ಪುರಿ (ಒಡಿಶಾ): ಸ್ವಂತ ಪ್ರಚಾರಕ್ಕಾಗಿ ಮಾಡುವ ಗಿಮ್ಮಿಕ್ಕುಗಳು ಕೆಲವೊಮ್ಮೆ ಪ್ರತಿಕೂಲ ಪರಿಣಾಮ ಉಂಟುಮಾಡುವ ಸಂದರ್ಭವೂ ಇರುತ್ತದೆ. ಇಲ್ಲಿ ಬಿಜೆಪಿಯ ರಾಷ್ಟ್ರೀಯ ವಕ್ತಾರರೂ ಸಧ್ಯ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಸಂಬಿತ್ ಪಾತ್ರಾ ವಿಷಯದಲ್ಲಿ ಆದದ್ದೂ ಇದೇ.
ಒಡಿಶಾದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ ಭಾನುವಾರ ವಿಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ವೃದ್ಧೆಯೊಬ್ಬಳು ಸೌದೆ ಒಲೆಯ ಮೇಲೆ ಹೆಂಚಿಟ್ಟುಕೊಂಡು ರೊಟ್ಟಿ ಮಾಡುತ್ತಿರುವ ದೃಶ್ಯವಿದೆ, ಅಲ್ಲೇ ಪಕ್ಕದಲ್ಲಿ ಸಂಬಿತ್ ಪಾತ್ರಾ ನೆಲದ ಮೇಲೆ ಕುಳಿತುಕೊಂಡು, ತಮ್ಮ ಬೆಂಬಲಿಗರೊಂದಿಗೆ ಆ ವೃದ್ಧೆ ಮಾಡಿಕೊಟ್ಟ ರೊಟ್ಟಿ ತಿನ್ನುತ್ತಾ, ಆ ಮನೆಯ ಸದಸ್ಯರಿಗೆಲ್ಲಾ ಒಂದೊಂದು ಒಂದು ತುತ್ತು ತಿನ್ನಿಸುವ ಭೀಕರ ಸೆಂಟಿಮೆಂಟ್ ದೃಶ್ಯವಿದೆ!
ಸಂಬಿತ್ ಪಾತ್ರಾ, ತಾವು ಹಂಚಿಕೊಂಡಿದ್ದ ಈ ವಿಡಿಯೋ ನೋಡಿ ಎಲ್ಲರ ಮನ ಕರಗಬಹುದು, ಎಲ್ಲರೂ ತಮ್ಮ ಸರಳತೆ ನೋಡಿ ಶ್ಲಾಘಿಸಬಹುದು ಎಂದು ಕೊಂಡಿದ್ದರೇನೋ. ಒಬ್ಬ ಅಭ್ಯರ್ಥಿ ಅದೆಷ್ಟು ವಿನಮ್ರತೆಯಿಂದ ತಳಮಟ್ಟಕ್ಕಿಳಿದು ಬಡ ಜನರ ಜೊತೆ ಬೆರೆಯುತ್ತಿದ್ದಾರೆ ಎಂಬ ಭಾವನೆ ಎಲ್ಲರಲ್ಲಿ ಹುಟ್ಟಬಹುದು ಎಂದು ಸಂಬಿತ್ ಯೋಚಿಸಿದ್ದರೋ ಏನೋ? ಆದರೆ ಹಾಗಾಗುವ ಬದಲು ಬೇರೆಯದೇ ಪರಿಣಾಮ ಆಗಿದೆ!
ಸಾಮಾಜಿಕ ಮಾಧ್ಯಮ ಟ್ವಿಟರ್ ನಲ್ಲಿ ಈ ವಿಡಿಯೋ ನೋಡಿದ ಬಹುತೇಕರು ಸಂಬಿತ್ ಪಾತ್ರಾಗೆ ಕೇಳುತ್ತಿರುವುದು ಒಂದೇ ಪ್ರಶ್ನೆ- “ಗ್ಯಾಸ್ ಸಿಲಿಂಡರ್ ಎಲ್ಲಿ? ಉಜ್ವಲಾ ಯೋಜನೆಯಲ್ಲಿ ಬಡವರಿಗೆ ಹಂಚಿದ ಗ್ಯಾಸ್ ಸಿಲಿಂಡರ್ ಕಾಣ್ತಾ ಇಲ್ವಲ್ಲ?”
ಒಂದು ಕಡೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಉಜ್ವಲ ಯೋಜನೆ ದೇಶಾದ್ಯಂತ ಅತ್ಯಂತ ಯಶಸ್ವಿಯಾಗಿ ಜಾರಿಯಾಗಿದೆ ಎಂದು ಹೇಳಿಕೊಳ್ಳುವ ಬಿಜೆಪಿ ವಕ್ತಾರರೇ ಇಲ್ಲಿ ಸೌದೆ ಒಲೆಯ ಊಟ ಸವಿಯುತ್ತಿದ್ದಾರೆ ಎಂಬ ಟೀಕೆಗೆ ಇದೇ ವಿಡಿಯೋ ಎಡೆ ಮಾಡಿಕೊಟ್ಟಿದೆ. ದೇಶದ ಕಟು ವಾಸ್ತವ ಸಂಬಿತ್ ಪಾತ್ರಾ ಅವರ ವಿಡಿಯೋ ಮೂಲಕ ಹೊರಬಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ವಿಡಿಯೋ ಜತೆಗೆ ಸಂಬಿತ್ ಅವರು “ಇದು ನನ್ನ ಸ್ವಂತ ಮನೆ, ನನ್ನ ತಾಯಿ ಅವರೇ ಕೈಯಾರೆ ಮಾಡಿದ ಆಹಾರವನ್ನು ನನಗೆ ಬಡಿಸಿದರು. ನಾನೂ ಸಹ ಅವರಿಗೆ ತಿನ್ನಿಸಿದೆ. ಪ್ರಜೆಗಳಿಗೆ ಮಾಡುವ ಸೇವೆ ದೇವರಿಗೆ ಮಾಡಿದಂತೆ ಎಂಬುದನ್ನು ನಾನು ನಂಬಿದ್ದೇನೆ,’’ ಎಂದು ನಾಟಕದ ಡೈಲಾಗ್ ರೀತಿ ಒರಿಯಾ ಭಾಷೆಯಲ್ಲಿ ಮತ್ತು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ଏହା ମୋର ନିଜ ଘର, ମାଁ ମୋତେ ନିଜ ହାତରନ୍ଧା ଖୁଆଇଲେ । ମୁଁ ମଧ୍ୟ ମୋ ନିଜ ହାତରେ ତାଙ୍କୁ ଖୁଆଇଲି ଏବଂ ମୁଁ ଜାଣେ ମାନବ ସେବା ହିଁ ଈଶ୍ୱରଙ୍କ ସବୁଠୁ ବଡ଼ ପୂଜା ଅଟେ l [2/2]@BJP4Odisha #PhirEkBaarModiSarkar pic.twitter.com/PiZLZKSZmL
— Chowkidar Sambit Patra (@sambitswaraj) March 31, 2019
ವೃದ್ಧೆ ಸೌದೆ ಒಲೆಯಲ್ಲಿ ಆಹಾರ ತಯಾರಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಂಡ ಬಳಿಕ, ‘ಮೋದಿ ಸರ್ಕಾರದ ಉಜ್ವಲ ಯೋಜನೆ ಯಶಸ್ವಿಯಾಗಿ ಜಾರಿಯಾಗಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಅವರು ದೇಶಾದ್ಯಂತ ಸಮರ್ಥಿಸುತ್ತಾರೆ. ಆದರೆ ತಮ್ಮದೇ ಕ್ಷೇತ್ರದಲ್ಲಿ ಸೌದೆ ಒಲೆಯಲ್ಲಿ ಮಾಡಿರುವ ಆಹಾರ ಸೇವಿಸುತ್ತಿದ್ದಾರೆ’ ಸಂಬಿತ್ ಅವರನ್ನು ತರಾಟೆ ತೆಗೆದುಕೊಂಡವರೇ ಹೆಚ್ಚು.
‘ಪ್ರಧಾನಿ ಮೋದಿ ಅವರ ಉಜ್ವಲ ಯೋಜನೆ ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂಬುದನ್ನು ಅವರ ವಕ್ತಾರ ಸಂಬಿತ್ ಅವರೇ ಜಗತ್ತಿಗೆ ತಿಳಿಸಿದ್ದಾರೆ’ ಎಂದು ಪ್ರತಿಪಕ್ಷಗಳ ಸದಸ್ಯರೂ ಟೀಕಿಸಿದ್ದಾರೆ.
2016ರಲ್ಲಿ ಜಾರಿಯಾದ ಉಜ್ವಲ ಯೋಜನೆಯಡಿ ಬಡತನ ರೇಖೆಗಿಂತ ಕಡಿಮೆ ಇರುವ ಗ್ರಾಮೀಣ ಕುಟುಂಬಗಳ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕ ಒದಗಿಸಲಾಗುವುದು ಎಂದು ಹೇಳಲಾಗಿತ್ತು. ಈ ಯೋಜನೆಯಡಿ ಬಡ ಕುಟುಂಬಗಳು ಉಚಿತ ಎಲ್ಪಿಜಿ ಹಾಗೂ ಗ್ಯಾಸ್ ಸೌಲಭ್ಯ ಪಡೆಯಲಿದ್ದಾರೆ ಎಂದು ಮೋದಿ ಸರ್ಕಾರ ಭರವಸೆ ನೀಡಿತ್ತು. ದೇಶದಾದ್ಯಂತ 4 ಕೋಟಿ ಜನರು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಬಿಜೆಪಿ ಪ್ರಚಾರ ಮಾಡಿಕೊಂಡಿದೆ. ಅಲ್ಲದೇ ಇದು ತಮ್ಮ ಸರ್ಕಾರ ಜಾರಿಗೊಳಿಸಿದ ಅತ್ಯಂತ ಯಶಸ್ವಿ ಯೋಜನೆ ಎಂದು ಬಿಜೆಪಿ ತನ್ನ ಬೆನ್ನು ತಾನೇ ತಟ್ಟಿಕೊಂಡು ಬರುತ್ತಿದೆ.