ಅಮಿತ್ ಶಾ ಮತ್ತು ಮೋದಿಯವರ ವಿರುದ್ಧ ಬಹಿರಂಗವಾಗಿಯೇ ಸಿಡಿದೆದ್ದ ಕಮಲದ ಪಡೆಯ ಹಿರಿಯ ನಾಯಕರ ಪೈಕಿ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಕೂಡ ಒಬ್ಬರು. ಎರಡು ದಿನಗಳ ಹಿಂದೆ ಶತ್ರುಘ್ನ ಸಿನ್ಹಾರವರು ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ, ತಾವು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರುವುದಾಗಿ ಘೋಷಿಸಿದ್ದರು. ತಂದೆಯ ಈ ನಿರ್ಧಾರವನ್ನು ಬೆಂಬಲಿಸುವುದಾಗಿ ಶತ್ರುಘ್ನ ಸಿನ್ಹಾರವರ ಪುತ್ರಿ ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.
ತಂದೆ ಶತ್ರುಘ್ನ ಸಿನ್ಹಾರವರು ಭಾರತೀಯ ಜನತಾ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರುವ ನಿರ್ಧಾರವನ್ನು ಸಮರ್ಥಿಸಿರುವ ಬಾಲಿವುಡ್ ತಾರೆ ಸೋನಾಕ್ಷಿ ಸಿನ್ಹಾ, “ಈ ಕೆಲಸವನ್ನು ಅವರು ಇನ್ನೂ ಮೊದಲೇ ಮಾಡಬೇಕಿತ್ತು” ಎಂದಿದ್ದಾರೆ. HT India’s Most Stylish 2019 awards ಸಮಾರಂಭದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಸೇರುವ ತೀರ್ಮಾನವನ್ನು ಅವರೇ ಕೈಗೊಂಡಿದ್ದು. ಜಯಪ್ರಕಾಶ್ ನಾರಾಯಣ್ ಜಿ, ಅಟಲ್ ಜಿ, ಅಡ್ವಾನಿ ಜಿ ಇವರುಗಳ ಕಾಲದಿಂದಲೂ ಪಕ್ಷದ ಸದಸ್ಯನಾಗಿದ್ದ ನನ್ನ ತಂದೆ ಪಕ್ಷದೊಳಗೆ ಅಪಾರ ಗೌರವ ಸಂಪಾದಿಸಿಕೊಂಡಿದ್ದಾರೆ. ಇವರೆಲ್ಲರಿಗೆ ಸಲ್ಲಬೇಕಾದ ಗೌರವವನ್ನ ಕೊಟ್ಟೇ ಇಲ್ಲ ಎಂಬುದು ನನ್ನ ಭಾವನೆ. ನನ್ನ ತಂದೆ ಈ ನಿರ್ಧಾರವನ್ನು ಕೊಂಚ ತಡವಾಗಿ ಕೈಗೊಂಡಿದ್ದಾರೆ, ಅವರು ಎಂದೋ ಇದನ್ನು ಮಾಡಬೇಕಿತ್ತು” ಎಂದು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
2004 ಮತ್ತು 2009ರಲ್ಲಿ ಕಮಲದ ಗುರುತಿನಿಂದ ಗೆದ್ದ ಶತ್ರುಘ್ನ ಸಿನ್ಹಾರವರು ಲೋಕಸಭೆಯಲ್ಲಿ ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಇತ್ತೀಚೆಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಈ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿತ್ತು. ಅಲ್ಲದೆ ಸಿನ್ಹಾ ಅವರು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರುಗಳ ವಿರುದ್ಧ ಸಾಕಷ್ಟು ಸಂದರ್ಭಗಳಲ್ಲಿ ಬಹಿರಂಗವಾಗಿಯೇ ಟೀಕಾಪ್ರಹಾರ ಮಾಡಿ ಪಕ್ಷವನ್ನು ಪೇಚಿಗೆ ಸಿಲುಕಿಸಿದ್ದರು. 2014ರಲ್ಲಿ ತಮಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡದಿದ್ದಾಗ ಬಿಜೆಪಿ ನಾಯಕತ್ವವನ್ನು ಪ್ರಶ್ನಿಸಿದ್ದರು. ಮೋದಿ ಸರ್ಕಾರ ಕೈಗೊಂಡ ನೀತಿಗಳಾದ ನೋಟು ನಿಷೇಧ, ಪಾಕಿಸ್ತಾನದ ಮೇಲಿನ ವಾಯು ದಾಳಿಗಳ ಬಗ್ಗೆ ಕೂಡ ಸಿನ್ಹಾ ವಿರೋಧ ವ್ಯಕ್ತಪಡಿಸಿದ್ದರು. ದೇಶದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಅಲ್ಪಸಂಖ್ಯಾತರ, ದಲಿತರ ಮೇಲೆ ಸಂಘ ಪರಿವಾರ ನಡೆಸುತ್ತಿರುವ ಹಲ್ಲೆಗಳ ವಿರುದ್ಧ ಧ್ವನಿಯೆತ್ತಿದ್ದರು. ನಾಡಿನಲ್ಲಿ ಹಾಡಹಗಲೇ ವಿಚಾರವಾದಿಗಳ ಹತ್ಯೆಗಳು ನಡೆದಾಗಲೂ ಅವುಗಳನ್ನು ಖಂಡಿಸಿ ಬಿಜೆಪಿಯ ಇತರ ನಾಯಕರಿಗಿಂತ ಭಿನ್ನ ಧ್ವನಿಯಲ್ಲಿ ಮಾತನಾಡಿದ್ದರು. ಹಿರಿಯ ನಾಯಕ ಅಡ್ವಾನಿಯವರನ್ನು ಅಮಿತ್ ಶಾ – ಮೋದಿಗಳ ಬಿಜೆಪಿ ಮೂಲೆಗುಂಪು ಮಾಡಿದ್ದನ್ನು ಶತ್ರುಘ್ನ ಸಿನ್ಹಾ ತೀವ್ರವಾಗಿ ಪ್ರತಿರೋಧಿಸಿದ್ದರು.
“ನಿಮ್ಮ ಸುತ್ತಮುತ್ತ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂದು ನಿಮಗೆ ಅನಿಸಿದರೆ, ಬದಲಾವಣೆಗೆ ಹಿಂಜರಿಯಬಾರದು. ಅದನ್ನೇ ಅವರೂ (ಶತ್ರುಘ್ನ ಸಿನ್ಹಾ) ಮಾಡಿದ್ದು ಅಷ್ಟೇ.” ಎಂದು ಸಿನ್ಹಾ ಪುತ್ರಿ ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.. “ಕಾಂಗ್ರೆಸ್ ಜೊತೆ ಸೇರುವುದರೊಂದಿಗೆ ಅವರು ಬಹಳಷ್ಟು ಒಳ್ಳೆಯ ಕೆಲಸಕಾರ್ಯಗಳನ್ನು ಮಾಡಲು ಸಾಧ್ಯವಿದೆ ಮತ್ತು ಅವರನ್ನು ಅಲ್ಲಿ ಹತ್ತಿಕ್ಕುವುದಿಲ್ಲ ಎಂಬ ವಿಶ್ವಾಸ ನನಗಿದೆ” ಎಂದು ಸೋನಾಕ್ಷಿ ವರದಿಗಾರರಿಗೆ ತಿಳಿಸಿದ್ದಾರೆ.
ಅಮಿತ್ ಶಾ – ಮೋದಿಯ ಬಿಜೆಪಿಯೊಳಗಿನ ವಿಪಕ್ಷ ನಾಯಕ ಎನ್ನುವಂತಿದ್ದ ಶತ್ರುಘ್ನ ಸಿನ್ಹಾ ಬಿಜೆಪಿಗೆ ಅಂತಿಮವಾಗಿ ಗುಡ್ ಬೈ ಹೇಳಿ ಗುರುವಾರ ಟ್ವೀಟ್ ಮಾಡಿದ್ದಾರೆ. “ನೋವಿನಿಂದಲೇ… ಬಿಜೆಪಿಯಿಂದ ಹೊರ ನಡೆಯುತ್ತಿದ್ದೇನೆ. ನನ್ನ ಆತ್ಮೀಯ ಗೆಳೆಯ ಲಾಲು ಯಾದವ್ ಮತ್ತು ನಿಜವಾದ ರಾಷ್ಟ್ರಶಿಲ್ಪಿಗಳ ಕುಟುಂಬವಾದ ನೆಹರು ಗಾಂಧಿ ಕುಟುಂಬದ ಅಪೇಕ್ಷಿತ ಜನಪ್ರಿಯ ನಾಯಕ – ಇವರ ಸಮರ್ಥ ನಾಯಕತ್ವದಲ್ಲಿ ಉತ್ತಮ ಹಾದಿಯಲ್ಲಿ ನಡೆಯುವ ವಿಶ್ವಾಸ ಹೊಂದಿದ್ದೇನೆ…” ಎಂದು ಆರ್ ಜೆ ಡಿ – ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಯನ್ನು ಶತ್ರುಘ್ನ ಸಿನ್ಹಾ ಹೊಗಳಿದ್ದಾರೆ.
ಶುಕ್ರವಾರ ಮತ್ತೊಂದು ಟ್ವೀಟ್ ನಲ್ಲಿ ರಾಹುಲ್ ಗಾಂಧಿಯವರ ಜೊತೆಗಿನ ತಮ್ಮ ಫೋಟೊಗಳನ್ನು ಹಂಚಿಕೊಳ್ಳುತ್ತ, ಅವರನ್ನು, “ರಾಷ್ಟ್ರದ ಭರವಸೆ” ಎಂದು ಬಣ್ಣಿಸಿದ್ದಾರೆ.
“ನನ್ನ ಆತ್ಮೀಯ ಗೆಳೆಯ ಲಾಲು ಯಾದವ್ ಅವರ ಸಮ್ಮತಿಯೊಂದಿಗೆ ಏನೋ ಅದ್ಭುತ ಸಂಭವಿಸಿದೆ. ಜೈ ಬಿಹಾರ್ ಜೈ ಹಿಂದ್! ಒಂದು ಹೊಸ ದಿಕ್ಕು, ಒಬ್ಬ ಹೊಸ ಸ್ನೇಹಿತ, ಒಂದು ಹೊಸ ನಾಯಕತ್ವ… ದೇವರು ಒಳಿತು ಮಾಡಲಿ… ರಾಹುಲ್ ಗಾಂಧಿ, ರಾಷ್ಟ್ರದ ಭರವಸೆ”
“ಇದೀಗ ಭಾರತೀಯ ಜನತಾ ಪಕ್ಷದಲ್ಲಿ ಸರ್ವಾಧಿಕಾರ ನಡೆಯುತ್ತಿದೆ, ಆದ್ದರಿಂದ ನಾನು ಆ ಪಕ್ಷವನ್ನು ತೊರೆಯುತ್ತಿದ್ದೇನೆ. ದೇಶದ ಹಿತಕ್ಕೋಸ್ಕರ ನಾನು ಈಗ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದೇನೆ.” ಎಂದು ಶತ್ರುಘ್ನ ಸಿನ್ಹಾ ಬಿಜೆಪಿ ಬಿಡುವ ಮುನ್ನ ಹೇಳಿಕೆ ನೀಡಿದ್ದಾರೆ. ಅವರು ಏಪ್ರಿಲ್ 6ರಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಮೊದಲು ಎರಡು ಬಾರಿ ಅವರು ಪ್ರತಿನಿಧಿಸಿದ್ದ ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಮಹಾಮೈತ್ರಿಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಮತ್ತೊಮ್ಮೆ ಶತ್ರುಘ್ನ ಸಿನ್ಹಾ ಲೋಕಸಭೆಯೊಳಗೆ ಕಾಲಿಡುವರೇ? ಈಗ ಕಾಂಗ್ರೆಸ್ ಪಕ್ಷದ ನಾಯಕರಾಗಿ…
(ಎಎನ್ಐ ಮತ್ತು ಇತರ ಸುದ್ದಿಮೂಲಗಳಿಂದ)