ನವದೆಹಲಿ: “ನಾವು ಸುಳ್ಳು ಭರವಸೆ ನೀಡುವುದಿಲ್ಲ, ಜಾರಿಗೊಳಿಸುವ, ಜಾರಿಗೊಳಿಸಲು ಸಾಧ್ಯವಾಗುವ ಭರವಸೆಗಳನ್ನೇ ಪ್ರಣಾಳಿಕೆ ಮೂಲಕ ನೀಡುತ್ತಿದ್ದೇವೆ” ಎಂದು ಪ್ರಧಾನಿ ಮೋದಿಯವರ ಮೇಲೆ ಪರೋಕ್ಷವಾಗಿ ಟೀಕಿಸುತ್ತಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡರಾದ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಕಪಿಲ್ ಸಿಬಲ್, ಪಿ ಚಿದಂಬರಂ, ಮೊದಲಾದವರ ಸಮ್ಮುಖದಲ್ಲಿ ರಾಹುಲ್ ಗಾಂಧಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.
ಬಡ ಮಹಿಳೆಯರ ಖಾತೆಗಳಿಗೆ ವಾರ್ಷಿಕ 72 ಸಾವಿರ ರೂಪಾಯಿ ನೇರ ವರ್ಗಾವಣೆ, ಪ್ರತಿ ಬಜೆಟ್ ನಲ್ಲಿ ಪ್ರತ್ಯೇಕ ರೈತ ಬಜೆಟ್, ಯುವಕರಿಗೆ 34ಲಕ್ಷ ಉದ್ಯೋಗ ಕ್ರಾಂತಿ, ಜಿಎಸ್ ಟಿ ಸರಳೀಕರಣ, ಮಹಿಳೆಯರಿಗೆ ಶೇ. 33 ಮೀಸಲಾತಿ, ಆದಿವಾಸಿಗಳಿಗೆ ಅಭಯ, ದ್ವೇಷಪರಾಧಗಳಿಗೆ ಮುಕ್ತಿ, ಸಾಂಸ್ಥಿಕ ಸ್ವಾಯಯತ್ತತೆ, ಪರಿಸರ ರಕ್ಷಣೆ ಪ್ರಾಧಿಕಾರ ಹೀಗೆ ಹತ್ತು ಹಲವು ಪ್ರಮುಖ ಭರವಸೆಗಳು ಕಾಂಗ್ರೆಸ್ ಬತ್ತಳಿಕೆಯಿಂದ ಹೊರಬಿದ್ದಿವೆ.
ನಮ್ಮ ಪ್ರಣಾಳಿಕೆ ನಾಲ್ಕು ಗೋಡೆಗಳ ನಡುವೆ ಸಿದ್ಧಗೊಂಡಿಲ್ಲ. ದೇಶದಾದ್ಯಂತ ನಾನಾ ಬಗೆಯ ಜನಸಮೂಹಗಳೊಂದಿಗೆ ಸಮಾಲೋಚನಾ ಸಭೆಗಳನ್ನು ನಡೆಸಿದ್ದೇವೆ, ಒಟ್ಟು174 ಸಭೆಗಳನ್ನು ನಡೆಸಿದ್ದೇವೆ, ಹಲವು ತಜ್ಞರ, ಹಿರಿಯ ಸಲಹೆ ಪಡೆದು ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ ಎಂದು ಕಪಿಲ್ ಸಿಬಲ್ ಮಾಹಿತಿ ನೀಡಿದರು.
ಪ್ರಣಾಳಿಕೆಯಲ್ಲಿ ಏನಿದೆ?
ಬಡವರಿಗೆ ಕನಿಷ್ಠ ಆದಾಯ ಭರವಸೆ (ನ್ಯಾಯ್)
ಭಾರತದ ಎಲ್ಲಾ ಬಡವರ ಘನತೆ ಅಥವಾ ಅಂತಸ್ತನ್ನು ಹೆಚ್ಚಿಸುವ ಸಲುವಾಗಿ ಕಾಂಗ್ರೆಸ್ ಪಕ್ಷ ನ್ಯಾಯಯುತ ಆದಾಯ ಯೋಜನೆ (ನ್ಯಾಯ್) ಅನ್ನು ಜಾರಿಗೊಳಿಸಲಿದೆ. ಈ ಕನಿಷ್ಟ ಆದಾಯ ಖಾತ್ರಿ ಯೋಜನೆಯಡಿ ಭಾರತದ ಶೇಕಡಾ 20ರಷ್ಟು ಬಡಕುಟುಂಬಗಳಿಗೆ ಪ್ರತಿ ವರ್ಷ 72 ಸಾವಿರ ರುಪಾಯಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಲಾಗುವುದು. ಪ್ರತಿ ಬಡ ಕುಟುಂಬದ ಮಹಿಳೆಯರ ಖಾತೆಗೆ ಈ ಹಣವನ್ನು ಹಾಕಲಾಗುವುದು.
ಉದ್ಯೋಗ ಕ್ರಾಂತಿ
ದೇಶದ ಯುವಜನತೆಗೆ ಉದ್ಯೋಗ ದೊರಕಿಸಿ ಕೊಡುವುದು ಕಾಂಗ್ರೆಸ್ ನ ಮೊದಲ ಆದ್ಯತೆ. ಸಾರ್ವಜನಿಕ ಹಾಗೂ ಸರ್ಕಾರಿ ವಲಯಗಳಲ್ಲಿ ಉದ್ಯೋಗ ಕಲ್ಪಿಸುತ್ತೇವೆ. ಒಟ್ಟಾರೆ 34 ಲಕ್ಷ ಉದ್ಯೋಗಗಳನ್ನು ಕಲ್ಪಿಸಲಾಗುವುದು.
ಸಾರ್ವಜನಿಕ ವಲಯ
• ಮಾರ್ಚ್ 2020ರೊಳಗೆ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 4 ಲಕ್ಷ ಹುದ್ದೆ ಭರ್ತಿ ಮಾಡುತ್ತೇವೆ
• ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ 20 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಸೂಚನೆ ನೀಡುತ್ತೇವೆ.
• ಗ್ರಾಮ ಪಂಚಾಯಿತಿ ಹಾಗೂ ನಗರಗಳ ಸಂಸ್ಥೆಗಳಲ್ಲಿ 10 ಲಕ್ಷ ಸೇವಾಮಿತ್ರ ಹುದ್ದೆಗಳನ್ನು ಸೃಷ್ಟಿಸಲಾಗುವುದು.
ಖಾಸಗೀ ವಲಯ
• ಉದ್ಯೋಗಳನ್ನು ನೀಡುವ ಕಂಪನಿಗಳಿಗೆ , ಅದರಲ್ಲೂ ಮಹಿಳೆಯರಿಗೆ ಆದ್ಯತೆ ನೀಡುವ ಕಂಪನಿಗಳಿಗೆ ಗೌರವ, ಉತ್ತೇಜನ ನೀಡಲಾಗುವುದು
• 100 ಉದ್ಯೋಗಿಗಳನ್ನು ಒಳಗೊಂಡ ಹಾಗೂ ಅಪ್ರೆಂಟಿಸ್ ತರಬೇತಿ ಉಳ್ಳ ಕಂಪನಿಗಳ ಸ್ಥಾಪನೆಗೆ ಪ್ರೋತ್ಸಾಹ
ರೈತರು ಹಾಗೂ ಕೂಲಿಕಾರರು
• ಪ್ರತಿ ವರ್ಷ ರೈತರಿಗೆ ಪ್ರತ್ಯೇಕ ರೈತ ಬಜೆಟ್ ಮಂಡಿಸಲಾಗುವುದು.
• ಕೃಷಿ ಅಭಿವೃದ್ಧಿ ಹಾಗೂ ಯೋಜನೆಯ ಶಾಶ್ವತ ರಾಷ್ಟ್ರೀಯು ಆಯೋಗವನ್ನು ರಚಿಸುವುದು.
• ದೇಶದ ರೈತರನ್ನು ಸಾಲ ಮನ್ನಾದಿಂದ ಸಾಲಮುಕ್ತರನ್ನಾಗಿ ಮಾಡಲಾಗುವುದು.
• ರೈತರಿಗೆ ಅವರ ಪರಿಶ್ರಮಕ್ಕೆ ಧನ ಎಂಬಂತೆ ವೇತನ ನೀಡಲಾಗುವುದು, ಕಡಿಮೆ ಬೆಲೆಯಲ್ಲಿ ಕೃಷಿ ಸಾಧನಗಳು ಮತ್ತು ಸಂಘಗಳ ಮೂಲಕ ಹಣ ಸಹಾಯ ಮಾಡಲಾಗುವುದು.
ಸಾರ್ವತ್ರಿಕ ಆರೋಗ್ಯ ಸುರಕ್ಷತೆ
• 2023-24ರ ವೇಳೆಗೆ ಆರೋಗ್ಯದ ಮೇಲೆ ಸರ್ಕಾರ ಮಾಡುವ ವೆಚ್ಚವನ್ನು ಜಿಡಿಪಿಯ ಶೇ.3ಕ್ಕೆ ಹೆಚ್ಚಿಸುವ ಮೂಲಕ ದ್ವಿಗುಣಗೊಳಿಸಲಾಗುವುದು
• ಆರೋಗ್ಯ ರಕ್ಷಣೆ ಹಕ್ಕು ಕಾಯ್ದೆಯನ್ನು ಜಾರಿಗೊಳಿಸುತ್ತೇವೆ. ಪ್ರತಿ ಪ್ರಜೆಗೂ ಉಚಿತ ಡಯಾಗ್ನಸಿಸ್, ಉಚಿತ ಹೊರರರೋಗಿಗಳ ಚಿಕಿತ್ಸೆ, ಉಚಿತ ಔಷಧಿ ಸೌಲಭ್ಯ ಕಲ್ಪಿಸುವ ಜೊತೆಗೆ ಆಸ್ಪತ್ರೆಗೆ ದಾಖಲಿಸುವ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಈ ಸೌಲಭ್ಯಗಳನ್ನು ಎಲ್ಲಾ ಸರ್ಕಾರಿ ಹಾಗೂ ಪಟ್ಟಿ ಮಾಡಿರುವ ಖಾಸಗೀ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ.

ಜಿಎಸ್ ಟಿ 2.0
• ಕಾಂಗ್ರೆಸ್ ಪಕ್ಷ ಜಿಎಸ್ ಟಿಯನ್ನು ಅತೀ ಸರಳೀಕರಣಗೊಳಿಸುತ್ತದೆ. ಸಾಧಾರಣ ಬೆಲೆಯ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಲಾಗುವುದು
• ಪ್ರಮುಖವಾದ ವಸ್ತುಗಳು ಮತ್ತು ಸೇವೆಯ ಆಮದು ಹಾಗೂ ರಫ್ತಿನ ಮೇಲೆ ಶೂನ್ಯ ಸರಕು ತೆರಿಗೆ ಜಾರಿಯಾಗುತ್ತದೆ.
• ಜಿಎಸ್ ಟಿಯ ಆದಾಯ ಭಾಗವನ್ನು ಪಂಚಾಯತ್ ಹಾಗೂ ಮುನ್ಸಿಪಾಲಿಟಿ ಗಳೂ ಬಳಸಿಕೊಳ್ಳುವಂತೆ ನಿಯಮ ರೂಪಿಸುತ್ತೇವೆ.
ಸಶಸ್ತ್ರ ಸೇನಾಪಡೆ ಹಾಗೂ ಅರೆ ಸೇನಾಪಡೆ
• ಸೇನಾಪಡೆಗೆ ಅಗತ್ಯ ಪರಿಕರಗಳನ್ನು ಶೀಘ್ರ ಒದಗಿಸುವುದು, ಸೇನಾಪಡೆಗೆ ನಡೆಸುವ ಎಲ್ಲಾ ಸುಧಾರಿತ ಕಾರ್ಯಕ್ರಮಗಳನ್ನು ಶೀಘ್ರವಾಗಿ, ಪಾರದರ್ಶಕವಾಗಿ ನಡೆಸುತ್ತೇವೆ.
• ಅರೆ ಸೇನಾಪಡೆಯ ಕುಟುಂಬಗಳ ಸಾಮಾಜಿಕ ಭದ್ರತೆ, ಶಿಕ್ಷಣ ಮತ್ತು ಆರೋಗ್ಯ ಸಂಬಂಧಿತ ವಲಯಗಳಲ್ಲಿ ಸುಧಾರಣೆ ತರಲಾಗುತ್ತದೆ.
ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ
• 2023-24ರ ಹೊತ್ತಿಗೆ ಶಿಕ್ಷಣಕ್ಕೆ ಜಿಡಿಪಿಯ ಶೇಕಡಾ 6ರಷ್ಟು ಅನುದಾನ ಖಾತ್ರಿಗೊಳಿಸಲಾಗುವುದು.
• ದೇಶದ ಪ್ರತಿಯೊಂದು ಮಗುವಿಗೂ 1ರಿಂದ 10ನೇ ತರಗತಿವರೆಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ. ಶಿಕ್ಷಣದ ಸುಧಾರಣೆ, ಶಾಲೆಗಳಲ್ಲಿ ಅಗತ್ಯ ಸೌಕರ್ಯಗಳು, ಹಾಗೂ ನುರಿತ ಶಿಕ್ಷಕರ ನೇಮಕ .
ಮಹಿಳೆಯರಿಗೆ 33% ಮೀಸಲಾತಿ
• 17ನೇ ಲೋಕಸಭೆಯ ಪ್ರಥಮ ಅಧಿವೇಶನದಲ್ಲೇ ಮಹಿಳೆಯರಿಗೆ ಶೇಕಡಾ 33 ರಾಜಕೀಯ ಮೀಸಲಾತಿ ನೀಡುವ ಮಸೂದೆಯನ್ನು ಅಂಗೀಕರಿಸುತ್ತೇವೆ. ಈ ಮೂಲಕ ಲೋಕಸಭೆ ಮತ್ತು ವಿಧಾನಸಭೆಯಗಳಲ್ಲಿ ಶೇಕಡಾ 33ರಷ್ಟು ಮಹಿಳಾ ಪ್ರಾತಿನಿಧ್ಯ ಖಾತ್ರಿ ಭರವಸೆ.
• ಕೇಂದ್ರ ಸರ್ಕಾರದ ಎಲ್ಲಾ ಸೇವೆಗಳಲ್ಲಿ ಮತ್ತು ಖಾಲಿ ಹುದ್ದೆಗಳ ಭರ್ತಿಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಜಾರಿಗೊಳಿಸುತ್ತೇವೆ.
ಆದಿವಾಸಿಗಳ ಎತ್ತಂಗಡಿ ಇಲ್ಲ
• ಅರಣ್ಯ ಹಕ್ಕು ಕಾಯ್ದೆ 2006ನ್ನು ಜಾರಿಗೊಳಿಸುತ್ತೇವೆ, ಬುಡಕಟ್ಟು ಜನರ ಹಕ್ಕುಗಳನ್ನು ಕಾಯ್ದೆಯಡಿ ರಕ್ಷಿಸುತ್ತೇವೆ.
• ಯಾವುದೇ ಕಾಡಿನ ಮೂಲನಿವಾಸಿಗಳನ್ನು ಸ್ಥಳಾಂತರಿಸುವುದಿಲ್ಲ.
• ಮರಮುಟ್ಟು ಹೊರತಾದ ಅರಣ್ಯ ಉತ್ನನ್ನಗಳ ರಾಷ್ಟ್ರೀಯ ಆಯೋಗ ರಚನೆ.
• ಅರಣ್ಯ ವಾಸಿಗಳ ಜೀವನ ಸುಧಾರಣೆಗೆ ಮರಮುಟ್ಟು ಹೊರತಾದ ಅರಣ್ಯ ಉತ್ನನ್ನಗಳಿಗೆ (NTFP) ಕನಿಷ್ಠ ಬೆಂಬಲ ಬೆಲೆ ಭರವಸೆ.
ದ್ವೇಷಾಪರಾಧಗಳಿಗೆ ಅಂತ್ಯ
ಮೋದಿ ಸರ್ಕಾರದ ಅವಧಿಯಲ್ಲಿ ನಡೆದಿರುವ ದ್ವೇಷಪೂರಿತ ಅಪರಾಧಗಳು, ಗುಂಪು ದಾಳಿಗಳು, ಸಾಯಹೊಡೆಯುವ ಪ್ರಕರಣಗಳಲ್ಲಿ ಶಿಕ್ಷಿತರಾಗುವ ಭಯವೇ ಇಲ್ಲದೇ ಓಡಾಡುತ್ತಿರುವ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕಠಿಣ ಕ್ರಮ. ಸಮಾಜದ ದುರ್ಬಲ ವರ್ಗಗಳಿಗೆ ರಕ್ಷಣೆ ಭರವಸೆ.
ಖಾಸಗಿತನ ರಕ್ಷಣೆಗೆ ಕಾಯಿದೆ
ಸಂವಿಧಾನದ ಆಶಯಕ್ಕೆ ಬದ್ಧವಾಗಿ ವ್ಯಕ್ತಿಗಳ ಖಾಸಸಗಿತನ ರಕ್ಷಿಸುವ ನಿಟ್ಟಿನಲ್ಲಿ ಕಾಯ್ದೆ ರಚನೆ ಭರವಸೆ. ಆಧಾರ್ ನ್ನು ಅದರ ಮೂಲ ಉದ್ದೇಶಗಳಿಗೆ ಸೀಮಿತಗೊಳಿಸಲಾಗುವುದು. ಭಿನ್ನಮತ ವ್ಯಕ್ತಪಡಿಸುವ ಪ್ರಜೆಗಳ ಹಕ್ಕಿನ ರಕ್ಷಣೆ, ವಿದ್ಯಾರ್ಥಿಗಳು, ಪತ್ರಕರ್ತರು, ವಿಚಾರವಾದಿಗಳು, ಎಲ್ಲರ ಹಕ್ಕುಗಳ ರಕ್ಷಣೆ
ಸ್ವಾತಂತ್ರ್ಯ ಕಳೆದುಕೊಂಡ ಸಂಸ್ಥೆಗಳಿಗೆ ಅಭಯ ಹಸ್ತ
ಕಳೆದ ಐದು ವರ್ಷಗಳಲ್ಲಿ ಸರ್ಕಾರದ ಸರ್ವಾಧಿಕಾರಿ ನೀತಿಯಿಂದ ತಮ್ಮ ಸ್ವಾತಂತ್ರ್ಯವನ್ನೇ ಕಳೆದುಕೊಂಡಿರುವ RBI, ECI,CIC,CBI,ಮುಂತಾದ ದೇಶದ ಘನತೆವೆತ್ತ ಸಂಸ್ಥೆಗಳ ಸ್ವಾಯತ್ತತೆ ರಕ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಎನ್ ಡಿಎ ಸರ್ಕಾರ ಜಾರಿಗೊಳಿಸಿರುವ ಗುಪ್ತ ಚುನಾವಣಾ ಬಾಂಡ್ ವ್ಯವಸ್ಥೆ ರದ್ದುಪಡಿಸಿ ಪಾರದರ್ಶಕ ಹಾಗೂ ನ್ಯಾಯಯುತ ಚುನಾವಣೆ ನಡೆಸಲು ರಾಷ್ಟ್ರೀಯ ಚುನಾವಣಾ ನಿಧಿ ಸ್ಥಾಪನೆ ಭರವಸೆ.
ನಗರ ಹಾಗೂ ಗ್ರಾಮೀಣ ಆಡಳಿತ
ಕೊಳಗೇರಿಗಳನ್ನು ಅಭಿವೃದ್ಧಿಪಡಿಸಲಾಗುವುದು. ಮೇಯರ್ ಗಳ ನೇರ ಆಯ್ಕೆ ಮೂಲಕ ನಗರ ಹಾಗೂ ಪಟ್ಟಣಗಳಲ್ಲಿ ನೂತನ ಆಡಳಿತ ನಡೆಸಲಾಗುವುದು. ನಗರಗಳನ್ನು ಆರ್ಥಿಕ ಬೆಳವಣಿಗೆಯ ಎಂಜಿನ್ ಗಳಾಗಿ ಮಾರ್ಪಡಿಸುತ್ತೇವೆ.
ಪರಿಸರ ಹಾಗೂ ಹವಾಮಾನ
ಜಾಗತಿಕ ತಾಪಮಾನ ಏರಿಕೆ ಹಾಗೂ ಪರಿಸರ ರಕ್ಷಣೆ ಕುರಿತು ನೂತನ ಯೋಜನೆ ಜಾರಿಗೊಳಿಸಿ, ಜಾಗತಿಕ ಯುದ್ಧ ನಡೆಸಲಾಗುವುದು. ಪರಿಸರ ರಕ್ಷಣಾ ಪ್ರಾಧಿಕಾರವನ್ನು ರಚಿಸಲಾಗುವುದು.
More Articles
By the same author
Related Articles
From the same category