ಪ್ರಧಾನಿ ನರೇಂದ್ರ ಮೋದಿ ಮತ್ತೆ ಆಡಳಿತಕ್ಕೆ ಬರದಿದ್ದರೆ ದೇಶಕ್ಕೆ ಗಂಡಾತರ ಕಾದಿದೆ ಎಂದು ನಟಿ, ರಾಜಕಾರಣಿ ಹೇಮಮಾಲಿನಿ ಹೇಳಿಕೆ ಕೊಟ್ಟಿದ್ದಾರೆ. ದೇಶಕ್ಕೆ ಒಳಿತು ಮಾಡುವ ಶಕ್ತಿ ಇರುವುದು ಮೋದಿ ಅವರಿಗೆ ಮಾತ್ರ ಎಂದೂ ಹೇಳಿದ್ದಾರೆ.
ಎರಡನೇ ಬಾರಿ ಉತ್ತರಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಹಾಲಿ ಸಂಸದೆ ಹೇಮಮಾಲಿನಿ, ‘ಯಾರೂ ಊಹಿಸಲು ಸಾಧ್ಯವಾಗದಂತೆ ಪ್ರಧಾನಿ ಮೋದಿ ಅವರು ದೇಶದಲ್ಲಿ ಭ್ರಷ್ಟಾಚಾರವನ್ನು ತೊಲಗಿಸಿದ್ದಾರೆ’ಎಂದಿದ್ದಾರೆ.
‘ಬೇರೆ ಯಾವುದೇ ಆಯ್ಕೆ ಇಲ್ಲ. ಮೋದಿ ಮತ್ತೆ ಆಡಳಿತಕ್ಕೆ ಬರಬೇಕು. ಬೇರೆ ಯಾರಾದರೂ ಗೆದ್ದರೆ ಅದು ದೇಶಕ್ಕೆ ಅಪಾಯಕಾರಿ. ಆದ್ದರಿಂದಲೇ ನಾವೆಲ್ಲಾ (ಬಿಜೆಪಿ ಸದಸ್ಯರು) ಮೋದಿ ಅವರನ್ನು ಗೆಲ್ಲಿಸಲು ಶ್ರಮಪಡುತ್ತಿದ್ದೇವೆ ‘ಎಂದು ಸಂದರ್ಶನವೊಂದರಲ್ಲಿ ಹೇಮಮಾಲಿನಿ ಹೇಳಿದ್ದಾರೆ.
‘ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಹಾಗೂ ಹಲವು ಯೋಜನೆಗಳಿಗೆ ಮುಂದಾಳತ್ವ ವಹಿಸಿದೆ. ಹಿಂದಿನ ಸರ್ಕಾರದ ಕಾರ್ಯನಿರ್ವಹಣೆ ಇಷ್ಟು ಯಶಸ್ವಿಯಾಗಿರಲಿಲ್ಲ’ ಎಂದು ಹೇಳಿದ್ದಾರೆ.
‘ಪ್ರಧಾನಿ ಮಾಡುವ ಎಲ್ಲ ಕಾರ್ಯಗಳ ಬಗ್ಗೆಯೂ ವಿರೋಧ ಪಕ್ಷಗಳು ಲೇವಡಿ ಮಾಡುವುದು ನೋವಿನ ಸಂಗತಿ. ಅವರು ಏನೇ ಮಾಡಿದ್ದರೂ ಅದು ದೇಶಕ್ಕೆ ಒಳ್ಳೆಯದನ್ನೇ ಮಾಡಿದ್ದಾರೇ, ಅದನ್ನೂ ಧೈ ರ್ಯವಾಗಿ ಮಾಡಿದ್ದಾರೆ’ ಎಂದು ಪ್ರಧಾನಿ ಕಾರ್ಯವನ್ನು ಶ್ಲಾಘಿಸಿದರು.
‘ನೀವು ಏಕೆ ನಿಮ್ಮ ಹೆಸರಿನ ಮುಂದೆ ಚೌಕಿದಾರ್ ಎಂಬ ಪದವನ್ನು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಹೇಮಮಾಲಿನಿ “ನಾನು ಚೌಕಿಧಾರಿಣಿ” ಎಂದು ಉತ್ತರಿಸಿದರು.
‘ನಮ್ಮ ಪ್ರಧಾನಿ ಚೌಕಿದಾರ್. ಖಂಡಿತವಾಗಿಯೂ ನಾನು ಚೌಕಿಧಾರಿಣಿಯೇ ಮತ್ತು ನಾವೆಲ್ಲಾ ಒಟ್ಟಾಗಿ ಅವರಿಗೆ ಸಹಕಾರ ನೀಡುತ್ತಿದ್ದೇವೆ. ಪ್ರಧಾನಿಗಳು ದೇಶದಲ್ಲಿ ಭ್ರಷ್ಟಾಚಾರ ಇಲ್ಲದಂತೆ ಮಾಡಿದ್ದಾರೆ, ಆದ್ದರಿಂದಲೇ ಪ್ರತಿಪಕ್ಷಗಳು ಹತಾಶೆಗೊಳಗಾಗಿದೆ’ ಎಂದರು.
ಜನರು ತಮಗೆ ಮತ ಹಾಕುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಥುರಾ ಜನರು ನನಗೆ ಮತ ಹಾಕುತ್ತಾರೆ ಕಾರಣ ಮೋದಿ ನಮ್ಮ ನಾಯಕ. ಅವರನ್ನು ಮತ್ತೆ ಅಧಿಕಾರಕ್ಕೆ ತರಲು ನಾನು ಸಾಕಷ್ಟು ಶ್ರಮ ಪಡುತ್ತೇನೆ ಮತ್ತು ಪಕ್ಷದ ಪ್ರತಿ ಸಂಸದರೂ ಕಷ್ಟಪಡುತ್ತಿದ್ದಾರೆ’.
‘ನಾನು ಕೇವಲ ಬಾಲಿವುಡ್ ನಟಿ ಎಂಬ ಕಾರಣಕ್ಕೆ ನನಗೆ ಮತ ಹಾಕುವುದಿಲ್ಲ. ನಾನು ಜನರ ಮಧ್ಯೆ ಇರಬೇಕು ಮತ್ತು ಮೋದಿ ಮಾಡಿರುವ ಉಜ್ವಲ, ಆಯುಷ್ಮಾನ್ ಭಾರತ್, ಶೌಚಾಲಯಗಳ ನಿರ್ಮಾಣದಂಥ ಯೋಜನೆಗಳನ್ನು ಜನರಿಗೆ ತಿಳಿಸಬೇಕಿದೆ’. ಎಂದು ಹೇಳಿದರು.
ರಾಜಕೀಯಕ್ಕೆ ಪ್ರಿಯಾಂಕ ಗಾಂಧಿ ಅವರು ಬರುತ್ತಿರುವುದು ಕಾಂಗ್ರೆಸ್ ಗೆ ಲಾಭವಾಗಲಿದೆಯೇ ಎಂಬ ಪ್ರಶ್ನೆಗೆ ಸಮಂಜಸ ಉತ್ತರ ಕೊಡದೇ ಜಾರಿಕೊಂಡ ಅವರು, ‘ನಾನು ಈ ಬಗ್ಗೆ ಪ್ರತಿಕ್ರಿಯಿಸಲು ಇಚ್ಛೆ ಪಡುವುದಿಲ್ಲ. ನನಗೆ ಸಂಬಂಧಿಸಿದ ಪ್ರಶ್ನೆಗಳಿದ್ದರೆ ಕೇಳಿ. ನನ್ನ ಕ್ಷೇತ್ರದಲ್ಲಿ ಎಲ್ಲರೂ ಮೋದಿಯನ್ನು ಇಷ್ಟಪಡುತ್ತಾರೆ ಮತ್ತು ಎಲ್ಲರೂ ಅವರಿಗೇ ಮತಹಾಕುತ್ತಾರೆ’ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಮಥುರಾ ಕ್ಷೇತ್ರದಿಂದ ಕಳೆದ ವಾರವಷ್ಟೇ ನಾಮಪತ್ರ ಸಲ್ಲಿಸಿದ ಬಿಜೆಪಿ ಸಂಸದೆ, ಇದೇ ಕೊನೆಯ ಬಾರಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. ಅವರ ವಿರುದ್ಧ ರಾಷ್ಟ್ರೀಯ ಲೋಕ ದಳದ ಕುನ್ವರ್ ನರೇಂದ್ರ ಸಿಂಗ್ ವಿರುದ್ಧ ಸೆಣೆಸಲಿದ್ದಾರೆ.
ಏಪ್ರಿಲ್ 18ರಂದು ಎರಡನೇ ಹಂತದಲ್ಲಿ ಮಥುರಾದಲ್ಲಿ ಚುನಾವಣೆ ನಡೆಯಲಿದ್ದು, ಮೇ 23 ಮತಎಣಿಕೆ ನಡೆಯಲಿದೆ.