ಕಳೆದ ಕೆಲವಾರು ದಿನಗಳಿಂದ ಕೇಳಿ ಬರುತ್ತಿದ್ದು, ಅಂತೂ ಇಂತೂ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಕಾಂಗ್ರೆಸ್ ಆಧ್ಯಕ್ಷ ರಾಹುಲ್ ಗಾಂಧಿ ಅಂತಿಮವಾಗಿ ತಮ್ಮ ಸಾಂಪ್ರದಾಯಿಕ ಕ್ಷೇತ್ರವಾದ ಅಮೇಥಿ ಅಲ್ಲದೇ ಎರಡನೆಯ ಕ್ಷೇತ್ರವಾಗಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರವನ್ನೂ ಆರಿಸಿಕೊಂಡಿದ್ದಾರೆ.
ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಎ.ಕೆ.ಆಂಟನಿ ಹಾಗೂ ಕಾಂಗ್ರೆಸ್ ವಕ್ತಾರ ಆರ್ ಎಸ್ ಸುರ್ಜೇವಾಲಾ ಭಾನುವಾರ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಘೋಷಿಸಿದ್ದಾರೆ.
ಕೇರಳದ ಕೋಳಿಕ್ಕೋಡ್, ವಯನಾಡ್ ಮತ್ತು ಮಲ್ಲಪುರಂ –ಈ ಮೂರು ಜಿಲ್ಲೆಗಳ ಏಳು ವಿಧಾನಸಭಾ ಕ್ಷೇತ್ರಗಳನ್ನು ವಯನಾಡ್ ಲೋಕಸಭಾ ಕ್ಷೇತ್ರ ಒಳಗೊಂಡಿದೆ. 2009ರಲ್ಲಿ ರಚನೆಯಾದ ಈ ಕ್ಷೇತ್ರವನ್ನು 2009 ಮತ್ತು 2014ರಲ್ಲಿ ಕಾಂಗ್ರೆಸ್ ನಾಯಕ ಎಂ.ಐ. ಶಾನವಾಸ್ ಅವರು ಪ್ರತಿನಿಧಿಸಿದ್ದರು. ನವೆಂಬರ್, 2018ರಲ್ಲಿ ಶಾನವಾಸ್ ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದರು. ನಂತರ ಉಪಚುನಾಣೆ ನಡೆದಿರಲಿಲ್ಲ.
“ದಕ್ಷಿಣ ಭಾರತದ ಮೂರು ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಹಾಗೂ ತಮಿಳು ನಾಡು ರಾಜ್ಯಗಳ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಜೀ ಯವರನ್ನು ದಕ್ಷಿಣ ಭಾರತದಿಂದಲೂ ಸ್ಪರ್ಧಿಸಲು ಕೋರಿಕೊಂಡಿದ್ದೆವು. ಈ ಕೋರಿಕೆಯನ್ನು ಪರಿಗಣಿಸಿ ರಾಹುಲ್ ಗಾಂಧಿಯವರು ವಯನಾಡು ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿದ್ದಾರೆ. ಇದು ನಮಗೆ ಅತ್ಯಂತ ಸಂತೋಷದ ಸಂಗತಿಯಾಗಿದೆ. ನಾವು ರಾಹುಲ್ ಗಾಂಧಿಯವರನ್ನು ಗೆಲ್ಲಿಸಲಿದ್ದೇವೆ” ಎಂದು ಎ.ಕೆ.ಆಂಟನಿ ಉತ್ಸಾಹದಿಂದ ನುಡಿದರು.
“ರಾಹುಲ್ ಗಾಂಧಿಯವರು ಅಮೇಥಿಯಿಂದ ಸ್ಪರ್ಧಿಸುವುದರ ಜೊತೆಗೆ ದಕ್ಷಿಣ ಭಾರತದ ವಯನಾಡ್ ನಿಂದಲೂ ಸ್ಪರ್ಧಿಸುತ್ತಿದ್ದಾರೆ. ವಯನಾಡು ಭೌಗೋಳಿಕ ಹಾಗೂ ಸಾಂಸ್ಕೃತಿಕವಾಗಿ ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳನ್ನು ಜೋಡಿಸುತ್ತದೆ. ದಕ್ಷಿಣ ಭಾರತವನ್ನು ಸಾಂಕೇತಿಕವಾಗಿ ಈ ಕ್ಷೇತ್ರದ ಮೂಲಕ ಪ್ರತಿನಿಧಿಸಲು ಸಾಧ್ಯವಿದೆ. ಈ ಕಾರಣದಿಂದ ರಾಹುಲ್ ಗಾಂಧಿ ವಯನಾಡ್ ನಿಂದ ಸ್ಪರ್ಧಿಸುತ್ತಿದ್ದಾರೆ” ಎಂದರು.
ಅಮೇಥಿಯಲ್ಲಿ ಸ್ಮೃತಿ ಇರಾನಿ ರಾಹುಲ್ ಗಾಂಧಿ ಎದುರು ಸ್ಪರ್ಧಿಸುತ್ತಿದ್ದು ಸೋಲುವ ಭಯದಿಂದಾಗಿ ವಯನಾಡ್ ನಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಬಿಜೆಪಿಯ ಟೀಕೆಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸುರ್ಜೇವಾಲಾ, “ನರೇಂದ್ರ ಮೋದಿಯವರು ಗುಜರಾತ್ ಬಿಟ್ಟು ವಾರಣಾಸಿಯಿಂದ ಸ್ಪರ್ಧಿಸಲು ಅವರು ಗುಜರಾತಿನಲ್ಲಿ ಸೋಲುವ ಭಯವಿತ್ತೇ? ಎಂದು ಮರುಪ್ರಶ್ನಿಸಿದ ಸುರ್ಜೇವಾಲಾ, “ಇವು ಬಾಲಿಶವಾದ ಅಪ್ರಬುದ್ಧ ಟೀಕೆಗಳು” ಎಂದರು. ‘ಅಮೇಥಿ ರಾಹುಲ್ ಅವರ ಕಣಕಣದಲ್ಲಿದೆ, ಅಲ್ಲಿಯ ಜನರೂ ಅವರನ್ನು ಬಿಟ್ಟುಕೊಡುವುದಿಲ್ಲ. ಸ್ಮೃತಿ ಇರಾನಿ ಈ ಸಲವೂ ಸೋತು ಹ್ಯಾಟ್ರಿಕ್ ಸೋಲು ಸಾಧಿಸಲಿದ್ದಾರೆ” ಎಂದರು.
ದಕ್ಷಿಣ ಭಾರತದ ವಿಶಿಷ್ಟ ಸಂಸ್ಕೃತಿಯ ಮೇಲೆ ಬಿಜೆಪಿ ಸರ್ಕಾರ ದಾಳಿ ನಡೆಸುತ್ತಿದೆ. ತಾವು ದಕ್ಷಿಣ ಭಾರತದಲ್ಲಿ ಸ್ಪರ್ಧಿಸುವ ಮೂಲಕ ಇಲ್ಲಿನ ವಿಶಿಷ್ಟ ಜನಜೀವನ, ವಿಶಿಷ್ಟ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಸಂದೇಶವನ್ನು ರಾಹುಲ್ ಗಾಂಧಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಾಹುಲ್ ಸ್ಪರ್ಧೆಯನ್ನು ಸಮರ್ಥಿಸಿಕೊಂಡರು.
ಕೆಲ ದಿನಗಳ ಹಿಂದೆ, ಕರ್ನಾಟಕದಿಂದ ರಾಹುಲ್ ಗಾಂಧಿ ಸ್ಪರ್ಧಿಸಲಿ ಎಂಬ ಟ್ವಿಟರ್ ಅಭಿಯಾನವನ್ನೂ ಕರ್ನಾಟಕದ ಕಾಂಗ್ರೆಸ್ ಮುಖಂಡರು ಕೆಲ ದಿನಗಳ ಹಿಂದೆ ನಡೆಸಿದ್ದನ್ನು ಸ್ಮರಿಸಬಹುದು