ಬೆಂಗಳೂರು: “ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 1800 ಕೋಟಿ ರೂಪಾಯಿಗಳನ್ನು ಬಿಜೆಪಿಯ ಹೈಕಮಾಂಡ್ ಗೆ ಕೊಟ್ಟಿದ್ದಾರೆ. ಹಿರಿಯ ಬಿಜೆಪಿ ನಾಯಕರಿಗೆ ತಲಾ 150 ಕೋಟಿ ರೂಪಾಯಿ ಕೊಟ್ಟಿದ್ದಾರೆ. ನಿಮ್ಮದೇ ರಾಜ್ಯದ ಜನರ ಹಣ ಇದು. ರೈತರ ಸಾಲ ಮನ್ನಾ ಮಾಡಿ ಎಂದರೆ ಹಣ ಇಲ್ಲ ಎಂದು ಹೇಳುವ ನರೇಂದ್ರ ಮೋದಿಯವರು ಕೆಲವೇ ಉದ್ಯಮಿಗಳ 3.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇದಕ್ಕೆ ಎಲ್ಲಿಂದ ಬಂತು ಹಣ?”
ಬೆಂಗಳೂರಿನ ನೆಲಮಂಗಲದಲ್ಲಿ ಭಾನುವಾರ ನಡೆದ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮೈತ್ರಿ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ಮುಖಂಡರನ್ನು ತರಾಟೆಗೆ ತೆಗೆದುಕೊಂಡದ್ದು ಹೀಗೆ.
“ರೈತರ ಸಾಲ ಮನ್ನಾ ಮಾಡಲು ಹಣ ಇಲ್ಲ ಎಂದು ಬಿಜೆಪಿ ಹೇಳುತ್ತದೆ. ಕರ್ನಾಟಕದಲ್ಲಿ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿದರು. ಅದಕ್ಕೆ ಹಣ ಎಲ್ಲಿತ್ತು? ಮಧ್ಯಪ್ರದೇಶ, ರಾಜಸ್ತಾನ, ಪಂಜಾಬ್, ಛತ್ತೀಸ್ ಗಢಗಳಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರೈತರ ಸಾಲಮನ್ನಾ ಮಾಡಿದೆ. ಆ ಹಣ ಎಲ್ಲಿಂದ ಬಂತು?” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
“ಮೋದಿ ಅವರು ಶ್ರೀಮಂತರಿಗೆ ಹಣ ಕೊಡಲು ಸಾಧ್ಯ ಎನ್ನುವುದಾದರೆ, ಕಾಂಗ್ರೆಸ್ ಪಕ್ಷ ಭಾರತದ ಬಡವರು, ರೈತರಿಗೆ ಹಣ ನೀಡಲು ತೀರ್ಮಾನಿಸಿದೆ. ನಿಮಗೆ ಸರಿ ಎನಿಸಿದ್ದನ್ನು ನೀವು ಮಾಡಿ, ನಮಗೆ ಸರಿ ಎನಿಸಿದ್ದನ್ನು ನಾವು ಮಾಡುತ್ತೇವೆ. ನಾವು ಅಧಿಕಾರಕ್ಕೆ ಬಂದರೆ, ಈಗಾಗಲೇ ಕಾಂಗ್ರೆಸ್ ಘೋಷಿಸಿರುವ ನ್ಯಾಯ್ ಯೋಜನೆ ಜಾರಿಗೊಳಿಸಿ ದೇಶದ 5 ಕೋಟಿ ಬಡ ಕುಟುಂಬಗಳ 20 ಕೋಟಿ ಜನರ ಖಾತೆಗಳಿಗೆ ವರ್ಷಕ್ಕೆ ತಲಾ 72,000 ರೂಪಾಯಿ ಹಾಕಲಿದ್ದೇವೆ. ಮೋದಿ ಆಶ್ವಾಸನೆ ನೀಡಿದ್ದಂತೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕಲು ಸಾಧ್ಯವೇ ಇಲ್ಲ. ಆದರೆ, 12 ಸಾವಿರಕ್ಕಿಂತ ಕಡಿಮೆ ಆದಾಯ ಇರುವ ಭಾರತದ ಶೇಕಡಾ 20 ಭಾಗದ ಬಡವರಿಗೆ ತಲಾ 72 ಸಾವಿರ ಹಾಕಲು ಸಾಧ್ಯವಿದೆ. ಅದನ್ನು ನಾವು ಮಾಡಿ ತೋರಿಸುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದರು.

“ನಾವು ದೇಶದ ಶೇಕಡಾ 20 ಭಾಗದ ಬಡವರ ಬಡತನದ ವಿರುದ್ಧ ನಡೆಸಲಿರುವ ಸರ್ಜಿಕಲ್ ಸ್ಟ್ರೈಕ್ ಇದಾಗಿರುತ್ತದೆ” ಎಂದೂ ರಾಹುಲ್ ಗಾಂಧಿ ಹೇಳಿದರು. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ನಡೆಸುತ್ತಿರು ರೀತಿಯಲ್ಲೇ ದೆಹಲಿಯಲ್ಲೂ ಮೈತ್ರಿ ಪಕ್ಷಗಳು ಬಿಜೆಪಿಯನ್ನು ಸೋಲಿಸಲು ಶ್ರಮಿಸುತ್ತಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡ ಅವರು ಮಾತನಾಡಿ, “ಸೋನಿಯಾಗಾಂಧಿ ಹಾಗೂ ರಾಹುಲ್ ಅವರ ಸೂಚನೆ ಮೇರೆಗೆ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚನೆ ತೀರ್ಮಾನ ಮಾಡಿದ್ದೆವು. ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ರಾಷ್ಟ್ರದ 21 ಪ್ರಾದೇಶಿಕ ಪಕ್ಷಗಳ ಮುಖಂಡರು ಸೇರಿದ್ದೆವು. ಮೋದಿ ಅವರಿಗೆ ಇದನ್ನು ಸಹಿಸಿಕೊಳ್ಳಲು ಆಗಲಿಲ್ಲ, ಇದರಿಂದ ಅವರು ಈ ಮಹಾಮೈತ್ರಿಯನ್ನು ಕೆಟ್ಟ ರೀತಿ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಭ್ರಷ್ಟರ ಕೂಟ ಎಂಬಂತೆ ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಆದರೆ ಇದು ಸುಳ್ಳು ಎಂದು ತೋರಿಸಲಿದ್ದೇವೆ” ಎಂದು ಹೇಳಿದರು.
“ರಾಹುಲ್ ನಾಯಕತ್ವದಲ್ಲಿ ಕರ್ನಾಟಕದಿಂದಲೇ ಮೈತ್ರಿ ಸರ್ಕಾರ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ದೇಶಕ್ಕೆ ಮಾದರಿಯಾಗುವಂತೆ ರಚಿಸಿ ತೋರಿಸುತ್ತೇವೆ” ಎಂದೂ ಮಾಜಿ ಪ್ರಧಾನಿ ಹೇಳಿದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ದೇವೇಗೌಡರ ಸೂಚನೆಯಂತೆ ಈ ಬೃಹತ್ ಮೈತ್ರಿ ಸಮಾವೇಶ ಆಯೋಜನೆಗೊಂಡಿದೆ.ಕೋಮುವಾದಿ ಪಕ್ಷದ ಸೋಲಿಗಾಗಿ ನಮ್ಮ ಎಲ್ಲಾ ಭಿನ್ನಾಭಿಪ್ರಾಯ ಮರೆತು ಕೋಮುವಾದಿ ಬಿಜೆಪಿಯನ್ನು ಮಣಿಸಲು ಒಟ್ಟಾಗಿದ್ದೇವೆ” ಎಂದರು.

ಮೋದಿ ಸರ್ಕಾರದ ಮೇಲೆ ಟೀಕಾಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ, “5 ವರ್ಷಗಳ ಅವಧಿಯಲ್ಲಿ ಮೋದಿ ದೇಶವನ್ನು ಹಾಳು ಮಾಡಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಬಹಳ ಹದಗೆಟ್ಟಿದೆ. ನಮ್ಮ ರೈತರು ಕಣ್ಣಲ್ಲೇ ಕೈ ತೊಳೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಯುವಕರು ಉದ್ಯೋಗಕ್ಕಾಗಿ ಅಲೆಯುತ್ತಿದ್ದಾರೆ. ಬಡವರು, ಹಿಂದುಳಿದರವು, ಅಲ್ಪಸಂಖ್ಯಾತರು ಕನಿಷ್ಠ ಆದಾಯಕ್ಕೂ ಪರದಾಡುವಂತಾಗಿದೆ” ಎಂದರು. “ಭಾರತದ ಜನ ರಾಜಕೀಯವಾಗಿ ಪ್ರೌಢರು, ಬುದ್ಧಿವಂತರು. ನಮ್ಮ ಸಂವಿಧಾನಕ್ಕೆ ಅಪಾಯ ಬಂದಾಗ ಜನ ಸಿಡಿದು ಏಳುತ್ತಾರೆ, ಸಂವಿಧಾನವನ್ನು ಉಳಿಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.
ಮೈತ್ರಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ, “ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ಜಂಟಿ ನಾಯಕತ್ವದಲ್ಲಿ ಇವತ್ತಿನಿಂದ 28 ಲೋಕಸಭಾ ಚುನಾವಣೆಗೆ ಅಧಿಕೃತ ಪ್ರಚಾರ ಆರಂಭವಾಗಲಿದೆ” ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯನ್ನು ಮಹಾನ್ ಸುಳ್ಳುಗಾರ ಎಂದು ಜರಿದ ಕುಮಾರಸ್ವಾಮಿ, “ರಾಜ್ಯದ ಮೈತ್ರಿ ಸರ್ಕಾರ ರೈತರ ಸಾಲಾಮನ್ನಾ ಮಾಡುವ ನಿರ್ಧಾರ ಕೈಗೊಂಡು, 45 ಸಾವಿರ ಕೋಟಿ ಸಾಲಾಮನ್ನಾ ನಿರ್ಧಾರ ಮಾಡಿ ಜಾರಿಗೊಳಿಸಿದ್ದೇವೆ. ಆದರೆ ಪ್ರಧಾನಿ ಮೋದಿ ಈ ಸಾಲಮನ್ನಾವನ್ನು ಇದನ್ನು ಯಾವುದೇ ಉಪಯೋಗವಿಲ್ಲದ್ದು, ಮೈತ್ರಿ ಸರ್ಕಾರ ಜನತೆಗೆ ಲಾಲಿಪಾಪ್ ಕೊಟ್ಟಿದೆ ಎಂದು ಹೇಳಿದ್ದರು. ತಾವು ಪ್ರಧಾನಿಯಾಗಿ ರೈತರಿಗೆ ಏನು ಮಾಡಿದ್ದಾರೆ ಎಂದು ಅವರು ಹೇಳಲೇ ಇಲ್ಲ” ಎಂದು ಟೀಕಿಸಿದರು.
ಪ್ರಧಾನಿ ಮೋದಿ ಘೋಷಿಸಿದ ರೈತರಿಗೆ ನಾಲ್ಕು ತಿಂಗಳಿಗೆ 2000 ರೂಗಳಂತೆ 6000 ಹಣವನ್ನು ಖಾತೆಗೆ ಹಾಕುವ ಕೊಡುವ ಕಿಸಾನ್ ಸಮ್ಮಾನ್ ಯೋಜನೆ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಕುಮಾರ ಸ್ವಾಮಿ, ನಾವು ಕೇಂದ್ರ ಸರ್ಕಾರಕ್ಕೆ 8 ಲಕ್ಷ ರೈತರ ಮಾಹಿತಿ ಕಳಿಸಿದ್ದೇವೆ, ಆದರೆ ರಾಜ್ಯದ ಕೇವಲ 17 (ಹದಿನೇಳು) ರೈತರಿಗೆ ಹಣ ಬಿಡುಗಡೆಯಾಗಿದೆ, ಅದರಲ್ಲಿ ಕೇವಲ 6 (ಆರು) ಜನರಿಗೆ ಹಣ ಸಿಕ್ಕಿದೆ” ಎಂದು ತಿಳಿಸಿದರು.
ಇನ್ನಿತರ ಯೋಜನೆಗಳ ವಿಷಯದಲ್ಲಿಯೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, “ಉತ್ತರ ಕರ್ನಾಟಕ ಜನತೆಗೆ ಮಹದಾಯಿ ನೀರನ್ನು ಕೊಡಲು ರಾಜ್ಯ ಸರ್ಕಾರ ಸಿದ್ದವಾಗಿದೆ, ಆದರೆ, ಮೋದಿ ಸರ್ಕಾರ ಗೆಜೆಡ್ ನೋಟಿಫಿಕೇಷನ್ ಗೆ ಸಹಿಹಾಕಲು ಸಿದ್ಧವಿಲ್ಲ ; ಆಯುಷ್ಮಾನ್ ಭಾರತ್ ಯೋಜನೆಯಡಿ ರಾಜ್ಯದಿಂದ 130 ಕೋಟಿ ಬಿಡುಗಡೆ ಮಾಡಿದರೆ, ಕೇಂದ್ರದಿಂದ ಕೇವಲ 22 ಕೋಟಿ ಬಿಡುಗಡೆಯಾಗಿದೆ” ಎಂದರು.
ಯುವಕರಿಗೆ ಮೋದಿ ಮೇಲಿನ ವ್ಯಾಮೋಹವನ್ನು ತೊರೆಯಲು ಕುಮಾರಸ್ವಾಮಿ ಮನವಿ ಮಾಡಿದರು.
ಸಮಾವೇಶವನ್ನು ಉದ್ದೇಶಿ ಮಾತನಾಡಿದ ನಾಲ್ಕೂ ಮುಖಂಡರೂ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಘರ್ಷಣೆ ಮಾಡಿಕೊಳ್ಳದೇ ಸಹಕಾರದಿಂದ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯದರ್ಶಿ ಈಶ್ವರಪ್ಪ, ಸಚಿವ ಡಿ. ಕೆ ಶಿವಕುಮಾರ್ ಸೇರಿದಂತೆ ಮೈತ್ರಿ ಸರ್ಕಾರದ ಹಲವು ಮುಖಂಡರು ಹಾಜರಿದ್ದರು.
More Articles
By the same author
Related Articles
From the same category