ಮಹಾಚುನಾವಣೆಗಳು ಹೊಸ್ತಿಲಲ್ಲಿ ಕಾದು ನಿಂತಿರುವಾಗಲೇ, ವಿಶ್ವಾದ್ಯಂತ ಅತಿಹೆಚ್ಚು ಬಳಕೆಯಲ್ಲಿರುವ ಸಾಮಾಜಿಕ ಮಾಧ್ಯಮದ ದೈತ್ಯ ಫೇಸ್ಬುಕ್ ಫೇಕ್ ಖಾತೆ ಮತ್ತು ಸ್ಪ್ಯಾಮ್ ಗಳನ್ನು ತಡೆಗಟ್ಟುವ ಸಲುವಾಗಿ ಇಂದು 687 ಪೇಜ್ ಮತ್ತು ಖಾತೆಗಳನ್ನು ತೆಗೆದುಹಾಕಿರುವುದಾಗಿ ಹೇಳಿಕೊಂಡಿದೆ. ಈ ಖಾತೆಗಳು ಕಾಂಗ್ರೆಸ್ ಪಕ್ಷದ ಐಟಿ ಸೆಲ್ ಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಸೇರಿದ್ದೆಂದು ಹೇಳಲಾಗಿದ್ದರೂ, ಕಾಂಗ್ರೆಸ್ ಪಕ್ಷ ಈ ಖಾತೆಗಳು ತನ್ನದಲ್ಲೆವೆಂದು ಸ್ಪಷ್ಟೀಕರಣ ನೀಡಿದೆ.
ಈ ಖಾತೆಗಳು ಒಂದು ಸಂಘಟಿತ ಜಾಲದ ಭಾಗವಾಗಿವೆ ಎಂದು ಹೇಳಿರುವ ಫೇಸ್ಬುಕ್, ಇವು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ ಎಂದಾಗಲೀ ಅಥವಾ ಅವುಗಳು ಹೊಂದಿರುವ ವಿಷಯಗಳನ್ನು ಆಧರಿಸಿಯಾಗಲೀ ಅವುಗಳನ್ನು ತೆಗೆದುಹಾಕಿಲ್ಲವೆಂದು ಸ್ಪಷ್ಟಪಡಿಸಿದೆ. ಅವುಗಳು “ಅನಧಿಕೃತ ನಡವಳಿಕೆ” ತೋರಿದ್ದಕ್ಕಾಗಿ ಮತ್ತು ಸ್ಪ್ಯಾಮ್ ಗಳನ್ನು ಉತ್ತೇಜಿಸಿದಕ್ಕಾಗಿ ತೆಗೆಯಬೇಕಾಯಿತೆಂದೂ ಫೇಸ್ಬುಕ್ ತಿಳಿಸಿದೆ.
ವರದಿಗಾರರೊಂದಿಗೆ ಮಾತನಾಡಿದ ಫೇಸ್ಬುಕ್ ನ ಸೈಬರ್ ಸುರಕ್ಷತಾ ವಿಭಾಗದ ಮುಖ್ಯಸ್ಥ ನಥಾನಿಯಲ್ ಗ್ಲೇಷರ್, “ಫೇಸ್ಬುಕ್ 702 ಫೇಸ್ಬುಕ್ ಫೇಜ್ ಮತ್ತು ಖಾತೆಗಳನ್ನು ಅಳಿಸಿಹಾಕಿದೆ. ಇವುಗಳಲ್ಲಿ ಬಹುತೇಕ ಖಾತೆಗಳನ್ನು ಫೇಸ್ಬುಕ್ ನ ಸ್ವಯಂಚಾಲಿತ ವ್ಯವಸ್ಥೆ ಈಗಾಗಲೇ ಪತ್ತೆಹಚ್ಚಿ ಅಮಾನತ್ತಿನಲ್ಲಿಟ್ಟಿತ್ತು. ಅವುಗಳು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಐಟಿ ಘಟಕಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಸೇರಿದ್ದಾಗಿದ್ದು, ಭಾರತದಲ್ಲಿ “ಸಂಘಟಿತ ಅನಧಿಕೃತ ನಡವಳಿಕೆ”ಯಲ್ಲಿ ತೊಡಗಿದ್ದವು” ಎಂದು ಹೇಳಿದ್ದಾರೆ.
“ಈ ಜಾಲಗಳಲ್ಲಿ ಕೆಲವನ್ನು ನಾವು ಏಕೆ ತೆಗೆದೆವೆಂದರೆ, ಅವುಗಳದ್ದು ಸಂಘಟಿತ ಅನಧಿಕೃತ ನಡವಳಿಕೆಯಾಗಿರುತ್ತದೆ, ಅವರು ತಮ್ಮ ಹಿಂದೆ ಯಾರಿದ್ದಾರೆಂಬುದರ ಬಗ್ಗೆ ಹಾದಿ ತಪ್ಪಿಸಲು… ತಮ್ಮ ಗುರುತನ್ನು ಮುಚ್ಚಿಡಲು ನಕಲಿ ಖಾತೆಗಳ ಜಾಲವನ್ನು ಬಳಸುತ್ತಿದ್ದಾರೆಂದು. ಖಾತೆಗಳನ್ನು ತೆಗೆದುಹಾಕಲು ಇದೇ ಮೂಲ ಕಾರಣವಾಗಿರುತ್ತದೆ.” ಎಂದು ವರದಿಗಾರರಿಗೆ ಅವರು ತಿಳಿಸಿದ್ದಾರೆ.
ಗ್ಲೇಷರ್ ಮುಂದುವರಿದು, “ನಾವು ಸಂಘಟಿತ ಅನಧಿಕೃತ ನಡವಳಿಕೆಯನ್ನು ಪತ್ತೆಹಚ್ಚಿ ನಿಲ್ಲಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಆದರೆ ಜನರ ಮೇಲೆ ಕೈಚಳಕ ತೋರಿಸಿ ಅವರನ್ನು ವಂಚಿಸಲು ನಮ್ಮ ಸೇವೆಗಳ ಬಳಕೆಯಾಗುವುದು ನಮಗೆ ಇಷ್ಟವಿಲ್ಲ. ನಾವು ಈ ಪೇಜ್ ಗಳು ಮತ್ತು ಖಾತೆಗಳನ್ನು ಅವುಗಳ ನಡವಳಿಕೆಗಳ ಆಧಾರದ ಮೇಲೆ ತೆಗೆದುಹಾಕುತ್ತಿದ್ದೀವೆಯೇ ಹೊರತು ಅವುಗಳು ಪೋಸ್ಟ್ ಮಾಡಿರುವ ವಿಷಯವನ್ನು ಆಧರಿಸಿ ಅಲ್ಲ.” ಎಂದು ಸ್ಪಷ್ಟಪಡಿಸಿದ್ದಾರೆ.
ಬಳಕೆದಾರರ ಮಾಹಿತಿ ಸೋರಿಕೆಯಂತಹ ಗಂಭೀರ ಆರೋಪಗಳನ್ನು ಎದುರಿಸಿರುವ ಫೇಸ್ಬುಕ್ ಇದೀಗ ಭಾರತದಲ್ಲಿ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಸುಳ್ಳುಸುದ್ದಿಗಳು ಮತ್ತು ತಪ್ಪು ಮಾಹಿತಿಗಳು ತನ್ನ ವೇದಿಕೆಗಳ (ವಾಟ್ಸಪ್, ಫೇಸ್ಬುಕ್, ಇನ್ಸ್ಟಾಗ್ರಾಮ್) ಮೂಲಕ ಹರಡದಂತೆ ಎಚ್ಚರ ವಹಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಅದು ತನ್ನ ಪಾರದರ್ಶಕತೆ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ತನ್ನ ವೇದಿಕೆಗಳಲ್ಲಿ ರಾಜಕೀಯ ಜಾಹೀರಾತುಗಳ ಮಾಹಿತಿಯನ್ನು ಹಂಚಿಕೊಳ್ಳಲು ಆರಂಭಿಸಿದೆ. ಅಲ್ಲದೆ ಫೇಸ್ಬುಕ್ ತನ್ನ ಸತ್ಯಶೋಧಕರ ತಂಡವನ್ನು ಬಲಗೊಳಿಸಿ ಸುಳ್ಳು ಸುದ್ದಿಗಳನ್ನು ಗುರುತಿಸಲು ತಂತ್ರಜ್ಞಾನ ಸಾಧನಗಳನ್ನು ಅಳವಡಿಸುತ್ತಿದೆ.
ದೇಶದ ಚುನಾವಣಾ ಪ್ರಕ್ರಿಯೆಯ ಮೇಲೆ ಅನಪೇಕ್ಷಿತ ರೀತಿಯಲ್ಲಿ ಪ್ರಭಾವ ಬೀರಲು ಮುಂದಾದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಭಾರತ ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಎಚ್ಚರಿಸಿದೆ.
ಪೇಜ್ ಅಡ್ಮಿನ್ ಗಳು ಮತ್ತು ಅಕೌಂಟ್ ಓನರ್ ಗಳು ಸಾಮಾನ್ಯವಾಗಿ ಸ್ಥಳೀಯ ಸಮಾಚಾರಗಳನ್ನು, ರಾಜಕೀಯ ವಿಚಾರಗಳನ್ನು ಪೋಸ್ಟ್ ಮಾಡಿದ್ದರು. ಮುಂಬರಲಿರುವ ಚುನಾವಣೆಗಳು, ಅಭ್ಯರ್ಥಿಗಳ ಅಭಿಪ್ರಾಯಗಳು, ಐಎನ್ಸಿ ಮತ್ತು ರಾಜಕೀಯ ಎದುರಾಳಿಗಳಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿರುದ್ಧ ಟೀಕೆಗಳನ್ನು ಹಾಕಲಾಗಿತ್ತು ಎಂದು ಅವರು ವಿವರಿಸಿದ್ದಾರೆ. “ಇಂತಹ ಚಟುವಟಿಕೆಯಲ್ಲಿರುವ ಜನರು ತಮ್ಮ ಗುರುತನ್ನು ಮುಚ್ಚಿಟ್ಟುಕೊಳ್ಳಲು ಯತ್ನಿಸಿದರೂ ನಾವು ಕೈಗೊಂಡ ಪರಿಶೀಲನೆಯಿಂದ ತಿಳಿದುಬಂದಿದ್ದೇನೆಂದರೆ ಐಎನ್ಸಿ ಐಟಿ ಸೆಲ್ ಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಇವು ಸೇರಿದ್ದಾಗಿದ್ದವು.”
ಇಂತಹದ್ದೇ ಕಾರಣಕ್ಕಾಗಿ ಭಾರತದ ಐಟಿ ಕಂಪನಿ Silver Touch ಗೆ ಸಂಬಂಧಿಸಿದ 15 ಪೇಜ್, ಗ್ರೂಪ್ ಮತ್ತು ಅಕೌಂಟ್ ಗಳನ್ನು ಮತ್ತು ಪಾಕಿಸ್ತಾನ ಮೂಲದ್ದೆನ್ನಲಾದ 103 ಖಾತೆಗಳನ್ನೂ ತೆಗೆದುಹಾಕಲಾಗಿದೆ.
ಐಎನ್ಸಿ ನಡೆಸುವ ಅಧಿಕೃತ ಪೇಜ್ ಗಳನ್ನಾಗಲೀ ಅಥವಾ ತನ್ನ ದೃಢೀಕೃತ ಸ್ವಯಂಸೇವಕರು ನಡೆಸುವ ಪೇಜ್ ಗಳನ್ನಾಗಲೀ ಅಳಿಸಲಾಗಿಲ್ಲ, ಅವು ಅಬಾಧಿತವಾಗಿವೆ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟನೆ ನೀಡಿದೆ. ಅಲ್ಲದೆ ತೆಗೆದುಹಾಕಿರುವ ಪೇಜ್ ಮತ್ತು ಖಾತೆಗಳ ಪಟ್ಟಿ ಕೇಳಲಾಗಿದ್ದು, ಫೇಸ್ಬುಕ್ ನಿಂದ ಪ್ರತಿಕ್ರಿಯೆ ಬರಲು ಕಾಯುತ್ತಿರುವುದಾಗಿ ಕಾಂಗ್ರೆಸ್ ತಿಳಿಸಿದೆ.
ಒಟ್ಟಿನಲ್ಲಿ ಭಾರತದಲ್ಲಿ ಏರುತ್ತಿರುವ ಚುನಾವಣಾ ಸಮರದ ತಾಪ ಫೇಸ್ಬುಕ್ ವೇದಿಕೆಗೂ ತಟ್ಟಿರುವಂತೆ ಕಾಣುತ್ತಿದೆ. ಜಾಗತಿಕ ತಾಪಮಾನವೂ ಹೆಚ್ಚಾಗುತ್ತಿರುವುದು ಫೇಸ್ಬುಕ್ ನ ಮಧ್ಯಪ್ರವೇಶದಿಂದ ಗೋಚರಿಸುತ್ತಿದೆ….