“ಭಾರತಕ್ಕೆ ಸ್ವಾತಂತ್ರ್ಯ ಬಂದ 1947ರಿಂದ ಪಾಕಿಸ್ತಾನ ಭಾರತವನ್ನು ಧರ್ಮದ ಹೆಸರಿನಲ್ಲಿ ಒಡೆಯಲು ಸಾಕಷ್ಟು ಸತತ ಯತ್ನ ಮಾಡುತ್ತಲೇ ಬಂದಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಕೇವಲ ಐದು ವರ್ಷಗಳಲ್ಲಿ ಇದನ್ನು ಮಾಡಿ ತೋರಿಸಿದ್ದಾರೆ” ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಟಿಡಿಪಿ ಅಧ್ಯಕ್ಷ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಜತೆ ಆಂಧ್ರದಲ್ಲಿ ಬಹಿರಂಗೆ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಭಾರತಕ್ಕೆ ಸ್ವಾತಂತ್ರ ಬಂದಾಗಿನಿಂದ ಇದೇ ಮೊದಲ ಬಾರಿ ಮೋದಿ ಅವರ ಆಡಳಿತಾವಧಿಯಲ್ಲಿ ಅಮಿತ್ ಶಾ ಅವರ ಜತೆಗೂಡಿ ದೇಶವನ್ನು ಸರ್ವನಾಶ ಮಾಡಿದ್ದಾರೆ, ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದು ಟೀಕಿಸಿದ್ದಾರೆ.
ಭಾರತ ಇಷ್ಟು ವರ್ಷ ಏಕತೆ, ಸಹೋದರತ್ವ ಎಂದು ನಂಬಿಕೊಂಡು ಬಂದಿದ್ದ ಮೌಲ್ಯಗಳಿಗೆ ಈ ಬೆಳವಣಿಗೆ ಬೆದರಿಕೆ ಒಡ್ಡಿದೆ. ಒಂದು ಜಾತಿ ಹಾಗೂ ಮತ್ತೊಂದು ಜಾತಿಗೆ ಮತ್ತು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಸಂಘರ್ಷ ತಂದೊಡ್ಡಿದ್ದಾರೆ ಎಂದು ಕಿಡಿಕಾರಿದರು.
ಭಾರತದಲ್ಲಿ ತುರ್ತುಪರಿಸ್ಥಿತಿ ಜಾರಿ ಮಾಡುವಂಥ ಸಂದರ್ಭ ನಿರ್ಮಾಣವಾಗಿದೆ. ಮೋದಿ ಸರ್ಕಾರ ಕೇಂದ್ರದ ಏಜೆನ್ಸಿಗಳನ್ನು ದುರುಪಯೋಗ ಪಡಿಸಿಕೊಂಡು ನಮ್ಮ ಸಂಸ್ಥೆಗಳು ಹಾಗೂ ಜನರ ಮೇಲೆ ದಾಳಿ ನಡೆಸುತ್ತಾ ಸರ್ವಾಧಿಕಾರತ್ವ ತೋರುತ್ತಿದೆ. ಐದು ವರ್ಷಗಳಲ್ಲಿ ಅವರು ದೇಶವನ್ನು ನಾಶ ಮಾಡಿದ್ದಾರೆ. ಕಳೆದ 70 ವರ್ಷಗಳಲ್ಲೇ ಮೋದಿ ಸರ್ಕಾರ ಅತಿ ಹೆಚ್ಚು ಭ್ರಷ್ಟ ಆಡಳಿತ ನೀಡಿದ ಸರ್ಕಾರವಾಗಿದೆ’ ಎಂದು ಕೇಜ್ರಿವಾಲ್ ಆರೋಪಿಸಿದರು.
‘ಈ ಬಾರಿಯ ಲೋಕಸಭಾ ಚುನಾವಣೆ ದೇಶದ ಹೆಸರಿನಲ್ಲಿ ನಡೆಯುತ್ತದೆ, 2019ರ ಚುನಾವಣೆ ನಂತರ ಚುನಾವಣೆಯೇ ಇರುವುದಿಲ್ಲ ಎಂದು’ ಇತ್ತೀಚೆಗೆ ಸಾಕ್ಷಿ ಮಹಾಜನ್ ಅವರು ಹೇಳಿದ್ದ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿದ ಅವರು, ಹಿಟ್ಲರ್ ಅಧಿಕಾರಕ್ಕೆ ಬಂದ ನಂತರ ಜರ್ಮನಿಯ ಸಂವಿಧಾನವನ್ನು ಬದಲಿಸಿದನಲ್ಲದೇ ತನ್ನ ಅಂತ್ಯದವರೆಗೂ ದೇಶವನ್ನು ಆಳಿದನು. ಮೋದಿ ಮತ್ತು ಶಾ ಸಹ ಭಾರತದಕ್ಕೆ ಇದನ್ನೇ ಮಾಡುತ್ತಾರೆ. ಇದಕ್ಕೆ ಸಾಕ್ಷಿಯೇ ಸಾಕ್ಷಿ ಮಹಾಜನ್ ಹೇಳಿಕೆಯಾಗಿದೆ” ಎಂದು ಜನತೆಗೆ ಕೇಜ್ರೀವಾಲ್ ಎಚ್ಚರಿಸಿದರು.
“ಜೈಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ಶಾ, 2019ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 2050ರವರೆಗೂ ಯಾರೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದರು. ಅವರ ಈ ಹೇಳಿಕೆ ಅವರೂ ಸಹ ಹಿಟ್ಲರ್ ನಂತೆಯೇ ಯೋಚಿಸುತ್ತಿದ್ದಾರೆ ಎಂಬರ್ಥವನ್ನು ಕೊಡುತ್ತದೆ. ನಿಮಗೆ ಕೈಜೋಡಿಸಿ ಮನವಿ ಮಾಡುತ್ತೇನೆ, ದಯವಿಟ್ಟು ಮೋದಿಯನ್ನು ಆಡಳಿತದಿಂದ ಕೆಳಗಿಳಿಸಿ” ಎಂದು ಜನತೆಗೆ ಬೇಡಿಕೊಂಡರು.
ಚಂದ್ರಬಾಬು ನಾಯ್ಡು ಅವರಿಗೆ ಮತ್ತೆ ಮತ ಹಾಕುವಂತೆ ಮನವಿ ಮಾಡಲು ನಾವೆಲ್ಲಾ ಒಟ್ಟಾಗಿ ಬಂದಿದ್ದೇವೆ. ಆಧುನಿಕ ಆಂಧ್ರಪ್ರದೇಶ ಹರಿಕಾರ ಅವರು. ಮತ್ತೆ ಅವರು ಅಧಿಕಾರಕ್ಕೆ ಬಂದರೆ ಇನ್ನಷ್ಟು ಚುರುಕಾಗಿ ಕಾರ್ಯಗಳನ್ನು ತ್ವರಿತಗೊಳಿಸುತ್ತಾರೆ ಎಂದು ಆಪ್ ನಾಯಕರು ಹೇಳಿದರು.
ಆಂಧ್ರಪ್ರದೇಶದಲ್ಲಿ 25 ಲೋಕಸಭಾ ಕ್ಷೇತ್ರಗಳಿಗೆ ಹಾಗೂ 175 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 11ರಂದು ಚುನಾವಣೆ ನಡೆಯಲಿದೆ.