಇದಕ್ಕೆ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿ, ‘ರಾಷ್ಟ್ರೀಯವಾದ ಇಲ್ಲ ಉದ್ಯೋಗ ಸೃಷ್ಟಿ ಪ್ರಯೋಜನವಿಲ್ಲ. ನರೇಂದ್ರ ಮೋದಿ ಸರ್ಕಾರ ಈ ದೃಷ್ಟಿಯಿಂದ ಅದ್ಭುತ ಕೆಲಸ ಮಾಡುತ್ತಿದೆ, ಮೋದಿ ಸರ್ಕಾರ ಇರದೇ ಯುಪಿಎ ತರದ ಸರ್ಕಾರ ಕಳೆದ 5 ವರ್ಷ ಆಳಿದ್ದರೆ ಭಾರತ ವೆನಿಜುಯೆಲಾ, ಉತ್ತರ ಕೊರಿಯಾ ರೀತಿ ಆಗುತ್ತಿತ್ತು ಎಂದರು’.

ಇದಕ್ಕೆ ಕನ್ಹಯ್ಯ ಪ್ರತಿಕ್ರಿಯೆ ತೀಕ್ಷಣವಾಗಿತ್ತಲ್ಲದೇ ತೇಜಸ್ವಿ ಸೂರ್ಯನನ್ನೇ ಕೆಣಕುವಂತಿತ್ತು.
“ತೇಜಸ್ವಿ ಸೂರ್ಯ ಅವರು ನಾನು ಕೇಳಿದ ಪ್ರಶ್ನೆಗಳಿಗೆ ನಿರ್ದಿಷ್ಟವಾಗಿ ಉತ್ತರ ಹೇಳದೇ ಬೇರೆ ಎಲ್ಲೋ ಸುತ್ತು ಹೊಡೆಯುತ್ತಿದ್ದಾರೆ. ನಾನು ಕೇಂದ್ರ ಸರ್ಕಾರದಲ್ಲಿ 27 ಲಕ್ಷ ಹುದ್ದೆಗಳು ಖಾಲಿ ಇರುವ ಬಗ್ಗೆ ಪ್ರಶ್ನೆ ಕೇಳಿದೆ. ಅದಕ್ಕೆ ಅವರು ಉತ್ತರಿಸಲಿಲ್ಲ. ನಾನು ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಗ್ಗೆ ಕೇಳಿದೆ. ಅದಕ್ಕವರು ಉತ್ತರಿಸಲಿಲ್ಲ. ರಾಷ್ಟ್ರವಾದದ ಬಗ್ಗೆ ಮಾತಾಡುತ್ತೀರಿ. ಮೋದಿ ಯಾವ ರೀತಿ ರಾಷ್ಟ್ರದ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಮುಳುಗಿಸುತ್ತಿದ್ದಾರೆ ನೋಡಿ. ಸರ್ಕಾರಿ ಸಂಸ್ಥೆಯಾದ ಬಿಎಸ್ ಎನ್ ಎಲ್ ಇಂದು ತನ್ನ ಕಾರ್ಮಿಕರಿಗೆ ಸಂಬಳ ಕೊಡಲಾಗದ ದುಸ್ಥಿತಿಗೆ ಬಂದು ನಿಂತಿದೆ. ಅದು ಬಂದ್ ಆಗುವ ಸ್ಥಿತಿ ಏರ್ಪಟ್ಟಿದೆ. ಏರ್ ಇಂಡಿಯಾ ಬಂದ್ ಆಗುವ ಸ್ಥಿತಿಗೆ ಬಂದಿದೆ. ರಫೇಲ್ ಯುದ್ಧ ವಿಮಾನ ತಯಾರಿಕೆ ಪ್ರಕರಣದಲ್ಲಿ ರಾಷ್ಟ್ರದ ಎಚ್ ಎ ಎಲ್ ಗೆ ನೀಡಬೇಕಾಗಿದ್ದ ಟೆಂಡರನ್ನು, ಯಾವ ಕಂಪನಿ ಇಂದು ದಿವಾಳಿ ಸ್ಥಿತಿಗೆ ಬಂದಿದೆಯೋ ಆ ಕಂಪನಿಗೆ ಮೋದಿ ಸರ್ಕಾರ ನೀಡಿದೆ. ಇಲ್ಲಿ ರಾಷ್ಟ್ರವಾದದ ಬಗ್ಗೆ ಮಾತಾಡುತ್ತೇವೆ. ದೇಶದಲ್ಲಿ ಇಂತಹ ಸ್ಥಿತಿ ಇರುವಾಗ ರಾಷ್ಟ್ರವಾದವನ್ನು ಉಳಿಸುವುದು ಹೇಗೆ? ನೀವು ವೆನಿಜುಯೆಲಾ, ಉತ್ತರ ಕೊರಿಯಾ ಹೆಸರು ಹೇಳಿ ಮಾತಾಡಿಕೊಂಡು ನಮ್ಮ ರಾಷ್ಟ್ರ ಎದುರಿಸುತ್ತಿರುವ ಪ್ರಶ್ನೆಗಳಿಂದ ಬಚಾವಾಗಬಹುದೇ? ರಾಷ್ಟ್ರವನ್ನು ಸಮೃದ್ಧಗೊಳಿಸುವುದು ಅಂದರೆ ಏನರ್ಥ? ನಮ್ಮ ರಾಷ್ಟ್ರದ ಆರ್ಥಿಕತೆಯಲ್ಲಿ ಬೆಳವಣಿಗೆ ಸಾಧ್ಯವಾಗಬೇಕು. ದೇಶ ಬೆಳವಣಿಗೆ ಆಗುವುದು ಎಂದರೆ ಅಮಿತ್ ಶಾ ಅವರ ಮಗ ಜಯ್ ಶಾನ ಲಾಭ ಒಂದೇ ವರ್ಷದಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗುವುದಲ್ಲ. ಇದರಿಂದ ದೇಶದ ಬೆಳವಣಿಗೆ ಸಾಧ್ಯವಾಗುವುದಿಲ್ಲ. ಜನರ ತಲಾ ಆದಾಯ ಹೆಚ್ಚಿದಾಗ ದೇಶದ ಬೆಳವಣಿಗೆ ಆಗುತ್ತದೆ. ಆದರೆ ತದ್ವಿರುದ್ಧವಾಗಿ ಜನರ ತಲಾದಾಯ ಕಡಿಮೆಯಾಗುತ್ತಿದೆ. ಇವರು ದೇಶದ ಆರ್ಥಿಕತೆ ಬೆಳೆಯುತ್ತಿದೆ ಎನ್ನುತ್ತಾರೆ, ಕೆಲವೇ ಕಾರ್ಪೊರೇಟ್ ಕಂಪನಿಗಳು ಅಭಿವೃದ್ಧಿ ಹೊಂದಿದ ಮಾತ್ರಕ್ಕೆ ದೇಶದ ಆರ್ಥಿಕತೆ ಬೆಳೆಯಿತು ಎಂದಲ್ಲ. ನಾನು ನಿಮಗೆ ಅಂಕಿಅಂಶ ನೀಡುತ್ತೇನೆ, ಜಿಯೋಗೆ ಆದಾಯ ಹೆಚ್ಚಿದೊಡನೆ ದೇಶದ ಆದಾಯ ಹೆಚ್ಚಿತು ಎಂದಾಗುವುದಿಲ್ಲ. ಬಿಎಸ್ ಎನ್ ಎಲ್ ಲಾಭ ಹೆಚ್ಚಿದಾಗ ಮಾತ್ರ ರಾಷ್ಟ್ರದ ಬೆಳವಣಿಗೆ ಹೆಚ್ಚುತ್ತದೆ”
“ರಾಷ್ಟ್ರವಾದದ ಬಗ್ಗೆ ಮಾತಾಡುವವರು ಭಾರತದ ಮೇಲೆ ಉಗ್ರವಾದಿಗಳ ಆಕ್ರಮಣಗಳ ಬಗ್ಗೆ ಮಾತಾಡುತ್ತಾರೆ. ಆದರೆ ಒಂದು ವಿಷಯ ತಿಳಿದುಕೊಳ್ಳಿ. ನಮ್ಮ ದೇಶದ ಮೇಲೆ ಯಾವಾಗೆಲ್ಲಾ ಆಕ್ರಮಣ ನಡೆದಿದೆಯೋ ಆವಾಗೆಲ್ಲಾ ಸೂಕ್ತ ಉತ್ತರವನ್ನೇ ನೀಡಿದ್ದೇವೆ. ನೀವು 1947ರ ಉದಾಹರಣೆ ನೋಡಿ, 1965, 1971ರ ಉದಾಹರಣೆ ನೋಡಿ, ಎನ್ ಡಿ ಎ ಇದ್ದಾಗ ಕಾರ್ಗಿಲ್ ಉದಾಹರಣೆ ನೋಡಿದರೂ ಸಹ ನಮ್ಮ ಸೈನಿಕರು ಸೂಕ್ತ ಉತ್ತರ ನೀಡುತ್ತಲೇ ಬಂದಿದ್ದಾರೆ. ಇದರ ಕ್ರೆಡಿಟ್ ಸರ್ಕಾರಕ್ಕೆ ಸಲ್ಲುವುದಲ್ಲ. ಸೈನ್ಯಕ್ಕೆ, ಸೈನಿಕರಿಗೆ ಸಲ್ಲುತ್ತದೆ”
ಕನ್ಹಯ್ಯ ಅವರ ಈ ಮಾತುಗಳಿಗೆ ಉತ್ತರ ಕೊಡಲು ನಿರೂಪಕ ರಾಹುಲ್ ತೇಜಸ್ವಿ ಸೂರ್ಯ ಅವರಿಗೆ ಕೇಳುತ್ತಿದ್ದಂತೆ, ಸೂರ್ಯ ಅವರು, ‘ರಾಹುಲ್ ನಾನು ನಿಜಕ್ಕೂ ಬೇರೆ ಕಡೆ ಪ್ರಚಾರಕ್ಕೆ ಹೋಗಬೇಕಾಗಿದೆ. ದಯವಿಟ್ಟು ಕ್ಷಮಿಸಿ. ನಾನು ಕೇವಲ 30 ಸೆಕೆಂಡಿನಲ್ಲಿ ನನ್ನ ಕಡೆಯ ಮಾತು ಹೇಳಬಯಸುತ್ತೇನೆ, ಕನ್ಹಯ್ಯ ಅವರು ತಿಳಿಯಬೇಕಾದ್ದು ಏನೆಂದರೆ ಭಾರತದಲ್ಲಿರುವುದು ನಾಗರಿಕ ಪ್ರಜಾಪ್ರಭುತ್ವವೇ ಹೊರತು ಸೇನಾ ಸರ್ವಾಧಿಕಾರವಲ್ಲ. ಹೀಗಾಗಿ ಯಾವುದೇ ಘಟನೆಯ ಸಫಲತೆ ವಿಫಲತೆಗಳ ಕ್ರೆಡಿಟ್ ಸಲ್ಲುವುದು ಸರ್ಕಾರಕ್ಕೆ ಹೊರತು ಸೈನ್ಯಕ್ಕಲ್ಲ. ಈ ಸರ್ಕಾರ ನಮ್ಮ ಶತ್ರುಗಳಿಗೆ ತಕ್ಕ ಉತ್ತರ ನೀಡುವ ಧೈರ್ಯವನ್ನು ಮೊದಲ ಬಾರಿಗೆ ತೋರಿದೆ. ಆ ಕ್ರೆಡಿಟ್ ನರೇಂದ್ರ ಮೋದಿ ಸರ್ಕಾರಕ್ಕೆ ಸಲ್ಲಬೇಕು. ನಾನು ಕನ್ಹಯ್ಯ ಅವರಿಗೆ ಶುಭ ಹಾರೈಸಿ ನಿರ್ಗಮಿಸುತ್ತೇನೆ.
ಹೀಗೆ ಹೇಳಿದ ತೇಜಸ್ವಿ ಸೂರ್ಯ ಯಂಗ್ ಇಂಡಿಯಾ ಡಿಬೇಟ್ ನಿಂದ ಪೇರಿ ಕಿತ್ತರು.
ನಂತರ ತೇಜಸ್ವಿ ಅವರ ಮಾತುಗಳನ್ನೇ ಮುಂದುವರೆಸಿದ ನಿರೂಪಕ, ಈ ಹಿಂದೆ ಯಾವುದೇ ಸರ್ಕಾರದ ಅವಧಿಯಲ್ಲಿ ನಡೆಯದ ರೀತಿಯಲ್ಲಿ ಈಗ ಭಾರತ ತನ್ನ ಸೇನಾ ಶಕ್ತಿ ಪ್ರದರ್ಶನ ಮಾಡಿದೆ. ಬಾಲಾಕೋಟ್ ಉದಾಹರಣೆ ಇದೆ. ಇದಕ್ಕೆ ಕನ್ಹಯ್ಯ ಅಭಿಪ್ರಾಯವೇನು ಎಂದು ಕೇಳಿದರು.
ಕಡೆಯಲ್ಲಿ ಮಾತಾಡಿದ ಕನ್ಹಯ್ಯ, ತೇಜಸ್ವಿ ಸೂರ್ಯ ಅವರು ಆಡಿದ ಕೊನೆಯ ಮಾತಿನಲ್ಲೇ ಅಂತರ್ ವೈರುಧ್ಯವಿದೆ. ಅವರ ಪ್ರಕಾರ ಭಾರತದಲ್ಲಿ ಸೈನ್ಯ ಯಾವ ತೀರ್ಮಾನ ಕೈಗೊಳ್ಳಬೇಕು ಯಾವ ತೀರ್ಮಾನ ತೆಗೆದುಕೊಳ್ಳಬಾರದು ಎಂದು ನಿರ್ಧರಿಸುವ ಹಕ್ಕಿರುವುದು ನಾಗರಿಕ ಸರ್ಕಾರಕ್ಕೆ. ಏನಾದರೂ ಸಕ್ಸಸ್ ಆದರೆ ಅದರ ಕ್ರೆಡಿಟ್ ಸರ್ಕಾರಕ್ಕೇ ಸಿಗುತ್ತದೆ, ಏನಾದರೂ ವಿಫಲತೆ ಆದರೆ ಅದರ ಹೊಣೆಯನ್ನೂ ಸರ್ಕಾರವೇ ಹೊರಬೇಕು. ಆದರೆ ಇವರು ಮಾಡುತ್ತಿರುವುದೇನು ನೋಡಿ. ಬಾಲಾಕೋಟ್ ವಾಯುದಾಳಿಯ ಕ್ರೆಡಿಟ್ ತಾವು ತೆಗೆದುಕೊಳ್ಳುತ್ತಾರೆ. ಅದೇ ರೀತಿ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯ ಹೊಣೆಯನ್ನೂ ಹೊರಬೇಕಲ್ಲವಾ? ನಾವು ಹೇಳುವುದೇನೆಂದರೆ ಭಾರತದಲ್ಲಿ ಸೇನೆಗಳನ್ನು, ಸೇನೆಯ ಸಾಧನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಕೆಲಸ ಹಿಂದೆ ಆಗಿಲ್ಲ, ಅದು ಆಗಲೂಬಾರದು. ನಾಗರಿಕ ಸರ್ಕಾರವೇ ಸೇನೆಯನ್ನು ನಡೆಸಬೇಕು ನಿಜ. ಆದರೆ ಯಾವ ಸರ್ಕಾರವೂ ತನ್ನ ಚುನಾವಣಾ ಪ್ರಚಾರಕ್ಕೆ ಸೇನೆಯನ್ನು ಬಳಸಿಕೊಳ್ಳಬಾರದು. ಮೊನ್ನೆ ಚುನಾವಣಾ ಆಯೋಗವೇ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದೆ. ಸೈನ್ಯಕ್ಕೆ ಸಂಬಂಧಿಸಿದ್ದನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದು ತಪ್ಪು ಎಂದಿದೆ.
ಅಂತಿಮವಾಗಿ ನಾನಿಲ್ಲಿ ಹೇಳುವುದಿಷ್ಟೇ, 2014ರಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಕೆಲವು ಭರವಸೆ ನೀಡಿತ್ತು. ದಯವಿಟ್ಟು ಆ ಪ್ರಣಾಳಿಕೆಯಲ್ಲಿ ಯಾವ ಆಶ್ವಾಸನೆಗಳನ್ನು ಬರೆಯಲಾಗಿತ್ತು ನೋಡಿ. ಅದರಲ್ಲಿ ಎಷ್ಟನ್ನು ಈಡೇರಿಸಿದ್ದಾರೆ ಎಂಬುದನ್ನೂ ನೋಡಿ.
ಜನರ ಬ್ಯಾಂಕ್ ಖಾತೆಗೆ 15 ಲಕ್ಷ ಬಂತೇ? ಭ್ರಷ್ಟಾಚಾರದ ಆರೋಪ ಇದ್ದವರನ್ನೆಲ್ಲಾ ಜೈಲಿಗೆ ಹಾಕಿದರೇ? ದೇಶದಲ್ಲಿ ಬಡತನ ಕಡಿಮೆ ಆಗಿದೆಯೇ? ಹೊಸ ಕೈಗಾರಿಕೆಗಳನ್ನು ದೇಶದಲ್ಲಿ ಸ್ಥಾಪಿಸಿದರೇ? ರೈತರ ಮೇಲಿನ ಶೋಷಣೆ ಕಡಿಮೆ ಆಗಿದೆಯೇ? ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಕಡಿಮೆ ಆಗಿದೆಯೇ? ಇದರಲ್ಲಿ ಒಂದೇ ಒಂದನ್ನೂ ಬಿಜೆಪಿ ಪೂರೈಸಿಲ್ಲ. ಈ ದೇಶದಲ್ಲಿ ಒಂದೊಂದು ಸಂಸ್ಥೆಗಳ ಮುಖ್ಯಸ್ಥರೂ ಸಹ ರಾಜೀನಾಮೆ ನೀಡಿದರು. ಆರ್ ಬಿ ಐ ನಿರ್ದೇಶಕತೇ ಹುದ್ದೆಗೆ ರಾಜೀನಾಮೆ ನೀಡಿದರು. ಅವರ ತಕರಾರು ಏನಾಗಿತ್ತೆಂದರೆ ಮೋದಿ ಜಾರಿಗೊಳಿಸಿದ ನೋಟ್ ಬ್ಯಾನ್ ಗೆ ಆರ್ ಬಿ ಐ ಸಮ್ಮತಿ ನೀಡಿರಲಿಲ್ಲ. ನೋಟ್ ಬ್ಯಾನ್ ಎನ್ನುವುದು ದೊಡ್ಡ ಪ್ರಮಾದ ಎಂಬುದನ್ನು ವಿಶ್ವದ ನೊಬೆಲ್ ವಿಜೇತರೇ ಹೇಳಿದ್ದಾರೆ. ಇಲ್ಲಿ ಮೋದಿ ಸರ್ಕಾರದ ಅಭಿವೃದ್ಧಿ ಮಾದರಿ ಎನ್ನುವುದು ಸಂಪೂರ್ಣ ವಿಫಲವಾಗಿದೆ. ಅದು ಅವರಿಗೂ ತಿಳಿದಿದೆ. ಹೀಗಾಗಿಯೇ ಅವರು 2014ರಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆಗೆ ಹೋದರೆ 2019ರಲ್ಲಿ ರಾಷ್ಟ್ರವಾದದ ಹೆಸರಲ್ಲಿ ಚುನಾವಣೆಗೆ ಎದುರಿಸುತ್ತಿದ್ದಾರೆ. ತಾವೇ ಅಭಿವೃದ್ಧಿಯ ವಿಷಯಗಳನ್ನು ಹಿಂದಕ್ಕೆ ತಳ್ಳಿದ್ದಾರೆ. ಇವತ್ತು ಯಾವುದೇ ಬಿಜೆಪಿ ನಾಯಕ ಭಾಷಣ ಮಾಡುವಾಗ ಅಭಿವೃದ್ಧಿಯ ಮಾತನ್ನೇ ಆಡುತ್ತಿಲ್ಲ. ಪ್ರಧಾನಿ ಮೋದಿ ಭಾಷಣಗಳನ್ನೇ ಕೇಳಿ ನೋಡಿ. ಅವರು ಕೇವಲ ಹಿಂದೂಸ್ತಾನ, ಪಾಕಿಸ್ತಾನ, ಬಾಲಾಕೋಟ್, ಇದರ ಬಗ್ಗೆಯೇ ಮಾತಾಡುತ್ತಾರೆ. ಇಂದು ನಾವು ಎದುರಿಸುವ ಸಮಸ್ಯೆಗಳ ಬಗ್ಗೆ ನೆಹರೂ ಅವರನ್ನು ತೆಗಳುತ್ತಾ ಕುಳಿತುಕೊಳ್ಳುತ್ತಾರೆ. ನಾವು ಕೇಳುವ ಯಾವ ಪ್ರಶ್ನೆಗೂ ಅವರು ಉತ್ತರ ನೀಡುತ್ತಿಲ್ಲ.

ಮತ್ತೊಂದು ವಿಷಯ ನಾನು ನೆನಪಿಸಲು ಇಚ್ಛಿಸುತ್ತೇನೆ. ಹಿಂದಿನ ಯುಪಿಎ 1ರ ಅವಧಿಯಲ್ಲಿ ನೋಡಿ. ಮಾಹಿತಿ ಹಕ್ಕು ಕಾಯ್ದೆ ಬಂದಿತು, ಶಿಕ್ಷಣ ಹಕ್ಕು ಕಾಯ್ದೆ ಬಂದಿತು, ಉದ್ಯೋಗ ಖಾತ್ರಿ ಜಾರಿಯಾಯಿತು. ಗ್ರಾಮೀಣ ಆರ್ಥಿಕತೆ ಮೇಲೆ ಉದ್ಯೋಗ ಖಾತ್ರಿ ಯೋಜನೆ ಬಗಳ ಒಳ್ಳೆಯ ಪರಿಣಾಮ ಬೀರಿದ್ದು ಮರೆಯುವಂತಿಲ್ಲ. ಅದರಿಂದ ಹಳ್ಳಿಯ ಜನ ಉದ್ಯೋಗ ಹುಡುಕಿಕೊಂಡು ಗುಳೇ ಹೋಗುವುದು ಕಡಿಮೆಯಾಯಿತು; ಜನರ ಮೂಲ ಆದಾಯ ಹೆಚ್ಚಿತು. ಎಲ್ಲಕ್ಕಿಂತ ಆಸಕ್ತಿಯ ವಿಷಯ ನಿಮಗೆ ಹೇಳುತ್ತೇನೆ. ನೀವು ಮೋದಿಯವರು ಗುಜರಾತಿನ ಸಿಎಂ ಆಗಿದ್ದಾಗ ಯಾವುದನ್ನೆಲ್ಲಾ ವಿರೋಧಿಸಿದ್ದರು ಎಂದು ಪಟ್ಟಿ ಮಾಡಿ, ಇಂದು ಅವರು ಪ್ರಧಾನಿ ಯಾಗಿರುವಾಗ ಈ ಹಿಂದೆ ವಿರೋಧಿಸಿದವುಗಳನ್ನೇ ಹೇಗೆಲ್ಲಾ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬುದನ್ನೂ ನೋಡಿ. ಆಗ ವಿದೇಶ ನೇರ ಬಂಡವಾಳದ ವಿರುದ್ಧ ಮಾತಾಡಿದ್ದರು, ಈಗ ಅದರ ಪರವಾಗಿ ಕೆಲಸ ಮಾಡಿದ್ದಾರೆ. ಜಿ ಎಸ್ ಟಿ ಬಗ್ಗೆ ಆಗ ಹೇಳಿದ್ದೇನು ಈಗ ಮಾಡಿದ್ದೇನು? ಹೀಗಾಗಿ ಜನರನ್ನು ಇವರಾಡುವ ಸುಳ್ಳುಮಾತುಗಳಿಂದ ರಕ್ಷಿಸಬೇಕಾಗಿದೆ.
ಟ್ರೂಥ್ ಇಂಡಿಯಾ ಕನ್ನಡ
More Articles
By the same author
Related Articles
From the same category
4 Comments
I like u kannihy bro, I am jaibhim wala
Kannaya is youth icon of India…
Reality is understood so late
Welcome kannayya