ನರೇಂದ್ರಮೋದಿ ನೇತೃತ್ವದ ಎನ್ಡಿಎ ಸರ್ಕಾರ ಜಾರಿಗೆ ತಂದ ಎಲೆಕ್ಟೊರಲ್ ಬಾಂಡ್ ಮೂಲಕ ಅನುಕೂಲ ಆಗಿದ್ದು ಯಾರಿಗೆ ಗೊತ್ತೇ? ಖುದ್ದು ಬಿಜೆಪಿಗೆ!
ಎಲೆಕ್ಟೊರಲ್ ಬಾಂಡ್ ಮೂಲಕ ಇದುವರೆಗೆ ರಾಜಕೀಯ ಪಕ್ಷಗಳಿಗೆ ನೀಡಲಾಗಿರುವ ದೇಣಿಗೆಯ ಒಟ್ಟು ಮೊತ್ತ 2772,78,56,000 ರುಪಾಯಿಗಳು. ಈ ಪೈಕಿ 2018ರಲ್ಲಿ 1056,73,42,000 ರುಪಾಯಿಗಳು ಮತ್ತು 2019 ರ ಮೊದಲ ಮೂರು ತಿಂಗಳಲ್ಲೇ 1716,05,14000 ರುಪಾಯಿಗಳನ್ನು ನೀಡಲಾಗಿದೆ.
ಎಲೆಕ್ಟೊರಲ್ ಬಾಂಡ್ ಯೋಜನೆ ಜಾರಿಗೆ ಬಂದ ಮೊದಲ ಮೂರು ತಿಂಗಳಲ್ಲಿ 210 ಕೋಟಿ ರುಪಾಯಿಗಳನ್ನು ರಾಜಕೀಯ ಪಕ್ಷಗಳಿಗೆ ಕೊಡಮಾಡಲಾಗಿತ್ತು. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಮೊದಲ ಮೂರು ತಿಂಗಳಲ್ಲಿ ಎಲೆಕ್ಟೊರಲ್ ಬಾಂಡ್ ಮೂಲಕ ನೀಡಲಾದ ದೇಣಿಗೆ ಪೈಕಿ ಶೇ.95ರಷ್ಟನ್ನು ಆಡಳಿತಾರೂಢ ಬಿಜೆಪಿಯೇ ಪಡೆದಿತ್ತು.
2018 ಜನವರಿ 2ರಂದು ಕೇಂದ್ರ ಸರ್ಕಾರ ಅಧಿಸೂಚನೆ ಮೂಲಕ ಎಲೆಕ್ಟೊರಲ್ ಬಾಂಡ್ ವಿತರಿಸುವ ಜವಾಬ್ದಾರಿಯನ್ನು ಎಸ್ ಬಿ ಐಗೆ ವಹಿಸಿತ್ತು. ಈಗಲೂ ಎಸ್ ಬಿ ಐ ಎಲೆಕ್ಟೊರಲ್ ಬಾಂಡ್ ವಿತರಿಸುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರಿನಲ್ಲಿರುವ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಎಸ್ ಬಿ ಐ ಕೇಂದ್ರ ಕಚೇರಿಯಲ್ಲಿ ಎಲೆಕ್ಟೊರಲ್ ಬಾಂಡ್ ವಿತರಿಸಲಾಗುತ್ತದೆ. ಇಲ್ಲಿ ಇದುವರೆಗೆ ಒಟ್ಟು 82,75,00,000 ರುಪಾಯಿ ಮೊತ್ತದ ಬಾಂಡ್ ವಿತರಿಸಲಾಗಿದೆ.
ಮಹಾರಾಷ್ಟ್ರದ ವಿಹಾರ್ ದುರ್ವೆ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಎಸ್ಬಿಐನಿಂದ ಪಡೆದಿರುವ ಅಂಕಿ ಅಂಶಗಳ ಪ್ರಕಾರ, ಇದುವರೆಗೆ 2772,78,56,000 ರುಪಾಯಿಗಳನ್ನು ಎಲೆಕ್ಟೊರಲ್ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ಈ ಪೈಕಿ 2000 ಕೋಟಿಗಿಂತಲೂ ಹೆಚ್ಚು ಮೊತ್ತವನ್ನು ಬಿಜೆಪಿಗೆ ದೇಣಿಗೆಯಾಗಿ ನೀಡಲಾಗಿದೆ ಎಂದು ಅಂದಾಜಿಸಲಾಗಿದೆ. ಬಿಜೆಪಿ ಅಷ್ಟೊಂದು ಆಸಕ್ತಿ ವಹಿಸಿ ಎಲೆಕ್ಟೊರಲ್ ಬಾಂಡ್ ಯೋಜನೆಯನ್ನು ಜಾರಿಗೆ ತಂದಿದ್ದರ ಮರ್ಮ ಏನೆಂಬದು ಈಗ ಅರ್ಥವಾಗುತ್ತಿದೆಯಲ್ಲವೇ?
ಇಲ್ಲಿ ಬಿಜೆಪಿಯ ತಂತ್ರಗಾರಿಕೆ ಗಮನಿಸಬೇಕು. ಆಡಳಿತಾರೂಢ ಪಕ್ಷವಾದ್ದರಿಂದ ಅಧಿಕೃತವಾಗಿ ತಮಗೆ ಹೆಚ್ಚಿನ ದೇಣಿಗೆ ಬರುವಂತೆ ಮಾಡಿಕೊಂಡಿರುವ ಬಿಜೆಪಿ, ಪ್ರತಿ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳಿಗೆ ದೇಣಿಗೆ ಹರಿಯದಂತೆ ನೋಡಿಕೊಂಡಿದೆ. ಹೀಗಾಗಿ ಎಲೆಕ್ಟೊರಲ್ ಬಾಂಡ್ ಮೂಲಕ ಹರಿದು ಬಂದಿರುವ ದೇಣಿಗೆಯಲ್ಲಿ ಸಿಂಹಪಾಲು ಆಡಳಿತಾರೂಢ ಬಿಜೆಪಿಗೆ ದಕ್ಕಿದೆ.
ರಾಜಕೀಯ ಪಕ್ಷಗಳು ಎಲೆಕ್ಟೊರಲ್ ಬಾಂಡ್ ಮೂಲಕ ದೇಣಿಗೆ ಪಡೆಯಲು ಕೆಲವು ಷರತ್ತು ವಿಧಿಸಲಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆ 1951 ಸೆಕ್ಷನ್ 29ಎ ಅಡಿಯಲ್ಲಿ ನೊಂದಾಯಿಸಲ್ಪಟ್ಟಿರುವ ರಾಜಕೀಯ ಪಕ್ಷಗಳು ಬಾಂಡ್ ಮೂಲಕ ದೇಣಿಗೆ ಪಡೆಯಬಹುದು. ಆದರೆ, ಈ ಪಕ್ಷಗಳು ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಶೇ.1ಕ್ಕಿಂತಲೂ ಹೆಚ್ಚು ಮತ ಪಡೆದಿರಬೇಕು. ಈ ದೇಣಿಗೆ ಪಡೆಯಲೆಂದೇ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಖಾತೆ ನೀಡುತ್ತದೆ. ಆ ಖಾತೆ ಮೂಲಕವೇ ಬಾಂಡ್ ಮೂಲಕ ಬಂದ ಠೇವಣಿ ಸ್ವೀಕರಿಸಬೇಕು. ವಿತ್ತೀಯ ವರ್ಷದ ಪ್ರತಿ ತ್ರೈಮಾಸಿಕದ ಮೊದಲ ಹತ್ತು ದಿನ ಎಸ್ಬಿಐ ನಿಯೋಜಿತ ಶಾಖೆಯಲ್ಲಿ ಬಾಂಡ್ ಖರೀದಿಸಬಹುದು. ಲೋಕಸಭಾ ಚುನಾವಣೆ ಇದ್ದ ಸಂದರ್ಭದಲ್ಲಿ ಬಾಂಡ್ ಖರೀದಿಸಲು 30 ದಿನಗಳ ಅವಕಾಶ ನೀಡಲಾಗುತ್ತದೆ.
ಈ ಹಿಂದೆ ರಾಜಕೀಯ ಪಕ್ಷಗಳಿಗೆ ಕಾರ್ಪೊರೆಟ್ ಗಳು, ಉದ್ಯಮಿಗಳು, ವಿವಿಧ ಸಂಘ ಸಂಸ್ಥೆಗಳು ದೇಣಿಗೆ ನೀಡುತ್ತಿದ್ದವು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳಿಗೂ ಹೆಚ್ಚು ಕಮ್ಮಿ ಸರಿಸಮನಾಗಿ ದೇಣಿಗೆ ನೀಡುತ್ತಿದ್ದವು. ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಯನ್ನು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಆಗ ಬಹುತೇಕ ರಾಜಕೀಯ ಪಕ್ಷಗಳಿಗೆ ಚುನಾವಣಾ ವೆಚ್ಚಕ್ಕೆ ದೇಣಿಗೆ ಹರಿದು ಬರುತ್ತಿತ್ತು.
ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯು ಹೆಚ್ಚು ಪಾರದರ್ಶಕವಾಗಿರಬೇಕು ಮತ್ತು ತೆರಿಗೆ ವಂಚನೆ ತಡೆಯುವ ಹೆಸರಿನಲ್ಲಿ ನರೇಂದ್ರ ಮೋದಿ ಸರ್ಕಾರ ಎಲೆಕ್ಟೊರಲ್ ಬಾಂಡ್ ಯೋಜನೆಯನ್ನು ಜಾರಿಗೆ ತಂದಿದೆ. ಅದರ ಹೆಚ್ಚಿನ ಲಾಭವನ್ನು ಬಿಜೆಪಿಯೇ ಪಡೆದುಕೊಂಡಿದೆ. ವಿರೋಧ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ದೇಣಿಗೆ ಸಂಗ್ರಹಿಸಲು ಈ ಯೋಜನೆ ತೊಡಕಾಗಿದೆ. ಹೆಚ್ಚಿನ ದೇಣಿಗೆ ನೀಡದೇ ಇದ್ದರೆ, ಐಟಿ, ಇಡಿ, ಸಿಬಿಐ ದಾಳಿಯ ಭೀತಿಯನ್ನು ಪರೋಕ್ಷವಾಗಿ ಒಡ್ಡುವ ಆಡಳಿತಾರೂಢ ಪಕ್ಷಕ್ಕೆ 1000 ಕೋಟಿ ರುಪಾಯಿಗಳಂತೆ ಎರಡೇ ವರ್ಷದಲ್ಲಿ 2,000 ಕೋಟಿ ದೇಣಿಗೆ ಪಡೆದುಕೊಂಡಿದೆ. ಇದೇ ವೇಳೆ ಪ್ರತಿ ಪಕ್ಷಗಳಿಗೆ ಹರಿದು ಬರುತ್ತಿದ್ದ ದೇಣಿಗೆಗೂ ತಡೆಯೊಡ್ಡಿದೆ.
2017-18ರಲ್ಲಿ ಬಿಜೆಪಿಯ ಆದಾಯವು 1027 ಕೋಟಿರುಪಾಯಿಗಳಿಗೆ ಏರಿತ್ತು. ಈ ಪೈಕಿ ಬಿಜೆಪಿಗೆ 989 ಕೋಟಿ ರುಪಾಯಿ ದೇಣಿಗೆ ರೂಪದಲ್ಲಿ ಬಂದಿದ್ದರೆ, ಬಿಜೆಪಿ ಬ್ಯಾಂಕಿನಲ್ಲಿಟ್ಟಿರುವ ಠೇವಣಿಗೆ ಬಂದಿರುವ ಬಡ್ಡಿಯೇ 31 ಕೋಟಿ ರುಪಾಯಿಗಳಷ್ಟಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ವಿವಿಧ ಚಂದಾರೂಪದಲ್ಲಿ 5 ರುಪಾಯಿ ಆದಾಯ ಬಂದಿದ್ದರೆ, ಇತರೆ ಆದಾಯ 2 ಕೋಟಿ ರುಪಾಯಿಗಳಾಗಿದೆ.
ಚುನಾವಣಾ ಸುಧಾರಣೆಗಾಗಿ ರೂಪುಗೊಂಡು ಕಾರ್ಯನಿರ್ವಹಿಸುತ್ತಿರುವ ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ಎಲೆಕ್ಟೊರಲ್ ಬಾಂಡ್ ವಿತರಣೆಗೆ ತಡೆಯೊಡ್ಡುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸಿಪಿಐ-ಎಂ ಸಹ ಎಲೆಕ್ಟೊರಲ್ ಬಾಂಡ್ ವಿತರಿಸುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ಇಂದು ಬಿಡುಗಡೆಗೊಂಡಿರುವ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಎಲೆಕ್ಟೊರಲ್ ಬಾಂಡ್ ರದ್ದುಪಡಿಸಿ ಹೊಸ ಪಾರದರ್ಶಕ ನೀತಿಯ ರಾಷ್ಟ್ರೀಯ ಚುನಾವಣಾ ನಿಧಿ ಸ್ಥಾಪಿಸುವುದಾಗಿ ಭರವಸೆ ನೀಡಿರುವುದನ್ನು ಗಮನಿಸಬಹುದು.
ಇದುವರೆಗೆ ಅನಧಿಕೃತವಾಗಿದ್ದ ದೇಣಿಗೆಯನ್ನು ಬಿಜೆಪಿ ಕಾನೂನುಬದ್ಧಗೊಳಿಸಿದೆ. ಇಲ್ಲಿ ಕಪ್ಪುಹಣ ತಡೆಯಲು ಸಾಧ್ಯವಾಗುತ್ತದೆಯೇ? ದೇಣಿಗೆ ನೀಡುವವರು ತಮ್ಮ ಗುರುತನ್ನು ಹೇಳಿಕೊಳ್ಳಬೇಕಿಲ್ಲ. ಎಷ್ಟು ಮೊತ್ತ ನೀಡಿದ್ದೇವೆಂಬುದನ್ನು ಬಹಿರಂಗ ಪಡಿಸಬೇಕಿಲ್ಲ. ಹಾಗಿದ್ದರೆ ಪಾರದರ್ಶಕತೆ ಎಲ್ಲಿ? ಕಪ್ಪು ಹಣ ನಿಯಂತ್ರಣ ಹೇಗೆ? ಈ ಯೋಜನೆ ಜಾರಿಗೆ ತಂದ ವಿತ್ತ ಸಚಿವ ಅರುಣ್ ಜೇಟ್ಲಿಯೇ ಹೇಳಬೇಕು!