ಕೆಲವೇ ವರ್ಷಗಳ ಹಿಂದೆ ತಾನು ಐಎಎಸ್ ಓದಿ ದೊಡ್ಡ ಅಧಿಕಾರಿಯಾಗಬೇಕೆಂಬ ಕನಸಿಟ್ಟುಕೊಂಡು ದೆಹಲಿಗೆ ಓದಲು ಹೋಗಿದ್ದ ವಿದ್ಯಾರ್ಥಿಯೊಬ್ಬನ ಬದುಕು ವೇಗವಾಗಿ ನಾನಾ ತಿರುವು ಪಡೆದುಕೊಳ್ಳುತ್ತದೆ. ಆ ತರುಣ 2019ರ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿಯೂ ದೇಶದ ಗಮನ ಸೆಳೆಯುತ್ತಾನೆ. ಅವನೇ ಕನ್ಹಯ್ಯ ಕುಮಾರ್.
ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ತಮ್ಮ ಹೋರಾಟಗಳ ಮೂಲಕ ಬಿಜೆಪಿ ನಾಯಕತ್ವದ ಕೆಂಗಣ್ಣಿಗೆ ಗುರಿಯಾದ ಕನ್ಹಯ್ಯಕುಮಾರ್ ಸುಳ್ಳು ಆಪಾದನೆಗಳನ್ನು ಎದುರಿಸಬೇಕಾಯಿತು. ಕನ್ಹಯ್ಯಕುಮಾರ್ ಜೈಲಿನಿಂದ ಬಿಡುಗಡೆಯಾಗಿ ಬಂದೊಡನೆ ಜೆಎನ್ಯು ಆವರಣದಲ್ಲಿ ಆಜಾದಿ ಘೋಷಣೆಗಳೊಂದಿಗೆ ಮಾಡಿದ್ದ ಒಂದು ಗಂಟೆಯ ಸರಳ, ವೈಚಾರಿಕ ಭಾಷಣದ ಪರಿಣಾಮ ಹೇಳಲಸದಳ. ಇಡೀ ದೇಶವೇ ತಿರುಗಿ ನೋಡುವಂತಾಯಿತು. ಆ ದಿನಗಳು ಈ ಯುವಕನ ಭವಿಷ್ಯದ ಹಾದಿಯನ್ನೇ ಬದಲಿಸಿದವೆಂದು ಹೇಳಬಹುದು.
2018ರ ಏಪ್ರಿಲ್ ನಲ್ಲಿ ಸಿಪಿಐ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯರಾದ ಕನ್ಹಯ್ಯ ಕುಮಾರ್, ಆಫ್ರಿಕನ್ ಅಧ್ಯಯನದಲ್ಲಿ ಪಿಎಚ್ಡಿ ಡಾಕ್ಟರೇಟ್ ಪದವಿ ಪಡೆದು ಬೇಗುಸರಾಯ್ ಜಿಲ್ಲೆಯ ತನ್ನೂರಾದ ಬಿಹಾಟ್ ಗೆ ಮರಳಿ ಜನರ ನಡುವೆ ಜಾಗೃತಿ ಮೂಡಿಸುವ ಕೆಲಸಕ್ಕಿಳಿಯುತ್ತಾರೆ. ಫೆಬ್ರವರಿಯಲ್ಲಿ ಫುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಬೇಗುಸರಾಯ್ ಯೋಧನ ಶವ ಗ್ರಾಮಕ್ಕೆ ಆಗಮಿಸಿದಾಗ ಬೇರಾವ ರಾಜಕಾರಣಿಯೂ ಗೌರವ ಸಮರ್ಪಿಸಲು ಇಲ್ಲದಿದ್ದಾಗ ತಾನೊಬ್ಬನೇ ಬಂದು ಗೌರವ ಸಮರ್ಪಿಸಿದ ಕನ್ಹಯ್ಯಕುಮಾರನನ್ನು ಜನ ಗುರುತಿಸುತ್ತಾರೆ. ಇದೀಗ ಎಡ ಪಕ್ಷದ ಅಭ್ಯರ್ಥಿಯಾಗಿ ಬೇಗುಸರಾಯ್ ಕ್ಷೇತ್ರದಿಂದ ಸ್ಪರ್ಧಿಸಿರುವ ಕನ್ಹಯ್ಯ ಕುಮಾರ್ ಇತರ ರಾಜಕಾರಣಿಗಳಂತೆ ಜನರಿಗೆ ಹಣ ಹಂಚುತ್ತಿಲ್ಲ, ಸುಳ್ಳು ಭರವಸೆಗಳನ್ನೂ ಹಂಚುತ್ತಿಲ್ಲ. ಜನರಿಂದಲೇ ಹಣ, ಕಾರ್ಯಕರ್ತರಿಗೆ ಬೇಕಾದ ಊಟಕ್ಕೆ ದವಸ, ಧಾನ್ಯ ಸಂಗ್ರಹಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಜನರೇ ಸ್ವಯಂ ಪ್ರೇರಣೆಯಿಂದ ನೀಡಿರುವ ವಾಹನಗಳನ್ನೇ ಕಾರ್ಯಕರ್ತರು ಬಳಸುತ್ತಿದ್ದಾರೆ. ದೇಶದ ಬೇರೆ ಬೇರೆ ಕಡೆಗಳಿಂದ ನೂರಾರು ಕಾರ್ಯಕರ್ತರು ಕನ್ಹಯ್ಯ ಕುಮಾರ್ ಗೆಲುವಿಗಾಗಿ ಬೇಗುಸರಾಯ್ ತಲುಪಿದ್ದಾರೆ.ಈ ಹೊತ್ತಿನಲ್ಲಿ ‘ದ ವೈರ್’ ಪತ್ರಿಕೆಗೆ ಬರೆದ ಲೇಖನದಲ್ಲಿ ತನ್ನ ಕನಸುಗಳೇನು ಎಂಬುದನ್ನು ಹಂಚಿಕೊಂಡಿದ್ದಾರೆ. ಅದನ್ನು ಟ್ರೂಥ್ ಇಂಡಿಯಾ ಕನ್ನಡ ತಮಗಾಗಿ ಕನ್ನಡದಲ್ಲಿ ಪ್ರಸ್ತುತಪಡಿಸುತ್ತಿದೆ.
“ಘಟನೆಗಳು ಹೇಗೆಲ್ಲಾ ನಡೆದುಹೋದವೆಂದರೆ ನಾನು ‘ಆಕಸ್ಮಿಕ ರಾಜಕಾರಣಿ’ಯಾದದ್ದು ನನ್ನ ಅರಿವಿಗೆ ಬರಲೇ ಇಲ್ಲ. ನಾನು ಯಾವಾಗಲೂ ರಾಜಕೀಯವಾಗಿಯೇ ಚಿಂತಿಸುವುದು, ಆದರೆ ಕೆಲವೇ ವರುಷಗಳ ಹಿಂದೆ ಯಾರಾದರೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ನನಗೆ ಸಲಹೆ ನೀಡಿದ್ದರೆ, ನಾನು ಮತ್ತು ನನ್ನ ಸ್ನೇಹಿತರು ನಕ್ಕುಬಿಡುತ್ತಿದ್ದೆವು.
ನಾನು ಶೈಕ್ಷಣಿಕ ತರಬೇತಿ ಪಡೆದಿರುವುದರಿಂದ ವಿದ್ವಾಂಸ ಎನಿಸಿಕೊಳ್ಳಬಹುದು; ಆದರೆ ನಾವು ನಮ್ಮ ಸುತ್ತಲೂ ಹಿಂಸೆಯೇ ವಿಜೃಂಭಿಸುವ ಸಮಾಜದಲ್ಲಿ ಜೀವಿಸುತ್ತಿದ್ದೇವೆ. ಅದು ದೈಹಿಕ ಹಿಂಸೆ, ಮಾನಸಿಕ ಅಥವಾ ವ್ಯವಸ್ಥೆಯೊಳಗಿನ ಹಿಂಸೆ, ಯಾವುದೂ ಆಗಿರಬಹುದು. ಆದ್ದರಿಂದ ಬೇರೆ ಎಲ್ಲದಕ್ಕಿಂತಲೂ ಹೆಚ್ಚಿನದಾಗಿ ನಾನು ಒಬ್ಬ ಹೋರಾಟಗಾರ. ಆದರೆ ಈಗ ಈ ಸರ್ಕಾರದ ಕಳೆದ ಐದು ವರ್ಷಗಳಲ್ಲಿ ನಾನು ರಾಜಕಾರಣಕ್ಕೆ ಬಂದಿದ್ದೀನಿ. ಆದರೂ ನಾನು ‘ರಾಜಕಾರಣಿ’ ಅಲ್ಲ.
ನಾನು ಪರ್ಯಾಯ ರಾಜಕಾರಣದ ಭಾಗವಾಗುವುದು ನನ್ನ ಸಾಮಾಜಿಕ ಜವಾಬ್ದಾರಿ ಎಂದು ಭಾವಿಸಿರುವೆ. ಈ ಪರ್ಯಾಯ ರಾಜಕಾರಣ ಎಂಥದ್ದೆಂದರೆ ದ್ವೇಷ ಮತ್ತು ದಬ್ಬಾಳಿಕೆಯ ವಿರುದ್ಧ ಎದ್ದು ನಿಲ್ಲುವಂಥದ್ದು; ನಮ್ಮನ್ನು ಯಾವುದು ವಿಭಜಿಸುತ್ತದೋ ಅದನ್ನು ಮೀರಿ ಬೆಳೆಯುವ ಮತ್ತು ನಮ್ಮನ್ನು ಒಗ್ಗೂಡಿಸುವುದನ್ನು ಸಂಭ್ರಮಿಸುವ ಭಾರತವನ್ನು ಕನಸಿಸುವಂಥದ್ದು; ವೈಯಕ್ತಿಕ ಹಕ್ಕುಗಳು, ಒಳಗೊಳ್ಳುವ ಅಭಿವೃದ್ಧಿ ಮತ್ತು ಪ್ರಗತಿಪರ ಆಲೋಚನೆಗಳಿಗೆ ನಿಜವಾಗಿ ಕಿಮ್ಮತ್ತು ಕೊಡುವ ಸಮಾಜದ ಕನಸು ಕಾಣುವಂಥದ್ದು; ಕಳೆದ 5 ವರ್ಷಗಳಲ್ಲಿ ಉಂಟಾಗಿರುವ ಹಾನಿಯನ್ನು ಸರಿಪಡಿಸುವುದು ಮಾತ್ರವಲ್ಲ, ಈ ಪರ್ಯಾಯ ರಾಜಕಾರಣವು ಮುಂದಿನ 20 ವರ್ಷಗಳ ಅವಕಾಶಗಳನ್ನು ತನ್ನ ಕೈಗಳಲ್ಲಿ ಹಿಡಿದಿಟ್ಟುಕೊಳ್ಳಲು ಸಶಕ್ತವಾಗಿರುವ ಪ್ರಜಾತಂತ್ರದ ಕನಸು ಕಾಣುವಂತಹದ್ದು. ಅದಕ್ಕಾಗಿಯೇ ನಾವು ಹೋರಾಡುತ್ತಿರುವುದು. ಮತ್ತು ಇದೇ ನನ್ನ ಕಥೆಯೂ ಹೌದು.
ನಾನು ಏನಾಗಿದ್ದೀನಿ ಎಂಬ ಕಥೆ ವಿಶೇಷವೇನೂ ಅಲ್ಲ. ನನ್ನ ಸುತ್ತಲೂ ಇರುವ ಬಹುತೇಕ ಎಲ್ಲರಂತೆಯೇ ನಾನೂ ಒಬ್ಬನಾಗಿದ್ದೆ – ಶಾಲೆಯಲ್ಲಿದ್ದಾಗ ನಾನು ಪೋಲಿಯೊ ಹನಿಗಳನ್ನ ಕೊಟ್ಟಿದ್ದೆ; ಕಾಲೇಜಿಗೆ ಬಂದಾಗ ಕೋಚಿಂಗ್ ಕ್ಲಾಸ್ ನಲ್ಲಿ ಕೆಲಸ ಮಾಡಿದ್ದೆ; ದೆಹಲಿಯಲ್ಲಿ ನಾನು ಯುಪಿಎಸ್ಸಿ ಪರೀಕ್ಷೆಗಾಗಿ ಅಧ್ಯಯನ ಮಾಡುತ್ತಿದ್ದಾಗ ಒಂದು ನೌಕರಿಗೂ ಸೇರಿದ್ದೆ. ಅಸ್ಸಾಂನಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ನನ್ನ ಸ್ವಂತ ಸಹೋದರ UPSC ಯ ಕೋಚಿಂಗ್ ಕ್ಲಾಸುಗಳಿಗೆ ಹಣ ಕಳುಹಿಸುತ್ತಿದ್ದ. ಸರ್ಕಾರವು UPSC ಜೊತೆ CSAT ಸೇರಿಸಿದಾಗ ನಾಗರಿಕ ಸೇವೆಗಳಲ್ಲಿ ಪ್ರವೇಶ ಪಡೆಯುವ ನನ್ನ ಅವಕಾಶಗಳು ನಾಶವಾದವು. ಹಿಂದಿ ಮಾಧ್ಯಮದ, ಅದರಲ್ಲೂ ಮಾನವಿಕದ (Humanities) ವಿದ್ಯಾರ್ಥಿಗಳು ಅಖಿಲ ಭಾರತ ಸೇವೆಗಳಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಗಳೇ ತೀರಾ ಕ್ಷೀಣವಾಗಿಬಿಟ್ಟವು. ಆ ಸಿಸ್ಯಾಟ್ ವಿಜ್ಞಾನ, ತಂತ್ರಜ್ಞಾನ ವಿಭಾಗದ ಅಭ್ಯರ್ಥಿಗಳಿಗೆ ಹೆಚ್ಚು ಅನುಕೂಲವಾಗಿತ್ತು. ಅದೂ ಅಲ್ಲದೆ CSAT ಕೋಚಿಂಗ್ ತರಗತಿಗಳು ನನ್ನ ಕೈಗೆಟುಕುವಂತಿರಲಿಲ್ಲ. ಆದರೆ ಅದಕ್ಕಾಗಿ ನಾನು ಈಗ ವಿಷಾದಿಸುವುದೇನಿಲ್ಲ. ನಾನು ಯುಪಿಎಸ್ಸಿಗೆಂದು ಅಧ್ಯಯನ ಮಾಡುವಾಗಲೇ ನನ್ನ ಶೈಕ್ಷಣಿಕ ಮತ್ತು ರಾಜಕೀಯ ಜಾಗೃತಿ ಉಂಟಾಗಿದ್ದು. ಇಲ್ಲಿಯವರೆಗೂ ಹಾಗೇ ನಡೆದುಕೊಂಡು ಬಂದಿದೆ.
ನಾನು ಜೆಎನ್ಯುಗೆ ಬಂದಾಗಲೇ ನನ್ನ ಸಂಶೋಧನೆಯ ಮೂಲಕ ನನ್ನ ಜನರ ಏಳಿಗೆಗಾಗಿ ಕೊಡುಗೆ ನೀಡಲು ಸಾಧ್ಯವಿದೆ ಎಂದು ನನಗೆ ಅರಿವಾಗಿದ್ದು. ನನಗಾದರೂ ಜೆಎನ್ಯು ಒಂದು ಸಂಸ್ಥೆ ಮಾತ್ರವೇ ಆಗಿರಲಿಲ್ಲ. ಕೇವಲ ಪಠ್ಯಗಳಿಂದಲ್ಲದೆ ಬದುಕಿನ ಅನುಭವಗಳಿಂದ, ಸಾಮಾಜಿಕ ಚಳವಳಿಗಳ ಮೂಲಕ ಮುಕ್ತವಾಗಿ ಕಲಿಯಲು ಅನುವು ಮಾಡಿಕೊಟ್ಟ, ತನ್ನದೇ ಜೀವಂತಿಕೆ ತುಂಬಿದ ಸ್ಥಳವದು. ಯಾವಾಗಲೂ ಆದ್ಯತೆಯಲ್ಲಿದ್ದದ್ದು ಹೋರಾಟ. ನಾನು ವಿದ್ಯಾರ್ಥಿ ಸಂಘದ ಅಧ್ಯಕ್ಷನ ಸ್ಥಾನಕ್ಕೆ ಸ್ಪರ್ಧಿಸಿದಾಗಲೂ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನನ್ನನ್ನು ಬೆಂಬಲಿಸುತ್ತಾರೆಂದು ನಾನು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ನನ್ನ ಬದುಕು ಸಂಪೂರ್ಣವಾಗಿ ತಿರುವು ಪಡೆದಿದ್ದು ಇಲ್ಲೇ ನೋಡಿ.
ನನ್ನ ರಾಜಕೀಯ ಪಯಣದುದ್ದಕ್ಕೂ, ಅಧಿಕಾರ ದುರ್ಬಳಕೆ ಮಾಡಿಕೊಂಡಿರುವವರನ್ನು ನಿರಂತರವಾಗಿ ಪ್ರಶ್ನಿಸಿದ್ದೇನೆ ಮತ್ತು ಟೀಕಿಸಿದ್ದೇನೆ. ಈ ಸರ್ಕಾರವಾದರೂ ಸ್ವಲ್ಪ ಭಿನ್ನವಾಗಿಯೇ ಇತ್ತು. ಪೊಲೀಸ್ ಬೆದರಿಕೆ ಮತ್ತು ಲಾಟಿ ಚಾರ್ಜುಗಳು ಮೊದಲೂ ನಡೆದಿದ್ದವು; ಆದರೆ ಬೈಗುಳಗಳನ್ನು, ಸುಳ್ಳು ಸುದ್ದಿಗಳನ್ನು, ದ್ವೇಷ ಕಾರುವುದನ್ನು ಮತ್ತು ‘ದೇಶದ್ರೋಹಿ’ ಎಂಬಂತಹ ನಿರಂಕುಶವಾದಿ ಹಣೆಪಟ್ಟಿಗಳ ಬಳಕೆಯನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡುವುದು ಈಗ ಹೊಸದಾಗಿತ್ತು. ಪೆರಿಕಲ್ಸ್ (ಶೇಕ್ಸ್ಪಿಯರನ ಒಥೆಲ್ಲೊ ನಾಟಕದ ಪಾತ್ರ) ಹೇಳುವಂತಹ ಮಾತು ಹೀಗಿದೆ: ನೀನು ರಾಜಕಾರಣದಲ್ಲಿ ಆಸಕ್ತಿ ವಹಿಸುವುದಿಲ್ಲ ಎಂದ ಮಾತ್ರಕ್ಕೆ ರಾಜಕಾರಣ ನಿನ್ನಲ್ಲಿ ಆಸಕ್ತಿ ವಹಿಸುವುದಿಲ್ಲ ಎಂದಲ್ಲ. ಹೌದು, ನಾನು ರಾಜಕಾರಣದಲ್ಲಿ ಆಸಕ್ತಿ ವಹಿಸಿದೆ, ರಾಜಕಾರಣವು ಖಂಡಿತಾ ನನ್ನ ಬಗ್ಗೆ ಆಸಕ್ತಿ ವಹಿಸಿತು.
ನಮ್ಮ ವಿರುದ್ಧ ಪ್ರಭುತ್ವ ದಾಳಿಗೈದಾಗ, ನಮಗೆ ಎರಡು ಆಯ್ಕೆಗಳಿದ್ದವು – ಹೋರಾಟ ಮಾಡುವುದು ಇಲ್ಲವೇ ಶರಣಾಗತರಾಗುವುದು. ಆದರೆ ನನ್ನ ಅಭಿಪ್ರಾಯದಲ್ಲಿ ನಮಗೆ ಒಂದೇ ಆಯ್ಕೆ ಇತ್ತು. ಆದ್ದರಿಂದ ನಾವು ಹೋರಾಡಿದೆವು. ಆ ಹೋರಾಟವೇ ನನ್ನನ್ನು ಈಗ ಇಲ್ಲಿ ತಂದು ನಿಲ್ಲಿಸಿರುವುದು. ಯಾವುದೋ ಒಂದು ಪಕ್ಷಕ್ಕೆ ಪರ್ಯಾಯ ಇನ್ನಾವುದಾಗುತ್ತದೆ ಎಂದು ತೋರಿಸುವುದು ನನ್ನ ಕೆಲಸವಲ್ಲ, ಈ ದೇಶದ ಪರ್ಯಾಯ ರಾಜಕಾರಣ ಏನಾಗಿರಬೇಕೆಂದು ತೋರಿಸುವುದು ನನ್ನ ಕೆಲಸವಾಗಿದೆ. ಈ ಪರ್ಯಾಯ ರಾಜಕಾರಣವು ಕೇವಲ ದಬ್ಬಾಳಿಕೆಯ ಎದುರಿನ ಹೋರಾಟವಲ್ಲ, ಇದು ಸ್ವಾತಂತ್ರ್ಯ ಸಮಾನತೆಗಳಿಗಾಗಿ ನಡೆಸುವ ಹೋರಾಟವೂ ಆಗಿದೆ. ಇದು ಕೇವಲ ಬಿಜೆಪಿ-ಆರೆಸ್ಸೆಸ್ ಗಳ ಹಿಂದೂತ್ವ ದುರಭಿಮಾನದ ವಿರುದ್ಧವಾಗಿರದೆ ಅಂಬೇಡ್ಕರ್ ಅವರ ಚಿಂತನೆಯ ಸಾಮಾಜಿಕ ಒಳಗೊಳ್ಳುವಿಕೆಗಾಗಿ ಮಾಡುವ ರಾಜಕಾರಣವಾಗಿದೆ. ಇದು ಬರೀ ಗಲಭೆಕೋರತನದ ವಿರುದ್ಧವಾಗಿರದೆ ನಿಜವಾದ ಪಾಲ್ಗೊಳ್ಳುವಿಕೆಯ ಪ್ರಜಾತಂತ್ರಕ್ಕಾಗಿ ನಡೆಸುವ ರಾಜಕಾರಣವೇ ಆಗಿದೆ. ಇದು ನನ್ನ ಹೋರಾಟವಲ್ಲ. ನಮ್ಮೆಲ್ಲರ ಹೋರಾಟವೇ ಆಗಿದೆ.
ಭವಿಷ್ಯದ ಬಗ್ಗೆ ನಮ್ಮ ಮುನ್ನೋಟ
ಯಾವುದೇ ಬದಲಾವಣೆ ತರಲು ಇಡಬೇಕಾದ ಮೊದಲ ಹೆಜ್ಜೆ ಎಂದರೆ ಶ್ರೀಮಂತರ ಜೇಬುಗಳಿಂದ ರಾಜಕಾರಣವನ್ನು ಹೊರತೆಗೆದು ಸಾಮಾನ್ಯ ತೆರಿಗೆದಾರನ ಕೈಗಳಲ್ಲಿ ವಾಪಸ್ ಹಾಕುವುದು. ಸರ್ಕಾರದ ಬೊಕ್ಕಸವನ್ನು ತುಂಬುತ್ತಿರುವುದು ತೆರಿಗೆದಾರರೇ ಆದರೂ ಅವರಿಗೆ ಸಂಬಂಧಿಸಿದ ವಿಷಯಗಳು ನಮ್ಮ ಚರ್ಚೆಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗಿಬಿಟ್ಟಿವೆ. ಹೀಗೇಕೆ? ಏಕೆಂದರೆ ಇದು ತೆರಿಗೆದಾರನಿಗೋಸ್ಕರ ನಡೆಯುತ್ತಿರುವ ಸರ್ಕಾರವಾಗಿಲ್ಲ, ಶ್ರೀಮಂತರಿಗೋಸ್ಕರ ನಡೆಯುತ್ತಿರುವ ರಾಜಕೀಯ ಯಂತ್ರವಾಗಿದೆ. ಇಂತಹ ವ್ಯವಸ್ಥೆಗಳನ್ನು ಉರುಳಿಸಿ, ಸರ್ಕಾರವನ್ನು ಜನತೆಗೆ ಹಿಂದಿರುಗಿಸಬೇಕಿದೆ.
ನಾವು ಇಡಬೇಕಾದ ಎರಡನೇ ಹೆಜ್ಜೆ ಎಂದರೆ ವಿಷಯಾಧಾರಿತ ಪರ್ಯಾಯ ರಾಜಕಾರಣವನ್ನು ಹುಟ್ಟುಹಾಕುವುದು. ನಾವು ಸಾರ್ವಜನಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ ಸೇವೆ ಮತ್ತು ಸಾರ್ವಜನಿಕ ಮೂಲಸೌಕರ್ಯದ ಪರಿಸ್ಥಿತಿಗಳ ಬಗ್ಗೆ ಮಾತನಾಡಬೇಕು. ಅಂಚಿಗೆ ಸರಿಸಲ್ಪಟ್ಟವರ ಬಗ್ಗೆ – ಅಲ್ಪಸಂಖ್ಯಾತರ ಜೊತೆಗೆ LGBTQ ಸಮುದಾಯವನ್ನೊಳಗೊಂಡ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿಯೂ ನಾವು ಧ್ವನಿ ಎತ್ತಬೇಕಿದೆ. ಪಿತೃಪ್ರಾಧಾನ್ಯತೆಯ ವಿರುದ್ಧ ಮತ್ತು ಸಮ್ಮತಿಯ ಹಕ್ಕಿಗಾಗಿ ನಾವು ಸೊಲ್ಲೆತ್ತಬೇಕಿದೆ. ಪರಿಸರ ಸುಸ್ಥಿರತೆಯಿಂದ ಹಿಡಿದು ಡಿಜಿಟಲ್ ಕ್ರಾಂತಿ ಮತ್ತು ಖಾಸಗೀತನದ ಹಕ್ಕಿನ ವರೆಗೂ ಇಂದು ನಮ್ಮ ದೇಶ ಎದುರಿಸುತ್ತಿರುವ ಹೊಸ ನಮೂನೆಯ ಸವಾಲುಗಳನ್ನು ಕುರಿತು ನಾವು ಮಾತನಾಡಬೇಕಿದೆ. ಅತಿ ಮುಖ್ಯವಾಗಿ, ಈ ಪರ್ಯಾಯ ರಾಜಕಾರಣವನ್ನೇ ಆಧರಿಸಿ ನಾವು ಜನರನ್ನು ಸಂಘಟಿಸಬೇಕು, ಆಗ್ರಹಿಸಬೇಕು ಹಾಗು ಮತ ಚಲಾಯಿಸಬೇಕು.
ಅಂತಿಮವಾಗಿ, ಈ ಪರ್ಯಾಯ ರಾಜಕಾರಣದ ಮೂಲಕವೇ ನಾವು ಕಾರ್ಯವಿಧಾನದ ಪ್ರಜಾತಂತ್ರದಿಂದ ಪಾಲ್ಗೊಳ್ಳುವಿಕೆಯ ಪ್ರಜಾತಂತ್ರದೆಡೆಗೆ ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯ ಸ್ವರೂಪವನ್ನು ಬದಲಿಸಬೇಕಿರುವುದು. ಸುಖೀರಾಜ್ಯಕ್ಕೋಸ್ಕರ, ಒಂದು ಉತ್ತರದಾಯಿತ್ವವಿರುವ, ಪಾರದರ್ಶಕವಾದ, ಅದಕ್ಕಿಂತಲೂ ಮುಖ್ಯವಾಗಿ ಎಲ್ಲರನ್ನೂ ಒಳಗೊಳ್ಳುವಂತಹ ಹೊಸ ಚೌಕಟ್ಟನ್ನು ನಿರ್ಮಿಸಿಕೊಡಲು ನಮಗೆ ಈ ಪರ್ಯಾಯ ರಾಜಕಾರಣವು ನೆರವಾಗುತ್ತದೆ. ಅಂಚಿಗೆ ಸರಿಸಲ್ಪಟ್ಟವರ ದುಃಖದುಮ್ಮಾನಗಳನ್ನು ಅದು ಆಲಿಸುವಂತಿರಬೇಕು ಮತ್ತು ಸತ್ಯವನ್ನು ಅಧಿಕಾರಯುತವಾಗಿ ನುಡಿಯಲೂಬೇಕು. ನೈಜ ಪಾಲ್ಗೊಳ್ಳುವಿಕೆಯನ್ನು, ಅಂದರೆ ಈ ರಾಷ್ಟ್ರದ ಪ್ರತಿಯೊಬ್ಬ ನಾಗರಿಕನಿಗೂ ಮಾತನಾಡುವ, ಸಂಘಟಿಸುವ ಮತ್ತು ಚುನಾವಣೆಗಳಲ್ಲಿ ಸ್ಪರ್ಧಿಸುವ ಹಕ್ಕನ್ನು ಅದು ಎತ್ತಿಹಿಡಯಬೇಕು. ಅಂತಹ ಚೌಕಟ್ಟಿನೊಳಗೆ ಮಾತ್ರ, ಕಾಲ ಒಡ್ಡುವ ಪರೀಕ್ಷೆಯನ್ನೆದುರಿಸಲು ಸಿದ್ಧವಾಗಿರುವ ಪ್ರಜಾತಂತ್ರವನ್ನು ಮತ್ತು ಎಷ್ಟೋ ಕಾಲದಿಂದ ನನಸಾಗದೇ ಹಾಗೇ ಉಳಿದುಹೋಗಿರುವ ಕನಸುಗಳನ್ನು ಸಾಕಾರಗೊಳಿಸಲು ಭವಿಷ್ಯದ ಭಾರತಕ್ಕೆ ನೆರವಾಗುವ ಪ್ರಜಾತಂತ್ರವನ್ನು ಬೆಳೆಸಲು ನಮಗೆ ಸಾಧ್ಯವಾಗುತ್ತದೆ.
ಹೋರಾಡೋಣ. ಗೆಲ್ಲೋಣ.
- ಕನ್ಹಯ್ಯ ಕುಮಾರ್,