ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವೆಂದು ಸತತ 57 ತಿಂಗಳಿಂದಲೂ ಸಾಬೀತು ಮಾಡುತ್ತಲೇ ಬಂದಿರುವ ಪ್ರಧಾನಿ ನರೇಂದ್ರ ಮೋದಿಯ ಹೊಸ ಅವತಾರ ಎಂದರೆ ನಮೋ ಟಿವಿ! ಇದು ವಿಶ್ವದಲ್ಲೇ ಮೊದಲು!! ಭಾರತದಂತಹ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿ ತನ್ನ ಅಧಿಕಾರ ಉಳಿಸಿಕೊಳ್ಳಲು ತನ್ನದೇ ಹೆಸರಿನ ಟೀವಿ ಪ್ರಾರಂಭಿಸಿದ್ದಾರೆ. ವಿಶ್ವದ ಯಾವ ದೇಶದಲ್ಲೂ ದೇಶದ ಪ್ರಧಾನಿ ಅಥವಾ ಅಧ್ಯಕ್ಷರು ತಮ್ಮ ಹೆಸರಿನಲ್ಲಿ ಟಿವಿ ವಾಹಿನಿಯೊಂದನ್ನು ಷುರುಮಾಡಿಲ್ಲ.
ಅಷ್ಟಕ್ಕೂ ಈ ಟೀವಿ ಕತೆ ಏನು? ದಿನದ 24 ಗಂಟೆಯೂ ಮೋದಿ ಲೈವ್! ನಮೋ ಟಿವಿ ಹುಟ್ಟಿಕೊಂಡ 24 ಗಂಟೆಗಳಲ್ಲೇ ದೇಶದ ಎಲ್ಲಾ ಡಿಟಿಎಚ್ ಚಾನಲ್ ಗಳಲ್ಲೂ, ಸಣ್ಣಪುಟ್ಟ ಕೇಬಲ್ ಆಪರೇಟರ್ ಗಳಿಂದ ಹಿಡಿದು ದೊಡ್ಡ ದೊಡ್ಡ ಕೇಬಲ್ ಆಪರೇಟರ್ ಗಳೂ ನಮೋ ಟಿವಿಯನ್ನು ವೀಕ್ಷಕರಿಗೆ ಒದಗಿಸುತ್ತಿದ್ದಾರೆ.
ಇದು ರೈತರಿಗಾಗಿಯಾಗಲೀ, ಕಾರ್ಮಿಕರಿಗಾಗಲೀ, ವಿದ್ಯಾರ್ಥಿಗಳಿಗಾಗಲೀ ಅಥವಾ ನಿರುದ್ಯೋಗಿಗಳಿಗಾಗಲೀ ಪ್ರಾರಂಭಿಸಿರುವ ಟಿವಿ ಅಲ್ಲ. ಇದು ಪಕ್ಕಾ ನಮೋ ಟಿವಿ. ಹೆಸರೇ ಹೇಳುವಂತೆ ಎಲ್ಲವೂ ನರೇಂದ್ರಮೋದಿಮಯ! ಚುನಾವಣೆ ಗೆಲ್ಲಲೆಂದೇ ಪ್ರಾರಂಭವಾಗಿರುವ ಟಿವಿ.
ನರೇಂದ್ರ ದಾಮೋದರ ದಾಸ್ ಮೋದಿ ಎಂದು ಚಿನ್ನದ ದಾರದಲ್ಲಿ ಕೋಟಿನ ಮೇಲೆ ಹೆಸರು ಬರೆಸಿಕೊಂಡು ಮೆರೆದ ಪ್ರಧಾನಿ ನರೇಂದ್ರ ಮೋದಿಗೆ ತಮ್ಮದೇ ಹೆಸರಿನ ಟಿವಿ ಪ್ರಾರಂಭಿಸಿ, ಅಧಿಕಾರ ದುರ್ಬಳಕೆ ಮಾಡಿಕೊಂಡು ಎಲ್ಲ ಡಿಟಿಎಚ್, ಕೇಬಲ್ ಗಳಲ್ಲೂ ಕಡ್ಡಾಯ ಪ್ರಸಾರಕ್ಕೆ ಒತ್ತಡ ಹೇರಿರುವುದರಲ್ಲಿ ಅಚ್ಚರಿ ಏನಿಲ್ಲ. ಸಾಮಾನ್ಯ ಟಿವಿ ಚಾನಲ್ ಗಳನ್ನು ಪ್ರಸಾರ ಮಾಡಲು ಡಿಟಿಎಚ್ ಮತ್ತು ಕೇಬಲ್ ಆಪರೇಟರ್ ಗಳು ಎಷ್ಟೆಲ್ಲ ಬೇಡಿಕೆ ಇಡುತ್ತಾರೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ.
ಭಾನುವಾರ ಪ್ರಾರಂಭವಾಗಿರುವ ನಮೋ ಟಿವಿ ಪ್ರಸಾರವಾಗುತ್ತಿರುವ ರೀತಿಯೇ ಇಲ್ಲಿ ಅಧಿಕಾರ ದುರ್ಬಳಕೆ ಆಗಿರುವುದನ್ನು ಎತ್ತಿ ತೋರಿಸುತ್ತಿದೆ. ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ದೇಶಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಜನಸಾಮಾನ್ಯರು ಲೆಕ್ಕವಿಲ್ಲದೇ 50,000 ರುಪಾಯಿ ಮೀರಿದ ನಗದು ಇಟ್ಟುಕೊಂಡರೂ ಅದು ಅಪರಾಧ ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಇಂತಹ ಹೊತ್ತಿನಲ್ಲಿ ಕನಿಷ್ಠ 50 ಕೋಟಿ ಬಂಡವಾಳ ಹೂಡಿಕೆ ಮಾಡಿರಬಹುದಾದ ನಮೋ ಟಿವಿ ಪ್ರಸಾರ ಆರಂಭಿಸಿದೆ.
ಪ್ರಧಾನಿ ಮೋದಿಗೆ ಪ್ರತ್ಯೇಕ ಟೀವಿ ಐಡಿಯಾ ಬಂದಿದ್ದು ಹೇಗೆ? ದೇಶದ ಬಹುತೇಕ ಮಾಧ್ಯಮಗಳು ತಮ್ಮ ನಿಷ್ಠೆಯನ್ನು ಪ್ರಧಾನಿ ಮೋದಿಯ ಪಾದಗಳಡಿ ಇಟ್ಟಿದ್ದರೂ ನಿತ್ಯವೂ ಮೋದಿ ಜಪ ಮಾಡಿದರೆ ಟಿಆರ್ಪಿ ಗಳಿಸಲು ಸಾಧ್ಯವಿಲ್ಲ, ಟಿಆರ್ಪಿ ಇಲ್ಲದಿದ್ದರೆ ಜಾಹಿರಾತುಗಳ ಸಂಖ್ಯೆ ಮತ್ತು ಅದರಿಂದ ಬರುವ ಆದಾಯ ತಗ್ಗುತ್ತದೆ ಎಂಬ ಸತ್ಯದ ಅರಿವಾಗಿದೆ. ಹೀಗಾಗಿ ಮೋದಿ ಜಪ ಮಾಡಿದರೂ ಆಗಾಗ್ಗೆ ಪ್ರತಿ ಪಕ್ಷಗಳ ಹೇಳಿಕೆಗಳನ್ನು ತೋರಿಸಲೇಬೇಕು. ಮೋದಿ ನಾನು ಚೌಕಿದಾರ್ ಎಂದು ಹೇಳಿದ್ದನ್ನು ಹತ್ತು ಸರಿ ತೋರಿಸಿದರೆ, ಚೌಕಿರಾದರನೇ ಚೋರ್ ಎಂಬ ರಾಹುಲ್ ಮತ್ತು ವಿರೋಧ ಪಕ್ಷಗಳ ನಾಯಕರ ಹೇಳಿಕೆಯನ್ನೂ ತೋರಿಸಲೇ ಬೇಕಾಗುತ್ತದೆ, ತೋರಿಸುತ್ತವೆ. ತಮ್ಮದೇ ಟೀವಿ ಪ್ರಾರಂಭಿಸಿದರೆ ಹೇಗೆ? ವಿರೋಧ ಪಕ್ಷಗಳ ಟೀಕೆಯನ್ನು ಹಾಕಬೇಕಿಲ್ಲ. ಪ್ರಶ್ನೆ ಮಾಡುವ ಪತ್ರಕರ್ತರು ಇರುವುದಿಲ್ಲ, ಸಂವಾದ ಮಾಡುವ ಅಗತ್ಯವೂ ಇರುವುದಿಲ್ಲ. ‘ಸರ್ವಂ ನಮೋಮಯಂ’ ಮಾಡಿಕೊಳ್ಳಬಹುದಲ್ಲಾ!
‘ಮೋದಿ ಹೇಳಿದ್ದೇ ವೇದವಾಕ್ಯ’ ಎಂದು ನಂಬುವ ಭಕ್ತರ ವರ್ಗವೊಂದಿದೆ. ಆ ವರ್ಗಕ್ಕೆ ಕಾರ್ಯಕಾರಣ ಸಂಬಂಧಗಳ ಅಗತ್ಯವೇ ಇಲ್ಲ. ಮೋದಿ ಅಪನಗದೀಕರಣ ಜಾರಿ ಮಾಡಿದ್ದರಿಂದ ದೇಶದ ಆರ್ಥಿಕಸ್ಥಿತಿ ಅಧೋಗತಿಗೆ ಇಳಿಯಿತು ಎಂಬುದನ್ನು ಆ ವರ್ಗ ನಂಬುವುದಿಲ್ಲ. ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಇದೆ ಎಂಬುದನ್ನು ನಂಬುವುದಿಲ್ಲ. ಅಲ್ಲದೇ ರಫೇಲ್ ಡೀಲ್ ನಲ್ಲಿ ಮೋದಿ ಕೈವಾಡ ಇದೆ ಎಂಬುದನ್ನೂ ನಂಬುವುದಿಲ್ಲ. ಮೋದಿಯೇ ಪಾಕಿಸ್ತಾನಕ್ಕೆ ಹೋಗಿ ಬಾಲಕೋಟ್ ನಲ್ಲಿ ಬಾಂಬು ಹಾಕಿ ಬಂದಿದ್ದಾರೆ ಎಂದು ನಂಬುವ ವರ್ಗ ಇದು. ಈ ವರ್ಗಕ್ಕೆ ನಮೋ ಟಿವಿ ರುಚಿಸುತ್ತದೆ. ಯಾಕೆಂದರೆ ನಮೋ ಟಿವಿಯಲ್ಲಿ ಮೋದಿಯದೇ ಮೋಜು-ಮಸ್ತಿ!
ನಮೋ ಟಿವಿ ಪ್ರಾರಂಭವಾಗಿರುವ ಬಗ್ಗೆ ವಿವಿಧ ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆಮ್ ಆದ್ಮಿ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಆಮ್ ಆದ್ಮಿ ಪಕ್ಷ ಎತ್ತಿರುವ ಪ್ರಮುಖ ಪಕ್ಷಗಳು ಕೆಳಕಂಡಂತಿವೆ.
– ನಮೋ ಟಿವಿ ಪ್ರಸಾರ ಆರಂಭಿಸಲು ಚುನಾವಣಾ ಆಯೋಗವು ಅನುಮತಿ ನೀಡಿದೆಯೇ?
–ಚುನಾವಣಾ ನೀತಿ ಸಂಹಿತೆ ಘೋಷಣೆ ಆದ ನಂತರ ರಾಜಕೀಯ ಪಕ್ಷವೊಂದು ತನ್ನದೇ ಆದ ಚಾನಲ್ ಹೊಂದಲು ಅವಕಾಶ ಇದೆಯೇ?
–ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರಸಾರ ಆರಂಭಿಸಿರುವ ನಮೋ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೇಲೆ ನಿಗಾ ಇಡುವವವರು ಯಾರು?
– ಸುದ್ದಿ ವಾಹಿನಿಗಳು, ಸುದ್ದಿಪತ್ರಿಕೆಗಳಿಗೆ ಮೇಲೆ ನಿಗಾ ಇಡುವಂತೆ ಚುನಾವಣಾ ಆಯೋಗ ನಿಗಾ ಇಡಲಿದೆಯೇ?
–ಬಿಜೆಪಿ ಮೆಡಿಯಾ ಸರ್ಟಿಫಿಕೇಶನ್ ಕಮಿಟಿ ಮುಂದೆ ತಾನು ಪ್ರಸಾರ ಮಾಡಬಹುದಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಅನುಮತಿ ಪಡೆದಿದೆಯಾ?
ಖರ್ಚುವೆಚ್ಚಗಳ ಮಾಹಿತಿ ನೀಡಿದೆಯಾ?
–ಒಂದು ವೇಳೆ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆಯದೇ ಇದ್ದರೆ, ಆಯೋಗವು ಇದುವರೆಗೆ ಏನು ಕ್ರಮ ಕೈಗೊಂಡಿದೆ?
ಈ ಪ್ರಶ್ನೆಗಳನ್ನು ಎತ್ತಿರುವ ಆಮ್ ಆದ್ಮಿ ಪಕ್ಷವು ಚುನಾವಣಾ ಆಯೋಗಕ್ಕೆ ದೂರಿನಲ್ಲಿ ತಕ್ಷಣವೇ ಕ್ರಮಕ್ಕೆ ಆಗ್ರಹಿಸಿದೆ. ಸಂವಿಧಾನದ 324ನೇ ವಿಧಿ ಅನ್ವಯ ಚುನಾವಣಾ ಆಯೋಗವು ತ್ವರಿತ ಕ್ರಮ ಕೈಗೊಳ್ಳಬೇಕು ಎಂದೂ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.