ನವದೆಹಲಿ: 2016ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ಸೈನ್ಯ ನಡೆಸಿದ್ದ ಸರ್ಜಿಕಲ್ ದಾಳಿಯ ನಾಯಕತ್ವ ವಹಿಸಿಕೊಂಡಿದ್ದ ಡಿ ಎಸ್ ಹೂಡಾ ಅವರು ಇಂದು ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್ ಗಾಂಧಿಯವರಿಗೆ ರಾಷ್ಟ್ರೀಯ ಸುರಕ್ಷತೆಯ ಕುರಿತು ವರದಿ ಸಲ್ಲಿಸಿದ್ದಾರೆ.
ನಿವೃತ್ತ ಸೇನಾಧಿಕಾರಿ ದೀಪೇಂದ್ರ ಸಿಂಗ್ ಹೂಡಾ ಫೆ.22ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಕೋರಿಕೆ ಮೇರೆಗೆ ರಾಷ್ಟ್ರದ ಭದ್ರತೆಯ ಕುರಿತು ರೂಪುರೇಷೆ ಸಿದ್ಧಪಡಿಸಲು ಭದ್ರತಾ ಕಾರ್ಯಪಡೆಯ (ಟಾಸ್ಕ್ ಫೋರ್ಸ್) ಜವಾಬ್ದಾರಿಯನ್ನು ಹೊತ್ತಿದ್ದರು.
ಹೂಡಾ ಅವರು ದೇಶದ ಪ್ರಮುಖ ರಕ್ಷಣಾ ತಜ್ಞರ ಸಲಹೆಗಳೊಂದಿಗೆ ಸಿದ್ಧಪಡಿಸಿ ನೀಡಿರುವ ವರದಿಯನ್ನು ಸ್ವೀಕರಿಸಿದ ರಾಹುಲ್ ಗಾಂಧಿ ಈ ವಿಷಯವನ್ನು ತಿಳಿಸಿದ್ದಾರೆ.
“ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ ನೇತೃತ್ವದ ತಜ್ಞರ ಸಮಿತಿಯು ಇಂದು ನನಗೆ ಭಾರತದ ರಾಷ್ಟ್ರೀಯ ಸುರಕ್ಷತೆಯ ಬಗ್ಗೆ ವಿಸ್ತೃತವಾದ ವರದಿಯನ್ನು ಸಲ್ಲಿಸಿರುತ್ತದೆ. ಈ ಸಮಗ್ರ ವರದಿಯನ್ನು ಮೊದಲು ಕಾಂಗ್ರೆಸ್ ಪಕ್ಷದೊಳಗೆ ನಾವು ಕೂಲಂಕುಶವಾಗಿ ಚರ್ಚಿಸಲಿದ್ದೇವೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಹೂಡಾ ಮತ್ತವರ ಸಮಿತಿಯ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.
Lt. General (Retd.) D S Hooda & his team have put together a comprehensive report on India's National Security, that he presented to me today.
This exhaustive report will at first be discussed & debated within the Congress party.
I thank him & the team for their effort. pic.twitter.com/ZebbSh3Dvj
— Rahul Gandhi (@RahulGandhi) March 31, 2019
ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿಬಂದ ನಂತರ ಮಾತನಾಡಿದ ಹೂಡಾ, “ಕಾಂಗ್ರೆಸ್ ಅಧ್ಯಕ್ಷರು ನನ್ನ ನೇತೃತ್ವದಲ್ಲಿ ರಾಷ್ಟ್ರೀಯ ಸುರಕ್ಷತಾ ಕಾರ್ಯಪಡೆಯನ್ನು ರಚಿಸಿದ್ದರು. ರಾಷ್ಟ್ರೀಯ ಸುರಕ್ಷತಾ ಕಾರ್ಯತಂತ್ರದ ದಸ್ತಾವೇಜನ್ನು ಸಿದ್ಧಪಡಿಸಿ ಇಂದು ನಾನು ಅವರಿಗೆ ಸಲ್ಲಿಸಿದ್ದೇನೆ” ಎಂದು ತಿಳಿಸಿದ್ದಾರೆ.
ನಿವೃತ್ತಿಗೆ ಮುನ್ನ ಉತ್ತರ ಪ್ರಾಂತ್ಯದ ಸೇನಾ ಕಮಾಂಡರ್ ಆಗಿದ್ದ ಡಿ.ಎಸ್.ಹೂಡಾ ಅವರ ನೇತೃತ್ವದಲ್ಲಿ ಭಾರತೀಯ ಸೇನೆಯು 2016ರ ಸೆಪ್ಟೆಂಬರ್ 29ರಂದು ನಿಯಂತ್ರಣಾ ರೇಖೆಯಾಚೆ ಏಳು ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದು ಉಗ್ರರು ನಡೆಸಿದ್ದ ಉರಿ ದಾಳಿಗೆ ಪ್ರತೀಕಾರವಾಗಿತ್ತು. 2016ರ ನವೆಂಬರ್ 30ರಂದು ಅವರು ಸೇವೆಯಿಂದ ನಿವೃತ್ತಿ ಹೊಂದಿದರು. ಮಾನವ ಹಕ್ಕುಗಳನ್ನು ಪ್ರತಿಪಾದಿಸುವ ಅವರು ಕಾಶ್ಮೀರದ ಕುರಿತಂತೆ ಆಡುವ ಮಾತುಗಳು ವಿಶೇಷ ಗಮನ ಸೆಳೆಯುತ್ತವೆ. ಕಳೆದ ಡಿಸೆಂಬರ್ ನಲ್ಲಿ ಚಂಡೀಗಢದ ಮಿಲಿಟರಿ ಸಾಹಿತ್ಯೋತ್ಸವದ ಚರ್ಚಾಕೂಟದಲ್ಲಿ ಭಾಗವಹಿಸಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಹೀಗೆ ಹೇಳಿದ್ದರು: “ಈಗ ಎಲ್ಲಾ ಮುಗಿದುಹೋದ ನಂತರ ನನಗೆ ಅನಿಸುತ್ತಿದೆ, ನಾವು (ಸರ್ಜಿಕಲ್ ದಾಳಿಗಳನ್ನು) ಗೌಪ್ಯವಾಗಿ ಉಳಿಸಿಕೊಂಡಿದ್ದರೆ ಒಳ್ಳೆಯದಿತ್ತು ಎಂದು”. ಅಲ್ಲದೆ ಸರ್ಜಿಕಲ್ ದಾಳಿಗಳು ಯಶಸ್ವಿಯಾದವೆಂಬ ಹರ್ಷೋನ್ಮಾದದಲ್ಲಿ ಪ್ರಾರಂಭಿಕವಾಗಿ ತೇಲಾಡುವುದು ಸಹಜವೇ ಆದರೂ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ನಿರಂತರವಾಗಿ ಅದೆ ರೀತಿಯ ಉನ್ಮಾದ ಬೇಕಾಗಿಲ್ಲ ಎಂದೂ ಹೇಳಿದ್ದರು.
ನಿವೃತ್ತ ಸೇನಾಧಿಕಾರಿ ಡಿ.ಎಸ್.ಹೂಡಾ ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ ಎಂಬ ಮಾತುಗಳು ಕಳೆದ ತಿಂಗಳು ಕೇಳಿಬಂದಿದ್ದಾಗ, ಅವರು ಸ್ಪಷ್ಟವಾಗಿ ಅದನ್ನು ನಿರಾಕರಿಸಿದ್ದರು.