(ರಾಘವ್ ಬಾಹ್ಲ್ ಖ್ಯಾತ ಉದ್ಯಮಿ. ನೆಟ್ವರ್ಕ್ 18 ಮೀಡಿಯಾದ ಮೂಲಸಂಸ್ಥಾಪಕ. ಬರ್ಮಾ ಯೂನಿವರ್ಸಿಟಿಯ ನಿವೃತ್ತ ಪ್ರಾಧ್ಯಾಪಕರೂ ಹೌದು. ವಿಶ್ವ ಆರ್ಥಿಕ ವೇದಿಕೆಯ ಸದಸ್ಯರೂ ಆಗಿರುವ ಬಾಹ್ಲ್ ಇತ್ತೀಚೆಗೆ ರಾಹುಲ್ ಗಾಂಧಿ ಘೋಷಿಸಿರುವ, ದೇಶದ 20 ಕೋಟಿ ಬಡವರ ಖಾತೆಗೆ ವರ್ಷಕ್ಕೆ 72,000 ರೂಪಾಯಿ ನೇರ ಹಣ ವರ್ಗಾವಣೆ ಯೋಜನೆಯನ್ನು ತಮ್ಮದೇ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಈ ಯೋಜನೆಯ ಕುರಿತು ಬಿಜೆಪಿ ಟೀಕೆ ನಡೆಸುತ್ತಿದೆ. ಇದನ್ನು ಜಾರಿಗೊಳಿಸಲು ಸಾಧ್ಯವಿಲ್ಲ, ಜಾರಿಗೊಳಿಸಿದರೆ ವಿತ್ತೀಯ ಕೊರತೆ ಉಂಟಾಗುತ್ತದೆ ಎಂಬೆಲ್ಲಾ ವಾದಗಳನ್ನು ಹೂಡಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ನ್ಯಾಯ್, ಕನಿಷ್ಟ ಆದಾಯ ಖಾತ್ರಿಯೋಜನೆಯು ಯಾವ ವಿತ್ತೀಯ ಕೊರತೆಯೂ ಆಗದೇ ಜಾರಿಗೊಳಿಸಬಲ್ಲ ಯೋಜನೆ ಎಂದು ಬಾಹ್ಲ್ ವಾದಿಸಿದ್ದಾರೆ)
2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಘೋಷಿಸಿದ ದೊಡ್ಡ ರಾಜಕೀಯ ಕಲ್ಪನೆಯಾದ ನ್ಯಾಯ್ (ಕನಿಷ್ಟ ಆದಾಯ ಖಾತ್ರಿ ಯೋಜನೆ) ಅನ್ನು ನಾನು ಸಂಪೂರ್ಣವಾಗಿ ಪ್ರೊತ್ಸಾಹಿಸುತ್ತೇನೆ.
“ನಾನು ಎಡಪಂಥೀಯನಾಗಿಲ್ಲ. ಈಗಲೂ ನಾನು ಬಲ ಕೇಂದ್ರಿತ ಆರ್ಥಿಕ ಉದಾರವಾದಿಯಾಗಿದ್ದು, ವ್ಯವಸ್ಥಿತವಾಗಿ ನಿಯಂತ್ರಿಸಲಾದ ಸ್ಪರ್ಧಾತ್ಮಕ ಮಾರುಕಟ್ಟೆಗಳು ಜನರ ಜೀವನವನ್ನು ಬದಲಿಸಲಿವೆ ಎನ್ನುವುದನ್ನು ಇಂದಿಗೂ ನಾನು ನಂಬುತ್ತೇನೆ. ಏಕೆಂದರೆ ಈ ಆದರ್ಶದ ಮೂಲಮಟ್ಟ ಬಹಳ ಆಳವಾಗಿದ್ದು, ನಿಜವಾದ ಬಡವರು ಮತ್ತು ಮುಖ್ಯವಾಹಿನಿಯಿಂದ ಹೊರಗಿರುವ ಪ್ರಜೆಗಳನ್ನು ಉದ್ದೇಶಿತ ಕಲ್ಯಾಣ ರಾಜ್ಯವನ್ನು ಗುರಿಯಾಗಿಸಿದೆ. ಕೆಲವು ಶ್ರೀಮಂತ ಉದಾರವಾದಿ ಮಾರುಕಟ್ಟೆ ಆರ್ಥಿಕತೆಗಳೂ ಪ್ರಭಾವೀ ಕಲ್ಯಾಣ ಕಾರ್ಯಕ್ರಮಗಳನ್ನು ಚಾಲ್ತಿಗೆ ತಂದಿವೆ. ಆ ವಿಚಾರವಾಗಿ ವಿರೋಧಾಭಾಸಗಳಿಲ್ಲ. ಎರಡರ ನಡುವೆಯೂ ಒಂದು ಸಾವಯವ ಕೆಮಿಸ್ಟ್ರಿ ಇದೆ.”
‘ನ್ಯಾಯ್’ ಈಗ ಪ್ರಧಾನಿಗೆ ಆತಂಕ ಒಡ್ಡಿದೆ
ನ್ಯಾಯ್ ಘೋಷಣೆಯಾದ ಕೆಲವೇ ಗಂಟೆಗಳ ಒಳಗೆ ಬಿಜೆಪಿಯ ಪ್ರಮುಖ ರಾಜಕಾರಣಿಗಳು ಟಿವಿ ಗೋಷ್ಠಿಗಳು ಮತ್ತು ಟ್ವಿಟರ್ ಪ್ರವಾಹದಲ್ಲಿ ಮುಳುಗೆದ್ದು ಒಟ್ಟಾರೆ ಕಲ್ಪನೆಯನ್ನು ವಿರೋಧಿಸಿದರು. ಆದರೆ ಅವರ ಬಹಳಷ್ಟು ಹೇಳಿಕೆಗಳು ಸತ್ತ ಕ್ಷಿಪಣಿಗಳಾದವು:
- ನಿರೀಕ್ಷಿಸಿದಂತೆಯೇ ಇಂದಿರಾ ಗಾಂಧಿ ಮತ್ತು ಪಂಡಿತ್ ನೆಹರು ವಿಫಲ ರಾಜಕಾರಣಿಗಳು. “ರಾಹುಲ್ರ ಮುತ್ತಾತ 1950ರಲ್ಲಿ ನಮ್ಮ ಅರ್ಥಶಾಸ್ತ್ರವನ್ನು ಶೇ 5 ರ ಆಮೆವೇಗದಲ್ಲಿ ಮುನ್ನಡೆಸದೆ ಇದ್ದಲ್ಲಿ ಬಹಳ ಹಿಂದೆಯೇ ಬಡತನ ನಿವಾರಣೆಯಾಗುತ್ತಿತ್ತು” ಎಂದು ಒಬ್ಬರು ವಾದಿಸಿದರು. ಅವರಿಗೆ ಬ್ರಿಟಿಷರಿಂದ ನಾವು ಪಡೆದುಕೊಂಡ ಹೀನಾಯವಾದ ರಾಷ್ಟ್ರದ ದುಸ್ಥಿತಿಯ ಕನಿಷ್ಟ ಗಮನವಿರಲಿಲ್ಲ. ನೆಹರೂ ಆಳ್ವಿಕೆಯ ನೊಗ ಹೊತ್ತಾಗ ಭಾರತದ ಆರ್ಥಿಕತೆಯ ಸ್ಥಿತಿ ಎಷ್ಟು ಕಷ್ಟವಿತ್ತೆಂಬುದು ಅವನು ಗಮನಿಸುವುದಿಲ್ಲ. 2014ರಲ್ಲಿ ಮೋದಿಯವರು ಆಡಳಿತ ವಹಿಸಿಕೊಂಡಾಗ ಈ ರಾಷ್ಟ್ರ ಬರೋಬ್ಬರಿ 2 ಟ್ರಿಲಿಯನ್ ಡಾಲರ್ (1 ಟ್ರಿಲಿಯನ್ ಡಾಲರ್= ಸುಮಾರು 70 ಲಕ್ಷ ಕೋಟಿ ರೂ) ಅರ್ಥವ್ಯವಸ್ಥೆಯಾಗಿತ್ತು ಎನ್ನುವುದನ್ನು ಅವರು ಮರೆತಿದ್ದಾರೆ.
- ಅದರ ಜೊತೆಗೆ ಇನ್ನಷ್ಟು ಟೀಕೆಗಳು. “ನಾವು ಈಗಾಗಲೇ ರು. 5.43 ಲಕ್ಷ ಕೋಟಿಯನ್ನು ನೇರ ಹಣ ವರ್ಗಾವಣೆಯಲ್ಲಿ ಕೊಡುತ್ತಿದ್ದೇವೆ. ಈಗಾಗಲೇ ರು. 1.068 ಲಕ್ಷವನ್ನು ಪ್ರತೀ ಕುಟುಂಬಕ್ಕೆ ಕೊಟ್ಟಿದ್ದೇವೆ. ಅದು ರು 72,000ಕ್ಕಿಂತಲೂ ಅಧಿಕ” ಎಂದು ಕೊಚ್ಚಿಕೊಳ್ಳುತ್ತಿದ್ದಾರೆ. ಇದು ಶುದ್ಧ ಸುಳ್ಳು. ಇವರು ಹೇಳುವ ರು. 5.43 ಲಕ್ಷ ಕೋಟಿಯಲ್ಲಿ ನನ್ನ ತಂದೆಯ ಪಿಂಚಣಿ, ನನ್ನ ವಾಹನ ಚಾಲಕನ ಎಲ್ಪಿಜಿ ಸಬ್ಸಿಡಿ, ನನ್ನ ಪತ್ನಿಯ ಮಾತೃತ್ವ ನಿಧಿ, ಅಫ್ಘನ್ ವಿದ್ಯಾರ್ಥಿಯ ಸ್ಕಾಲರ್ಶಿಪ್ ಸೇರಿದೆ. ಅದು ನಿಜವಾದ ಬಡವರಿಗೆ ವರ್ಗಾಯಿಸಿದ ಕನಿಷ್ಠ ಆದಾಯ ಅಲ್ಲವೇ ಅಲ್ಲ.
- ಇದೆಲ್ಲಾ ಮುಗಿದ ನಂತರ ಫಲಾನುಭವಿಗಳ ಆಯ್ಕೆ ಹೇಗೆ ಮಾಡುತ್ತೀರಿ ಎನ್ನುವ ಪ್ರಶ್ನೆ ಎತ್ತಿದ್ದಾರೆ. ಪ್ರಧಾನಿ ಮೋದಿಯ ಕಾರ್ಯಕರ್ತರು ಆಯುಶ್ಮಾನ್ ಭಾರತ್ಗಾಗಿ ಅರ್ಧ ಬಿಲಿಯನ್ ಫಲಾನುಭವಿಗಳನ್ನು ಆರಿಸಬಹುದಾದಲ್ಲಿ ಕಾಂಗ್ರೆಸ್ ಗೆ ಯಾಕೆ ಈ ಯೋಜನೆಗೆ ಬೇಕಾದ ಫಲಾನುಭವಿಗಳನ್ನು ಆರಿಸಲು ಸಾಧ್ಯವಿಲ್ಲ?
- ಈ ಯೋಜನೆಗೆ ನೀವು ಅದಕ್ಕೆ ಹಣಕಾಸು ಹೇಗೆ ಹೊಂದಿಸುತ್ತೀರಿ. ವಿತ್ತೀಯ ಕೊರತೆ ಮತ್ತೆ ಶೇ. 6ಕ್ಕೆ ಬರಲಿದೆ. 2008ರಲ್ಲಿ ನೀವು ಆರ್ಥಿಕತೆಯನ್ನು ಕುಲಗೆಡಿಸಿದಂತೆ ಮತ್ತೆ ಮಾಡುವಿರೇನು ಎನ್ನುವ ಪ್ರಶ್ನೆಯೂ ಬಂತು. 2008ರಲ್ಲಿ ವಿತ್ತೀಯ ಕೊರತೆ ಶೇ. 6ಕ್ಕೆ ಬರಲು ಮುಖ್ಯ ಕಾರಣ ಅಮೆರಿಕದಿಂದ ಶುರುವಾದ ಜಾಗತಿಕ ಆರ್ಥಿಕ ಹಿಂಜರಿತವೇ ವಿನಾ ಭಾರತದ ಕಲ್ಯಾಣ ಕಾರ್ಯಕ್ರಮಗಳಲ್ಲ.
ಗಂಭೀರವಾಗಿ ಹೇಳಬೇಕೆಂದರೆ, ನ್ಯಾಯ್ಗೆ ಹೇಗೆ ಅನುದಾನ ನೀಡುವುದು?
ಕಾಂಗ್ರೆಸ್ ಅನುದಾನಕ್ಕೆ ಸಂಬಂಧಿಸಿ ಇನ್ನೂ ನೀಲನಕ್ಷೆ ತಯಾರಿಸಬೇಕಿದೆ. ಈ ಬಗ್ಗೆ ಒಂದು ವಿವರಣೆ ಹೀಗೆ ಕೊಡಬಹುದು:
- ಆರಂಭದಲ್ಲಿ ಎಲ್ಲವೂ ಒಂದೇ ದಿನದಲ್ಲಿ ಆಗುವುದಿಲ್ಲ. ಮೊದಲನೆಯದಾಗಿ ಪ್ರಾಯೋಗಿಕ ಪರೀಕ್ಷೆಗೆ ಕೆಲವೊಂದಷ್ಟು ಜಿಲ್ಲೆಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಹೀಗೆಯೇ ಹಂತಹಂತವಾಗಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗಿತ್ತು.
- ಹೀಗಾಗಿ ಆರಂಭದಲ್ಲಿ 10, 20, 30 ಮತ್ತು 40 ಜಿಲ್ಲೆಗಳಲ್ಲಿ 1 ರಿಂದ 4 ವರ್ಷಗಳ ಒಳಗೆ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಲ್ಲಿ ಕ್ರಮವಾಗಿ ರು. 36,000 ಕೋಟಿ, ರು. 1,08,000 ಕೋಟಿ, ರು. 2,16,000 ಕೋಟಿ, ಮತ್ತು ರು. 3,60,000 ಕೋಟಿಗಳ ಅಗತ್ಯ ಬರಲಿದೆ.
- ಈಗಿನ ಕೆಲವು ಯೋಜನೆಗಳನ್ನು ನ್ಯಾಯ್ ಜೊತೆಗೂಡಿಸಬಹುದು. ಮೊದಲನೆಯದಾಗಿ ಆಹಾರ ಸಬ್ಸಿಡಿ ಕಾರ್ಯಕ್ರಮ. ಅದರ ಒಟ್ಟು ಬಜೆಟ್ Rs 1,84,000 ಆಗಿದ್ದು, 67% ಜನಸಂಖ್ಯೆಯನ್ನು ಗುರಿ ಇಟ್ಟಿದೆ. ತಲಾ ಆದಾಯ ಹೆಚ್ಚಾಗಿರುವ ಕಾರಣ ಈ ಕವರೇಜ್ ಅನ್ನು ಶೇ. 50 ಕ್ಕೆ ಇಳಿಸಬಹುದು. ಹಾಗೆ ಅದರಿಂದ ನ್ಯಾಯ್ಗಾಗಿ ರು. 50,000 ಕೋಟಿಯನ್ನು ಮೀಸಲಿಡಬಹುದು. ಉದ್ಯೋಗ ಖಾತ್ರಿ ಯೋಜನೆ ವರ್ಷಕ್ಕೆ 100 ದಿನಗಳ ಕಾಲ ಉದ್ಯೋಗ ಕೊಡುತ್ತದೆ. ಅದನ್ನು 150 ದಿನಕ್ಕೆ ಏರಿಸಿ ಅದರಿಂದ ಹೆಚ್ಚುವರಿ ರು. 10-20,000 ಕೋಟಿಗಳನ್ನು ನ್ಯಾಯ್ ಫಲಾನುಭವಿಗಳಿಗಾಗಿ ಕೊಡಬಹುದು. ಹೀಗಾಗಿ ವಿತ್ತೀಯ ಕೊರತೆಗೆ ಸ್ವಲ್ಪವೂ ಸೇರ್ಪಡೆಯಾಗದೆ 18 ತಿಂಗಳುಗಳ ಕಾಲ ನಿಭಾಯಿಸಬಹುದು.
- ಅಲ್ಲದೆ ರು. 2.50 ಕೋಟಿಗಿಂತ ಹೆಚ್ಚು ಆಸ್ತಿ ಇರುವ ಕುಟುಂಬಗಳ ಆಸ್ತಿ ತೆರಿಗೆಯನ್ನು ಶೇ. 1ರಷ್ಟು ಏರಿಸುವ ಸಲಹೆಯೂ ದೊರೆತಿದೆ. ಇದರಿಂದ ವಿತ್ತೀಯ ಕೊರತೆ ಇಲ್ಲದೆಯೇ ನ್ಯಾಯ್ ವೆಚ್ಚವನ್ನು ಭರಿಸಬಹುದು.
- ಅಂತಿಮವಾಗಿ ಆರ್ಥಿಕ ಪ್ರಗತಿ ಉಳಿದ ವೆಚ್ಚವನ್ನು ಭರಿಸಲಿದೆ. ಭಾರತದ ಜಿಡಿಪಿ ರು. 2 ಲಕ್ಷ ಕೋಟಿಯಿಂದ ರು. 3.50+ ಲಕ್ಷ ಕೋಟಿಗೆ ಮುಂದಿನ 4-5 ವರ್ಷಗಳಲ್ಲಿ ಏರುವ ನಿರೀಕ್ಷೆ ಇದೆ. ಅದು ‘ನ್ಯಾಯ್’ಗೆ ಬೇಕಾಗುವ ಹೆಚ್ಚುವರಿ ತೆರಿಗೆ ಆದಾಯವನ್ನು ತರಬಹುದು.
ಆರ್ಥಿಕ ಪ್ರಗತಿಗೂ ಕ್ರಮ ಕೈಗೊಳ್ಳಬೇಕು
ಭಾರತದ ನಿಯಂತ್ರಿತ ಅರ್ಥವ್ಯವಸ್ಥೆಯನ್ನು ಉದಾರವಾದಿಯಾಗಿ ಪರಿವರ್ತಿಸಲು ರಾಹುಲ್ ಗಾಂಧಿ ಕ್ರಮ ಕೈಗೊಳ್ಳಬೇಕು. ವ್ಯಾಪಕ ಆಡಳಿತ ಸುಧಾರಣೆ ಅಂದರೆ ಉದ್ಯೋಗ ಮತ್ತು ಆಸ್ತಿ ಸಂಗ್ರಹದಲ್ಲಿ ವೃದ್ಧಿಯಾಗಿ ಆರ್ಥಿಕತೆ ಎರಡಂಕಿ ಪ್ರಗತಿಯನ್ನು ಸಾಧಿಸಬೇಕಾಗುತ್ತದೆ.
ನಮ್ಮ ಜಿಡಿಪಿಯ ಶೇ. 90 ರಷ್ಟು ಖಾಸಗಿ ಸಂಸ್ಥೆಗಳು. ಆದರೆ ಅವುಗಳು ಸರ್ಕಾರಿ ಆಡಳಿತದ ನಿಯಂತ್ರಣದಲ್ಲಿ ಸೊರಗುತ್ತಿವೆ. ಭಾರತದಲ್ಲಿ ಸರ್ಕಾರಿ ಅಧಿಕಾರಿಗಳು ನೀತಿ ರೂಪಿಸುವಾಗ ಮಾರುಕಟ್ಟೆ ಪಡೆಗಳ ಮೇಲೆ ಸಂಶಯವನ್ನೇ ಹೊಂದಿರುತ್ತಾರೆ. ಹಣಕಾಸು ಭದ್ರತೆಯೇ ಅವರಿಗೆ ಮುಖ್ಯವಾಗಿರುತ್ತದೆ. ಆದರೆ ಕೆಲವು ಕ್ರೂರ ಕಾನೂನುಗಳು ಬದಲಾಗಬೇಕು.
- ಗುತ್ತಿಗೆಗಳ ಮೂಲಕ ಕಾರ್ಪೋರೇಟ್ಗಳ ಮರುರಚನೆ ಏಕೆ ಮಾಡಬಾರದು. ಅದು ಹಲವು ವಾರಗಳನ್ನು ಉಳಿಸಲಿವೆ. ಅತೀ ಕಾನೂನು ಶುಲ್ಕ ಭರಿಸಿ ಉದ್ಯಮಪತಿಗಳು ನ್ಯಾಯಾಲಯದಲ್ಲೇ ಅತೀ ಹೆಚ್ಚು ಸಮಯ ಏಕೆ ಕಳೆಯಬೇಕು?
- ಮಾರ್ಗದರ್ಶಿ ಸೂತ್ರಗಳು ಕಂಪನಿಗಳನ್ನು ಕಟ್ಟಿ ಹಾಕುವ ರೀತಿಯಲ್ಲಿ ಏಕೆ ಇರಬೇಕು?
- ಪೆಟ್ರೋಲ್ ಉದಾರ ಬೆಲೆಯಲ್ಲಿರುವಾಗ ಮನೋರಂಜನಾ ತೆರಿಗೆಗಳನ್ನೇಕೆ ನಿಯಂತ್ರಿಸಲಾಗುತ್ತಿದೆ?
- ತೆರಿಗೆ ತಟಸ್ಥ ವಿಲೀನಕ್ಕೆ ಮೊದಲು ನ್ಯಾಯಾಲಯದ ಅಂಗೀಕಾರ ಏಕೆ? ಅದೇ ವ್ಯವಹಾರಕ್ಕೆ ರು. 5,000 ಕೋಟಿ ಡಿವಿಡೆಂಡ್ ತೆರಿಗೆ ಬೇಡಿಕೆಯ ಬರ ಬೀಳಲಿದೆ.
- ನಾವೇಕೆ ಪ್ರಥಮ ತಲೆಮಾರಿನ ಸಂಸ್ಥಾಪಕರಿಗೆ ಚೀನಾ ಮತ್ತು ಅಮೆರಿಕದ ಸಂಸ್ಥೆಗಳ ಮೇಲೆ ಹೆಚ್ಚಿನ ಸ್ವಾಮ್ಯ ಕೊಡುತ್ತಿಲ್ಲ? ವಿದೇಶಿ ಪಟ್ಟಿ ಮತ್ತು ಹಣಕಾಸು ಉತ್ಪನ್ನಗಳ ಬಗ್ಗೆ ಹೆಚ್ಚಿ ನಿಯಂತ್ರಣವೇಕೆ?
- ಸಣ್ಣ ಉದ್ಯಮಗಳು ಜಿಎಸ್ಟಿ ಲಾಭಗಳನ್ನು ಗ್ರಾಹಕರಿಗೆ ದಾಟಿಸದಂತೆ ತಡೆಯುವುದೇಕೆ? ಸ್ಪರ್ಧಾತ್ಮಕ ಪಡೆಗಳು ಅದನ್ನು ಸಾಧಿಸುವ ನಂಬಿಕೆ ನಮಗೇಕಿಲ್ಲ?
- ಜಗತ್ತಿನ ಯಾವ ದೇಶವು ಬಂಡವಾಳವನ್ನು ಆದಾಯವೆಂದು ತೆರಿಗೆ ವಿಧಿಸುತ್ತದೆ?
ಇಂತಹ ಹಲವು ಉದಾಹರಣೆಗಳನ್ನು ಉದ್ಯಮಕ್ಕೆ ತಡೆಯಾಗುವ ಬಗ್ಗೆ ಹೇಳುತ್ತಲೇ ಹೋಗಬಹುದು. ನ್ಯಾಯ್ ಯಶಸ್ವಿಯಾಗಬೇಕಿದ್ದಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವ್ಯಾಪಕವಾಗಿ ಉಮೀದ್ (ಅನ್ಲೀಶ್ ಮಹಾತ್ವಾಕಾಂಕ್ಷಾ (ಆಂಬಿಶನ್) ಆಂಡ್ ಮೋಜೋ ವಯಾ ಎಕ್ಸೆಪ್ಷನಲ್ ಆಂಡ್ ಎನರ್ಜೆಟಿಕ್ ಡಿರೆಗ್ಯುಲೇಶನ್) ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ನ್ಯಾಯ್ ಮತ್ತು ಉಮೀದ್ ಅನ್ನು ಸಮಾನ ಅವಳಿಗಳೆಂದು ಕಾಣಬೇಕು. ಅವುಗಳನ್ನು ಒಂದೇ ತಾಯಿಯ ಮಕ್ಕಳಂತೆ ಪೋಷಿಸಿ ಬೆಳೆಸಬೇಕು. ಅವು ಜೊತೆಯಾಗಿ ದೇಶವನ್ನು ಪರಿವರ್ತನೆಗೊಳಿಸಲಿವೆ.