ಪ್ರಜಾಪ್ರಭುತ್ವ ರಕ್ಷಣೆಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಪರಸ್ಪರ ಕೈಜೋಡಿಸುವುದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ಇದೀಗ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿನ ರಾಹುಲ್ ಗಾಂಧಿ ಸ್ಪರ್ಧೆ ವಿಷಯವೇ ದೊಡ್ಡ ಕಂಗಟ್ಟಾಗಿದೆ.
ಪಶ್ಚಿಮಬಂಗಾಳದಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ನಡುವೆ ಚುನಾವಣಾಪೂರ್ವ ಮೈತ್ರಿ ಪ್ರಯತ್ನಗಳು ಮುರಿದುಬಿದ್ದ ಬಳಿಕ, ಭಾನುವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೇರಳದ ವಯನಾಡು ಲೋಕಸಭಾ ಕ್ಷೇತ್ರವನ್ನು ಅಮೇಥಿಯ ಬಳಿಕ ತಮ್ಮ ಎರಡನೇ ಕ್ಷೇತ್ರವಾಗಿ ಘೋಷಿಸಿದ ಹಿನ್ನೆಲೆಯಲ್ಲಿ; ಕೇರಳದಲ್ಲಿಯೂ ಪ್ರತಿಪಕ್ಷಗಳ ಮಹಾಮೈತ್ರಿಗೆ ಮತ್ತೊಂದು ಬಲವಾದ ಪೆಟ್ಟು ಬಿದ್ದಿದೆ. ಕೇರಳದ ಸಿಪಿಐ ಮತ್ತು ಸಿಪಿಐ ನೇತೃತ್ವದ ಆಡಳಿತಾರೂಢ ಎಲ್ ಡಿಎಫ್ ಕೂಟ, ವಯನಾಡಿನಲ್ಲಿ ಈಗಾಗಲೇ ಪ್ರಚಾರ ಆರಂಭಿಸಿರುವ ತಮ್ಮ ಅಭ್ಯರ್ಥಿಯ ವಿರುದ್ಧ ಕಾಂಗ್ರೆಸ್ ಅಧ್ಯಕ್ಷರು ಕಣಕ್ಕಿಳಿಯುತ್ತಿರುವುದು ರಾಷ್ಟ್ರಮಟ್ಟದಲ್ಲಿ ಮಹಾಮೈತ್ರಿಗೆ ಭಾರೀ ಹಿನ್ನಡೆಯಾಗಲಿದೆ. ಎಡಪಕ್ಷಗಳಿಗೆ ತಮ್ಮ ವಿರೋಧಿ ಯಾರು ಎಂಬ ಬಗ್ಗೆ ಸ್ಪಷ್ಟತೆ ಇದೆ. ಆದರೆ, ಕಾಂಗ್ರೆಸ್ಸಿಗೆ ಆ ಸ್ಪಷ್ಟತೆಯೇ ಇಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಎಡರಂಗ ಮೈತ್ರಿ ಮತ್ತು ಕಾಂಗ್ರೆಸ್ ಮೈತ್ರಿ ನಡುವೆ ಕೇರಳದಲ್ಲಿ ಪೈಪೋಟಿ ಇದೆ. ಅಲ್ಲಿ ಬಿಜೆಪಿಯಾಗಲೀ ಅಥವಾ ಅದರ ಅಂಗಪಕ್ಷಗಳಾಗಲೀ ತಮಗೆ ಪೈಪೋಟಿ ನೀಡುವಷ್ಟು ಪ್ರಬಲವಾಗಿಲ್ಲ. ಇಂತಹ ಹೊತ್ತಲ್ಲಿ, ರಾಹುಲ್ ಗಾಂಧಿಯವರು ಎಡಪಕ್ಷಗಳ ವಿರುದ್ಧವೇ ಕಣಕ್ಕಿಳಿದಿರುವುದು ರಾಷ್ಟ್ರಮಟ್ಟದಲ್ಲಿ ಯಾವ ಸಂದೇಶ ನೀಡುತ್ತದೆ ಎಂಬುದನ್ನು ಕಾಂಗ್ರೆಸ್ ಯೋಚಿಸಬೇಕಿತ್ತು. ಆದರೆ, ನಾವು ಇದೀಗ ಈ ವಿಷಯದಲ್ಲಿ ಹಿಂಜರಿಯುವ ಪ್ರಶ್ನೆಯೇ ಇಲ್ಲ. ರಾಹುಲ್ ರನ್ನು ಸೋಲಿಸಲು ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ ಎಂದು ಎಲ್ ಡಿಎಫ್ ನಾಯಕರು ಪಟ್ಟು ಹಿಡಿದಿದ್ದಾರೆ.
ಆದರೆ, ಕಳೆದ ಚುನಾವಣೆಯಲ್ಲಿ ಅಮೇಥಿಯಲ್ಲಿ ಗೆಲುವಿನ ಅಂತರ ಗಣನೀಯವಾಗಿ ಕುಗ್ಗಿರುವುದು ಮತ್ತು ಈ ಬಾರಿ ಮತ್ತೊಮ್ಮೆ ಸಚಿವೆ ಸ್ಮೃತಿ ಇರಾನಿಯೇ ತಮ್ಮ ವಿರುದ್ಧ ಕಣಕ್ಕಿಳಿದಿರುವುದರಿಂದ ಸುರಕ್ಷಿತ ಕ್ಷೇತ್ರವಾಗಿ ರಾಹುಲ್ ವಯನಾಡನ್ನು ಆಯ್ಕೆಮಾಡಿಕೊಂಡಿದ್ದಾರೆ. ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ರೈತರು ಮತ್ತು ಎಸ್ಟೇಟ್ ಕಾರ್ಮಿಕರು ಇದ್ದು, ಅವರ ಪರ ನಿರಂತರವಾಗಿ ದನಿ ಎತ್ತುವ ಮೂಲಕ ರಾಷ್ಟ್ರಮಟ್ಟದಲ್ಲಿ ಆ ವರ್ಗಗಳ ಬೆಂಬಲ ಗಳಿಸಿಕೊಂಡಿರುವ ಅವರಿಗೆ ಇಲ್ಲಿ ಸುಲಭ ಜಯ ಸಿಗುವ ನಿರೀಕ್ಷೆ ಇದೆ. ಹಾಗಾಗಿಯೇ ಅವರು ಈ ಕ್ಷೇತ್ರವನ್ನೇ ಆಯ್ಕೆಮಾಡಿಕೊಂಡಿದ್ದಾರೆ ಎಂಬ ವಿಶ್ಲೇಷಣೆಗಳೂ ಇವೆ.
ಕೇರಳದ ಉತ್ತರ ಗಡಿಯ ವಯನಾಡು ನೆರೆಯ ತಮಿಳುನಾಡು ಮತ್ತು ಕರ್ನಾಟಕಕ್ಕೂ ಹೊಂದಿಕೊಂಡಿದೆ. ಹಾಗಾಗಿ ವಯನಾಡಿನಲ್ಲಿ ಕಣಕ್ಕಿಳಿಯುವುದರಿಂದ ನೆರೆಯ ರಾಜ್ಯಗಳ ಮೇಲೆಯೂ ಅದು ಪರಿಣಾಮ ಬೀರಲಿದೆ. ಅಲ್ಲದೆ, 1977ರಿಂದಲೂ ಕಾಂಗ್ರೆಸ್ ಪಾಲಿಗೆ ದಕ್ಷಿಣ ಭಾರತ ಪುನರ್ಜನ್ಮದ, ಪುನಃಶ್ಚೇತನದ ಮತ್ತು ರಾಜಕೀಯ ಪುನರ್ವಸತಿಯ ಅವಕಾಶಗಳನ್ನು ನೀಡುತ್ತಲೇ ಇದೆ. ಹಾಗಾಗಿ ಉತ್ತರಪ್ರದೇಶದ ಅಮೇಥಿಯಲ್ಲಿ ಪ್ರಬಲ ಪೈಪೋಟಿ ಎದುರಿಸುತ್ತಿರುವ ಪಕ್ಷದ ಅಧ್ಯಕ್ಷರಿಗೆ ಈ ಬಾರಿಯೂ ಮತ್ತೊಮ್ಮೆ ದಕ್ಷಿಣ ಭಾರತ ಆಶೀರ್ವಾದ ಮಾಡಲಿದೆ. ಆ ಮೂಲಕ ನೆಹರು-ಗಾಂಧಿ ಕುಟುಂಬವನ್ನು ರಾಜಕೀಯವಾಗಿ ಕೈಹಿಡಿಯಲಿದೆ ಎಂಬ ನಿರೀಕ್ಷೆ ಕಾಂಗ್ರೆಸ್ಸಿನದ್ದು.
ಕಾಂಗ್ರೆಸ್ಸಿನ ಈ ಲೆಕ್ಕಾಚಾರಗಳೇನೇ ಇರಲಿ; ಇದು ಬಿಜೆಪಿಯೇತರ ಮೈತ್ರಿಕೂಟ ಮತ್ತು ಸಮಾನಮನಸ್ಕ ಪಕ್ಷಗಳ ನಡುವೆ ಈಗಾಗಲೇ ಹಿಗ್ಗುತ್ತಿದ್ದ ಕಂದಕವನ್ನು ಇನ್ನಷ್ಟು ಹಿಗ್ಗಿಸಲಿದೆ ಎಂಬುದಂತೂ ನಿಜ ಎಂದು ಎಡಪಕ್ಷಗಳು ಈಗಾಗಲೇ ಘೋಷಿಸಿಬಿಟ್ಟಿವೆ. ಸಿಪಿಐ ನಾಯಕ ಡಿ ರಾಜಾ, ಸ್ವತಃ ವಯನಾಡು ಎಲ್ ಡಿಎಫ್ ಅಭ್ಯರ್ಥಿ ಪಿ ಪಿ ಸುನೀರ್ ಕೂಡ ರಾಹುಲ್ ನಡೆಯನ್ನು ಟೀಕಿಸಿದ್ದಾರೆ ಮತ್ತು ರಾಹುಲ್ ಅವರಿಗೆ ಇಲ್ಲಿ ಸೋಲು ಕಟ್ಟಿಟ್ಟಬುತ್ತಿ ಎನ್ನುವ ಮೂಲಕ ತಾವು ಕಣದಿಂದ ಹಿಂದಿಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಈ ನಡುವೆ, ಬಿಜೆಪಿ ನೇತೃತ್ವದ ಎನ್ ಡಿಎ ಕೂಡ ಸೋಮವಾರ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಕೇರಳದ ಎನ್ ಡಿಎ ಪ್ರಬಲ ಮೈತ್ರಿಪಕ್ಷ ಭಾರತ ಧರ್ಮ ಜನಸೇನಾ(ಬಿಡಿಜೆಎಸ್) ನಾಯಕ ತುಷಾರ್ ವೆಲ್ಲಪಳ್ಳಿಯವರೇ ತಮ್ಮ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದು, ಅವರ ಮೂಲಕ ಬಿಜೆಪಿ ಕೇರಳದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಲಿದೆ ಎಂದು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಹಾಗೆ ನೋಡಿದರೆ, 2009ರ ಲೋಕಸಭಾ ಚುನಾವಣೆಗೆ ಮುನ್ನ ನಡೆದ ಕ್ಷೇತ್ರ ಮರುವಿಂಗಡಣೆಯ ಮೂಲಕ ಅಸ್ತಿತ್ವಕ್ಕೆ ಬಂದ ವಯನಾಡು ಕ್ಷೇತ್ರ ಕಂಡಿರುವ ಈವರೆಗಿನ ಎರಡೂ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಲಿ ಜಯಭೇರಿ ಭಾರಿಸಿದೆ. 2009 ಮತ್ತು 2014ರ ಚುನಾವಣೆಗಳಲ್ಲಿ ಕಾಂಗ್ರೆಸ್ಸಿನ ಶಹನವಾಸ್ ಕ್ರಮವಾಗಿ 1. 53 ಲಕ್ಷ ಹಾಗೂ 20 ಸಾವಿರ ಮತಗಳ ಅಂತರದಿಂದ ಜಯ ಪಡೆದಿದ್ದರು. ಇತ್ತೀಚೆಗೆ ಅವರ ಅಕಾಲಿಕ ಮರಣದ ಬಳಿಕ ಕ್ಷೇತ್ರ ಖಾಲಿ ಉಳಿದಿತ್ತು. ಸಿಪಿಐ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಯ ಕ್ಷೇತ್ರದಲ್ಲಿ ಕಳೆದ 2014ರ ಚುನಾವಣೆಯಲ್ಲಿ ಶಹನವಾಸ್ 30.18 ಶೇ ಮತಪಡೆದರೆ, ಸಿಪಿಐನ ಅಭ್ಯರ್ಥಿ ಶೇ.28.51ರಷ್ಟು ಮತ ಪಡೆದಿದ್ದರು. ಬಿಜೆಪಿ ಅಭ್ಯರ್ಥಿ 6.46 ಶೇ. ಮತ ಪಡೆದಿದ್ದರು. 2009ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ತಮ್ಮ ಮತ ಗಳಿಕೆಯನ್ನು ಶೇ.3.85ರಿಂದ ಶೇ.6.46ಕ್ಕೆ ಏರಿಸಿಕೊಂಡಿದೆ ಎಂಬುದು ಗಮನಾರ್ಹ.
ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ವಯನಾಡು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ, 2016ರ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಎಲ್ ಡಿಎಫ್ ಜಯಭೇರಿ ಭಾರಿಸಿತ್ತು. ಆದರೆ, ಒಟ್ಟು 13.25 ಲಕ್ಷ ಮತದಾರರ ಪೈಕಿ ಶೇ. 56ರಷ್ಟು ಮುಸ್ಲಿಂ ಮತದಾರರಿದ್ದು, ಕೇವಲ ಶೇ.34ರಷ್ಟು ಮಾತ್ರ ಹಿಂದೂ ಮತದಾರರಿದ್ದಾರೆ. ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ನ ಪ್ರಮುಖ ಮೈತ್ರಿಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್) ಈ ಭಾಗದಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದು, ಬಹುತೇಕ ಮುಸ್ಲಿಮರು ಅದರೊಂದಿಗೆ ಗುರುತಿಸಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿಯೇ ರಾಹುಲ್ ಗಾಂಧಿ, ವಯನಾಡನ್ನು ಘೋಷಿಸುವ ಮುನ್ನ ಐಯುಎಂಎಲ್ ನಾಯಕರೊಂದಿಗೆ ಮಾತುಕಡೆ ನಡೆಸಿ, ಅವರ ಬೆಂಬಲ ಖಚಿತಪಡಿಸಿಕೊಂಡಿದ್ದಾರೆ.
ಆದರೆ, 2014ರ ಲೋಕಸಭಾ ಚುನಾವಣೆಗೂ, ಈಗಿನ ಚುನಾವಣೆಗೂ ನಡುವೆ ಕೇರಳದಲ್ಲಿ ಹಲವು ರಾಜಕೀಯ ತಿರುವುಗಳು ಸಂಭವಿಸಿವೆ. ಪ್ರಮುಖವಾಗಿ ಶಬರಿಮಲೈಗೆ ಮಹಿಳೆಯರಿಗೆ ಪ್ರವೇಶ ನೀಡುವ ಕುರಿತ ನ್ಯಾಯಾಲಯದ ತೀರ್ಪಿನ ವಿಷಯದಲ್ಲಿ ಎದ್ದ ರಾಜಕೀಯ ಬಿರುಗಾಳಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಸಾಕಷ್ಟು ಬಲ ತುಂಬಿದೆ. ಬಿಜೆಪಿಯ ನೆಲೆ ವಿಸ್ತರಣೆ ಕಂಡಿದೆ. ಅದೇ ಹೊತ್ತಿಗೆ ಕೇರಳ ಕಾಂಗ್ರೆಸ್ಸಿನ ಒಳಜಗಳ ಮತ್ತು ಗುಂಪುಗಾರಿಕೆ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ 2016ರ ಅಲ್ಲಿನ ವಿಧಾನಸಭಾ ಚುನಾವಣೆಯ ಫಲಿತಾಂಶ ಕಣ್ಣೆದುರಿಗಿದೆ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗರು ಎಣಿಸಿದಷ್ಟು ಸುಲಭವಿಲ್ಲ ಈ ಬಾರಿ ವಯನಾಡು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಆದರೆ, ಈ ನಡುವೆ ಬಿಜೆಪಿ ರಾಹುಲ್ ವಿರುದ್ಧ ತನ್ನದೇ ನಾಯಕರನ್ನು ಕಣಕ್ಕಿಳಿಸುವ ಬದಲಾಗಿ ತನ್ನ ಮಿತ್ರಪಕ್ಷದ ನಾಯಕರನ್ನು ಕಣಕ್ಕಿಳಿಸಿದೆ. ಅಂದರೆ, ಬಿಜೆಪಿಗೆ ಸ್ವತಃ ತನ್ನ ರಾಷ್ಟ್ರಮಟ್ಟದ ನಾಯಕರನ್ನು ಕಣಕ್ಕಿಳಿಸಿ ಗೆಲ್ಲಿಸುವ ವಿಶ್ವಾಸವಿಲ್ಲ ಎಂಬುದನ್ನು ಆ ನಡೆ ಹೇಳುತ್ತಿದೆ. ಆ ಮೂಲಕ ಕೇರಳದ ವಯನಾಡಿನಲ್ಲಿ ರಾಹುಲ್ ಎದುರು ಪ್ರಬಲ ಸ್ಫರ್ಧೆ ಒಡ್ಡುವ ಬಲ ತನಗಿಲ್ಲ ಎಂಬುದನ್ನು ಬಿಜೆಪಿ ಪರೋಕ್ಷವಾಗಿ ಒಪ್ಪಿಕೊಂಡಿದೆ ಎಂಬ ವಿಶ್ಲೇಷಣೆಗಳೂ ಇವೆ.
ಆದರೆ, ಸದ್ಯಕ್ಕಂತೂ ವಯನಾಡಿನಿಂದ ಕಣಕ್ಕಿಳಿಯುವ ಕಾಂಗ್ರೆಸ್ ನಾಯಕ ರಾಹುಲ್ ನಿರ್ಧಾರ ದೇಶಾದ್ಯಂತ ಬಲ ಮತ್ತು ಎಡ ಪಕ್ಷಗಳ ಸಮಾನ ಟೀಕೆ ಮತ್ತು ಕುಹಕಕ್ಕೆ ಗುರಿಯಾಗಿದೆ. ಆ ದೃಷ್ಟಿಯಿಂದ ಇದೀಗ ಮತ್ತೊಮ್ಮೆ ಕಾಂಗ್ರೆಸ್ ಬಲಪಂಥೀಯ ಬಿಜೆಪಿ ಮತ್ತು ಎಡಪಂಥೀಯ ಸಿಪಿಐ ಮತ್ತು ಸಿಪಿಎಂಗಳ ಕೆಂಗಣ್ಣಿಗೆ ಗುರಿಯಾಗಿದೆ. ಆ ಹಿನ್ನೆಲೆಯಲ್ಲಿ ಎರಡೂ ಪ್ರಬಲ ಶಕ್ತಿಗಳನ್ನು ಎದುರುಹಾಕಿಕೊಂಡು, ಮತ್ತೊಮ್ಮೆ ದಕ್ಷಿಣ ಭಾರತ, ತಮ್ಮ ಅಜ್ಜಿ ಇಂದಿರಾಗಾಂಧಿ(ಚಿಕ್ಕಮಗಳೂರು-1977) ಮತ್ತು ತಾಯಿ ಸೋನಿಯಾ ಗಾಂಧಿ(ಬಳ್ಳಾರಿ-1999) ತಮಗೆ ಅದೃಷ್ಟ ತರುತ್ತದೆ ಎಂಬುದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಸಾಬೀತುಮಾಡುವರೇ ಎಂಬುದನ್ನು ಕಾದುನೋಡಬೇಕಿದೆ. ಸದ್ಯಕ್ಕಂತೂ ಇಡೀ ದೇಶದ ಕಣ್ಣು ವಯನಾಡಿನತ್ತ ನೆಟ್ಟಿದೆ!