ಚುನಾವಣೆಯ ತೀವ್ರತೆ ಹೀಗೂ ಇರುತ್ತದೆ! “ನಿಮ್ಮ ನಿಜ ಮುಖವನ್ನು ನೋಡಿಕೊಳ್ಳಿ” ಎಂಬ ಸಂದೇಶದೊಂದಿಗೆ ಛತ್ರೀಸ್ ಗಡದ ಮುಖ್ಯಮಂತ್ರಿ ಭೂಪೇಶ್ ಭಗೇಲ್ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಒಂದು ಕನ್ನಡಿಯನ್ನೇ ಪಾರ್ಸೆಲ್ ಮೂಲಕ ಕಳಿಸಿರುವ ಸುದ್ದಿ ಇದು.
ದೇಶದಲ್ಲಿ ಕಾಂಗ್ರೆಸ್-ಬಿಜೆಪಿಗಳ ನಡುವಿನ ವಾಗ್ವಾದ ವಾಗ್ಯುದ್ಧಗಳು ಭಿನ್ನ ಆಯಾಮ ಪಡೆಯುತ್ತಿದ್ದಂತೆ ಟೀಕೆಗಳು, ವ್ಯಂಗ್ಯಗಳು, ಕುಹಕಗಳು ತಾರಕಕ್ಕೇರುತ್ತಿವೆ. ಈ ಮಧ್ಯೆ ಪ್ರಧಾನಮಂತ್ರಿ ಮೋದಿಯವರಿಗೆ ಕನ್ನಡಿಯೊಂದನ್ನು ಕಳಿಸಿರುವ ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಭಗೇಲ್, ಕನ್ನಡಿ ನೋಡಿಕೊಂಡು ತಮ್ಮ ನಿಜ ಮುಖವನ್ನು ಪತ್ತೆ ಹಚ್ಚಿಕೊಳ್ಳುವಂತೆ ಮೋದಿಯವರಿಗೆ ಸಲಹೆ ನೀಡಿದ್ದಾರೆ.
ದೇಶದ ಜನತೆ ಬರಲಿರುವ ಲೋಕಸಭಾ ಚುನಾವಣೆಗಳಲ್ಲಿ ಮೋದಿಯವರಿಗೆ ಕನ್ನಡಿ ತೋರಿಸಲಿದ್ದಾರೆ ಎಂದು ಭಗೇಲ್ ಪ್ರಧಾನಿಯವರಿಗೆ ಗೋಡೆ ಕನ್ನಡಿಯನ್ನು ಪಾರ್ಸೆಲ್ ಕಳಿಸಿ ಟ್ವಿಟ್ಟರ್ ನಲ್ಲಿ ಹೀಗೆ ನೀಡಿದ್ದಾರೆ.
“ನಾನು ನಿಮಗೆ ಈ ಕನ್ನಡಿಯನ್ನು ಉಡುಗೊರೆಯಾಗಿ ಕಳುಹಿಸುತ್ತಿದ್ದೇನೆ. ಈ ಕನ್ನಡಿಯೊಳಗೆ ನಿಮ್ಮನ್ನು ನೀವು ಪದೇಪದೇ ನೋಡಿಕೊಳ್ಳುತ್ತಿದ್ದರೆ ನಿಮ್ಮ ನಿಜಮುಖವನ್ನು ಗುರುತಿಸಿಕೊಳ್ಳಲು ನಿಮಗೆ ಸಾಧ್ಯವಾಗಬಹುದು. ನೀವು ಸಾಕಷ್ಟು ಕಾಲ ಕಳೆಯುವ ಲೋಕ ಕಲ್ಯಾಣ ಮಾರ್ಗದ ನಿಮ್ಮ ಮನೆಯಲ್ಲಿ ಈ ಕನ್ನಡಿಯನ್ನು ಹಾಕಿಕೊಳ್ಳಿ.” ಎಂದು ಕಾಂಗ್ರೆಸ್ ನಾಯಕ ಭಗೇಲ್ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.
“ನೀವು ಈ ಕನ್ನಡಿಯನ್ನ ಬಳಸದಿರಬಹುದು. ಅದನ್ನು ಪ್ರಧಾನಿಯವರ ಗೃಹದ ಕಸದ ಬುಟ್ಟಿಯಲ್ಲಿ ಬಿಸಾಡಲೂಬಹುದು. ಆದರೆ ಈ ಕನ್ನಡಿಯನ್ನು ನೋಡುವುದರಿಂದ ತಪ್ಪಿಸಿಕೊಳ್ಳಲಾರಿರಿ. ಈ ಚುನಾವಣೆಯಲ್ಲಿ ದೇಶದ 125 ಕೋಟಿ ಜನರು ನಿಮಗೆ ಕನ್ನಡಿ ತೋರಿಸಲಿದ್ದಾರೆ… ತಾವು ಸಿದ್ಧರಿದ್ದೀರಾ ಮೋದಿಜಿ? ಎಂದು ಭೂಪೇಶ್ ಭಗೇಲ್ ಅವರು ಮತ್ತೊಂದು ಟ್ವೀಟ್ ನಲ್ಲಿ #ModiVsModi ಹ್ಯಾಶ್ ಟ್ಯಾಗ್ ಬಳಸಿ ಕೇಳಿದ್ದಾರೆ.
.@narendramodi जी!
मैं आपको यह आईना तोहफा स्वरूप भेज रहा हूं। इस आईने को आप लोक कल्याण मार्ग के अपने आवास में किसी ऐसी जगह लगाएं, जहां से आप सबसे अधिक बार गुजरते हों। ताकि इस आईने में अपनी शक्ल बार बार देख आप अपनी असली चेहरे को पहचानने की कोशिश कर सकें।#ModiVsModi pic.twitter.com/3TJHUxwknG
— Bhupesh Baghel (@bhupeshbaghel) April 1, 2019
ಭಗೇಲ್ ಅವರು ಮೋದಿಯವರ ನೀತಿಗಳನ್ನು ಟೀಕಿಸಿ ಅವರಿಗೆ ಒಂದು ಪತ್ರವನ್ನು ಬರೆದು ತಮ್ಮ ಫೇಸ್ಬುಕ್ ಪುಟದಲ್ಲಿ ಹಾಕಿದ್ದಾರೆ. “ತಮ್ಮನ್ನು ತಾವು ಅನೇಕ ಹೆಸರುಗಳಿಂದ ಕರೆದುಕೊಂಡಿರುವುದರಿಂದ ಜನ ಮೋದಿಯವರನ್ನು ಯಾವ ಹೆಸರಿನಿಂದ ಕರೆಯಬೇಕೆಂಬ ಗೊಂದಲಕ್ಕೀಡಾಗಿದ್ದಾರೆ …. ಚಾಯ್ವಾಲಾ, ಫಕೀರ, ಚೌಕೀದಾರ, ಸಾಹೇಬ, ಹೆಸರುಗಳು ಇನ್ನೂ ಎಷ್ಟಿವೆಯೋ ಗೊತ್ತಿಲ್ಲ.” ಎಂದು ವ್ಯಂಗ್ಯವಾಡಿದ್ದಾರೆ ಛತ್ತೀಸ್ಗಢದ ಹಾಲಿ ಮುಖ್ಯಮಂತ್ರಿ.
‘ಮೋದಿಯವರು ನೀಡಿದ್ದ ಯಾವ ಆಶ್ವಾಸನೆಯೂ ಈಡೇರದೆ ಬರೀ ಜುಮ್ಲಾ (ಬೊಗಳೆ) ಆಗಿವೆ’ ಎಂದಿರುವ ಅವರು ಫ್ರಧಾನಿಯವರನ್ನು ಮತ್ತು ಅವರ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸೂಟು, ವಿದೇಶ ಪ್ರವಾಸಗಳು, ಜಿಎಸ್ಟಿ, ಪಾಕಿಸ್ತಾನ ಮತ್ತು ಚೀನಗಳಿಗೆ ಸಂಬಂಧಪಟ್ಟ ವಿದೇಶಾಂಗ ನೀತಿ, ರಫೇಲ್ ಯುದ್ಧ ವಿಮಾನ ವ್ಯವಹಾರದ ಕುರಿತು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
“ನಿಮ್ಮ ನಿಜ ಮುಖವನ್ನು ಗುರುತಿಸಲು ಜನರಿಗೆ ಆಗುತ್ತಿಲ್ಲ. ನಿಮ್ಮ ನಿಜ ಮುಖವೇನೆಂಬುದು ನಿಮಗೆ ನೆನಪಿದೆಯೇನು? ಸುಳ್ಳುಗಳ ಮತ್ತೊಂದು ಮುಖವಾಡ ಧರಿಸಿ ನೀವು ಜನರೆದುರು ಬರುವ ಮೊದಲು ನಾನು ನಿಮಗೆ ಈ ಕನ್ನಡಿಯನ್ನು ಉಡುಗೊರೆಯಾಗಿ ಕಳಿಸುತ್ತಿದ್ದೇನೆ.” ಎಂದೂ ಸಹ ಭಗೇಲ್ ಕುಟುಕಿದ್ದಾರೆ.