ಏಳು ದಶಕಗಳ ಹಿಂದೆ ಬ್ರಿಟಿಷರು ಈ ದೊಡ್ಡ ದೇಶವನ್ನು ‘ನಮ್ಮವರಿಗೇ’ ಬಿಟ್ಟು ಕೊಡುವ ಹೊತ್ತಿನಲ್ಲಿ ಇಲ್ಲಿದ್ದದ್ದು ಕೇವಲ ಬಡತನ, ಅನಕ್ಷರತೆ, ಆಹಾರದ ಕೊರತೆಯೇ ಮೊದಲಾದ ಭೀಕರ ಸವಾಲುಗಳು. ಶಿಕ್ಷಣ, ರೈಲ್ವೆ, ತಾಂತ್ರಿಕತೆ ಇತ್ಯಾದಿಗಳಿಗೆ ಬ್ರಿಟಿಷ್ ಸರಕಾರ ಅಡಿಪಾಯ ಹಾಕಿತ್ತಾದರೂ ಸುಧೀರ್ಘ ಕಾಲ ಈ ಪ್ರಭುತ್ವದ ವಿರುದ್ಧ ನಡೆದ ಆಂತರಿಕ ಹೊರಾಟದ ನೇರ ಪರಿಣಾಮದ ಹೊಣೆಯನ್ನು ಸ್ವಾತಂತ್ರ್ಯಾನಂತರ ಬಂದ ಆರಂಭಿಕ ಸರಕಾರಗಳು ಹೊತ್ತುಕೊಳ್ಳಲೇಬೇಕಾಗಿ ಬಂದಿತ್ತು.
ಮುಖ್ಯವಾಗಿ ಅವಶ್ಯ ಆಹಾರೋತ್ಪಾದನೆಯ ಗುರಿ, ಶಿಕ್ಷಣ, ಆರೋಗ್ಯ, ವಸತಿಗಳ ಜೊತೆಗೆ ದೇಶ ವಿಭಜನೆಯಿಂದಾಗಿ ವೈರಿ ದೇಶವಾಗಿ ಮಾರ್ಪಟ್ಟ ಪಾಕಿಸ್ತಾನ ಹಾಗು ನೆರೆಯ ಚೀನಾಗಳೊಳಗಿನ ಯುದ್ಧ ಭೀತಿ ಅದಕ್ಕೆ ತಕ್ಕ ತಯಾರಿಯ ಅನಿವಾರ್ಯತೆ ಇತ್ಯಾದಿಗಳ ನಡುವೆ ಅಭಿವೃದ್ಧಿಗೆ ಪೂರಕವಲ್ಲದ ಅನವಶ್ಯಕ ವಿಚಾರಗಳು ಅಷ್ಟಾಗಿ ಯಾವ ಮಹತ್ವವನ್ನು ಗಿಟ್ಟಿಸಿಕೊಳ್ಳಲಾಗದಂತಹ ಕಾಲವದು. ಬಹುತೇಕ ಬಡತನ ನಿರ್ಮೂಲನೆ, ಉದ್ಯೋಗ, ಇನ್ನಿತರ ಸೌಲಭ್ಯಗಳ ಕುರಿತಾಗಿ ಜನರು ಪ್ರಮುಖವಾಗಿ ಚಿಂತಿಸುತ್ತಿದ್ದಂತ ಆ ಕಾಲ ಬದಲಾಗಿ ಇಂದು ಅಭಿವೃದ್ಧಿಗಿಂತ ಭಾವನಾತ್ಮಕ ವಿಚಾರಗಳೇ ಪ್ರಾಮುಖ್ಯತೆ ಗಳಿಸಿಕೊಳ್ಳುತ್ತಿರುವ ಮಟ್ಟಿಗೆ ಬಂದು ನಿಂತಿದೆ. ಅದರಲ್ಲೂ ವಿಶೇಷವಾಗಿ ಚುನಾವಣಾ ಸಮಯದಲ್ಲಂತೂ ಇವುಗಳದ್ದೇ ಮೇಲಾಟ.
ಒಂದು ನಾಲ್ಕು ದಶಕಗಳ ಹಿಂದಿನ ಭಾರತಕ್ಕೂ ಇಂದಿನ ಭಾರತಕ್ಕೂ ಬಹು ದೊಡ್ಡ ವ್ಯತ್ಯಾಸವಿದೆ. ಇವತ್ತಿಗೆ ಹೋಲಿಸಿದರೆ ಆವತ್ತು ಸಾಕಷ್ಟು ಬಡತನವಿತ್ತು, ಸೌಲಭ್ಯಗಳ ಕೊರತೆಯಿತ್ತು. ಸಾದಾರಣ ಅನುಕೂಲಸ್ಥರೂ ಊರ ಜಾತ್ರೆಗೋ ಹಬ್ಬಕ್ಕೋ ಮನೆಮಂದಿಗೆಲ್ಲ ಬಟ್ಟೆ ಹೋಲಿಸಿಕೊಳ್ಳುವಂತಹ ಕಾಲ ಅದು. ಹೆಚ್ಚಾಗಿ ಅವಿಭಕ್ತ ಕುಟುಂಬಗಳೇ ಇದ್ದ ಆವತ್ತು ಇಂದಿನಂತೆ ಏನೇನೋ ತರಹೇವಾರಿ ಪ್ಲಾನುಗಳ ಮನೆಗಿಂತ ಉಳಕೊಳ್ಳಲು ಸಾಮಾನ್ಯ ಮನೆಯೊಂದಿರುತಿತ್ತು. ಅಂದಿನ ಸೈಕಲ್ ಜಮಾನದಲ್ಲಿ ಇಡೀ ಊರಿಗೆ ಒಂದೋ ಎರಡೋ ಕಾರುಗಳು, ಬೀದಿಗೊಂದು ಬೈಕುಗಳಿದ್ದರೆ ಅದೇ ಹೆಚ್ಚು. ಆದರೀಗ ಸಾಮಾನ್ಯವಾಗಿ ಯಾರ ಹೊಟ್ಟೆ ಬಟ್ಟೆಗೂ ಅಂತಾ ಹೇಳಿಕೊಳ್ಳುವ ತತ್ವಾರವೇನಿಲ್ಲ. ದುಡಿಯುವವನು ಎಲ್ಲಿಯಾದರೂ ಹೋಗಿ ಬದುಕುವ ಕಾಲವಿದು. ಆವತ್ತಿನ ಹೊಟ್ಟೆ ಬಟ್ಟೆಯ ಬಡತನ ಈಗಿಲ್ಲ (ಇದಕ್ಕೂ ಸಾಕಷ್ಟು ಅಪವಾದಗಳಿರಬಹುದು. ಅದೇ ರೀತಿ, ನೆಹರೂ, ಇಂದಿರಾ, ರಾಜೀವ್, ವಾಜಪೇಯಿ, ಮನಮೋಹನ್ ಸಿಂಗ್ ರಂತವರು ಹಾಕಿದಂತಹ ಅಭಿವೃದ್ಧಿಯ ಅಡಿಪಾಯದ ಪರಿಣಾಮವೇ ಇಂದಿನ ಬದಲಾವಣೆ ಹೊರತು ಅಲಾವುದೀನ್ ದೀಪದ ಜೀನಿ ಮಾಡುವ ಚಮತ್ಕಾರದಂತೆ ಈ ಬದಲಾವಣೆ ತಕ್ಷಣಕ್ಕೆ ಆದಂತವುಗಳಲ್ಲ) ಕಾರು ಮೋಟಾರು ವಾಹನಗಳು ಪ್ರತಿ ಮನೆಗೂ ಬಂದಿವೆ ಹೊಸತಾಗಿ ಸೇರ್ಪಡೆಗೊಂಡ ಆಧುನಿಕತೆಯ ದ್ಯೋತಕವಾದ ಟೀವಿ, ಟಚ್ ಸ್ಕ್ರೀನ್ ಮೊಬೈಲ್ ಸೆಟ್ಗಳೂ ಸಹ ಎಲ್ಲರನ್ನೂ ತಲುಪಿವೆ. ಹೀಗೆ ಇಂದಿನ ‘ಜೀವನಾವಶ್ಯಕ’ಗಳೆಲ್ಲ ಮನುಷ್ಯನಿಗೆ ಸಿಕ್ಕಿಯಾದ ಮೇಲೆ ಮನುಷ್ಯನ ಯೋಚನೆಯೂ ಕೂಡ ಅದೇರೀತಿ ಬದಲಾಗಿದೆ. ಅಥವಾ ಅವನ ಯೋಚನೆಯ ದಿಕ್ಕನ್ನೆ ಉದ್ದೇಶಪೂರ್ವಕವಾಗಿ ಬದಲಾಯಿಸಲಾಗಿದೆ.
ರಾಜಕೀಯವಾಗಿ ನೋಡಹೋದರೆ, ಮುಖ್ಯವಾಗಿ ಇವತ್ತಿನ ಚುನಾವಣಾ ಕಾರ್ಯತಂತ್ರಗಳು ಖಂಡಿತ ಮೊದಲಿನಂತಿಲ್ಲ. ರೋಟಿ -ಕಪಡ -ಮಕಾನ್ ನಂತಹ ಬದುಕಿನ ಅವಶ್ಯಕತೆಗಳಿಗೆ ಚೂರೂ ಸಂಬಂಧಪಡದ ವಿಚಿತ್ರ ವಿಚಾರಗಳೇ ಇಂದು ದೇಶವನ್ನು ಕಾಡುವ ಜ್ವಲಂತ ಸಮಸ್ಯೆಯ ರೀತಿಯಲ್ಲಿ ಬಿಂಬಿಸಲ್ಪಡುತ್ತಿದ್ದು ಈ “ಭೀಕರ” ಸಮಸ್ಯೆಗಳ ನಿರ್ಮೂಲನೆಗಾಗಿ ಕಾಮಿಕ್ಸ್ ಗಳಲ್ಲಿ ಬರುವ ಫ್ಯಾಂಟಮ್, ಮಾಂಡ್ರೆಕ್, ಸೂಪರ್ ಮ್ಯಾನ್ ತರಹದ ಅಸಾಧ್ಯ ಹೀರೋಗಳ ಭ್ರಮೆಯನ್ನು ಎಲ್ಲೆಡೆ ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ದೇಶಭಕ್ತಿ, ಧರ್ಮರಕ್ಷಣೆ, ಗೋಮಾತೆಯಂತವುಗಳು ರೋಟಿ ಕಪಡವನ್ನು ಮೆಟ್ಟಿ ಹೊಸಕಿ ನಿಂತಿವೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದ ಸಂಗತಿ ದೇಶವನ್ನು ಕಾಡುವ ಸಮಸ್ಯೆಯ ಪಟ್ಟಿಯನ್ನು ಸೇರಿತ್ತು. ಟೀವಿಯಲ್ಲಿ ಈಬಗ್ಗೆ ಚರ್ಚೆಗಳೇನು.. ವಿರೋಧಿಗಳ ಚುನಾವಣಾ ಪ್ರಚಾರಗಳಲ್ಲಿ ಅದರ ಉಲ್ಲೇಖಗಳೇನೂ ಅಬ್ಬಾ..!! ದುರಂತವೆಂದರೆ ಇಂದು ಜನರ ಬದುಕನ್ನು ಹಸನಾಗಿಸುವ ಜನಪರ ಕಾಳಜಿಯ ವಿಚಾರಗಳ ಬದಲಿಗೆ, ಲವ್ ಜೆಹಾದ್, ಮತಾಂತರ, ರಾಮಮಂದಿರ, ಗೋಹತ್ಯೆ, ಪಾಕಿಸ್ತಾನ ಇಂತವುಗಳೇ ದೇಶಪ್ರೇಮ ಹಾಗೂ ಓಟು ಗಳಿಕೆಯ ಮೂಲಸಾಧನಗಳಾಗಿ ಮಾರ್ಪಟ್ಟಿವೆ. ಅದ್ಯಾವನ ಮನೆಯ ಫ್ರಿಜ್ ನಲ್ಲಿದ್ದ ಮಾಂಸ, ಅದ್ಯಾವುದೋ ಪಕ್ಷದ ಮುಖಂಡನ ಧರ್ಮ, ಗೋತ್ರ, ಆತ ಬ್ರಾಹ್ಮಣನೇ ಅಲ್ಲ ಆತನ ಸೋದರಿಯ ಸರ್ನೇಮ್ ಗಾಂಧಿ ಬದಲು ವಾದ್ರಾ ಅಂತನ್ನಬೇಕು ಎನ್ನುವ ತರಹದ ತೀರಾ ವೈಯಕ್ತಿಕ ವಿಚಾರಗಳ ಬಗ್ಗೆ ಮತ್ತೊಬ್ಬ ನಿರ್ಧರಿಸುವ, ಮೂಗು ತೂರಿಸುವಂತಹ ಕೆಟ್ಟ ರಾಜಕೀಯ ಪಲ್ಲಟ ಕಾಲದಲ್ಲಿ ನಾವೀಗಿದ್ದೇವೆ.
ವಿಚಿತ್ರವೆಂದರೆ ಈ ಮೇಲೆ ತಿಳಿಸಿದಂತಹ ಧರ್ಮ- ಸಂಸ್ಕೃತಿಯ ಗುತ್ತಿಗೆ ಹಿಡಿದವರದ್ದು ಇದು ಅನುಕೂಲ ಸಿಂಧು ವ್ಯವಹಾರಿಕ ಗುತ್ತಿಗೆಯೇ ಹೊರತು ಪ್ರಾಮಾಣಿಕವಾದದ್ದಲ್ಲ. ಉದಾಹರಣೆಗೆ ಗೋ ಹತ್ಯೆ ಮತ್ತು ಭಕ್ಷಣೆಯ ಬಗ್ಗೆ ಪ್ರಖರವಾಗಿ ಶಂಖವೂದುವ ಈ ಗುಂಪು ಗೋವಾ, ಕೇರಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ತಮ್ಮ ನಿಲುವನ್ನು ಲಾಭದ ಉದ್ದೇಶದಿಂದ ಯಾವ ಮುಜುಗರವಿಲ್ಲದೇ ಬದಲಿಸುತ್ತವೆ. ತಾವೇ ಆಧಿಕಾರದಲ್ಲಿದ್ದಾಗ ಇದೇ ಗೋಮಾತೆ ಮಾಂಸ ರೂಪದಲ್ಲಿ ಸಿಕ್ಕಾಪಟ್ಟೆ ಬಿಂದಾಸ್ಸಾಗಿ ವಿದೇಶಕ್ಕೆ ರಫ್ತಾಗುತ್ತಾಳೆ. ಉಳಿದವರದ್ದು ಲವ್ ಜೆಹಾದ್ ಆತನ ತಂದೆ ಮುಸಲ್ಮಾನ ಎಂದು ವಿಷ ಕಾರುವ ಇದೇ ಸಮೂಹ ತಮ್ಮವರ ಅಂತರ್ಧರ್ಮೀಯ ವಿವಾಹಕ್ಕೆ ಮಾತ್ರ ಯಾವ ಜೆಹಾದಿನ ತಕರಾರಿಲ್ಲದೇ ಸೈಲೆಂಟಾಗಿ ಪಾಲ್ಗೊಳ್ಳುತ್ತವೆ.
ಇಂತಹ ಸೋಗಿನ ರಾಜಕಾರಣ ಮೆರೆಯುತ್ತಿರುವ ಸಂದರ್ಭದಲ್ಲಿ ನಮ್ಮ ಅಮೂಲ್ಯ ಮತದಾನವನ್ನು ಯಾವ ಉದ್ದೇಶವನ್ನಿಟ್ಟು ಮಾಡುತ್ತಿದ್ದೇವೆ ಎನ್ನುವ ಪರಿಜ್ಞಾನವಿಟ್ಟುಕೊಂಡು ಮಾಡಿದರೆ ಅದು ಎಲ್ಲರಿಗೂ ಕ್ಷೇಮ.
-ಶಶಿ ಉಡುಪಿ.
Disclaimer: The views expressed in the articles are those of the authors and do not necessarily represent or reflect the views of TruthIndia